Featured Image Source: mythoworld
ಸಂತೆಯಲ್ಲಿ ಬೆತ್ತಲಾದ ಸಂತ........
ಮುಖವಾಡದ ನೆರಳಿನಲ್ಲಿ
ನಿಂತು ಬೆಚ್ಚಿಬಿದ್ದರು ಜನ..........
ಬೆಲೆ ಕಟ್ಟುತ್ತಿದ್ದರು ವ್ಯಾಪಾರಿಗಳು.......
ಪ್ರೀತಿಗಿಷ್ಟು - ಕರುಣೆಗಿಷ್ಟು - ಗೆಳೆತನಕ್ಕಿಷ್ಟು - ಮನುಷ್ಯತ್ವಕ್ಕಿಷ್ಟು ರೂಪಾಯಿಗಳು.......
ಕೊಳ್ಳುತ್ತಿದ್ದರು ಜನಗಳು ಚೌಕಾಸಿ ಮಾಡಿ ತಮಗೆಟುಕಿದ ಬೆಲೆಕೊಟ್ಟು........
ಸಂಬಂಧಗಳು ಕೂಡ ಮಾರಾಟವಾಗುತ್ತಿದ್ದವು ಹರಾಜಿನಲ್ಲಿ......
ಇದ್ದಕ್ಕಿದ್ದಂತೆ ಪ್ರತ್ಯಕ್ಷವಾದ
ಬೆತ್ತಲೆ ದೇಹ ಕಂಡು ದಂಗಾದರು ನೆರೆದವರು............
ಸಂತ ಜೋರು ಧ್ವನಿಯಲ್ಲಿ ಹಾಡುತ್ತಿದ್ದ........
ಇವು ಮಾರಾಟದ ಸರಕುಗಳಲ್ಲ - ನಿಮ್ಮೊಳಗಡಗಿರುವ ಭಾವಗಳು ......
ವ್ಯಾಪಾರ ಮಾಡಬೇಡಿ ಹಣಕೊಟ್ಟು ಕೊಳ್ಳಬೇಡಿ.............
ಜನರು ಗೊಂದಲಕ್ಕೊಳಗಾದರು,
ವ್ಯಾಪಾರಿಗಳು ಆಕ್ರೋಶಗೊಂಡರು......
ಸಂತೆಯ ಸುಂಕದವನಿಗೆ ಬದುಕೇ ಕುಸಿದಂತಾಯಿತು........
ಅಲ್ಲಿಯೇ ಇದ್ದ ಕುಲುಮೆಯಿಂದ ಮಚ್ಚನ್ನು ಎತ್ತಿಕೊಂಡು ಸಂತನೆಡೆಗೆ ಬೀಸಿದ........
ಆಕಾಶ ನೋಡಿ ಹಾಡುತ್ತಿದ್ದ ಸಂತನ ತಲೆ ಸೀಳಿ ಸ್ಥಳದಲ್ಲೇ ಕುಸಿದು ಸತ್ತ.............
ವ್ಯಾಪಾರಿಗಳು ಗಹಗಹಿಸಿ ನಗುತ್ತಾ ಕುಣಿದು ಕುಪ್ಪಳಿಸಿದರು.........
ಸುಧಾರಿಸಿಕೊಂಡ ಜನರು ಮತ್ತೆ ವ್ಯಾಪಾರದಲ್ಲಿ ತೊಡಗಿದರು.......
ಈಗ ಅವುಗಳ ಬೆಲೆಯನ್ನು ದುಪ್ಪಟ್ಟು ಮಾಡಿದರು ದಲ್ಲಾಳಿಗಳು.........
ಸಂತೆ ಮತ್ತೆ ಭರ್ಜರಿಯಾಗಿ ನಡೆಯತೊಡಗಿತು.......
ಬೆತ್ತಲಾದ ಸಂತನ ದೇಹ ಹೆಪ್ಪುಗಟ್ಟಿದ ರಕ್ತದ ಮಡುವಿನಲ್ಲಿ ಅನಾಥ ಶವವಾಗಿತ್ತು.......
ನಾಯಿಗಳು ಇರುವೆಗಳು ಮುತ್ತತೊಡಗಿದವು......
ಮೇಲೆ ರಣ ಹದ್ದುಗಳು ಹಾರಾಡತೊಡಗಿದವು......
ಮುಖವಾಡದ ಸಂತೆಯಲ್ಲಿ
ಬೆತ್ತಲಾಗುವ ಮುನ್ನ ಎಚ್ಚರ............
ಮುಖವಾಡವೇ ಸಹಜವಾಗಿ,
ಸ್ವಾಭಾವಿಕ ಸಹಜ ಬೆತ್ತಲೆಯೇ
ಅಪರಿಚಿತವಾಗಿರುವ ಕಾಲಘಟ್ಟದಲ್ಲಿ ನಾವು ನೀವು...............
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಎಚ್.ಕೆ.
9844013068......
You must be logged in to post a comment.