ಹತ್ತನೆಯ ತರಗತಿಗೆ ಒಂದು ಪಾಠ...

A lesson for tenth class students

Featured Image Source : Mangalorean.com

ಕರ್ನಾಟಕದ ಹತ್ತನೇ ತರಗತಿಯ ಮಕ್ಕಳಿಗೆ ಒಂದು ಪಾಠ....( ಪಠ್ಯ ಪುಸ್ತಕದಲ್ಲಿ ......)

**"***********************

 

2022 ಮೇ 25......

 

ಭಾರತ ದೇಶ ಸಂಸದೀಯ ಪ್ರಜಾಪ್ರಭುತ್ವದ ಗಣರಾಜ್ಯಗಳ ಒಕ್ಕೂಟ. 

 

ಭಾಷಾವಾರು ಪ್ರಾಂತ್ಯಗಳ ಆಧಾರದಲ್ಲಿ ರಚನೆಯಾದ ಇದು ಕರ್ನಾಟಕ ರಾಜ್ಯ

 

191791 ಸ್ಕ್ವೇರ್ ಕಿಲೋಮೀಟರ್ ಭೂಪ್ರದೇಶದ  ವಿಸ್ತಾರ ಹೊಂದಿದೆ. ಸುಮಾರು ‌7 ಕೋಟಿ ಜನಸಂಖ್ಯೆ ಇದೆ. ಕನ್ನಡ ಇಲ್ಲಿನ ತಾಯಿ ಭಾಷೆ.

 

ಇತಿಹಾಸದಲ್ಲಿ ಬಹುತೇಕ ವಿವಿಧ ರಾಜಪ್ರಭುತ್ವದ ಆಡಳಿತ ವ್ಯವಸ್ಥೆಯೇ ಇದ್ದಿತು. ಅನಂತರ ಅನೇಕ ವಿದೇಶಿ ದಾಳಿಕೋರರು, ಕೆಲವು ‌ಸ್ಥಳೀಯ ರಾಜಮನೆತನಗಳು ಈ ಭೂಪ್ರದೇಶವನ್ನು ಆಕ್ರಮಿಸಿಕೊಂಡರು. ಜೊತೆಗೆ ಇಲ್ಲಿಯೂ ಕೂಡ ಅನೇಕ ರಾಜಮನೆತನಗಳು ಆಡಳಿತ ನಡೆಸಿವೆ. ಒಟ್ಟಿನಲ್ಲಿ ಇಡೀ ಭಾರತದ ಇತಿಹಾಸವೇ ರಾಜ ಸಂಘರ್ಷಗಳ ಹೋರಾಟ. ಅದಕ್ಕೆ ಕರ್ನಾಟಕವು ಹೊರತಲ್ಲ. ಒಬ್ಬರಿಗೊಬ್ಬರು ಸಾಮ್ರಾಜ್ಯ ವಿಸ್ತಾರಣೆಗಾಗಿ ಕೊಲ್ಲುವ ಆಟದಲ್ಲಿ ನಿರತರಾಗಿದ್ದರು.

 

ಇಂದಿನ ವ್ಯವಸ್ಥೆಗೆ ಹೋಲಿಸಿದಾಗ, ವ್ಯಕ್ತಿ ಸ್ವಾತಂತ್ರ್ಯ, ಅಭಿವ್ಯಕ್ತಿ ಸ್ವಾತಂತ್ರ್ಯ, ಜನರ ಜೀವನಮಟ್ಟ, ಬದುಕಿನ ಸುಖ‌ ಸಂತೋಷಗಳು, ರಕ್ಷಣೆ ಮುಂತಾದ ವಿಷಯದಲ್ಲಿ ಯಾವುದೇ ಖಚಿತತೆ ಇರುತ್ತಿರಲಿಲ್ಲ. ಬಹುತೇಕ ಅದೃಷ್ಟದ ಬೆಂಬಲದ ಮೇಲೇಯೇ ಜೀವನ. ಶಿಕ್ಷಣ ಆರೋಗ್ಯ ಎಲ್ಲವೂ ಅತ್ಯಂತ ಸೀಮಿತ. ಅಜ್ಞಾನ, ಬಡತನ, ಮೂಢನಂಬಿಕೆ, ದೌರ್ಜನ್ಯ, ಶೋಷಣೆ, ಜಾತಿ ಪದ್ದತಿ ಇವುಗಳ ನಡುವೆ ಒಂದು ಜೀವನ. ಯುದ್ದಗಳ ನಡುವೆ, ಪ್ರಾಕೃತಿಕ ವಿಕೋಪಗಳ ನಡುವೆ ಬದುಕು.

 

ಆದರೆ 1947 ರ ನಂತರ ಜನಜೀವನ ಸಾಕಷ್ಟು ಬದಲಾಯಿತು. ಶಿಕ್ಷಣ, ಆರೋಗ್ಯ, ರಕ್ಷಣೆ, ಪ್ರಯಾಣ, ಆಹಾರ, ಉದ್ಯೋಗ ಮುಂತಾದ ವಿಷಯಗಳಲ್ಲಿ ನಿಧಾನವಾಗಿ ಸ್ವಲ್ಪ ಸ್ವಲ್ಪವೇ ಪ್ರಗತಿ ಕಂಡುಬಂದಿತು.

ಮೂಲಭೂತ ಹಕ್ಕು ಮತ್ತು ಕರ್ತವ್ಯಗಳು ಹಾಗು ಸೇವೆಗಳು ‌ದೊರೆತವು. ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ ಬಲಿದಾನಗಳಿಂದ ಇದು ಸಾಧ್ಯವಾಯಿತು.

 

1995 ರ ನಂತರ ಜಾಗತೀಕರಣದ ಪ್ರಭಾವದಿಂದ ಆರ್ಥಿಕವಾಗಿ ಮತ್ತು ತಾಂತ್ರಿಕವಾಗಿ ಸಾಕಷ್ಟು ಅಭಿವೃದ್ಧಿ ಸಾಧಿಸಲಾಯಿತು. ಜನರ ಒಟ್ಟಾರೆ ಜೀವನಮಟ್ಟ ಸುಧಾರಿಸಿತು. ವ್ಯಕ್ತಿಯ ಬದುಕಿಗೆ ಒಂದು ಅರ್ಥ ಮತ್ತು ಗೌರವ ದೊರೆಯಿತು.

 

ಸಾಮಾನ್ಯ ಜನರು ಕೂಡ ಉನ್ನತ ಶಿಕ್ಷಣ ಪಡೆಯಲು ಸಾಧ್ಯವಾಯಿತು. ಸ್ವಂತ ಮನೆ ಹೊಂದಲು ಅವಕಾಶ ಸಿಕ್ಕಿತು. ಸ್ವಂತ ವಾಹನಗಳು ಎಲ್ಲೆಲ್ಲೂ ಕಾಣಬರುವ ಪರಿಸ್ಥಿತಿ ನಿರ್ಮಾಣವಾಯಿತು. ವಿದೇಶ ಯಾತ್ರೆಗಳು ಸಹ ಸಹಜವಾಯಿತು. ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದಾಗಿ ಪ್ರತಿಯೊಬ್ಬರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಲು‌ ವೇದಿಕೆ ದೊರೆಯಿತು. ‌ಜಮೀನ್ದಾರರು, ಬಂಡವಾಳಶಾಹಿಗಳು, ರಾಜಕಾರಣಿಗಳು, ಪೋಲೀಸರನ್ನು ಸಹ ಸಾಮಾನ್ಯ ಜನ ಪ್ರಶ್ನಿಸುವ ಹಂತಕ್ಕೆ ತಲುಪಿತು. ಮನೆಯೊಳಗೆ ಕುಳಿತು ಇಷ್ಟಪಟ್ಟ ಆಹಾರ ಸೇವಿಸುತ್ತಾ ಪ್ರೀತಿ ಪಾತ್ರರೊಂದಿಗೆ ಸೋಫಾ ಮೇಲೆ ಕುಳಿತು ಟಿವಿ ನೋಡಲು ಸಾಮಾನ್ಯ ವರ್ಗಕ್ಕೆ ಸಾಧ್ಯವಾಯಿತು. ಮದುವೆ, ನಾಮಕರಣ, ಗೃಹ ಪ್ರವೇಶ, ಹಬ್ಬ ಹರಿದಿನಗಳು, ಪಾರ್ಟಿಗಳು ಜೋರಾಗಿ ನಡೆಯತೊಡಗಿತು.....

 

ಆದರೆ ಈ ಸುಖದ ಭರದಲ್ಲಿ ನಿಧಾನವಾಗಿ ಮನುಷ್ಯನಿಗೆ ಕೊಬ್ಬು ಅಹಂಕಾರ ಹಣ ಅಧಿಕಾರದ ಮದ ಜಾಸ್ತಿಯಾಯಿತು. ಹಣಕ್ಕಾಗಿ ಏನು ಬೇಕಾದರೂ ಮಾಡಲು ಬಹುತೇಕ ಜನ ಸಿದ್ದರಾದರು. 

 

ಗಾಳಿ ನೀರು ಆಹಾರ ಕಲ್ಮಶವಾಯಿತು. ಅದರ ಪರಿಣಾಮ ದೇಹ ಮನಸ್ಸುಗಳು ಮಲಿನಗೊಂಡವು. ಮನುಷ್ಯ ಸಂಬಂಧಗಳು ಕುಸಿದವು. ಪವಿತ್ರ ವೃತ್ತಿಗಳಾದ ಆರೋಗ್ಯ ಶಿಕ್ಷಣ ಧಾರ್ಮಿಕ ಸಂಸ್ಥೆಗಳು ವ್ಯಾಪಾರೀಕರಣಗೊಂಡವು. ನೀರು ಗಾಳಿ ಸಹ ವ್ಯಾಪಾರದ ವಸ್ತುವಾಯಿತು. ಮಾದಕ ವಸ್ತುಗಳು ಯುವಕರನ್ನು ಆಕ್ರಮಿಸಿದವು. ರೋಗ ರುಜಿನಗಳು, ಕೊಲೆ ಅತ್ಯಾಚಾರಗಳು, ಅಪಘಾತಗಳು, ಆತ್ಮಹತ್ಯೆಗಳು ಸಹಜವಾದವು. ನೆಮ್ಮದಿಯ ಮಟ್ಟ ಕುಸಿಯಿತು.

 

ಇದರ ನಡುವೆ ಭ್ರಷ್ಟಾಚಾರ, ಕೋಮು ದ್ವೇಷ, ಅಸೂಯೆ ಹೆಚ್ಚಾಗಿ, ದುರಹಂಕಾರ ಮನದೊಳಗೆ ಮೂಡಿ ಈಗ ನಮ್ಮದೇ ಜನ ಒಬ್ಬರಿಗೊಬ್ಬರು ಹೊಡೆದಾಡಿ ಬಡಿದಾಡಿ ಇರುವ ಸುಖವನ್ನು ಕಳೆದುಕೊಳ್ಳುತ್ತಿದ್ದಾರೆ.

 

ನ್ಯಾಯವಾಗಿ ಒಂದು ಪರೀಕ್ಷೆ ನಡೆಸಿ ಪ್ರತಿಭಾವಂತರಿಗೆ ಉದ್ಯೋಗ ಕೊಡುವ ಯೋಗ್ಯತೆ ಇಲ್ಲ. ಮಕ್ಕಳಿಗೆ ಒಳ್ಳೆಯ ಶಿಕ್ಷಣ ಕೊಡುವ ಪಠ್ಯ ಪುಸ್ತಕಗಳ ಆಯ್ಕೆಯಲ್ಲಿ ಸಹ ಹೊಂದಾಣಿಕೆ ಇಲ್ಲದೇ ಕಚ್ಚಾಡುತ್ತಿದ್ದಾರೆ.

 

ಒಟ್ಟಾರೆಯಾಗಿ ಮಾನವ ಸಮಾಜ ವಿನಾಶದ ಅಂಚಿನಲ್ಲಿದೆ ಎಂದು ಹೇಳಬಹುದು....

 

ಸಾರಾಂಶ ;-:  ಮಕ್ಕಳೇ ಅನಾಗರಿಕತೆಯಿಂದ ಮಾನವ ನಾಗರಿಕ ವ್ಯವಸ್ಥೆಗೆ ಬಂದು ಅದೃಷ್ಟವಶಾತ್ ಈ ಕ್ಷಣದಲ್ಲಿ ಹೇಗೋ ಸ್ವಲ್ಪ ಸುಖವಾಗಿ ಬದುಕುತ್ತಿದ್ದಾನೆ. ಈಗ ಇದನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಮ್ಮ ಮೇಲಿದೆ. ಅದು ಸಾಧ್ಯವಾಗಬೇಕಾದರೆ ನಮ್ಮ ಸಮಾಜದಲ್ಲಿ ಮತ್ತೆ ಮಾನವೀಯ ಮೌಲ್ಯಗಳ ಪುನರುತ್ಥಾನ ಆಗಬೇಕಾಗಿದೆ. ಪ್ರೀತಿ ಪ್ರೇಮ ಸಹಕಾರ ಸಮನ್ವಯ ಸಭ್ಯತೆ ಕರುಣೆ ಕ್ಷಮಾಗುಣ ಮುಂತಾದ ಭಾವಗಳು ಹಣವನ್ನು ಮೀರಿ ಮತ್ತೆ ಮನುಷ್ಯರಲ್ಲಿ ಚಿಗುರೊಡೆಯಬೇಕಿದೆ.

 

ಇಂದಿನ ಮಕ್ಕಳೇ ಮುಂದಿನ ಪ್ರಜೆಗಳು. ಇಂದಿನ ವಿದ್ಯಾರ್ಥಿಗಳೇ ಮುಂದಿನ ಆಡಳಿತದ ರೂವಾರಿಗಳು. ಮುಂದೆ ಈ ಸಮಾಜ ಉತ್ತಮ ನಾಗರಿಕ ಗುಣಮಟ್ಟದಲ್ಲಿ ಇರಬೇಕಾದರೆ ನೀವುಗಳು ಈಗಿನಿಂದಲೇ ಅತ್ಯಂತ ಜವಾಬ್ದಾರಿ ಮತ್ತು ಪ್ರಾಮಾಣಿಕವಾಗಿ ಬದುಕು ರೂಪಿಸಿಕೊಳ್ಳಬೇಕು.

ಸ್ವಾತಂತ್ರ್ಯ ಸಮಾನತೆ, ವೈಚಾರಿಕತೆಯ ಆಧಾರದ ಮೇಲೆ ಸಮಾಜವನ್ನು ಪುನರ್ ರೂಪಿಸಬೇಕು.

 

ಇದನ್ನು ಸಾಧಿಸಲು ಗ್ರಂಥಾಲಯಗಳು ಜಾಸ್ತಿಯಾಗಬೇಕು, ಕ್ರೀಡಾಂಗಣಗಳು ಹೆಚ್ಚಾಗಬೇಕು. ಸಂಗೀತ ಸಾಹಿತ್ಯ ವಿಜ್ಞಾನ ಮುಂತಾದ ಲಲಿತಕಲೆಗಳು ಎಲ್ಲಾ ಕಡೆ ವ್ಯಾಪಕವಾಗಿ ಬೆಳವಣಿಗೆ ಹೊಂದಬೇಕು.

 

ತಿಳಿವಳಿಕೆ ನಡವಳಿಕೆಯಾಗಬೇಕಿದೆ. ಇಲ್ಲದಿದ್ದರೆ ಮತ್ತೆ ಕಷ್ಟದ ದಿನಗಳಿಗೆ ಮನುಷ್ಯ ಜಾರಬಹುದು ಎಚ್ಚರಿಕೆ.

 

( ಪಠ್ಯಗಳು ದ್ವೇಷದ ಪ್ರಯೋಗ ಶಾಲೆಗಳಲ್ಲ. ಮಾನವೀಯತೆಯ ಪ್ರಸರಣದ ಮಾಧ್ಯಮಗಳು. ಜೀವ ವಿಕಾಸದ ಸಾಧನಗಳು )

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author