ಕನ್ನಡಿಗರ ಹೃದಯ ಗೆದ್ದ ‘ಯಜಮಾನ’, ‘ಮರೆಯದ ಮಾಣಿಕ್ಯ’ ಸಾಹಸಸಿಂಹ ವಿಷ್ಣುವರ್ಧನ್

ಕನ್ನಡಿಗರ ಹೃದಯ ಗೆದ್ದ ‘ಯಜಮಾನ’, ‘ಮರೆಯದ ಮಾಣಿಕ್ಯ’ ಸಾಹಸಸಿಂಹ ವಿಷ್ಣುವರ್ಧನ್

Vishnuvardan BiographyFeatured Image Credits : IMDB

ಕನ್ನಡ ಚಿತ್ರರಂಗದ ದಿಗ್ಗಜ ನಟರಲ್ಲಿ ಸಾಹಸಸಿಂಹ ವಿಷ್ಣುವರ್ಧನ್ ಕೂಡಾ ಒಬ್ಬರು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಚಂದನವನದ ಅತ್ಯದ್ಭುತ ನಟರಾಗಿದ್ದು, ಅಸಂಖ್ಯಾತ ಅಭಿಮಾನಿಗಳನ್ನು ಹೊಂದಿದ್ದಾರೆ. ಸಂಪತ್ ಕುಮಾರ್ ಎಂಬುದು ಇವರ ಮೂಲ ಹೆಸರಾಗಿತ್ತು. ಕನ್ನಡ ಚಿತ್ರರಂಗದಲ್ಲಿ ನಟಿಸಲು ಆರಂಭಿಸಿದ ನಂತರ ಇವರಿಗೆ ವಿಷ್ಣುವರ್ಧನ್ ಎಂಬ ಹೆಸರು ಬಂತು. ಸಾಹಸಸಿಂಹ ಎಂಬ ಬಿರುದು ಪಡೆದ ಡಾ.ವಿಷ್ಣುವರ್ಧನ್ ಸುಮಾರು 200ಕ್ಕೂ ಅಧಿಕ ಕನ್ನಡ ಚಿತ್ರಗಳಲ್ಲಿ ಅಭಿನಯಿಸಿದ್ದರು. ಕನ್ನಡ ಮಾತ್ರವಲ್ಲದೆ. ತಮಿಳು, ತೆಲುಗು, ಮಲಯಾಳಂ, ಹಿಂದಿ ಸಿನೆಮಾಗಳಲ್ಲೂ ನಟಿಸಿರುವುದು ಅವರ ಹೆಗ್ಗಳಿಕೆ.

 

ಬಾಲ್ಯ ಜೀವನ

Vishnuvardan chilhood pic or imageImage Credits : http://siri-sampada.blogspot.com/

ಮೈಸೂರಿನ ಹೆಚ್.ಎಲ್.ನಾರಾಯಣರಾವ್ ಮತ್ತು ಕಾಮಾಕ್ಷಮ್ಮ ದಂಪತಿಯ ಪುತ್ರ ವಿಷ್ಣುವರ್ಧನ್ ಹೆಸರು ಮೊದಲು ಸಂಪತ್ ಕುಮಾರ್ ಎಂಬಾಗಿತ್ತು. ಅವರ ತಂದೆ ಕಲಾವಿದರು, ಸಂಗೀತ ನಿರ್ದೇಶಕರು ಮತ್ತು ಸಂಭಾಷಣೆಕಾರರು ಆಗಿದ್ದರು. ಇವರ ಕುಟುಂಬದವರು ಮೈಸೂರಿನ ಚಾಮುಂಡಿಪುರಂನಲ್ಲಿ ವಾಸಿಸುತ್ತಿದ್ದರು. ಸಂಪತ್ ಕುಮಾರ್ ತಮ್ಮ ಪ್ರಾಥಮಿಕ ಶಿಕ್ಷಣವನ್ನು ಮೈಸೂರಿನ ಗೋಪಾಲಸ್ವಾಮಿ ಶಾಲೆಯಲ್ಲಿ ಮತ್ತು ಹಿರಿಯ ಪ್ರಾಥಮಿಕ ಶಿಕ್ಷಣವನ್ನು ಬೆಂಗಳೂರಿನ ಕನ್ನಡ ಮಾದರಿ ಶಾಲೆಯಲ್ಲಿ ಮುಗಿಸಿದರು. ತಮ್ಮ ಪ್ರೌಢಶಾಲಾ ಶಿಕ್ಷಣ ಮತ್ತು ಪದವಿಯನ್ನು ಬೆಂಗಳೂರಿನ ಬಸವನಗುಡಿಯಲ್ಲಿರುವ ನ್ಯಾಷನಲ್ ಕಾಲೇಜಿನಲ್ಲಿ ಪಡೆದುಕೊಂಡರು.

 

ಕನ್ನಡ ಚಿತ್ರರಂಗ ಪ್ರವೇಶ

 

1955ರಲ್ಲಿ ಶಿವಶರಣ ನಂಬೆಯಕ್ಕ ಎಂಬ ಸಿನೆಮಾದಲ್ಲಿ ವಿಷ್ಣುವರ್ಧನ್ ಬಾಲ ನಟನಾಗಿ ನಟಿಸಿದ್ದರು. ವಿಷ್ಣು ನಟನೆಯ ಈ ಸಿನೆಮಾ 28 ದಿನದಲ್ಲಿ ಚಿತ್ರೀಕರಣಗೊಂಡ ಮೊದಲ ಕನ್ನಡ ಸಿನೆಮಾ ಎಂಬ ಹಿರಿಮೆಗೆ ಪಾತ್ರವಾಗಿತ್ತು. ಶಂಕರ್ ಸಿಂಗ್ ಸಿದ್ದಪಡಿಸಿದ ಈ ಸಿನೆಮಾ ಸಂಪತ್ ಕುಮಾರ್ ಅವರನ್ನು ಚಿತ್ರರಂಗಕ್ಕೆ ಪರಿಚಯಿಸಿತು.

 

‘ನಾಗರಹಾವು’ ಚಿತ್ರದೊಂದಿಗೆ ವಿಷ್ಣುವರ್ಧನ್‍ ಎಂಬ ನಟನ ಉದಯ

Vishnuvardhan in nagarahaavuImage Credits : Newskarnataka

1972ರಲ್ಲಿ ಬಿಡುಗಡೆಯಾದ ಪುಟ್ಟಣ್ಣ ಕಣಗಾಲ್ ನಿರ್ದೇಶನದ ನಾಗರಹಾವು, ವಿಷ್ಣುವರ್ಧನ್ ನಾಯಕನ ಪಾತ್ರದಲ್ಲಿ ಅಭಿನಯಿಸಿದ ಮೊದಲ ಚಿತ್ರ. ಸಂಪತ್ ಕುಮಾರ್‍ ಎಂಬ ಹೆಸರಿನ ಹುಡುಗನಿಗೆ ‘ವಿಷ್ಣುವರ್ಧನ್’ ಎಂದು ಹೆಸರಿಟ್ಟಿದ್ದು ಪುಟ್ಟಣ್ಣ ಕಣಗಾಲ್. ನಾಗರಹಾವು ಚಿತ್ರದೊಂದಿಗೆ ವಿಷ್ಣುವರ್ಧನ ಎಂಬ ನಟನ ಉದಯವಾಯಿತು. 29.12.1972 ರಂದು ತೆರೆಕಂಡ ಈ ಸಿನೆಮಾ, ಬೆಂಗಳೂರಿನ ಸಾಗರ್ ಚಿತ್ರಮಂದಿರ ಒಂದರಲ್ಲೇ ಸತತ 25 ವಾರಗಳು ಯಶಸ್ವಿಯಾಗಿ ಪ್ರದರ್ಶನಗೊಂಡಿತು. ಆಗಿನ ಕಾಲಕ್ಕೆ ಬರೋಬ್ಬರಿ 7 ಲಕ್ಷ ರೂಪಾಯಿಗಳನ್ನು ಗಳಿಸಿ ಹೊಸ ದಾಖಲೆ ಬರೆಯಿತು ಮತ್ತು ಬೆಂಗಳೂರಿನ ಮೂರು ಮುಖ್ಯ ಚಿತ್ರಮಂದಿರಗಳಲ್ಲಿ ನೂರು ದಿನ ಪೂರೈಸಿದ ಮೊದಲ ಸಿನೆಮಾವೆಂಬ ಹೆಗ್ಗಳಿಕೆ ಪಡೆಯಿತು.

ನಾಗರಹಾವು ಚಿತ್ರದ ನಂತರ ವಿಷ್ಣುವರ್ಧನ್ ಚಂದನವನದಲ್ಲಿ ಲಕ್ಷಾಂತರ ಅಭಿಮಾನಿಗಳನ್ನು ಗಳಿಸಿದರು. ಭಗ್ನ ಪ್ರೇಮಿಯಾಗಿ, ರೋಷಭರಿತ ಖೈದಿಯಾಗಿ, ಖಡಕ್ ಪೋಲಿಸ್ ಅಧಿಕಾರಿಯಾಗಿ ಹೀಗೆ ಹತ್ತು ಹಲವು ಪಾತ್ರಗಳ ಮೂಲಕ ವಿಷ್ಣುವರ್ಧನ್ ಅಜರಾಮರವಾಗಿದ್ದಾರೆ.1980ರ ದಶಕದಲ್ಲಿ ಕಿರುತೆರೆಯಲ್ಲಿ ಪ್ರಸಾರಗೊಂಡ ಶಂಕರ್‌ ನಾಗ್‌ ನಿರ್ದೇಶನದ ಜನಪ್ರಿಯ ಧಾರಾವಾಹಿ ಮಾಲ್ಗುಡಿ ಡೇಸ್ ಕಥೆಯೊಂದರಲ್ಲಿ (ರುಪೀಸ್‌ ಫಾರ್ಟಿ-ಫೈವ್ ಎ ಮಂತ್‌) ವಿಷ್ಣುವರ್ಧನ್‌ ನಟಿಸಿದ್ದರು

 

ವಿಷ್ಣುವರ್ಧನ್ ಅಭಿನಯದ ಚಿತ್ರಗಳು

Vishnuvardhan film collection
Image Credits : http://beta.kannadastore.in/

ಮನೆ ಬೆಳಗಿದ ಸೊಸೆ, ಗಂಧದ ಗುಡಿ, ಬೂತಯ್ಯನ ಮಗ ಅಯ್ಯು, ದೇವರಗುಡಿ, ಕಳ್ಳ ಕುಳ್ಳ, ಬಂಗಾರದ ಗುಡಿ, ಸೊಸೆ ತಂದ ಸೌಭಾಗ್ಯ, ಸಹೋದರರ ಸವಾಲ್‍, ಕಿಟ್ಟು ಪುಟ್ಟು, ಗಲಾಟೆ ಸಂಸಾರ, ಹೊಂಬಿಸಿಲು, ಸಿರಿತನಕ್ಕೆ ಸವಾಲ್, ಕಿಲಾಡಿ ಜೋಡಿ, ಸಿಂಗಾಪುರದಲ್ಲಿ ರಾಜಾ ಕುಳ್ಳ, ಮಕ್ಕಳ ಸೈನ್ಯ, ಬಿಳಿಗಿರಿಯ ಬನದಲ್ಲಿ, ಬಂಗಾರದ ಜಿಂಕೆ, ಗುರು ಶಿಷ್ಯರು, ಸ್ನೇಹಿತರ ಸವಾಲ್, ಮುತ್ತೈದೆ ಭಾಗ್ಯ, ಗಂಡುಗಲಿ ರಾಮ ಪ್ರಚಂಡ ಕುಳ್ಳ, ಖೈದಿ, ಬಂಧನ, ಮಹಾಪುರುಷ, ನೀ ಬರೆದ ಕಾದಂಬರಿ, ಕರ್ಣ, ಈ ಜೀವ ನಿನಗಾಗಿ, ಮಲಯ ಮಾರುತ, ಜಯಸಿಂಹ, ಕೃಷ್ಣ ರುಕ್ಮಿಣಿ, ಮುತ್ತಿನ ಹಾರ, ಮತ್ತೆ ಹಾಡಿತು ಕೋಗಿಲೆ, ಸಂಘರ್ಷ, ನಿಷ್ಕರ್ಷ, ಮಹಾಕ್ಷತ್ರಿಯ, ಹಾಲುಂಡ ತವರು, ಕರುಳಿನ ಕುಡಿ, ಜೀವನದಿ, ಲಾಲಿ, ವೀರಪ್ಪ ನಾಯ್ಕ, ಸೂರಪ್ಪ, ಯಜಮಾನ, ದಿಗ್ಗಜರು, ಕೋಟಿಗೊಬ್ಬ, ಪರ್ವ, ಸಿಂಹಾದ್ರಿಯ ಸಿಂಹ, ಕದಂಬ, ಆಪ್ತಮಿತ್ರ, ಆಪ್ತರಕ್ಷಕ ಇವು ವಿಷ್ಣುವರ್ಧನ್ ಅಭಿನಯದ ಕೆಲವೊಂದು ಪ್ರಸಿದ್ಧ ಸಿನೆಮಾಗಳು.

ಕನ್ನಡ ಚಿತ್ರರಂಗದಲ್ಲೇ ಅತಿ ಹೆಚ್ಚು ಸಿನಿಮಾಗಳಲ್ಲಿ ದ್ವಿಪಾತ್ರಗಳಲ್ಲಿ ಕಾಣಿಸಿಕೊಂಡ ಹೆಗ್ಗಳಿಕೆ ವಿಷ್ಣುವರ್ಧನ್ ಅವರಿಗಿದೆ. ಸುಮಾರು 20 ಚಿತ್ರಗಳಲ್ಲಿ ವಿಷ್ಣು ದ್ವಿಪಾತ್ರಗಳಲ್ಲಿ ನಟಿಸಿದ್ದು, ಭಾರತ ಚಿತ್ರರಂಗದಲ್ಲಿ ಒಂದು ದಾಖಲೆಯೇ ಸರಿ. ವಿಷ್ಣುವರ್ಧನ್-ಸುಹಾಸಿನಿ, ವಿಷ್ಣುವರ್ಧನ್-ಮಾಧವಿ ಜೋಡಿ ಕನ್ನಡ ಚಿತ್ರರಂಗದ ಅಪೂರ್ವ ಜೋಡಿಯೆಂದು ಹೆಸರಾಗಿದೆ. ಹಾಗೆಯೇ ವಿಷ್ಣು ಅವರ ಅತಿ ಹೆಚ್ಚು ಸಿನಿಮಾದಲ್ಲಿ ನಟಿಸಿದ ಕೀರ್ತಿ ನಟಿ ಆರತಿ ಅವರಿಗೆ ಸಲ್ಲುತ್ತದೆ. ನಟಿ ಭಾರತಿ ಅವರನ್ನು ವಿಷ್ಣುವರ್ಧನ್ ವಿವಾಹವಾದರು.

ಕೇವಲ ಅಭಿನಯ ಮಾತ್ರವಲ್ಲದೆ, ತಾವು ಅಭಿನಯಿಸಿದ ಕೆಲವು ಚಿತ್ರಗಳಿಗೆ ವಿಷ್ಣುವರ್ಧನ್ ಹಾಡಿದ್ದಾರೆ. ಕಿಲಾಡಿ ಕಿಟ್ಟು, ನಾಗ ಕಾಳ ಭೈರವ, ಸಾಹಸಸಿಂಹ , ಜಿಮ್ಮಿಗಲ್ಲು, ಖೈದಿ ಮೋಜುಗಾರ ಸೊಗಸುಗಾರ, ವಿಷ್ಣುಸೇನಾ ಇವೇ ಮೊದಲಾದ ಕೆಲವು ಚಿತ್ರಗಳಲ್ಲಿ ಹಿನ್ನೆಲೆ ಗಾಯನ ಮಾಡಿದ್ದಾರೆ.

 

2009 ಡಿಸೆಂಬರ್ 30ರಂದು ‘ಕೋಟಿಗೊಬ್ಬ’ ನಿಧನ

Vishnuvardhan Death dayImage credits : Vijayavani 

ಬನ್ನಂಜೆ ಗೋವಿಂದಾಚಾರ್ಯರು ವಿಷ್ಣುವರ್ಧನ್ ಅವರ ಆಧ್ಯಾತ್ಮಿಕ ಗುರುವಾಗಿದ್ದರು, ಸಂಖ್ಯಾಭವಿಷ್ಯ ಶಾಸ್ತ್ರವನ್ನು ನಂಬುತ್ತಿದ್ದ ವಿಷ್ಣುವರ್ಧನ್, ತಮ್ಮ ಕಾರಿನ ನಂಬರಾಗಿ ಮತ್ತು ಮೊಬೈಲ್ ನ ಕೊನೆಯ ಸಂಖ್ಯೆಯಾಗಿ 321ನ್ನು ಬಳಸುತ್ತಿದ್ದರು. ಬೆಂಗಳೂರು ವಿಶ್ವವಿದ್ಯಾಲಯವು 2005ನೇ ವರ್ಷದಲ್ಲಿ ಇವರಿಗೆ ಗೌರವ ಡಾಕ್ಟರೇಟ್ ಕೊಟ್ಟು ಗೌರವಿಸಿದೆ. ಕನ್ನಡ ಚಿತ್ರರಂಗಕ್ಕೆ ಅಪಾರವಾದ ಕೊಡುಗೆಯನ್ನು ನೀಡಿದ ಚಂದನವನದ ಪ್ರೀತಿಯ ಯಜಮಾನ, 30 ಡಿಸೆಂಬರ್ 2009ರಲ್ಲಿ ವಿಧಿವಶರಾದರು. ಇವರಿಗೆ ಕೀರ್ತಿ ಮತ್ತು ಚಂದನಾ ಎಂಬ ಇಬ್ಬರು ಪುತ್ರಿಯರಿದ್ದಾರೆ.

Enjoyed this article? Stay informed by joining our newsletter!

Comments

You must be logged in to post a comment.

About Author