ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ

ಬುಲ್ಸ್‌ ವಿರುದ್ಧ ವಾರಿಯರ್ಸ್‌ಗೆ ಬೃಹತ್‌ ಅಂತರದ ಜಯ

A huge win for the Warriors against the Bulls

ಬೆಂಗಳೂರು, ಅಕ್ಟೋಬರ್ 12: ತನ್ನ ಸಾಮರ್ಥ್ಯಕ್ಕೆ ತಕ್ಕುದಾದ ಆಟವನ್ನು ಪ್ರದರ್ಶಿಸದ ಬೆಂಗಳೂರು ಬುಲ್ಸ್‌ ಶ್ರೀ ಕಂಠೀರವ ಕ್ರೀಡಾಂಗಣದಲ್ಲಿ ನಡೆದ ವಿವೋ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮೊದಲ ಸೋಲನುಭವಿಸಿದೆ.

ನಾಯಕ ಮಣಿಂದರ್‌ ಸಿಂಗ್‌ (11) ಅವರ ಸೂಪರ್‌ ಟೆನ್‌ ರೈಡಿಂಗ್‌ ಅಂಕಗಳ ನೆರವಿನಿಂದ ಬೆಂಗಳೂರು ಬುಲ್ಸ್‌ ವಿರುದ್ಧ 42-33 ಅಂತರದಲ್ಲಿ ಜಯ ಗಳಿಸಿದ ಬೆಂಗಾಲ್‌ ವಾರಿಯರ್ಸ್‌ ತಂಡ ಪ್ರೋ ಕಬಡ್ಡಿ ಲೀಗ್‌ನಲ್ಲಿ ಮತ್ತೊಂದು ಜಯ ದಾಖಲಿಸಿದೆ. ಇದರೊಂದಿಗೆ ಬೆಂಗಾಲ್‌ ವಾರಿಯರ್ಸ್‌ ಆಡಿದ ಮೂರು ಪಂದ್ಯಗಳಲ್ಲಿ 2 ಜಯ ಹಾಗೂ 1 ಡ್ರಾ ಸಾಧನೆ ಮಾಡಿದೆ.

ಶ್ರೀಕಾಂತ್‌ ಜಾದವ್‌ (6) ಹಾಗೂ ಗಿರೀಶ್‌ ಮಾರುತಿ (5) ಅನುಕ್ರಮವಾಗಿ ರೈಡಿಂಗ್‌ ಮತ್ತು ಟ್ಯಾಕಲ್‌ನಲ್ಲಿ ಉತ್ತಮ ಪ್ರದರ್ಶನ ತೋರಿದರು. ವಾರಿಯರ್ಸ್‌ನ ಅನುಭವಿ ಆಟಗಾರ ದೀಪಕ್‌ ಹೂಡಾ 10 ರೈಡ್‌ಗಳನ್ನು ಮಾಡಿದರೂ ಗಳಿಸಿದ್ದು ಒಂದು ಅಂಕ.  ಬೆಂಗಳೂರು ಮನೆಯಂಗಣದ ಪ್ರೇಕ್ಷಕರ ಪ್ರೋತ್ಸಾಹದ ನಡುವೆಯೂ ತನ್ನ ನೈಜ ಪ್ರದರ್ಶನ ತೋರುವಲ್ಲಿ ವಿಫಲವಾಗಿ ನಿರಾಸೆ ಮೂಡಿಸಿತು. ಭರತ್‌ (8) ಹಾಗೂ ವಿಕಾಶ್ ಕಂಡೋಲ (7) ಉತ್ತಮ ಪ್ರದರ್ಶನ ತೋರಿದರೂ ವಾರಿಯರ್ಸ್‌ ತಂಡವನ್ನು ಸೋಲಿಸಲು ಈ ಅಂಕಗಳು ಸಾಕಾಗಲಿಲ್ಲ. 

A huge win for the Warriors against the Bulls

ಬೆಂಗಾಲ್‌ ವಾರಿಯರ್ಸ್‌ ಮುನ್ನಡೆ: ಪ್ರಥಮಾರ್ಧದಲ್ಲಿ ಬೆಂಗಳೂರು ಬುಲ್ಸ್‌ ವಿರುದ್ಧ ಬೆಂಗಾಲ್‌ ವಾರಿಯರ್ಸ್‌ ತಂಡ 15-14 ಅಂತರದಲ್ಲಿ ಮುನ್ನಡೆ ಕಂಡಿತು. ಆರಂಭದಲ್ಲಿ ಉತ್ತಮ ಪ್ರದರ್ಶನ ತೋರಿದ ಬೆಂಗಳೂರು ಬುಲ್ಸ್‌ ಕೊನೆಯ ಕ್ಷಣದಲ್ಲಿ ವಾರಿಯರ್ಸ್‌ಗೆ ಸುಲಭವಾಗಿ ಅಂಕಗಳನ್ನು ನೀಡಿತು.  ಬೆಂಗಾಲ್‌ ವಾರಿಯರ್ಸ್‌ ಆಲೌಟ್‌ ಆದರೂ ಪಂದ್ಯದ ಮೇಲೆ ಹಿಡಿತ ಸಾಧಿಸಿತು. ವಾರಿಯರ್ಸ್‌ ರೈಡಿಂಗ್‌ನಲ್ಲಿ 10 ಅಂಕಗಳನ್ನು ಗಳಿಸಿದ್ದು ಬುಲ್ಸ್‌ ಹಿನ್ನಡೆಗೆ ಪ್ರಮುಖ ಕಾರಣವಾಯಿತು. ನಾಯಕ ಮಣಿಂದರ್‌ ಸಿಂಗ್‌ 4 ಅಂಕಗಳನ್ನು ಗಳಿಸಿದರೆ, ಮನೋಜ್‌ ಗೌಡ 3 ಅಂಕಗಳನ್ನು ಗಳಿಸಿ ವಾರಿಯರ್ಸ್‌ ಮುನ್ನಡೆಯಲ್ಲಿ ಪ್ರಮುಖ ಪಾತ್ರವಹಿಸಿದರು. ಬೆಂಗಳೂರು ಪರ ಭರತ್‌ 4 ಅಂಕಗಳನ್ನು ಗಳಿಸಿದರು.

ಬುಲ್ಸ್‌ಗೆ ಸ್ಫೂರ್ತಿ ತುಂಬಿದ ಕಿಚ್ಚ ಸುದೀಪ್‌: ಸ್ಯಾಂಡಲ್‌ವುಡ್‌ನ ಸೂಪರ್‌ ಸ್ಟಾರ್‌ ಕಿಚ್ಚ ಸುದೀಪ್‌ ಅವರು ಶ್ರೀ ಕಂಠೀರವ ಕ್ರೀಡಾಂಗಣಕ್ಕೆ ಆಗಮಿಸಿ ಬೆಂಗಳೂರು ಬುಲ್ಸ್‌ ತಂಡಕ್ಕೆ ಶುಭ ಹಾರೈಸಿದರು.  ಇದುವರೆಗೂ ನಡೆದ ಎರಡು ಪಂದ್ಯಗಳಲ್ಲಿ ಜಯ ಗಳಿಸಿರುವ ಬುಲ್ಸ್‌ 9ನೇ ಋತುವಿನಲ್ಲಿ ಉತ್ತಮ ಆರಂಭ ಕಂಡಿದೆ. ತೆಲುಗು ಟೈಟನ್ಸ್‌ ಹಾಗೂ ಪುಣೇರಿ ಪಲ್ಟನ್‌ ವಿರುದ್ಧ ಜಯ ಗಳಿಸಿದ ಮಾಜಿ ಚಾಂಪಿಯನ್‌ ಬುಲ್ಸ್‌ ಈ ಬಾರಿಯ ಪ್ರಶಸ್ತಿ ಗೆಲ್ಲುವ ಫೇವರಿಟ್‌ ತಂಡಗಳಲ್ಲಿ ಒಂದೆನಿಸಿದೆ.

ಕಬಡ್ಡಿಯ ಬಗೆಗಿನ ಪ್ರೀತಿ ಹಾಗೂ ಬೆಂಗಳೂರು ಬುಲ್ಸ್‌ ಬಗ್ಗೆ ಮಾತನಾಡಿದ ಸುದೀಪ್‌, “ನಾವೆಲ್ಲರೂ ಕಬಡ್ಡಿ ಆಡಿದವರೇ, ಕಳೆದ ಋತುವಿನಲ್ಲಿ ಕಬಡ್ಡಿಯೊಂದಿಗಿನ ನನ್ನ ಸಂಬಂಧ ಹಸಿರಾಗಿಯೇ ಉಳಿದಿದೆ. ಶಾಲಾ ದಿನಗಳಲ್ಲಿ ಕಬಡ್ಡಿ ಆಡಿರುವುದು ನನಗೆ ಈಗಲೂ ನೆನಪಿದೆ. ಕ್ರೀಡೆಯಲ್ಲಿರುವ ದೈಹಿಕ ಸಮರವನ್ನು ಎಂದೂ ಮರೆಯಲಾಗದು,” ಎಂದು ಹೇಳಿದರು. 

ಬುಲ್ಸ್‌ ತಂಡದ ಬಗ್ಗೆ ಅಭಿಪ್ರಾಯ ಕೇಳಿದಾಗ, “ಅವರ ಮುಖಗಳನ್ನು ನೋಡುವುದಕ್ಕಿಂತ, ಅವರೆಲ್ಲರೂ ನನ್ನ ಮೇಲೆ ಬಿದ್ದರೆ ಏನಾಗಬಹುದು ಎಂದು ಅವರ ದೇಹವನ್ನು ನೋಡುತ್ತಿದ್ದೇನೆ, ಅವರೆಲ್ಲ ಉತ್ತಮ ಕಸರತ್ತು ನಡೆದ ಉತ್ತಮ ದೈಹಿಕ ಕ್ಷಮತೆಯನ್ನು ಹೊಂದಿದ್ದಾರೆ. ಇದಕ್ಕೆಲ್ಲ ಯಾವ ರೀತಿಯ ತರಬೇತಿ ಬೇಕಾಗಬಹುದು ಎಂದು ನಾನು ಅಚ್ಚರಿಯಿಂದ ಯೋಚಿಸುತ್ತಿದ್ದೇನೆ. ಕೌಶಲ್ಯದ ಜೊತೆಯಲ್ಲಿ ದೈಹಿಕ ಸಾಮರ್ಥ್ಯ ಬೇಕಾಗುವ ಅತ್ಯಂತ ಅಪರೂಪದ ಕ್ರೀಡೆ ಕಬಡ್ಡಿ,” ಎಂದು ಸುದೀಪ್‌ ಹೇಳಿದರು.

Enjoyed this article? Stay informed by joining our newsletter!

Comments

You must be logged in to post a comment.

About Author