ಇಲ್ಲಿ ಭಕ್ತನ ಹೆಸರಿನಲ್ಲೇ ನೆಲೆಸಿದ್ದಾನೆ ಗಣೇಶ! ಪಾಲಿಯ ಬಲ್ಲಾಳೇಶ್ವರನ ಬಗ್ಗೆ ನಿಮಗೆಷ್ಟು ಗೊತ್ತು?

ಇಲ್ಲಿ ಭಕ್ತನ ಹೆಸರಿನಲ್ಲೇ ನೆಲೆಸಿದ್ದಾನೆ ಗಣೇಶ!

ಪಾಲಿಯ ಬಲ್ಲಾಳೇಶ್ವರನ ಬಗ್ಗೆ ನಿಮಗೆಷ್ಟು ಗೊತ್ತು? 

Pali Baleshwara Asta Vinayaka TempleImage source :https://www.rvatemples.com/listings/shri-ballaleshwar-ashtvinayak-temple/

ಸಾರಾಂಶ 

ಅಷ್ಟ ವಿನಾಯಕ ದೇಗುಲಗಳ ಪೈಕಿ ಪಾಲಿ ಬಲ್ಲಾಳೇಶ್ವರ ಸಹ ಒಂದು. ಅಷ್ಟ ವಿನಾಯಕ ಮಂದಿರಗಳ ಪೈಕಿ ಭಕ್ತನ ಹೆಸರಿನಲ್ಲಿ ಸ್ಥಾಪಿತಗೊಂಡಿರುವ ಏಕೈಕ ಮೂರ್ತಿ ಇದು. 

====

 

 

ಅಪಾರ, ನಿಷ್ಕಲ್ಮಶ ಭಕ್ತಿಯ ಸಂಕೇತ ಈ ದೇಗುಲ 

 

ಗಣೇಶ ಪುರಾಣದಲ್ಲಿ ಗಣೇಶನ ಲೀಲಾಮೃತಗಳನ್ನು ಸ್ವಚ್ಚಂದವಾಗಿ ವರ್ಣಿಸಲಾಗಿದ್ದು ಅದರಲ್ಲಿನ ಉಪಾಸನ ಖಂಡ -22 ರಲ್ಲಿ ಬರುವುದೇ ಈ ಪಾಲಿಪುರಿ ಅಥವಾ ಪಾಲಿಯ ವಿನಾಯಕನ ಚರಿತ್ರೆ. 

 

ಮಹಾರಾಷ್ಟ್ರದ ರಾಯಘಢ ಜಿಲ್ಲೆಯ ಸಿಂಧುಗಢನ ಪ್ರದೇಶವಿದು. ಪುರಾಣ ಕಾಲದಲ್ಲಿ ಈಗಿನ ಪಾಲಿಯು ಪಾಲಿಪುರಿ ಎಂಬ ಹೆಸರಿನಿಂದ ಕರೆಸಿಕೊಳ್ಳುತ್ತಿತ್ತು. ಆ ನಗರದಲ್ಲಿ ಕಲ್ಯಾಣಶೇಠ್ ಎಂಬ ವ್ಯಾಪಾರಿಯೊಬ್ಬ ಇಂದುಮತಿ ಎಂಬಾಕೆಯನ್ನು ವಿವಾಹವಾಗಿ ಸಂತೋಷದಿಂದ ಕಾಲ ಕಳೆಯುತ್ತಿದ್ದ. 

Pali Baleshwara Asta Vinayaka TempleImage source :https://www.rvatemples.com/listings/shri-ballaleshwar-ashtvinayak-temple/

ಮದುವೆಯಾಗಿ ಬಹಳ ವರ್ಷಗಳ ಮೇಲೆ ದಂಪತಿಗಳಿಗೆ ಪುತ್ರ ಸಂತಾನವಾಗಿ, ಜನಿಸಿದ ಮಗುವಿಗೆ 'ಬಲ್ಲಾಳ' ಎಂದು ಹೆಸರಿಟ್ಟರು. ದಿನಗಳು ಕಳೆದಂತೆ ಬೆಳೆಯುತ್ತಿದ್ದ ಬಲ್ಲಾಳನು ತನ್ನ ಓರಗೆಯವರಂತೆ ಆಟ ಪಾಠಗಳಲ್ಲಿ ಕಾಲ ಕಳೆಯುವುದು ಬಿಟ್ಟು ಸಮಯ ಸಿಕ್ಕಾಗಲೆಲ್ಲ ಪೂಜೆ ಮಾಡುವುದು, ಪ್ರಾರ್ಥಿಸುವುದು, ಕಾಡಿನಲ್ಲಿರುವ ಯಾವುದೋ ಒಂದು ಕಲ್ಲಿನಲ್ಲಿ ಗಣೇಶ ಮೂರ್ತಿಯನ್ನು ಕೆತ್ತಿ ಅದನ್ನು ಪೂಜಿಸುವುದು ಮಾಡುತ್ತಿದ್ದ. 

 

ಹೀಗೆ ದೈವ ಭಕ್ತನಾಗಿ ತನ್ನ ಓರಗೆಯವರನ್ನು, ತನ್ನ ಕೂಡಿ ಬರುವ ಗೆಳೆಯರನ್ನು ಪೂಜೆ ಮಾಡಲು ಪ್ರೇರೇಪಿಸುತ್ತಿದ್ದನು. ಇದರಿಂದಾಗಿ ದಿನವೂ ಎಲ್ಲ ಹುಡುಗರು ಮನೆ ಸೇರುವುದು ತಡವಾಗುತ್ತಿತ್ತು. ಇವನ್ನೆಲ್ಲ ಗಮನಿಸುತ್ತಿದ್ದ ಪಾಲಕರು ಸುಮ್ಮನಿರದೆ ಇವಕ್ಕೆಲ್ಲ ಬಲ್ಲಾಳನೇ ಕಾರಣನೆಂದು ಬಲ್ಲಾಳನ ತಂದೆಯಲ್ಲಿ ದೂರು ಕೊಟ್ಟರು. 

 

ಇವೆಲ್ಲಕಿಂತಲೂ ಮುಂಚೆಯೇ ಬಲ್ಲಾಳನು ಓದಿನ ಕಡೆ ಆಸಕ್ತಿ ತೋರುತ್ತಿಲ್ಲವೆಂದು ಆತನ ತಂದೆ ಅದಾಗಲೇ ಕೋಪಗೊಂಡಿದ್ದರು. ಈಗ ಈ ದೂರು ಸೇರಿಕೊಂಡು ಉರಿಯುವ ಬೆಂಕಿಗೆ ತುಪ್ಪ ಸುರಿದ ಹಾಗಾಗಿ ಕೋಪದಿಂದ ಕುದಿಯಲಾರಂಭಿಸಿದರು. 

Pali Baleshwara Asta Vinayaka Temple

Image source :https://www.rvatemples.com/listings/shri-ballaleshwar-ashtvinayak-temple/

ಕೋಪದ ಕೈಗೆ ಬುದ್ಧಿ ಕೊಟ್ಟ ಕಲ್ಯಾಣಶೇಠ್ ತಕ್ಷಣ ಬಲ್ಲಾಳನಿದ್ದ ಕಾಡಿನ ಗಣೇಶ ಮೂರ್ತಿಯ ಬಳಿಗೆ ಬರಲು, ಅಲ್ಲಿ ಸಕಲ ಪೂಜಾ ಕಾರ್ಯಗಳು ನಡೆಯುತ್ತಿದ್ದವು. ಬಲ್ಲಾಳನು ಒಂದು ಕಡೆ ಕುಳಿತು ನಿಷ್ಕಲ್ಮಶ ಮನಸ್ಸಿನಿಂದ ಗಣಪತಿಯ ಧ್ಯಾನದಲ್ಲಿ ಮಗ್ನನಾಗಿದ್ದ. 

 

ಅವನ ಜೊತೆಗೆ ಅವನ ಸ್ನೇಹಿತರು ಕೂಡ ಧ್ಯಾನಸಕ್ತರಾಗಿ ಗಣೇಶ ಮೂರ್ತಿಯ ಮುಂದೆ ಕುಳಿತಿದ್ದರು. ಮೊದಲೇ ಕೋಪದಿಂದ ಕೂಡಿದ್ದ ಕಲ್ಯಾಣ ಶೇಠ್‍ಗೆ ಇವರು ಪೂಜೆ ಮಾಡಿ ಧ್ಯಾನ ಮಾಡುತ್ತಿರುವುದನ್ನು ಕಂಡು ಕೋಪವು ದುಪ್ಪಟ್ಟಾಗಿ ಹೋಯಿತು. ಕೂಡಲೇ ಜೋರಾಗಿ ಕಿರುಚುತ್ತಾ ಅಲ್ಲಿದ್ದ ಪೂಜಾ ಸಾಮಗ್ರಿಗಳನೆಲ್ಲ ಎತ್ತಿ ಬಿಸಾಡಿ, ಅಲ್ಲಿದ್ದ ಗಣೇಶ ಮೂರ್ತಿಯನ್ನು ದೂರಕ್ಕೆ ತಳ್ಳಿದ.  

 

ಅದಷ್ಟಕ್ಕೆ ಸುಮ್ಮನಾಗದ ಕಲ್ಯಾಣ ಶೇಠ್ ಬಲ್ಲಾಳನನ್ನು ಹಿಡಿದು ಚೆನ್ನಾಗಿ ಥಳಿಸಿ ಹಗ್ಗವೊಂದನ್ನು ತೆಗೆದು ಅವನನ್ನು ಮರಕ್ಕೆ ಬಿಗಿದನು. ವ್ಯಾಕುಲನಾಗಿ ಅಳುತ್ತಿದ್ದ ಬಲ್ಲಾಳನ ಯಾವ ಮನವಿಗಳನ್ನು ಕೇಳಿಸಿಕೊಳ್ಳದೆ `ಯಾರ ಮಾತನ್ನು ಕೇಳದ ನಿನಗೆ ಇದೆ ಸರಿಯಾದ ಶಿಕ್ಷೆ, ಯಾವಾಗಲು ಗಣೇಶ ಗಣೇಶನೆಂದು ಜಪಿಸುತ್ತ ಕುಕ್ಕರಿಸುತ್ತಿದ್ದೆಯಲ್ಲ ಈಗ ಬಿಡಿಸಿಕೊ, ಇಲ್ಲವಾದರೆ ನೀನು ಜ್ಞಾಪಿಸಿಕೊಳ್ಳುತ್ತಿದ್ದ ಆ ಗಣೇಶನೇ ನಿನ್ನನು ಬಂದು ಕಾಪಾಡಲಿ' ಎಂದು ಹೇಳಿ ಇಡೀ ರಾತ್ರಿ ಬಲ್ಲಾಳನು ಅಲ್ಲೇ ಇರುವಂತೆ ಮಾಡಿ ನಿರ್ದಾಕ್ಷಿಣ್ಯವಾಗಿ ಮನೆಗೆ ಹೊರಟು ಹೋದನು. 

Pali Baleshwara Asta Vinayaka Temple

Image source : @Trip advisor 

ಇತ್ತ ಕಲ್ಯಾಣ ಶೇಠ್‍ನ ದುರ್ವರ್ತನೆಯನ್ನು ಕಂಡ ಬಲ್ಲಾಳನ ಗೆಳೆಯರೆಲ್ಲರೂ ಆ ಜಾಗದಿಂದ ಬೆದರಿ ಕಾಲ್ಕಿತ್ತಿದ್ದರು. ಈಗ ಯಾವ ದಿಕ್ಕು ತೋಚದೆ ವ್ಯಾಕುಲನಾಗಿ ಬಲ್ಲಾಳನು ಜೋರಾಗಿ ಅಳಲು ಶುರುವಿಟ್ಟುಕೊಂಡನು. 

 

ಗಣೇಶನೇ ಪ್ರತ್ಯಕ್ಷನಾಗಿ ಭಕ್ತನನ್ನು ತಬ್ಬಿಕೊಂಡಿದ್ದ!

Pali Baleshwara Asta Vinayaka TempleImage soruce : @hindusaga.com

ತನ್ನ ಇಷ್ಟ ದೈವವಾದ ಗಣೇಶನನ್ನು ಹೃದಯಾಂತರಾಳದಿಂದ ಭಕ್ತಿಗಿಂತಲೂ ಹೆಚ್ಚಾಗಿ ಪ್ರೇಮ ಪೂರಿತವಾದ ವ್ಯಾಕುಲ ದನಿಯಲ್ಲಿ ಕರೆಯಲು ಬಾಲ ಭಕ್ತನ ಕರೆಗೆ ಓಗೊಟ್ಟ ಗಣೇಶನು ಬಲ್ಲಾಳನ ಮುಂದೆ ಪ್ರತ್ಯಕ್ಷನಾಗಿ ಕ್ಷಣಾರ್ಧದಲಿ ಬಲ್ಲಾಳನನ್ನು ಹಗ್ಗದಿಂದ ವಿಮುಕ್ತಿಗೊಳಿಸಿ ವಾತ್ಸಲ್ಯ ಪೂರ್ಣವಾಗಿ ತಬ್ಬಿಕೊಂಡನು. 

 

ಸಾಕ್ಷಾತ್ ಗಣಪತಿಯ ಆ ಅಪ್ಪುಗೆಯಿಂದ ಸಂತುಷ್ಟನಾದ ಬಲ್ಲಾಳನು ಗಣಪತಿಯನ್ನು ಅಲ್ಲೇ ನೆಲೆಸುವಂತೆ ಕೇಳಿಕೊಳ್ಳಲು, ಗಣಪತಿಯು ಅಲ್ಲಿಯೇ ಇದ್ದ ಒಂದು ಶಿಲೆಯ ಮೂಲಕ ಅಂತರ್ಧಾನನಾದನು. ಅದೇ ಶಿಲೆಯೇ ಇಂದು ಪೂಜಿಸಲ್ಪಡುತ್ತಿರುವ ಪಾಲಿಯ ಬಲ್ಲಾಳೇಶ್ವರ. ತನ್ನ ಭಕ್ತನ ಹೆಸರಿನಲ್ಲಿಯೇ ಪ್ರಖ್ಯಾತವಾಗಿರುವ ಭರತ ಖಂಡದ ಅಪರೂಪದ ಗಣೇಶ.

 

ಅಂದು ಕಲ್ಯಾಣ ಶೇಠ್ ದೂರಕ್ಕೆ ಬಿಸಾಡಿದ್ದ ಗಣಪ ವಿಗ್ರಹವೇ ಇಂದು ಪಾಲಿಯ ಬಲ್ಲಾಳೇಶ್ವರ ಮಂದಿರದ ಹತ್ತಿರವಿರುವ ಧುಂಡಿ ವಿನಾಯಕ. ಈ ಮೂರ್ತಿಗೂ ಯಥಾವತ್ತಾಗಿ ಪೂಜೆ ಸಲ್ಲಿಸಲಾಗುತ್ತಿದೆ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author