ದೇವಾಲಯಗಳ ಸ್ವರ್ಗ ಗದಗದ ಲಕ್ಕುಂಡಿ; ಮೆಟ್ಟಿಲುಗಳ ಬಾವಿ ಇಲ್ಲಿ ಪ್ರಸಿದ್ಧಿ
Image credits: https://www.deccanherald.com
ಭಾರತದಲ್ಲಿ ಕರ್ನಾಟಕ ರಾಜ್ಯ ಪರಂಪರಾಗತವಾಗಿ ನೆಲೆಯಾಗಿರುವ ಐತಿಹಾಸಿಕ ದೇವಾಲಯಗಳಿಂದಲೇ ಪ್ರಸಿದ್ಧಿ ಹೊಂದಿದೆ. ಶತ ಶತಮಾನಗಳ ರಾಜರ ಕಾಲದ ದೇವಸ್ಥಾನಗಳು ತಮ್ಮ ಶಿಲ್ಪಕಲೆ, ಅದ್ಭುತ ಕೆತ್ತನೆ, ಕುಸುರಿ ಕೆಲಸ, ಸ್ಮಾರಕ, ತಮ್ಮದೇ ಆದ ಪೌರಾಣಿಕ ಹಿನ್ನಲೆಯಿಂದ ಸಾಕಷ್ಟು ಪ್ರಸಿದ್ಧಿ ಹೊಂದಿವೆ. ಅದರಲ್ಲೂ ಕರ್ನಾಟಕದ ಹಲವು ರಾಜ್ಯಗಳಲ್ಲಿ ರಾಜರ ಕಾಲದ ಐತಿಹಾಸಿಕ ದೇಗುಲಗಳಿದ್ದು, ತಮ್ಮದೇ ಆದ ವಿಭಿನ್ನ ವಾಸ್ತುಶಿಲ್ಪ, ಅದ್ಭುತ ಕೆತ್ತನೆಗಳಿಂದ ವಿಶ್ವದಾದ್ಯಂತ ಗಮನ ಸೆಳೆಯುತ್ತಿದೆ. ಹಂಪಿ, ಬೇಲೂರು-ಹಳೇಬೀಡು, ಶ್ರವಣಬೆಳಗೊಳ ಹೀಗೆ ಹಲವು ದೇವಸ್ಥಾನಗಳಿಗೆ ದಿನವೊಂದಕ್ಕೆ ಸಾವಿರಾರು ಮಂದಿ ಭೇಟಿ ನೀಡುತ್ತಾರೆ.
ಕರ್ನಾಟಕದಲ್ಲಿ ದೇವಾಲಯಗಳ ಸ್ವರ್ಗ, ಎಂದು ಕರೆಯಲ್ಪಡುವುದು ಸುಂದರ ದೇವಾಲಯಗಳ ಊರು ಗದಗದ ಲಕ್ಕುಂಡಿ. ಇಲ್ಲಿನ, ಪುರಾತನ ದೇವಾಲಯಗಳು ಅರಸರ ಕಾಲದ ಸಾಮ್ರಾಜ್ಯವನ್ನು, ಅಂದಿನ ವೈಭವವನ್ನು ಕಣ್ಣ ಮುಂದೆ ಹೊತ್ತು ತರುತ್ತವೆ. ಲಕ್ಕುಂಡಿಯ ಪ್ರಾಚೀನ ಮತ್ತು ಶ್ರೀಮಂತ ಪರಂಪರೆಯನ್ನು ಹೊಂದಿದ್ದರೂ ಹೆಚ್ಚು ಪ್ರಸಿದ್ಧಿಯಾಗಿಲ್ಲ. ಗದಗದ ಲಕ್ಕುಂಡಿಯಿಂದ ಸುಮಾರು 96 ಕಿ.ಮೀ ದೂರದಲ್ಲಿರುವ ತಾಣ ಪ್ರಸಿದ್ಧ ಹಂಪಿ, ಇದು ವಿಶ್ವದಾದ್ಯಂತ ಪ್ರವಾಸಿಗರನ್ನು ಸೆಳೆಯುತ್ತದೆ. ಆದರೆ ಅತ್ಯದ್ಭುತ ದೇವಾಲಯಗಳಿರುವ ಲಕ್ಕುಂಡಿ ಮಾತ್ರ ಅಷ್ಟಾಗಿ ಹೆಸರು ಪಡೆದಿಲ್ಲ.
ದೇವಾಲಯಗಳ ಸ್ವರ್ಗ ಲಕ್ಕುಂಡಿ
Image credits: https://www.deccanherald.com
ಗದಗದ ನಗರದಿಂದ 11 ಕಿಮೀ ದೂರದಲ್ಲಿರುವ ಲಕ್ಕುಂಡಿಯನ್ನು ದೇವಾಲಯಗಳ ಸ್ವರ್ಗವೆಂದು ಕರೆಯುತ್ತಾರೆ. ಶಾಸನಗಳ ಪ್ರಕಾರ ಲಕ್ಕುಂಡಿಯನ್ನು ಲೋಕಿ ಗುಂಡಿ ಎಂದೂ ಕರೆಯುತ್ತಾರೆ. ಇದು ಸಾವಿರ ವರ್ಷಗಳ ಹಿಂದೆಯೇ ಪ್ರಮುಖ ನಗರವಾಗಿತ್ತು. ಲಕ್ಕುಂಡಿಯಲ್ಲಿ 50ಕ್ಕೂ ಹೆಚ್ಚು ಪ್ರಾಚೀನ ದೇವಾಲಯಗಳಿವೆ. ಕಲ್ಯಾಣಿ ಎಂದು ಕರೆಯಲ್ಪಡುವ 101 ಮೆಟ್ಟಿಲುಗಳ ಬಾವಿ ಮತ್ತು ಚಾಲುಕ್ಯರು, ಕಲಚೂರಿಗಳು, ಸೀನಾ ಮತ್ತು ಹೊಯ್ಸಳರ ಆಳ್ವಿಕೆಯಲ್ಲಿ ನಿರ್ಮಿಸಲಾದ 29 ಶಾಸನಗಳನ್ನು ಇಲ್ಲಿ ದೊರೆತಿವೆ. ಇದರಿಂದ ಲಕ್ಕುಂಡಿಯ ಪುರಾತನ ಕಾಲದ ವೈಭವದ ಕುರಿತು ಕಲ್ಪಿಸಿಕೊಳ್ಳಬಹುದು.
ಚಾಲುಕ್ಯರು, ಕಲಚುರಿಗಳು ಹಾಗೂ ಸೇವುಣ ಸಾಮ್ರಾಜ್ಯಗಳಿಂದ ಲಕ್ಕುಂಡಿಯು ಆಳಲ್ಪಟ್ಟಿದೆ. ಈ ಮೊದಲು ರಾಷ್ಟ್ರಕೂಟರ ಪ್ರಭಾವ ಅಳಿಸಿ ಲಕ್ಕುಂಡಿ ಆಳಿದ ಚಾಲುಕ್ಯರು ಕಲ್ಯಾಣಿಯನ್ನು ರಾಜಧಾನಿಯಾಗಿ ಮಾಡಿಕೊಂಡರು. ಆದರೂ ಅವರು ಲಕ್ಕುಂಡಿಯಲ್ಲಿ ಶಿಲ್ಪಕಲೆಗೆ ಒತ್ತು ನೀಡಿ ಅನೇಕ ದೇವಾಲಯ ರಚನೆಗಳನ್ನು ನಿರ್ಮಿಸಿ ಉಳಿಸಿಕೊಂಡರು. ಜೈನ ಸಾಹಿತ್ಯದಲ್ಲಿ ಬರುವ ದಾನಚಿಂತಾಮಣಿ ಅತ್ತಿಮಬ್ಬೆ ಹಾಗೂ ಶಿಲ್ಪಕಲೆಗೆ ಹೆಸರುವಾಸಿಯಾದ ಲಕ್ಕುಂಡಿಯ ಮೊದಲಿನ ಹೆಸರು ಲೋಕಿಗುಂಡಿ ಎಂದಾಗಿತ್ತು.
ಕಾಶಿ ವಿಶ್ವೇಶ್ವರ ದೇವಾಲಯ
Image credit: google.com
ಲಕ್ಕುಂಡಿ, ಮಲ್ಲಿಕಾರ್ಜುನ, ವೀರಭದ್ರ, ಮನಿಕೇಶ್ವರ, ನಾನೇಶ್ವರ, ಲಕ್ಷ್ಮಿನಾರಾಯಣ, ಸೋಮೇಶ್ವರ, ನೀಲಕಂಠೇಶ್ವರ ಮತ್ತಿತರ ಹಲವು ಪಾಳುಬಿದ್ದ ದೇವಾಲಯಗಳ ನೆಲೆಯಾಗಿದೆ. ಇಲ್ಲಿನ ದೇವಾಲಯಗಳು, ಭವ್ಯವಾದ ಕೆತ್ತನೆಗಳಿಂದ ಕೂಡಿದ್ದು ಅಂದಿನ ಕುಶಲ ಕರ್ಮಿಗಳ ನೈಪುಣ್ಯತೆಯ ವೈಭವವನ್ನು ಸಾರಿ ಹೇಳುತ್ತವೆ. ಲಕ್ಕುಂಡಿಯಲ್ಲಿ ಪ್ರಮುಖವಾಗಿ ನೋಡಬಹುದಾದ ರಚನೆಗಳೆಂದರೆ ಕಾಶಿ ವಿಶ್ವೇಶ್ವರ ದೇವಾಲಯ. ವಿಶೇಷವಾಗಿ ಕಾಶಿ ವಿಶ್ವೇಶ್ವರ ದೇವಾಲಯವು ಚಾಲುಕ್ಯ ವಾಸ್ತುಶೈಲಿಯ ಅದ್ಭುತ ಉದಾಹರಣೆಗಳ ಪೈಕಿ ಒಂದಾಗಿದೆ. ಕಾಶಿ ವಿಶ್ವನಾಥ ದೇವಾಲಯವು ಅತ್ಯಂತ ಅಲಂಕೃತ ಮತ್ತು ವಿಸ್ತಾರವಾಗಿ ನಿರ್ಮಿಸಲ್ಪಟ್ಟಿದೆ.
ಬ್ರಹ್ಮ ಜಿನಾಲಯ
Image credits: http://ekpravas.blogspot.com
ಲಕ್ಕುಂಡಿ ಜೈನ ದೇವಸ್ಥಾನಗಳಿಗೆ ಹೆಸರುವಾಸಿಯಾಗಿದೆ. ಮಹಾವೀರ ಜೈನ ದೇವಾಲಯ ಅತ್ಯಂತ ಪ್ರಾಚೀನ ದೇವಾಲಯಗಳಲ್ಲಿ ಒಂದಾಗಿದೆ. ಕಲ್ಯಾಣ ಚಾಲುಕ್ಯರ ವಾಸ್ತುಶೈಲಿಯು, ಬಾದಾಮಿಯ ಆರಂಭಿಕ ಚಾಲುಕ್ಯರ ಮತ್ತು ಅವರ ನಂತರದ ಹೊಯ್ಸಳರ ನಡುವಿನ ಕೊಂಡಿ ಎಂದು ಹೇಳಲಾಗುತ್ತದೆ. ಹಲವಾರು ಬಸದಿಗಳಲ್ಲಿ ಬ್ರಹ್ಮ ಜಿನಾಲಯವು ಇಲ್ಲಿನ ಜನಪ್ರಿಯ ಜೈನ ಮಂದಿರಗಳಲ್ಲಿ ಒಂದಾಗಿದೆ. ಕರ್ನಾಟಕ ದೇವಾಲಯದ ವಾಸ್ತುಶಿಲ್ಪದಲ್ಲಿ ಉನ್ನತ ಶ್ರೇಣಿಯ ಸಾಕ್ಷಿಯಾಗಿ ಬ್ರಹ್ಮ ಜಿನಾಲಯ ನಿಂತಿದೆ. ಬ್ರಹ್ಮ ಜಿನಾಲಯವನ್ನು ರಾಣಿ ದಾನಚಿಂತಾಮಣಿ ಅತ್ತಿಮಬ್ಬೆ ನಿರ್ಮಿಸಿದರು ಎಂದು ಹೇಳಲಾಗುತ್ತಿದೆ.
ಮೆಟ್ಟಿಲು ಬಾವಿಗಳ ಕಲ್ಯಾಣಿ
image credit: google.com
ಲಕ್ಕುಂಡಿ ತನ್ನ ಕಡಿದಾದ ಬಾವಿಗಳಿಗೆ ಹೆಸರುವಾಸಿಯಾಗಿದೆ. ಅದ್ಭುತ ಕೆತ್ತನೆಗಳಿಂದ ಕೂಡಿರುವ ಲಕ್ಕುಂಡಿಯ ಅನೇಕ ಮೆಟ್ಟಿಲು ಬಾವಿಗಳು ಪೈಕಿ ಪ್ರವಾಸಿಗರನ್ನು ಆಕರ್ಷಿಸುತ್ತವೆ. ಅದರಲ್ಲಿ ಚಟೀರ ಬಾವಿ, ಕಣ್ಣೆ ಬಾವಿ ಹಾಗೂ ಮುಸುಕಿನ ಬಾವಿಗಳು ಕೆಲವು. ಕಲಾತ್ಮಕವಾಗಿ ನಿರ್ಮಿಸಲಾದ ಮೆಟ್ಟಿಲು ಬಾವಿಗಳು ಆ ಕಾಲದಲ್ಲಿನ ನೀರಿನ ಸಂಗ್ರಹಣಾ ವ್ಯವಸ್ಥೆಗಳಿತ್ತು ಅನ್ನೋದನ್ನು ಸೂಚಿಸುತ್ತವೆ. ಇದು ಹಲವಾರು ಬಾವಿಗಳ ಗೋಡೆಗಳ ಒಳಗೆ ಕಲಾತ್ಮಕವಾದ ಲಿಂಗಗಳನ್ನು ಒಳಗೊಂಡಿದೆ. ಈ ಮೆಟ್ಟಿಲು ಬಾವಿಗಳ ಆಳವನ್ನು ನೋಡಿದರೆ ಅದರ ಭವ್ಯತೆಯ ಬಗ್ಗೆ ತಿಳಿದುಕೊಳ್ಳಬಹುದು.
ಲಕ್ಕುಂಡಿಯ ಇನ್ನೊಂದು ಆಕರ್ಷಣೆಯೆಂದರೆ ಕಲಾಶಿಲ್ಪ ಗ್ಯಾಲರಿ. ಇದು ಭಾರತದ ಪುರಾತತ್ತ್ವ ಇಲಾಖೆಯಿಂದ ನಿರ್ವಹಿಸಲ್ಪಡುತ್ತದೆ. ಪುರಾತತ್ವ ಶಾಸ್ತ್ರದಲ್ಲಿ ಆಸಕ್ತಿ ಹೊಂದಿರುವ ಪ್ರವಾಸಿಗರಿಗೆ ಲಕ್ಕುಂಡಿಯು ಭೇಟಿ ನೀಡಲೇಬೇಕಾದ ಸ್ಥಳವಾಗಿದೆ. ಇನ್ನೊಂದು ವಿಷಯವೆಂದರೆ ಲಕ್ಕುಂಡಿಯು ಅಂಬಸಿ ಪಂಚೆ, ಲುಂಗಿಯ ತಯಾರಿಕೆಗೆ ಪ್ರಸಿದ್ಧವಾಗಿದೆ. ಈ ಪಂಚೆ ಅಥವಾ ಲುಂಗಿಯು ವಿಶಿಷ್ಟವಾಗಿದ್ದು, ಅಂಚುಗಳಲ್ಲಿ ಸುಂದರ ವಿನ್ಯಾಸಗಳನ್ನು ಹೊಂದಿರುತ್ತದೆ.Image credits: https://www.deccanherald.com
ಲಕ್ಕುಂಡಿ ಎಲ್ಲಿದೆ..?
ಕರ್ನಾಟಕದ ಗದಗ ಜಿಲ್ಲೆಯ ಲಕ್ಕುಂಡಿ, ಹುಬ್ಬಳ್ಳಿಯಿಂದ ಹಂಪಿಗೆ ಹೋಗುವ ಮಾರ್ಗದಲ್ಲಿರುವ ಒಂದು ಸಣ್ಣ ಹಳ್ಳಿ. ಪೂರ್ವದಲ್ಲಿ ಗದಗದಿಂದ 11 ಕಿ.ಮೀ ದೂರದಲ್ಲಿರುವ ಲಕ್ಕುಂಡಿ, ದಂಬಲ್ ನಿಂದ 134 ಕಿ.ಮೀ ಮತ್ತು ಮಹಾದೇವ ದೇವಸ್ಥಾನದಿಂದ 25 ಕಿ.ಮೀ ದೂರದಲ್ಲಿದೆ. ನಮ್ಮ ನಾಡಿನ ಸಂಸ್ಕೃತಿ-ವೈಭವ ಸಾರುವ ಲಕ್ಕುಂಡಿಯಂತಹ ಅನೇಕ ಸ್ಥಳಗಳು ಉತ್ತರ ಕರ್ನಾಟಕವೆ ಆಗಲಿ ಅಥವಾ ಸಮಗ್ರ ಕರ್ನಾಟಕದಲ್ಲೆ ಆಗಲಿ ಸಾಕಷ್ಟಿವೆ. ರಾಜರ ಕಾಲದ ಪರಂಪರೆ, ವೈಭವವನ್ನು ಸಾರುವ ಈ ದೇವಾಲಯಗಳು ಪಾಳುಬೀಳುತ್ತಿವೆ ಅನ್ನೋದೆ ಬೇಸರದ ವಿಷಯ.
You must be logged in to post a comment.