ಬಜೆಟ್ - ಅಂಕಿ ಅಂಶಗಳ ಸರ್ಕಸ್...

ಬಜೆಟ್..............

 

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಕಾರ್ಯನಿರ್ವಾಹಕ ಸಂಸ್ಥೆ., .......

 

ಆದರೆ.......................

 

ಪ್ರಾಕೃತಿಕ ಸಂಪನ್ಮೂಲಗಳು ಮತ್ತು ಮಾನವ ಸಂಪನ್ಮೂಲಗಳ ನಡುವಿನ ಹೊಂದಾಣಿಕೆಯ ಜವಾಬ್ದಾರಿಯನ್ನು ನಿರ್ವಹಿಸುವ ಒಂದು ಪ್ರಜಾಪ್ರತಿನಿಧಿ ಸಂಸ್ಥೆ. ಅದನ್ನೇ ಭಾರತದಲ್ಲಿ ಸಂಸದೀಯ ಪ್ರಜಾಪ್ರಭುತ್ವ ಎನ್ನಲಾಗುತ್ತದೆ. ಅದನ್ನು ನಿರ್ವಹಿಸಲು ಚುನಾವಣೆ ಎಂಬ ಮಾರ್ಗದ ಮೂಲಕ ಪ್ರತಿನಿಧಿಗಳನ್ನು ಆಯ್ಕೆ ಮಾಡಲಾಗುತ್ತದೆ. ಸದ್ಯ ಸಂವಿಧಾನವೆಂಬ ಕಾನೂನಿನ ಮೂಲಕ ಶಾಸಕಾಂಗ ಕಾರ್ಯಾಂಗ ಮತ್ತು ನ್ಯಾಯಾಂಗ ಇದನ್ನು ನಿರ್ವಹಿಸುತ್ತಿದೆ.............

 

ಇದರ ಬಹುಮುಖ್ಯ  ಭಾಗ ಆಯುವ್ಯವದ ಲೆಕ್ಕ ಅಥವಾ ಬಜೆಟ್. ಇಡೀ ವ್ಯವಸ್ಥೆ ಬಹುತೇಕ ಮುನ್ನಡೆಯುವುದು ಅಧಿಕೃತವಾಗಿ ಇದರ ಆಧಾರದಲ್ಲಿಯೇ.....

 

ಹೆಚ್ಚು ಕಡಿಮೆ ಮನುಷ್ಯನಿಗೆ ಆಹಾರ ಎಷ್ಟು ಮುಖ್ಯವೋ, ವಾಹನಗಳಿಗೆ ಇಂಧನ ಎಷ್ಟು ಮುಖ್ಯವೋ ಅಷ್ಟೇ ಮುಖ್ಯ ಸರ್ಕಾರ ನಡೆಸಲು ಈ ಬಜೆಟ್. ಒಂದು ಬೃಹತ್ ಸಾರ್ವಜನಿಕ ಸಂಸ್ಥೆ ಕ್ರಮಬದ್ಧವಾಗಿ ನಡೆಯಬೇಕಾದರೆ ಬಜೆಟ್ ಇಲ್ಲದಿದ್ದರೆ ಅದು ಅನಾಗರಿಕ ವ್ಯವಸ್ಥೆಯಾಗುತ್ತದೆ......

 

ಇಷ್ಟೊಂದು ಮುಖ್ಯವಾದ ಬಜೆಟ್ ವಾಸ್ತವದಲ್ಲಿ ಹಾಗಿದೆಯೇ ?  ........

 

ಖಂಡಿತ ಇಲ್ಲ. ಅದು ಕೇವಲ ಅಂಕಿ ಸಂಖ್ಯೆಗಳ ಒಂದು ಕಸರತ್ತು ಮಾತ್ರವಾಗಿದೆ. ಒಂದು ವೇಳೆ ಬಜೆಟ್ ನಿಜವಾಗಲೂ ಅಷ್ಟೊಂದು ಮುಖ್ಯವಾಗಿದ್ದಿದ್ದರೆ ನಮ್ಮ ವ್ಯವಸ್ಥೆ ಇಷ್ಟೊಂದು ಕೆಟ್ಟದಾಗಿ ಮತ್ತು ಹಾಸ್ಯಾಸ್ಪದವಾಗಿ ಇರುತ್ತಿರಲಿಲ್ಲ.......

 

ಒಮ್ಮೆ ಗಮನಿಸಿ ನೋಡಿ...........

 

ಬಜೆಟ್ ನಲ್ಲಿ ದೊಡ್ಡ ದೊಡ್ಡ ಯೋಜನೆಗಳನ್ನು ಘೋಷಿಸಲಾಗುತ್ತದೆ. ಕೇಳಲು ತುಂಬಾ ಆಕರ್ಷಕವಾಗಿರುತ್ತದೆ. ಆ ಯೋಜನೆಗಳು ಜಾರಿಯಾದದ್ದೇ ಆದರೆ ಇಷ್ಟೊತ್ತಿಗಾಗಲೇ ಭಾರತ ವಿಶ್ವದ ಪ್ರಬಲ ರಾಷ್ಟ್ರವಾಗಬೇಕಿತ್ತು. ಸಾಮಾನ್ಯ ಜನರ ಜೀವನಮಟ್ಟ ಉತ್ತಮ ಸ್ಥಿತಿಯಲ್ಲಿರಬೇಕಿತ್ತು. 

 

ಆದರೆ ಹಾಗಾಗುತ್ತಿಲ್ಲ. ಕಾರಣ ಅದನ್ನು  ಅನುಷ್ಠಾನ ( implement ) ಮಾಡಬೇಕಾದ ಕಾರ್ಯಾಂಗ ಮತ್ತು ಶಾಸಕಾಂಗ ಕೇವಲ ಭ್ರಷ್ಟಾಚಾರ ಮಾತ್ರವಲ್ಲ ತನ್ನ ‌ಆಲೋಚನಾ ಸೂಕ್ಷ್ಮತೆಯನ್ನೇ ಕಳೆದುಕೊಂಡಿದೆ. 

 

ನಿರ್ಧಿಷ್ಟ ಮತ್ತು ಖಚಿತ ಅಧಿಕಾರ, ಸಂಬಳ ಮತ್ತು ಭದ್ರತೆ ಅವರನ್ನು ನಿಷ್ಕ್ರಿಯಗೊಳಿಸಿದೆ. ಆದರೂ ಭಾರತೀಯ ಸಂಸ್ಕೃತಿ ಮತ್ತು ಪರಂಪರೆ ಹಾಗು ಇಲ್ಲಿನ ತಳಮಟ್ಟದ ಜನಸಮುದಾಯದ ಒಂದಷ್ಟು ಮಾನವೀಯ ಸಂಬಂಧಗಳು ಹೇಗೋ ವ್ಯವಸ್ಥೆಯನ್ನು ಮುಂದಕ್ಕೆ ಸಾಗಿಸುತ್ತಿದೆ.

 

ಆದರೆ ಜಾಗತೀಕರಣದ ಈ ಆಧುನಿಕ ಕಾಲದಲ್ಲಿ ಅದು ಮತ್ತಷ್ಟು ಶಿಥಿಲವಾಗುತ್ತಿದೆ. ಅದು ಗರೀಭ್ ಹಠಾವೋ ಇರಬಹುದು, ಅನ್ನ ಭಾಗ್ಯ ಇರಬಹುದು, ಮುದ್ರಾ ಯೋಜನೆ ಇರಬಹುದು, ಸ್ಟಾರ್ಟ್ ಅಪ್ ಇರಬಹುದು, ಯಾವುದೇ ಆಗಲಿ ಯಾರೇ ವ್ಯಕ್ತಿ ಅಧಿಕಾರದಲ್ಲಿ ಇರಲಿ ಅಧಿಕಾರಿಗಳ ಸಲಹೆ ಪಡೆದು ಯೋಜನೆ ರೂಪಿಸುತ್ತಾರೆ. ಸಾಲವೋ ತೆರಿಗೆಯೋ ಒಟ್ಟಿನಲ್ಲಿ ಹಣವನ್ನೂ ಒದಗಿಸುತ್ತಾರೆ. ಆದರೆ ಅದನ್ನು ಸಂಪೂರ್ಣ ಜಾರಿಗೊಳಿಸುವಲ್ಲಿ ಬಹುತೇಕ ವಿಫಲರಾಗುತ್ತಾರೆ. ಶೇಕಡಾ 100% ಹಣ ಖರ್ಚು ಮಾಡುತ್ತಾರೆ. ಅದರ ನಿಜವಾದ ಅನುಷ್ಠಾನ ಶೇಕಡಾ 30/40% ಆದರೆ ಅದೇ ಹೆಚ್ಚು. ಉಳಿದದ್ದು ವ್ಯರ್ಥ ಅಥವಾ ಕಾಗದದ ಮೇಲೆ ಮಾತ್ರ ಇರುತ್ತದೆ.

 

ಸರ್ಕಾರದ ಮಧ್ಯವರ್ತಿ ಕೆಲಸ ಅನುಷ್ಠಾನದಲ್ಲಿ ಇರದೆ ಅದಕ್ಕೆ ವಿರುದ್ಧವಾದ ಹಣಗಳಿಸುವುದು, ಮತಗಳಿಸುವುದು, ಅಧಿಕಾರ ಹಿಡಿಯುವುದು ಮತ್ತು ಜನರನ್ನು ಮರುಳು ಮಾಡುವುದೇ ಆಗಿರುತ್ತದೆ. 

ವ್ಯವಸ್ಥೆ ಸಂಪೂರ್ಣ ಬದಲಾಗಿ ಹೆಚ್ಚು ಜವಾಬ್ದಾರಿಯುತವಾಗಿ ತನ್ನ ಕರ್ತವ್ಯ ನಿರ್ವಹಿಸಿದರೆ ಮಾತ್ರ ಬಜೆಟ್ ಗೆ ಬೆಲೆ.

 

ಆದ್ದರಿಂದ ಈ ವ್ಯವಸ್ಥೆಯಲ್ಲಿ ಬಜೆಟ್ ಗಳ ಬಗ್ಗೆ ಗಂಭೀರವಾಗಿ ಪ್ರತಿಕ್ರಿಯಿಸುವ ಅವಶ್ಯಕತೆ ಇಲ್ಲ. ಅದೊಂದು ಅನಿವಾರ್ಯದ ಕಣ್ಣೊರೆಸುವ ಬಹಿರಂಗ ನಾಟಕ. ಪ್ರೇಕ್ಷಕರನ್ನು ಮರುಳು ಮಾಡುವ ಭಾವನಾತ್ಮಕ ಸರ್ಕಸ್ ಅಷ್ಟೆ. 

 

ವಾಸ್ತವದಲ್ಲಿ ಬಜೆಟ್ ನ ಪ್ರಾಯೋಗಿಕತೆ ನಂಬಲನರ್ಹ. ಕೇವಲ ಸರ್ಕಾರಿ ಅಧಿಕಾರಿಗಳ‌ ಸಂಬಳ, ಅಧಿಕಾರಸ್ಥ ರಾಜಕಾರಣಿಗಳ ಹಗಲು ದರೋಡೆ, ಕಂಟ್ರಾಕ್ಟರ್ ಗಳು ಮತ್ತು ದಲ್ಲಾಳಿಗಳ ಅಕ್ಷಯ ಪಾತ್ರೆಯಂತೆ ಮಾತ್ರ ಅದು ಕಾರ್ಯ ನಿರ್ವಹಿಸುತ್ತದೆ.

 

ಆ ರೀತಿಯ ಜನಗಳಿಗೆ ಮಾತ್ರ ಬಜೆಟ್ ಶೇಕಡಾ 100% ಉಪಯೋಗವಾಗುತ್ತದೆ. ನಮಗೆ ನಿಮಗೆ ಕೇವಲ ಅಧಿಕ ತೆರಿಗೆಯ ಹೊರೆ ಮತ್ತು ಎಂದಿನಂತೆ ಭರವಸೆಯೊಂದಿಗೆ ಹೇಗೋ ದಿನನಿತ್ಯದ ಜೀವನ ‌ಸಾಗಿಸಲು ಮಾತ್ರ ಇದು ಒಂದು ನೆಪವಾಗುತ್ತದೆ.......

 

ಬಜೆಟ್ ಗಳು ಮತ್ತು ದೇಶದ ಅಭಿವೃದ್ಧಿ.....

 

ಬಜೆಟ್ - ಅಂಕಿ ಅಂಶಗಳ ಸರ್ಕಸ್........

 

ಭಾರತದ ಎಲ್ಲಾ ರಾಜ್ಯಗಳು ಮತ್ತು ಕೇಂದ್ರ ಸರ್ಕಾರಗಳು  ಸ್ವಾತಂತ್ರ್ಯ ನಂತರ ಇಲ್ಲಿಯವರೆಗೂ ಸುಮಾರು 74 ಕ್ಕಿಂತ ಹೆಚ್ಚು ವಾರ್ಷಿಕ ಬಜೆಟ್ ಗಳನ್ನು ಮಂಡಿಸಿವೆ. ಪಂಚವಾರ್ಷಿಕ ಯೋಜನೆಗಳು ಮತ್ತು ಅದನ್ನು ಮೇಲ್ವಿಚಾರಣೆ ಮಾಡುವ ನೀತಿ ಆಯೋಗ ಸಹ ಇದೆ. ಅಪಾರ ಪ್ರಮಾಣದ ಎಲ್ಲಾ ದರ್ಜೆಯ ಆಡಳಿತ ಯಂತ್ರ ಸಹ ಕೆಲಸ ಮಾಡುತ್ತಲೇ ಇದೆ.............

 

ಯಾವ ಸರ್ಕಾರಗಳು ಸಹ ಸಾಮಾನ್ಯವಾಗಿ ಜನರಿಗೆ ತೊಂದರೆ ಕೊಡುವ ಅಥವಾ ಜನರನ್ನು ನಾಶ ಮಾಡುವ ಯೋಜನೆಗಳನ್ನು ರೂಪಿಸುವುದಿಲ್ಲ. ಬಹಳ ಜನರಿಗೆ ಒಳ್ಳೆಯದಾಗಲಿ ಎಂಬ ಆಶಯವನ್ನೇ ಹೊಂದಿರುತ್ತವೆ. 

 

1950  ಮತ್ತು 2021 ನಡುವೆ ಭಾರತದ ಅಭಿವೃದ್ಧಿ ಸುಮಾರಾಗಿ ಆಗಿದೆ. ವಿಶ್ವ ಸಮುದಾಯ ಕೂಡಾ ತಂತ್ರಜ್ಞಾನದ ಸಹಾಯದಿಂದ ಪ್ರಗತಿಯ ಪಥದಲ್ಲಿದೆ.

 

ಭಾರತದ ಮಟ್ಟಿಗೆ‌ ಅಭಿವೃದ್ಧಿ  ಸಮಾನಾಂತರವಾಗಿಲ್ಲ ಮತ್ತು ಸಮಾಧಾನಕರವಾಗಿಲ್ಲ. ದೇಶದ ಶೇಕಡಾ 50% ಗೂ ಹೆಚ್ಚು ಜನ ತಾವು ಇಷ್ಟಪಟ್ಟ ದೈನಂದಿನ ಊಟ ಬಟ್ಟೆ ವಾಸ ಮಕ್ಕಳ ಯೋಗಕ್ಷೇಮ ಮತ್ತು ಸಾಧಾರಣ ಶಿಕ್ಷಣ ಆರೋಗ್ಯ ವ್ಯವಸ್ಥೆ ಮಾಡಿಕೊಳ್ಳಲು ಇನ್ನೂ ಸಾಧ್ಯವಾಗಿಲ್ಲ.

 

ಇದನ್ನು ನಾವು ಪಕ್ಷಾತೀತವಾಗಿ ಮತ್ತು ನಿಷ್ಪಕ್ಷಪಾತವಾಗಿ ಭಾರತದ ನಿಜವಾದ ಹಿತಾಸಕ್ತಿಯಿಂದ ನೋಡಬೇಕು. ಯಾವುದೋ ಪಕ್ಷದ ವಕ್ತಾರರಂತೆ ಒಬ್ಬರಿಗೊಬ್ಬರು ಆಪಾದನೆ ಮಾಡುತ್ತಾ ಕೆಸರೆರಚಾಟ ಮಾಡಿದರೆ ಸತ್ಯ ಮತ್ತು ವಾಸ್ತವ ಮರೆಯಾಗಿ ಕೇವಲ ಒಣ ಚರ್ಚೆ ಮತ್ತು ಅಂಕಿಅಂಶಗಳು ಮಹತ್ವ ಪಡೆಯುತ್ತವೆ.

 

ಸರ್ಕಾರ ಘೋಷಿಸುವ ಯಾವುದೇ ಯೋಜನೆಗಳು ಜಾರಿಯಾಗುವುದು ನಮ್ಮ ಸರ್ಕಾರಿ ಆಡಳಿತ ಯಂತ್ರದ ಮುಖಾಂತರ. ಅದು ಈಗಾಗಲೇ ಕಿಲುಬು ಹಿಡಿದಿದೆ. ಅದನ್ನು ಸರಿ ಮಾಡದೆ ಯಾವ ಯೋಜನೆ ಘೋಷಿಸಿದರು ಸಂಪೂರ್ಣ ಉಪಯೋಗ ಆಗುವುದಿಲ್ಲ. ಅದನ್ನು ಸರಿ ದಾರಿಗೆ ತರಲು ರಾಜಕಾರಣಿಗಳು ಹೆಚ್ಚಿನ ಮಹತ್ವ ನೀಡುತ್ತಿಲ್ಲ.

 

ಇಲ್ಲಿ ಇನ್ನೊಂದು ಆಶ್ಚರ್ಯಕರ ವಿಷಯವಿದೆ. ಆದಾಯ ತೆರಿಗೆ ವಿನಾಯಿತಿ, ವಸ್ತು ಮತ್ತು ಸೇವೆಗಳ ತೆರಿಗೆ ಹೆಚ್ಚಳ, ಸರ್ಕಾರಿ ನೌಕರರ ಸಂಬಳ ಹೆಚ್ಚಳ ಇನ್ನೂ ಮುಂತಾದ ಯೋಜನೆಗಳು ಚಾಚೂ ತಪ್ಪದೆ ಅಥವಾ ಅದಕ್ಕಿಂತ ಹೆಚ್ಚಾಗಿಯೇ ಸಂಪೂರ್ಣ ಜಾರಿಯಾಗುತ್ತದೆ. ಕಾರಣ ಈ ಯೋಜನೆಗಳು ಈಗಾಗಲೇ ವಿದ್ಯಾವಂತರಾಗಿರುವ ಮತ್ತು ವ್ಯವಸ್ಥೆಯ ಮೇಲೆ ನಿಯಂತ್ರಣ ಹೊಂದಿರುವ ಜನಗಳು ಇವುಗಳನ್ನು ಸ್ವತಃ ಅಥವಾ ಮಧ್ಯವರ್ತಿಗಳ ಮುಖಾಂತರ ಜಾರಿಯಾದ ಮಧ್ಯರಾತ್ರಿಯಿಂದಲೇ ಲಾಭ ಪಡೆದುಕೊಳ್ಳುತ್ತಾರೆ.

 

ಆದರೆ, ಇನ್ನೂ ಕೆಲವು ‌ಯೋಜನೆಗಳು ಇವೆ‌. ಉದಾಹರಣೆಗೆ ಗರೀಬ್ ಹಠವೋ, ನರೇಗಾ, ಆಹಾರ ಭದ್ರತೆ, ಬೇಟಿ ಬಚಾವೋ ಬೇಟಿ ಪಡಾವೋ , ಸ್ವಚ್ಛ ಭಾರತ್, ಆಯುಷ್ಮಾನ್ ಮುಂತಾದ ಯೋಜನೆಗಳು ಅದರ ನಿಜ ರೂಪದಲ್ಲಿ ಜನರಿಗೆ ತಲುಪುವುದು ತುಂಬಾ ಕಷ್ಟವಿದೆ.

 

ಜನರಲ್ಲಿ ಇರುವ ಅಜ್ಞಾನ ಬಡತನ ದಾಖಲೆ ಮತ್ತು ಮಾಹಿತಿಯ ಕೊರತೆ, ಭ್ರಷ್ಟಾಚಾರ ಮತ್ತು ಸ್ವಜನ ಪಕ್ಷಪಾತ, ರಾಜಕಾರಣಿಗಳು ಮತ್ತು ಅಧಿಕಾರಿಗಳ ನಿರ್ಲಕ್ಷತನ ಮತ್ತು ಸೋಮಾರಿತನ, ಅಸೂಯೆ ಮುಂತಾದ ಕಾರಣಗಳು ಇವುಗಳನ್ನು ಜಾರಿಯಾಗಲು ಬಿಡುವುದಿಲ್ಲ. 

 

ಪಾರ್ಲಿಮೆಂಟ್ ಅಥವಾ ವಿಧಾನಸೌದದಲ್ಲಿ ಅಂಕಿಅಂಶಗಳ ಸರ್ಕಸ್ ಮಾಡುತ್ತಾ ಬಜೆಟ್ ಮಂಡಿಸುವುದು ಮತ್ತು ಅದರ ಪರ ವಿರೋಧದ ಚರ್ಚೆಗಳಿಗಿಂತ ಅದರ ಅನುಷ್ಠಾನ ಮತ್ತು ವಾಸ್ತವ ಫಲಿತಾಂಶಗಳ ಬಗ್ಗೆ ಹೆಚ್ಚಿನ ಗಮನ ಹರಿಸಿದರೆ ನಿಜವಾದ  ಮತ್ತು ಸಮಾನವಾದ ಅಭಿವೃದ್ಧಿ ಸಾಧ್ಯ. ಇಲ್ಲದಿದ್ದರೆ ಪ್ರತಿ ಸರ್ಕಾರಗಳ ಪ್ರತಿ ಬಜೆಟ್ ಕೇವಲ ಸಾಂಕೇತಿಕ ಶಾಸ್ತ್ರವಾಗುತ್ತದೆ. ಚುನಾವಣಾ ರಾಜಕೀಯದ ನಾಟಕಗಳಾಗುತ್ತವೆ. 

 

ಇದು ಎಲ್ಲಾ ಪಕ್ಷಗಳ ಎಲ್ಲಾ  ಸರ್ಕಾರಗಳಿಗೂ ಸಮನಾಗಿ ಅನ್ವಯ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068

Enjoyed this article? Stay informed by joining our newsletter!

Comments

You must be logged in to post a comment.

About Author