ಲವ-ಕುಶರು ಜನಿಸಿದ ಸ್ಥಳ ಆವನಿ..

ಲವ-ಕುಶರು ಜನಿಸಿದ ಸ್ಥಳ ಆವನಿ..

ಸೀತಾ ಮಾತೆ ಲವ-ಕುಶರಿಗೆ ಜನ್ಮ ನೀಡಿದ ಸ್ಥಳ ಆವನಿ.. ವಾಲ್ಮೀಕಿ ಮಹರ್ಷಿಗಳ ತಪೋಭೂಮಿ ಬಗ್ಗೆ ನಿಮಗೆಷ್ಟು ಗೊತ್ತು?

ಪುರಾಣ ಪ್ರಸಿದ್ಧ ಕ್ಷೇತ್ರಗಳಿಂದ ತುಂಬಿರುವ ಕೋಲಾರ ಜಿಲ್ಲೆಯಲ್ಲಿದೆ ರಾಮಾಯಣ ಬರೆದ ಆದಿ ಕವಿ ವಾಲ್ಮೀಕಿ ಮಹರ್ಷಿಗಳ ತಪೋಭೂಮಿ... ತ್ರೇತಾಯುಗಪುರುಷ ಮರ್ಯಾದಾ ಪುರುಷೋತ್ತಮ ಶ್ರೀರಾಮಚಂದ್ರನೇ ಪಾಪ ಪ್ರಾಯಶ್ಚಿತ್ತಾರ್ಥವಾಗಿ ಸ್ವತಃ ಪ್ರತಿಷ್ಠಾಪಿಸಿ, ಪೂಜಿಸಿದ ಬೃಹತ್ ರಾಮೇಶ್ವರ ಲಿಂಗವಿರುವ ಈ ಪುಣ್ಯಕ್ಷೇತ್ರವೇ ಆವನಿ...

ಕೋಲಾರ ಜಿಲ್ಲೆಯ ಮುಳಬಾಗಿಲು ತಾಲೂಕಿನಲ್ಲಿರುವ ಪುಣ್ಯಕ್ಷೇತ್ರವಿದು. ಅವಣ್ಯ, ಅವಣೆ ಎಂದೂ ಕರೆಸಿಕೊಂಡಿದ್ದ ಈ ಊರು ಕಾಲಾನಂತರದಲ್ಲಿ ಆವನಿಯಾಯಿತು ಎನ್ನಲಾಗುತ್ತದೆ. ಆದರೆ ಹಿಂದೆ ಈ ಕ್ಷೇತ್ರದಲ್ಲಿ ರುದ್ರಭಟ್ಟಾರಕರು ಅಹವನೀಯ ಯಾಗ ಮಾಡಿದ ಕಾರಣ ಈ ಕ್ಷೇತ್ರ ಆಹವನೀಯ ಕ್ಷೇತ್ರ ಎಂದು ಕರೆಸಿಕೊಂಡಿತ್ತು. ವರ್ಷಗಳು ಉರುಳಿದಂತೆ ಜನರ ಬಾಯಲ್ಲಿ ಆವನಿಯಾಯಿತು ಎಂದೂ ಹೇಳುತ್ತಾರೆ.

ಪುರಾತನ ಕಾಲದಲ್ಲಿ ಈ ಪ್ರದೇಶಕ್ಕೆ ಆವಂತಿಕಾಪುರ ಎಂಬ ಹೆಸರಿತ್ತಂತೆ. ಇಲ್ಲಿ ವಾಲ್ಮೀಕಿ ಮಹರ್ಷಿಗಳು ಆಶ್ರಮ ನಿರ್ಮಿಸಿ, ತಪವನ್ನಾಚರಿಸುತ್ತಿದ್ದರಂತೆ.

ರಾಮಾಯಣದ ಕುರುಹುಗಳಿರುವ ಕ್ಷೇತ್ರವಿದು:

ಲಂಕಾಸುರರನ್ನು ಸಂಹರಿಸಿ ವಾಪಸಾದ ಬಳಿಕ ಸೀತೆಯ ಬಗ್ಗೆ ಪುರಜನನೊಬ್ಬ ಅನುಮಾನದ ಮಾತನಾಡಿದ ಎಂದು ಮತ್ತೆ ರಾಮನಿಂದ ಪರಿತ್ಯಕ್ತೆಯಾದ ಸೀತಾಮಾತೆ ಇಲ್ಲಿ ಬಂದು ವಾಲ್ಮೀಕಿ ಮಹರ್ಷಿಗಳ ಆಶ್ರಯ ಪಡೆದರು. ಗರ್ಭಿಣಿಯಾಗಿದ್ದ ಸೀತಾಮಾತೆ ಆಶ್ರಮದಲ್ಲಿ ಲವನಿಗೆ ಜನ್ಮನೀಡಿದಳು. ಒಮ್ಮೆ ಲವ ಕಾಣದೇ ಇದ್ದಾಗ, ಕುಶ ಅಂದರೆ ದರ್ಭೆಯಿಂದ ಲವನ ಪ್ರತಿರೂಪ ಸೃಷ್ಟಿಸಿದಳಂತೆ. ಅವನೇ ಕುಶ. ಈ ಇಬ್ಬರು ಅವಳಿ ಸೋದರರು ಶ್ರೀರಾಮನ ಅಶ್ವಮೇಧದ ಕುದುರೆಯನ್ನು ಕಟ್ಟಿಹಾಕಿದರಂತೆ. ಅಶ್ವರಕ್ಷಣೆಗೆ ಬಂದ ಎಲ್ಲರೂ ಲವಕುಶರೊಂದಿಗೆ ಯುದ್ಧಮಾಡಿ ಸೋತಾಗ, ಸ್ವತಃ ಶ್ರೀರಾಮನೇ ಯುದ್ಧಕ್ಕೆ ಬಂದನಂತೆ. ವಾಲ್ಮೀಕಿ ಮಹರ್ಷಿಗಳ ಆಶ್ರಮ ಪ್ರವೇಶಿಸಿ ಅವರೊಂದಿಗೆ ಏಕಾಂತದಲ್ಲಿ ಮಾತನಾಡಿ, ನಿಜ ವೃತ್ತಾಂತ ತಿಳಿದು ಮತ್ತೆ ಸೀತೆಯನ್ನು ಪರೀಕ್ಷೆಗೆ ಗುರಿಪಡಿಸಲೆತ್ನಿಸಿದಾಗ, ಭೂಮಿಯ ಮಗಳಾದ ಸೀತೆಯನ್ನು ಭೂಮಿತಾಯಿ ತನ್ನ ಒಡಲಲ್ಲಿ ಸೇರಿಸಿಕೊಂಡಳಂತೆ.

ಆಗ ಶ್ರೀರಾಮಚಂದ್ರನಿಗೆ ತನ್ನ ತಪ್ಪಿನ ಅರಿವಾಯಿತು. ಆಗ ವಾಲ್ಮೀಕಿ ಮಹರ್ಷಿಗಳ ಉಪದೇಶದಂತೆ ಪ್ರಾಯಶ್ಚಿತ್ತಾರ್ಥವಾಗಿ ಇಲ್ಲಿ ಬೃಹತ್ ಲಿಂಗ ಸ್ಥಾಪಿಸಿ, ಪೂಜಿಸಿದನಂತೆ. ಅದುವೇ ರಾಮೇಶ್ವರ ಲಿಂಗ. ನಂತರ ಲಕ್ಷ್ಮಣ, ಭರತ, ಶತೃಘ್ನ, ಸುಗ್ರೀವ ಸೇರಿದಂತೆ ಶ್ರೀರಾಮ ಪರಿವಾರದವರೆಲ್ಲರೂ ಇಲ್ಲಿ 108 ಲಿಂಗ ಪ್ರತಿಷ್ಠಾಪಿಸಿ, ಪೂಜಿಸಿದರಂತೆ. ಈಗಲೂ ದೇವಾಲಯ ಆವರಣದಲ್ಲಿ ಲಕ್ಷ್ಮಣ ಲಿಂಗೇಶ್ವರ, ಭರತೇಶ್ವರ, ಶತ್ರುಘ್ನ ಲಿಂಗೇಶ್ವರ, ಸುಗ್ರೀವೇಶ್ವರ ಗುಡಿಗಳಿವೆ.

ರಾಮಾಯಣದ ನಂಟು ಹೊಂದಿರುವ ಈ ಪ್ರದೇಶದಲ್ಲಿ ವಾಲ್ಮೀಕಿಯ ಕುಟೀರ, ವಾಲ್ಮಿಕಿಯೊಂದಿಗೆ ಶ್ರೀರಾಮ ಏಕಾಂತದಲ್ಲಿ ಮಾತನಾಡಿದ ಸ್ಥಳದಲ್ಲಿ ಏಕಾಂತರಾಮಸ್ವಾಮಿ ಸನ್ನಿಧಿ, ಸೀತೆಯ ಬಾಯಾರಿಕೆ ತೀರಿಸಲು ಲಕ್ಷ್ಮಣ ಧನುಸ್ಸಿಗೆ ಬಾಣ ಹೂಡಿ ತರಿಸಿದ ಜಲ ಇರುವ ಧನುಷ್ಕೋಟಿ, ಲವಕುಶರು ಮಲಗುತ್ತಿದ್ದ ತೊಟ್ಟಿಲು, ಸೀತೆಯು ಬಳಸಿದ ಅಡುಗೆಪಾತ್ರೆ, ಸ್ನಾನ ಮಾಡುತ್ತಿದ್ದ ಕೊಳ, ಲವಕುಶರು ಯಜ್ಞಾಶ್ವವನ್ನು ಕಟ್ಟಿದ ಬಂಡೆ, ರಾಮಲಕ್ಷ್ಮಣರು ಕುಳಿತಿದ್ದ ಬಂಡೆ ಇದೆ.

ದಕ್ಷಿಣದ ಅರಸರೆಲ್ಲರೂ ಕೊಡುಗೆ ನೀಡಿದ್ದಾರೆ:

ರಾಮಲಿಂಗೇಶ್ವರ ದೇವಾಲಯ ಆವರಣದಲ್ಲಿ ಅನೇಕ ದೇಗುಲಗಳಿವೆ.. 10-12 ದೇವಾಲಯಗಳಿರುವ ಈ ಸಮುಚ್ಚಯದ ನಿರ್ಮಾಣ ಕಾಲದ ಬಗ್ಗೆ ನಿಖರತೆ ಇಲ್ಲದಿದ್ದರೂ ನೊಳಂಬರು , ಚೋಳರು, ಚಾಳುಕ್ಯರು, ಗಂಗರು, ವಿಜಯನಗರದ ಅರಸರಿಂದ ಹಿಡಿದು ಇತ್ತಿಚಿನ ಮೈಸೂರರಸರವರೆಗೆ ಎಲ್ಲ ರಾಜಮನೆತನಗಳ ಕೆತ್ತನೆ ಶೈಲಿಗಳು ಇಲ್ಲಿವೆ. ದಕ್ಷಿಣಕ್ಕೆ ಹಾಗು ಪೂರ್ವಕ್ಕೆ ಬಾಗಿಲಿದ್ದು ಎತ್ತರದ ಪ್ರಾಕಾರದಿಂದ ಈ ಸಮುಚ್ಚಯ ಸುರಕ್ಷಿತವಾಗಿದೆ. ಮಧ್ಯದಲ್ಲಿ ಪಾರ್ವತಿ ಅಮ್ಮನವರ ದೇವಾಲಯವಿದ್ದು ಅದರ ಪಶ್ಚಿಮಕ್ಕೆ ರಾಮೇಶ್ವರ,ಲಕ್ಷ್ಮಣೇಶ್ವರ ಹಾಗು ಭರತೇಶ್ವರ ದೇವಾಲಯಗಳಿವೆ. ಹಾಗೇ ಪೂರ್ವಕ್ಕೆ ಶತೃಘ್ನೇಶ್ವರ,ಅಂಜನೇಶ್ವರ ಹಾಗು ಚಿಕ್ಕದಾದ ಸುಗ್ರೀವೇಶ್ವರ ಮತ್ತು ಅಂಗದೇಶ್ವರ ದೇವಾಲಯಗಳಿವೆ. ದೇವಾಲಯದ ಮುಖ್ಯ ಪ್ರವೇಶ ದ್ವಾರದಲ್ಲಿ ಎತ್ತರದ ಗರುಡಗಂಬವಿದೆ.

ಶತೃಘ್ನೇಶ್ವರ ಹಾಗು ಲಕ್ಷ್ಮಣೇಶ್ವರ ದೇವಾಲಯಗಳ ಗೋಡೆ ಮೇಲೆ ಹಳೆಗನ್ನಡದ ಲಿಪಿ ಇದ್ದು ವೀರ ನೊಳಂಬ ಕಾಲಕ್ಕೆ ಸೇರಿದ್ದಾಗಿದೆ. ಈ ಶಾಸನದ ಪ್ರಕಾರ ದೇವಬ್ಬರಸಿ ಎಂಬ ಅರಸಿಯೊಬ್ಬಳು "ದೇವಬ್ಬೆ ಸಮುದ್ರ"ವನ್ನು ಹಾಗು ಹೊರವಂಗಲದಲ್ಲಿ ವಿಷ್ಣು ದೇವಾಲಯವನ್ನು ಕಟ್ಟಿಸಿರುವ ಮಾಹಿತಿ ಇದೆ. ಅಲ್ಲದೆ ಈಕೆ ತನ್ನ ಮೊದಲನೇ ಮಗ ವೀರ ಮಹೇಂದ್ರ ನೊಳಂಬಾಧಿರಾಜನ ಸಾವಿನಿಂದ ಕೆಂಗೆಟ್ಟು ತನ್ನ ಎರಡನೇ ಮಗ ಇರವ ನೊಳಂಬನಿಗೆ ಪಟ್ಟ ಕಟ್ಟಿ ಆತನ ಕ್ಷೇಮಾಭಿವೃದ್ಧಿಗೆ "ನೊಳಂಬ ನಾರಾಯಣೇಶ್ವರ" ದೇವಾಲಯವನ್ನು ಕಟ್ಟಿಸಿದಳೆಂದು ತಿಳಿದುಬರುತ್ತದೆ.

ಶೃಂಗೇರಿ ಶಾರದಾ ಪೀಠವೂ ಸ್ಥಾಪಿತವಾಗಿದೆ :

ಆದಿ ಶಂಕರರು ಸ್ಥಾಪಿಸಿರುವ ಶೃಂಗೇರಿ ಪೀಠದ ಜಗದ್ಗುರುಳಾದ 4ನೇ ನೃಸಿಂಹಭಾರತಿಯವರು ಸಂಚಾರದಲ್ಲಿದ್ದಾಗ ಕೆಲದಿನ ಈ ಊರಲ್ಲಿ ತಂಗಿದ್ದರಂತೆ. ಆಗ ಅವರಿಗೆ ನಿಂತ ಭಂಗಿಯಲ್ಲಿರುವ ಶಾರದಾ ಮಾತೆಯ ಮೂರ್ತಿ ಸಿಕ್ಕಿತಂತೆ. ಸ್ಥಳಮಹಿಮೆಯನ್ನರಿತ ಶ್ರೀಗಳು ಅದನ್ನು ಅಲ್ಲೇ ಪ್ರತಿಷ್ಠಾಪಿಸಿ ಶಾಖಾ ಮಠವೊಂದರ ಸ್ಥಾಪನೆಗೆ ಕಾರಣರಾದರೆಂದು ಹೇಳಲಾಗುತ್ತದೆ.

ಈ ಕ್ಷೇತ್ರದಲ್ಲಿದೆ ವಾಲ್ಮಿಕಿ ಗುಹೆ:

ಬೆಟ್ಟ ಹತ್ತುವಲ್ಲಿ ಸಿಗುವ ಒಂದು ಗುಹೆಯನ್ನು ವಾಲ್ಮೀಕಿಯ ಗುಹೆಯೆಂದು ಕರೆಯುತ್ತಾರೆ. ಇದರ ಸಮೀಪದಲ್ಲಿ ಚೋಳ ಸಂಪ್ರದಾಯದ ಒಂದು ಸಣ್ಣ ದೇವಾಲಯವಿದೆ. ಇಲ್ಲಿಂದ ಅನತಿ ದೂರದಲ್ಲಿರುವ ಏಕಾಂತರಾಮಯ್ಯನ ದೇವಾಲಯ ಸಹ ಚೋಳ ಸಂಪ್ರದಾಯದ ಕಟ್ಟಡ. ಆದರೆ ಇದರ ನವರಂಗಭಾಗ ಹೊಯ್ಸಳ ಮುಮ್ಮಡಿ ಬಲ್ಲಾಳನ ಕಾಲಕ್ಕೆ ಸೇರಿದ್ದು. ಆವನಿ ಗ್ರಾಮದಲೂ, ಬೆಟ್ಟದ ಮೇಲೂ 9-10ನೆಯ ಶತಮಾನದಿಂದ ಹಿಡಿದು ಇತ್ತೀಚಿನವರೆಗಿನ ಗಂಗ, ನೊಳಂಬ, ಚೋಳ, ಹೊಯ್ಸಳ, ತಮಿಳುಗಂಗ, ವಿಜಯನಗರ ಮತ್ತು ಪಾಳೆಯಗಾರರ ಆಳ್ವಿಕೆಗಳಿಗೆ ಸಂಬಂಧಿಸಿದ ಐವತ್ತಕ್ಕೂ ಹೆಚ್ಚು ಶಾಸನಗಳು ಬೆಳಕಿಗೆ ಬಂದಿವೆ.

ಆವನಿಯಲ್ಲಿ ಪ್ರತಿ ವರ್ಷ ಶಿವರಾತ್ರಿ ಸಂದರ್ಭದಲ್ಲಿ ರಥೋತ್ಸವ ನಡೆಯುತ್ತದೆ.. ಸಾವಿರಾರು ಭಕ್ತರು ಆಗಮಿಸಿ ಇತಿಹಾಸ ಪ್ರಸಿದ್ಧ ರಾಮೇಶ್ವರ ಲಿಂಗ ಸೇರಿದಂತೆ ಇತರ ದೇವಾಲಯಗಳಲ್ಲಿ ಪೂಜಿಸುತ್ತಾರೆ... ಪ್ರತಿ ವರ್ಷ ಇಲ್ಲಿ ನಡೆಯುವ ಜಾನುವಾರಗಳ ಜಾತ್ರೆ ಸಹ ಬಹಳ ಪ್ರಸಿದ್ಧ .

https://youtu.be/wikW13grdYI

ನಿಮಗೆ ಈ ಮಾಹಿತಿ ಇಷ್ಟ ಆಗಿದ್ದರೆ ಲೈಕ್ ಮಾಡಿ.. ಶೇರ್ ಮಾಡಿ.. ನಿಮ್ಮ ಅನಿಸಿಕೆಗಳನ್ನು ಕಮೆಂಟ್ ಮೂಲಕ ತಿಳಿಸಿ..

ಇನ್ನಷ್ಟು ಮಾಹಿತಿಗಾಗಿ ಈ ಕೆಳಗಿನ ಲಿಂಕ್ ಕ್ಲಿಕ್ ಮಾಡಿ.. ನಮ್ಮನ್ನ ಫಾಲೋ ಮಾಡಿ..

► Subscribe to Planet Tv Kannada: https://www.youtube.com/Planet Tv Kannada

► Follow us on Facebook: https://www.facebook.com/Planettvkannada

► Follow us on Twitter:- https://twitter.com/Planettvkannada

► Follow us on Instagram:- https://www.instagram.com/planettvkannada

► Follow us on Pinterest: https://www.pinterest.com/Planettvkannada

► Follow us on Koo app:- https://www.kooapp.com/planettvkannada

​► Follow us on share chat:- https://sharechat.com/planettvkannada

► Join us on Telegram:- https://t.me/planettvkannada

► Follow us on Tumblr:- https://www.tumblr.com/planet-tv-kannada

► Follow us on Reddit https://www.reddit.com/Planet-tv-kannada

Enjoyed this article? Stay informed by joining our newsletter!

Comments

You must be logged in to post a comment.

About Author