ಪಶ್ಚಿಮ ಬಂಗಾಳದಲ್ಲಿ ದುರ್ಗೆಯ ಪೂಜೆಗೆ ಏಕೆ ಅಷ್ಟೊಂದು ಮಹತ್ವ?
ಪಶ್ಚಿಮ ಬಂಗಾಳದಲ್ಲಿ ದಸರಾ ಸಂದರ್ಭದಲ್ಲಿ ಅಷ್ಟೇ ಅಲ್ಲದೆ ಎಲ್ಲಾ ಸಮಯದಲ್ಲೂ ದುರ್ಗಾ ಮಾತೆಯನ್ನು ಆರಾಧಿಸಲಾಗುತ್ತದೆ. ಇನ್ನು ದಸರಾ ಸಮಯದಲ್ಲಂತೂ ಭಕ್ತರು ವಿಶೇಷವಾಗಿ ದುರ್ಗಾ ಪೂಜೆಯನ್ನು ನೆರವೇರಿಸುತ್ತಾರೆ.
ದುರ್ಗಾ ಪೂಜೆಯ ಮಹತ್ವ : ಮೊದಲೇ ಹೇಳಿದಂತೆ ಪಶ್ಚಿಮ ಬಂಗಾಳದಲ್ಲಿ ಎಲ್ಲಾ ಸಮಯದಲ್ಲು ದುರ್ಗೆಯನ್ನು ಆರಾಧಿಸಲಾಗುತ್ತದೆ. ಇನ್ನು ಮಹಾಲಯ, ಷಷ್ಠಿ, ಮಹಾಸಪ್ತಮಿ, ಮಹಾ ಅಷ್ಟಮಿ, ಮಹಾನವಮಿ ಮತ್ತು ವಿಜಯದಶಮಿಯಂದು ವಿಶೇಷವಾಗಿ ಸಂಭ್ರಮದಿಂದ, ಅದ್ಧೂರಿಯಾಗಿ ಆಚರಿಸುತ್ತಾರೆ. ಇನ್ನು ದುರ್ಗಾ ಪೂಜೆಯ ಆಚರಣೆಯ ದಿನಾಂಕವನ್ನು ಸಾಂಪ್ರದಾಯಿಕವಾಗಿ ಹಿಂದೂ ಪಂಚಾಂಗದ ಪ್ರಕಾರ ನಿಗದಿ ಮಾಡಲಾಗುತ್ತದೆ. ದುರ್ಗಾ ಪೂಜೆಯ ಆಚರಣೆಯು ಎಲ್ಲಾ ದೇವಾನುದೇವತಗಳನ್ನು ಒಳಗೊಳ್ಳುತ್ತದೆ.
ದುರ್ಗೆಯನ್ನು ಪೂಜಿಸಿದ್ದು ರಾಮ: ಪುರಾಣಗಳ ಪ್ರಕಾರ ಮೊಟ್ಟ ಮೊದಲ ಬಾರಿಗೆ ದುರ್ಗಾ ಪೂಜೆಯನ್ನು ಮಾಡಿದವನು ರಾಮ ಎನ್ನಲಾಗುತ್ತದೆ. ದುರ್ಗೆಯ ಆಶೀರ್ವಾದ ಪಡೆಯಲು, ರಾವಣನ ವಿರುದ್ಧವಾಗಿ ಯುದ್ಧ ಮಾಡುವ ಮುನ್ನ ರಾಮ ದುರ್ಗಾ ದೇವಿಯನ್ನು ಪೂಜಿಸಿದನೆಂದು ಹೇಳಲಾಗುತ್ತದೆ. ಬಲಿಷ್ಠನಾದ ರಾವಣನನ್ನು ಸೋಲಿಸುವುದು ರಾಮನಿಗೆ ಅಷ್ಟು ಸುಲಭವಾಗಿರಲಿಲ್ಲ. ಹೀಗಾಗಿ ದುರ್ಗಾದೇವಿಯ ವರವನ್ನು ಪಡೆಯಲು ದುರ್ಗೆಯನ್ನು ಪೂಜಿಸಿದ ಎನ್ನಲಾಗುತ್ತದೆ.
ದಸರಾ ಸಮಯದಲ್ಲಿ ದುರ್ಗಾ ಪೂಜೆ: ದುಷ್ಟರ ಸಂಹಾರಕ್ಕೆ ಹಾಗೂ ಶಿಷ್ಟರ ರಕ್ಷಣೆಗೆಂದು ನವ ಅವತಾರಗಳನ್ನು ತಾಳಿದ ದುರ್ಗಾದೇವಿಯನ್ನು ಪೂಜಿಸುವ ದಿನವೇ ನವರಾತ್ರಿ. ಪ್ರತಿದಿನವೂ ದುರ್ಗಾದೇವಿಯ ಒಂದೊಂದು ಅವತಾರಗಳನ್ನು ಈ ದಿನಗಳಲ್ಲಿ ಆರಾಧಿಸಲಾಗುತ್ತದೆ. ಅದರಲ್ಲೂ ಷಷ್ಠಿಯಂದು ಮಾಡುವಂತಹ ದುರ್ಗಾಷಷ್ಠಿಗೆ ಬಹಳ ಮಹತ್ವ ನೀಡಲಾಗುತ್ತದೆ. ಜೊತೆಗೆ ನವರಾತ್ರಿಯ ಆರನೇ ದಿನದಿಂದ ದುರ್ಗಾಪೂಜೆಯನ್ನು ಮಾಡಲಾಗುತ್ತದೆ. ಮಹಾಲಯ ಅಮಾವಾಸ್ಯೆ ದಿನ ದೇವಿ ಪಕ್ಷವು ಆರಂಭಗೊಳ್ಳುತ್ತದೆ. ಆ ದಿನ ದುರ್ಗಾದೇವಿಯು ಕೈಲಾಸದಿಂದ ತನ್ನ ಪ್ರಯಾಣವನ್ನು ಆರಂಭಿಸುತ್ತಾಳೆ ಎನ್ನಲಾಗುತ್ತದೆ.
ಗಣೇಷ ಚತುರ್ಥಿಯಂತೆ ಆಚರಣೆ: ಪಶ್ಚಿಮ ಬಂಗಾಳದಲ್ಲಿ ದುರ್ಗಾ ಪೂಜೆಯ ಸಮಯದಲ್ಲಿ ಎಲ್ಲಿ ನೋಡಿದರೂ ಆಕರ್ಷಕ ಬಣ್ಣದ ಪೆಂಡಾಲ್ ಗಳಲ್ಲಿ ವಿವಿಧ ಆಯುಧಗಳೊಂದಿಗೆ ಅಲಂಕೃತಗೊಂಡ ದುರ್ಗಾ ದೇವಿಯನ್ನು ಕೂರಿಸಿ ಪೂಜಿಸಲಾಗುತ್ತದೆ. ಗಣೇಶ ಚತುರ್ಥಿಯಂತೆ ಆಚರಿಸಲ್ಪುಡುವ ಈ ಹಬ್ಬದಲ್ಲಿ, ದೇವಿಯ ಸತತ 5 ದಿನಗಳ ಆರಾಧನೆಯ ನಂತರ ಹತ್ತನೇ ದಿನ ದೇವಿಯನ್ನು ಮೆರವಣಿಗೆಯಲ್ಲಿ ಸಾಗಿಸಿ ವಿಸರ್ಜನೆ ಮಾಡಲಾಗುತ್ತದೆ. ಪೂಜೆಯ ಕೊನೆಯ ದಿನ ವಿವಾಹಿತ ಮಹಿಳೆಯರು ಸಾಂಪ್ರದಾಯಿಕವಾಗಿ ಕೆಂಪು, ಬಿಳಿ ಬಣ್ಣದ ಸೀರೆಯುಟ್ಟು ಸಿಂಧೂರ ಬಳಿಯುವುದು ಕಣ್ಮನ ಸೆಳೆಯುತ್ತವೆ.
ಪೂಜಾ ವಿಧಾನ: ದುರ್ಗಾ ಪೂಜೆಯಂದು ಮಾಡುವ ಕಾಲ್ ಪರಂಭ ಎನ್ನುವ ಆರಂಭಿಕ ಪೂಜಾ ವಿಧಿ ಪ್ರಮುಖವಾದುದು.ಮುಂಜಾನೆ ಎದ್ದು ಕಲಶವನ್ನು ದುರ್ಗಾ ಮಾತೆಯ ಮುಂದೆ ಇರಿಸಲಾಗುತ್ತದೆ. ಇದನ್ನು ಘಟಸ್ಥಾಪನೆ ಎಂದೂ ಕರೆಯಲಾಗುತ್ತದೆ. ನಂತರ ಭಕ್ತರು ಮಹಾಸಪ್ತಮಿ, ಮಹಾ ಅಷ್ಟಮಿ ಹಾಗೂ ಮಹಾನವಮಿಯಂದು ವಿವಿಧ ಪೂಜಾ ವಿಧಾನಗಳನ್ನು ಅನುಸರಿಸುತ್ತಾರೆ. ಇನ್ನು ದೇವಿಯ ಪೂಜೆಗಾಗಿ 108 ಕಮಲದ ಹೂವು ಹಾಗೂ 108 ದೀಪಗಳನ್ನು ಹಚ್ಚುವ ಸಂಪ್ರದಾಯವಿದೆ.
ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..
ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ ನಮ್ಮನ್ನ ಫಾಲೋ ಮಾಡಿ..
You must be logged in to post a comment.