ಅಪ್ಪು - ಗಂಧದ ಗುಡಿ - ಕರ್ನಾಟಕ ರತ್ನ...

ಅಪ್ಪು ಎಂದು ಕರೆಯುವ ಪುನೀತ್ ರಾಜ್‍ಕುಮಾರ್ ಅವರ ಎರಡು ಸುದ್ದಿಗಳು.........

Appu - Gandhad Gudi - Karnataka Gem

ನಾವಾಡುವ ನುಡಿಯೇ ಕನ್ನಡ ನುಡಿ,

ನಾವಿರುವಾ ತಾಣವೇ ಗಂಧದ ಗುಡಿ.........

 

ದೃಶ್ಯ ಮಾಧ್ಯಮವೊಂದು ಅತ್ಯಂತ ಪರಿಣಾಮಕಾರಿಯಾಗಿ ಪ್ರಕೃತಿಯ ಮಹತ್ವವನ್ನು ಮತ್ತು ಅದರೊಂದಿಗೆ ಮನುಷ್ಯ ಸಂಬಂಧದ ಭಾವನಾತ್ಮಕ ಎಳೆಯನ್ನು ಜನರಿಗೆ ತಲುಪಿಸಬಹುದು ಎಂಬುದಕ್ಕೆ ಪುನೀತ್ ರಾಜ್‍ಕುಮಾರ್ ಅವರ ಇತ್ತೀಚಿನ ಗಂಧದ ಗುಡಿ ಸಾಕ್ಷ್ಯ ಚಿತ್ರ ಒಂದು ಉದಾಹರಣೆ.

 

ಇತಿಹಾಸ, ಪುರಾಣ, ವರ್ತಮಾನ ಮುಂತಾದ ವ್ಯಕ್ತಿ ಅಥವಾ ಘಟನೆಗಳನ್ನು ಆಧರಿಸಿ ಸಿನಿಮಾ ಮಾಡುವಾಗ ಅದು ಅನೇಕ ಮಿತಿಗಳಿಗೆ ಒಳಪಟ್ಟು ನಿರ್ದೇಶಕನ ದೃಷ್ಟಿಕೋನ ಮೇಲುಗೈ ಪಡೆಯುತ್ತದೆ. ಆದರೆ ಪ್ರಾಕೃತಿಕ ದೃಶ್ಯಗಳ‌ ಸಾಕ್ಷ್ಯಚಿತ್ರ ಮಾಡುವಾಗ ವಾಸ್ತವಕ್ಕೆ ಹೆಚ್ಚು ಹತ್ತಿರವಾಗಿರುತ್ತದೆ. ಪ್ರಕೃತಿ ಅಭಿನಯಿಸುವುದಿಲ್ಲ, ಪರಿಸರ ಮುಖವಾಡ ತೊಡಗುವುದಿಲ್ಲ, ವಾತಾವರಣ ಭಾವನೆ ವ್ಯಕ್ತಪಡಿಸುವುದಿಲ್ಲ.

 

ಕರ್ನಾಟಕದ ಭೌಗೋಳಿಕ ಪ್ರದೇಶಗಳನ್ನು ಸಾಂಕೇತಿಕವಾಗಿ ಮತ್ತು ಸಂಕ್ಷಿಪ್ತವಾಗಿ ಪುನೀತ್ ಎಂಬ ಜನಪ್ರಿಯ ವ್ಯಕ್ತಿಯ ಸಹಜ ಮಾತುಗಳಲ್ಲಿ ಕಟ್ಟಿಕೊಡುವ ಪ್ರಯತ್ನ ಮಾಡಲಾಗಿದೆ.

 

ಕರ್ನಾಟಕವನ್ನು ಕಾಲ್ನಡಿಗೆಯಲ್ಲಿ 385 ದಿನ, 11500 ಕಿಲೋಮೀಟರ್ ಮತ್ತು 28 ಜಿಲ್ಲೆಗಳು, 232 ತಾಲ್ಲೂಕುಗಳು, ದಾರಿ ಮಧ್ಯದ ನೂರಾರು ಹಳ್ಳಿಗಳು, ವರುಷದ ಎಲ್ಲಾ ಋತುಗಳನ್ನು ಅನುಭವಿಸಿರುವ ನನಗೆ ಈ ಸಾಕ್ಷ್ಯಚಿತ್ರವು ತುಂಬಾ ಆಕರ್ಷಕವಾಗಿ ಕಾಣಿಸಿತು. ನೆನಪುಗಳು ಹಸಿ ಹಸಿಯಾಗಿ ಮನದಲ್ಲಿ ಮೂಡಿತು.

 

ಬಾಲನಟನಾಗಿ, ನಾಯಕನಾಗಿ ಆದಷ್ಟು ಕೌಟುಂಬಿಕ ಮತ್ತು ಅತಿಯಾದ ಹಿಂಸೆಗಳಿಲ್ಲದ ಚಿತ್ರಗಳಲ್ಲಿ ಅಭಿನಯಿಸಿ ಸಭ್ಯ ನಟ ಎನಿಸಿಕೊಂಡಿದ್ದರು.

 

ಶಂಕರ್ ನಾಗ್ ನಂತರ ಕೇವಲ 46 ವರ್ಷಕ್ಕೇ ಅಕಾಲಿಕ ಮರಣ ಹೊಂದಿದ್ದು ಅವರ ಮೇಲಿನ ಅಭಿಮಾನ ಮತ್ತಷ್ಟು ಜಾಸ್ತಿಯಾಗಲು ಕಾರಣವಾಯಿತು.

 

ನಿಮ್ಮನ್ನು ನಾವು ಮಿಸ್ ಮಾಡಿಕೊಳ್ಳುತ್ತಿದ್ದೇವೆ ಅಪ್ಪು....

 

ಮತ್ತೊಂದು ಸುದ್ದಿ.....

 

ಕ್ಷಮಿಸಿ ಪುನೀತ್. ಇದು ನಿಮಗೇ ಸಂಬಂಧಿಸಿದ್ದರೂ ಇದರಲ್ಲಿ ನಿಮ್ಮ ಪಾತ್ರವಿಲ್ಲ. ಇದೊಂದು ಸಾಮಾಜಿಕ ಜವಾಬ್ದಾರಿಂದ ಮಾತ್ರ ಒಂದು ಚರ್ಚೆ.....

 

ನೊಬೆಲ್ ಪ್ರಶಸ್ತಿ ಯಾರಾದರೂ ತಂದೆ ಅಥವಾ ತಾಯಿ ಮತ್ತು ಮಗ ಅಥವಾ ಮಗಳು ಪಡೆದಿದ್ದಾರೆಯೇ ?

ಆಸ್ಕರ್ ಪ್ರಶಸ್ತಿ ಸಹ ಈ ರೀತಿಯ ಸಂಬಂಧಗಳಲ್ಲಿ ದೊರಕಿದೆಯೇ ?

ಭಾರತ ರತ್ನ ಪ್ರಶಸ್ತಿ ಭಾರತದಲ್ಲಿ ಯಾರಾದರೂ ತಂದೆ ತಾಯಿ ಅಥವಾ ಸ್ವಂತ ಮಕ್ಕಳು ಪಡೆದಿರುವ ಉದಾಹರಣೆ ಇದೆಯೇ ?

ಪದ್ಮ ಪ್ರಶಸ್ತಿಗಳು ದೊರಕಿದೆಯೇ ?

ಜ್ಞಾನಪೀಠ ಪ್ರಶಸ್ತಿಯಾದರೂ ದೊರಕಿದೆಯೇ ? ವೈಜ್ಞಾನಿಕ ಕ್ಷೇತ್ರದಲ್ಲಿ ಗಂಡ ಹೆಂಡತಿ ನೊಬೆಲ್ ಪ್ರಶಸ್ತಿ ಪಡೆದ ಉದಾಹರಣೆ ಇದೆ.

 

ಆದರೆ ಕರ್ನಾಟಕದಲ್ಲಿ ಅಪ್ಪ ಮತ್ತು ಮಗನಿಗೆ ಕರ್ನಾಟಕ ರತ್ನ ಪ್ರಶಸ್ತಿ ನೀಡಲಾಗಿದೆ.....

 

ಮುಖ್ಯಮಂತ್ರಿಗಳ ಮಕ್ಕಳು ಮುಖ್ಯಮಂತ್ರಿ, ಸಿನಿಮಾ ನಟನಟಿಯರ ಮಕ್ಕಳು ಸಿನಿಮಾ ನಟರು, ರಾಜಕಾರಣಿಗಳ ಮಕ್ಕಳು ರಾಜಕೀಯದಲ್ಲಿ, ಅಧಿಕಾರಿಗಳ ಮಕ್ಕಳು ಅಧಿಕಾರಿಗಳಾಗಿ, ಬೇರೆ ವೃತ್ತಿಯ ಅನುವಂಶೀಯತೆಯ ವೃತ್ತಿ ಸಹಜವಾಗಿ ಅಸ್ತಿತ್ವದಲ್ಲಿದೆ. 

 

ಆದರೆ ಒಂದು ಅತ್ಯುನ್ನತ ಕರ್ನಾಟಕ ರತ್ನ ಪ್ರಶಸ್ತಿ ತಂದೆ ಡಾಕ್ಟರ್ ರಾಜ್ ಕುಮಾರ್ ಮತ್ತು ಅವರ ಮಗ ಪುನೀತ್ ರಾಜ್‍ಕುಮಾರ್ ಅವರಿಗೆ ಸಂದಿದೆ.

 

ಕರ್ನಾಟಕ ರತ್ನ ಪ್ರಶಸ್ತಿಯನ್ನು ರಾಜ್ಯ ಸರ್ಕಾರ ಸ್ಥಾಪಿಸಿದಾಗ ಅದು ಯಾವ ಮಾನದಂಡಗಳನ್ನು ಅನುಸರಿಸಲು ನಿಯಮಗಳನ್ನು ರೂಪಿಸಲಾಗಿತ್ತೋ ವೈಯಕ್ತಿಕವಾಗಿ ನನಗೆ ತಿಳಿದಿಲ್ಲ. ಆದರೆ ಖಂಡಿತವಾಗಿಯೂ ಆ ಒಂದು ದೊಡ್ಡ ಪ್ರಶಸ್ತಿ ರಾಜ್ಯಕ್ಕೆ ಅತ್ಯಂತ ಮಹತ್ವದ ಸೇವೆ ಸಲ್ಲಿಸಿರುವ, ಒಂದು ಪೀಳಿಗೆಯನ್ನೇ ತನ್ನ ಸಾಧನೆ ಸಾಮರ್ಥ್ಯದ ಮೂಲಕ ಪ್ರೇರೇಪಿಸಿರುವ ವ್ಯಕ್ತಿಗಳಿಗೆ ಕೊಡಲಾಗುತ್ತದೆ ಎಂಬುದು ಸಾಮಾನ್ಯ ತಿಳಿವಳಿಕೆ.

 

ಇಲ್ಲಿಯವರೆಗೂ ಕರ್ನಾಟಕ ಪ್ರಶಸ್ತಿ ಪಡೆದವರ ಪಟ್ಟಿ.....

 

ರಾಷ್ಟ್ರಕವಿ ಕುವೆಂಪು,

ಡಾಕ್ಟರ್ ರಾಜ್ ಕುಮಾರ್,

ಎಸ್. ನಿಜಲಿಂಗಪ್ಪ,

ಡಾಕ್ಟರ್ ಸಿ ಎನ್ ಆರ್ ರಾವ್,

ಭೀಮಸೇನ್ ಜೋಷಿ,

ಶ್ರೀ‌ ಶಿವಕುಮಾರ ಸ್ವಾಮೀಜಿ,

ಡಾಕ್ಟರ್ ಜವರೇಗೌಡ,

ವೀರೇಂದ್ರ ಹೆಗ್ಗಡೆ,

ಪುನೀತ್ ರಾಜ್‍ಕುಮಾರ್.....

 

ಕರ್ನಾಟಕ ರತ್ನ ಎಂದರೆ ಕೇವಲ ಜನಪ್ರಿಯತೆ ಅಥವಾ ವೈಯಕ್ತಿಕ ಪ್ರತಿಭೆ ಅಥವಾ ವ್ಯಕ್ತಿಗತ ಸಾಧನೆಗಿಂತ ಹೆಚ್ಚಾಗಿ ಇಡೀ ಕರ್ನಾಟಕದ ಒಟ್ಟು ಮೌಲ್ಯವನ್ನು ಹೆಚ್ಚಿಸಿರಬೇಕು ಅಥವಾ ಇಡೀ ಜನಾಂಗದ ಮೇಲೆ ಗಾಢ ಪ್ರಭಾವ ಬೀರಿರಬೇಕು ಅಥವಾ ಅವರ ವ್ಯಕ್ತಿತ್ವ ಅತ್ಯಂತ ಮಾದರಿಯಾಗಿರಬೇಕು. 

 

ಅದು ಅವರವರ ಅಭಿಮಾನಿಗಳಿಗೆ, ಬೆಂಬಲಿಗರಿಗೆ, ಜಾತಿಗಳಿಗೆ, ರಾಜಕೀಯ ಪಕ್ಷಗಳಿಗೆ ಮಾತ್ರ ಸೀಮಿತವಾಗಿರದೆ ವಿಶಾಲತೆಯನ್ನು ಹೊಂದಿರಬೇಕು. ಅದನ್ನು ನಿರ್ಧರಿಸಲು ಕೂಡ ಒಂದು ಶಾಶ್ವತ ಸಮಿತಿಯೂ ಇರಬೇಕು. ಇಲ್ಲದಿದ್ದರೆ ಆಡಳಿತದಲ್ಲಿ ರಾಜಕೀಯ ಪಕ್ಷಗಳ ಹಿಡಿತದಲ್ಲಿ ಕರ್ನಾಟಕ ರತ್ನ ಪ್ರಶಸ್ತಿ ಸಿಲುಕಿದರೆ ಭವಿಷ್ಯದಲ್ಲಿ ಅದರ ಘನತೆ ಕಡಿಮೆಯಾಗಬಹುದು. 

 

ಕರ್ನಾಟಕ ರತ್ನ ಕೇವಲ ಒಳ್ಳೆಯ ಕೆಲಸ ಮಾಡಿದವರಿಗೆ ಮಾತ್ರ ನೀಡಬಾರದು. ಕೆಟ್ಟ ಕೆಲಸಗಳನ್ನು ಖಂಡಿಸುವ ಧೈರ್ಯ ಸಾಹಸ ಮಾಡುವವರೂ ಆಗಿರಬೇಕು.

 

ಇಲ್ಲಿನ ಭ್ರಷ್ಟಾಚಾರ, ಇಲ್ಲಿನ ಜಾತಿ ವ್ಯವಸ್ಥೆ, ಇಲ್ಲಿನ ಮೌಡ್ಯಗಳ ಬಗ್ಗೆ ಸಹ ಮಾತನಾಡಬೇಕು. ಇಲ್ಲದಿದ್ದರೆ ವ್ಯಕ್ತಿತ್ವ ಪರಿಪೂರ್ಣ ಆಗುವುದಿಲ್ಲ.

 

ಈಗಿನಿಂದಲೇ ಎಲ್ಲಾ ಕ್ಷೇತ್ರಗಳ ಸ್ವಚ್ಚತಾ ಕಾರ್ಯ ನಿಧಾನವಾಗಿ ಆರಂಭವಾದರೆ ಒಳ್ಳೆಯದು. ಆ ನಿಟ್ಟಿನಲ್ಲಿ ಸರ್ಕಾರಗಳು ನೀಡುವ ಪ್ರಶಸ್ತಿಗಳನ್ನು ಇನ್ನಷ್ಟು ಗುಣಾತ್ಮಕವಾಗಿಸುವ ನಿಟ್ಟಿನಲ್ಲಿ ಪ್ರಯತ್ನಗಳು ಸಾಗಲಿ.

 

ಅದಕ್ಕಾಗಿ ಒಂದು ಸಣ್ಣ ಅನಿಸಿಕೆ.......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಎಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author