ಚೀನಾದ ಘಟನೆಯ ಸುತ್ತಾ.....

Around the China incident

Featured image source : Economic times

ಚೀನಾದ ಇತ್ತೀಚಿನ ಘಟನೆ ನಮಗೆ ಒಂದು ಎಚ್ಚರಿಕೆ........

 

ಚೀನಾದ ಇತ್ತೀಚಿನ ಕೋವಿಡ್ ನಿರ್ಬಂಧಗಳಿಗೆ ಜನರಿಂದ ವ್ಯಕ್ತವಾದ  ಆಕ್ರೋಶಕ್ಕೆ ವಿದೇಶಿ ಶಕ್ತಿಗಳ ಕೈವಾಡ ಅಥವಾ ಪಾಶ್ಚಿಮಾತ್ಯ ದೇಶಗಳ ಹುನ್ನಾರ ಅಥವಾ ಪ್ರಜಾಪ್ರಭುತ್ವವಾದಿಗಳ ಕುತಂತ್ರ ಅಥವಾ ದೇಶದ ಅಭಿವೃದ್ಧಿ ಸಹಿಸದ ವಿರೋಧಿಗಳ‌ ಷಡ್ಯಂತ್ರ ಎಂಬ ಗುಸು ಗುಸು ಸೃಷ್ಟಿಮಾಡಿ ಆ ನೆಪದಲ್ಲಿ ಇದಕ್ಕೆ ಹೆಚ್ಚಿನ ಜನ ಬೆಂಬಲ ಸಿಗದಂತೆ ಮಾಡಿ ಪೋಲೀಸ್ ಕಾರ್ಯಾಚರಣೆಯ ಮುಖಾಂತರ ನೇರವಾಗಿ ಮತ್ತು ಆಡಳಿತ ವ್ಯವಸ್ಥೆಯ ಮೂಲಕ ‌ಪರೋಕ್ಷವಾಗಿ ಜನರ ಧ್ವನಿಯನ್ನು ಅಡಗಿಸಲಾಗುತ್ತದೆ. ಅದು ಪ್ರತಿಭಟನೆ ಮೇಲ್ನೋಟಕ್ಕೆ ಕ್ಷೀಣಿಸಿದ ನಂತರ ಪ್ರತಿಭಟನಾಕಾರರ ಮೇಲೆ ಬೇರೆಯದೇ ರೀತಿಯಲ್ಲಿ ಸಾರ್ವಜನಿಕರ ಅರಿವಿಗೆ ಬಾರದಂತೆ ಕಾನೂನು ಕ್ರಮಗಳನ್ನು ಕೈಗೊಂಡು ಅವರನ್ನು ಹಿಂಸೆಗೆ ಗುರಿಪಡಿಸಲಾಗುತ್ತದೆ. ಇದು ಬಹುತೇಕ ಸರ್ವಾಧಿಕಾರಿ ಮನೋಭಾವದ ಆಡಳಿತಗಾರರ ತಂತ್ರಗಾರಿಕೆ ಮತ್ತು ಬಹುಸಂಖ್ಯಾತ ಸಾಮಾನ್ಯ ಜನರನ್ನು ಮರುಳುಮಾಡಿ ಅಧಿಕಾರ ಉಳಿಸಿಕೊಳ್ಳುವ ಮತ್ತು ನಿಯಂತ್ರಿಸುವ ಕಾರ್ಯವಿಧಾನ.

 

ಇರಾನ್ ನಲ್ಲಿ ನಡೆಯುತ್ತಿರುವ ಹಿಜಾಬ್ ವಿರುದ್ಧದ ಹೋರಾಟದಲ್ಲಿ ಸಹ ಇದೇ ತಂತ್ರಗಾರಿಕೆಯನ್ನು ಸ್ಪಷ್ಟವಾಗಿ ಕಾಣಬಹುದು. ಭಾರತವನ್ನು ಹೊಗಳಿದ ಪಾಕಿಸ್ತಾನದ ಪ್ರಧಾನಿ ಇಮ್ರಾನ್ ಖಾನ್ ವಿಷಯದಲ್ಲಿ ಸಹ ಸ್ವಲ್ಪಮಟ್ಟಿಗೆ ಇದೇ ತಂತ್ರಗಾರಿಕೆ ಯಶಸ್ವಿಯಾಯಿತು. ಇತಿಹಾಸದಲ್ಲಿ ಈ ರೀತಿಯ ಸಾಕಷ್ಟು ಉದಾಹರಣೆಗಳಿವೆ.

 

ಒಂದು ವೇಳೆ ತನ್ನ ವಿರುದ್ಧ ಧ್ವನಿಗಳನ್ನು ಹತ್ತಿಕ್ಕಲು ಭಾರತದಲ್ಲಿ ಇದೇ ರೀತಿಯ ಲಕ್ಷಣಗಳು ಕಂಡುಬರುತ್ತಿದ್ದರೆ ಎಚ್ಚರಿಕೆ ವಹಿಸಬೇಕಾದ ಜವಾಬ್ದಾರಿ ನಮ್ಮೆಲ್ಲರದು. ಇದಕ್ಕೆ ಜಾತಿ ಧರ್ಮ ಭಾಷೆ ಪಕ್ಷ ಸಿದ್ದಾಂತದ ಲೇಪ ನೀಡಬಾರದು. ಸಂವಿಧಾನದ ಸ್ವಾತಂತ್ರ್ಯ ಮತ್ತು ಸಮಾನತೆಯ ವಿಷಯದಲ್ಲಿ ಯಾರೂ ರಾಜಿ ಮಾಡಿಕೊಳ್ಳಬಾರದು. 

 

ಎರಡನೇ ಸ್ವಾತಂತ್ರ್ಯ ಸಂಗ್ರಾಮ ಎಂದು ಕರೆಯಲಾಗುವ ಅಂದಿನ ಬಲಿಷ್ಠ ಪ್ರಧಾನಿ ಇಂದಿರಾ ಗಾಂಧಿಯವರ ಸರ್ವಾಧಿಕಾರಿ ಮತ್ತು ಭ್ರಷ್ಟಾಚಾರದ ವಿರುದ್ಧ ಸಂಪೂರ್ಣ ಕ್ರಾಂತಿಗೆ ಕರೆ ನೀಡಿ ಅದರಲ್ಲಿ ಯಶಸ್ವಿಯಾದ ಲೋಕ ನಾಯಕ ಜಯಪ್ರಕಾಶ್ ನಾರಾಯಣ್ ಈ ವಿಷಯದಲ್ಲಿ ನಮಗೆಲ್ಲಾ ಪ್ರೇರಣೆಯಾಗಬೇಕು.

 

ಒಂದು ಹಂತದಲ್ಲಿ ಆಗಿನ ಯುಪಿಎ ಸರ್ಕಾರದ ಭ್ರಷ್ಟಾಚಾರ ವಿರುದ್ಧ ನಡೆದ ಅಣ್ಣಾ ಹಜಾರೆಯವರ ಸತ್ಯಾಗ್ರಹ ಚಳವಳಿ ಸಹ ತಕ್ಕಮಟ್ಟಿಗೆ ಯಶಸ್ವಿಯಾಯಿತು.

 

ಅಂದರೆ ಯಾವುದೇ ಆಡಳಿತ ವ್ಯವಸ್ಥೆ ಜನರನ್ನು ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ  ಗುಲಾಮರನ್ನಾಗಿಸಿ ನಂತರ ಅವರಿಗೆ ಬದುಕುವ ಸವಾಲನ್ನು ನಿರ್ಮಿಸಿ ಅವರ ಮೇಲೆ ನಿಯಂತ್ರಣ ಸಾಧಿಸಿ ನಿರಂತರ ಆಡಳಿತ ನಡೆಸುವ ತಂತ್ರಗಾರಿಕೆ ನಡೆಸುತ್ತದೆ. ಅದಕ್ಕೆ ವಿದೇಶಿ ಶಕ್ತಿಗಳ ಕೈವಾಡ ಎಂದು ಗುಲ್ಲೆಬ್ಬಿಸಲಾಗುತ್ತದೆ.

 

ಇಲ್ಲಿ ಒಂದು ವಿಷಯವನ್ನು ಸ್ಪಷ್ಟವಾಗಿ ಅರ್ಥಮಾಡಿಕೊಳ್ಳಬೇಕು.  ಯಾವುದೇ ದೇಶದ ವಿಭಜಕ - ವಿಧ್ವಂಸಕ ಶಕ್ತಿಗಳಿಗೆ ಇತರ ದೇಶದ ಸಾಮಾನ್ಯ ವ್ಯಕ್ತಿಗಳ ಜೊತೆ ಯಾವುದೇ ರೀತಿಯ ನೇರ ಸಂಪರ್ಕ ಸಾಧ್ಯವಾಗುವುದಿಲ್ಲ ಮತ್ತು ಸಾಮಾನ್ಯ ಜನ ಅದರಲ್ಲಿ ಭಾಗಿಯಾಗುವುದಿಲ್ಲ. ಸಣ್ಣ ಕಳ್ಳತನ ಮಾಡಲು ಅಥವಾ ನೋಡಲು ಭಯ  ಪಡುವ ಜನ ದೇಶದ ವಿರುದ್ಧ ಶಕ್ತಿಗಳ ಜೊತೆ ಕೈ ಜೋಡಿಸಲು ಸಾಧ್ಯವೇ ನೀವೇ ಯೋಚಿಸಿ. ಆದರೆ ಕೆಲವೊಮ್ಮೆ ಅಪರೂಪದ ಪ್ರಕರಣಗಳಲ್ಲಿ ಮಾತ್ರ ಕೆಲವು ಸಂಘ ಸಂಸ್ಥೆಗಳು ಅಥವಾ ನಾಯಕತ್ವ ಈ ರೀತಿಯ ಹುನ್ನಾರಕ್ಕೆ ಬಲಿಯಾಗಿರಬಹುದು. ಆದರೆ ಅದನ್ನೇ ಉದಾಹರಣೆ ತೆಗೆದುಕೊಂಡು ಇಡೀ ಜನ ಸಮೂಹದ ಸತ್ವಯುತ ಮತ್ತು ನ್ಯಾಯಯುತ ಬೇಡಿಕೆಗಳಿಗೆ ವಿದೇಶಿ ಶಕ್ತಿಗಳ ಕೈವಾಡ ಎಂದು ಬಿಂಬಿಸುವುದು ಅತ್ಯಂತ ಅಪಾಯಕಾರಿ ಮತ್ತು ಆ ರೀತಿಯ ಲಕ್ಷಣಗಳನ್ನು ಪ್ರಾರಂಭದಲ್ಲೇ ಗುರುತಿಸಿ ವಿರೋಧಿಸುವ ಸೂಕ್ಷ್ಮತೆ ನಮ್ಮದಾಗಬೇಕು.

 

ದೇಶ ಯಾವುದೇ ಇರಲಿ ಆ ದೇಶದ ಜನ ಒಂದು ವಿಷಯದಲ್ಲಿ ಪ್ರತಿಭಟನೆ ಮಾಡುವಾಗ ಅದನ್ನು ಧಮನಿಸದೆ ಆ ಬಗ್ಗೆ ಸಹಾನುಭೂತಿ ಹೊಂದಿರಬೇಕು. ಶಾಂತಿಯಿಂದ ಪ್ರತಿಭಟಿಸಲು ಮುಕ್ತ ಅವಕಾಶ ನೀಡಬೇಕು. ಹಾಗೆಂದು ಆ ಪ್ರತಿಭಟನೆನೆಗೆ ಮಣಿದು ಅದನ್ನು ಜಾರಿಗೊಳಿಸಬೇಕೆಂದೇನು ಇಲ್ಲ. ಪ್ರತಿಭಟನೆಯಲ್ಲಿ ನಿಜವಾದ ಅರ್ಥ ಮತ್ತು ಬೇಡಿಕೆ ಇದ್ದರೆ ಸಹಜವಾಗಿ ಅದು ಬಹು ಜನರ ಬೆಂಬಲ ಗಳಿಸಿ ಬೃಹತ್ ಪ್ರಮಾಣದ ಆಂದೋಲನವಾಗುತ್ತದೆ. ಅದರಲ್ಲಿ ಯಾವುದೇ ವಿಶಾಲವಾದ ಅಂಶವಿಲ್ಲದೇ ಕೇವಲ ಸಂಕುಚಿತ ಮತ್ತು ಸ್ವಾರ್ಥದ ಬೇಡಿಕೆಯಾಗಿದ್ದರೆ ಅಲ್ಲಿಯೇ ಮುದುಡಿ ಹೋಗುತ್ತದೆ.

 

ಆದ್ದರಿಂದ ವಿಶ್ವದ ಬೃಹತ್ ಸಂವಿಧಾನ ಹೊಂದಿರುವ ವೈವಿಧ್ಯಮ ದೇಶ ಭಾರತದಲ್ಲಿ ನಾವೆಲ್ಲರೂ ಧಮನಕಾರಿ ಆಡಳಿತ ವ್ಯವಸ್ಥೆಯ ಲಕ್ಷಣಗಳನ್ನು ಸೂಕ್ಷ್ಮವಾಗಿ ಗುರುತಿಸಿ ವಿರೋಧಿಸೋಣ. ಅಭಿವ್ಯಕ್ತಿ ಸ್ವಾತಂತ್ರ್ಯವನ್ನು ಮುಕ್ತವಾಗಿ ಆಸ್ವಾಧಿಸೋಣ.

 

ಅದು ಎಲ್ಲಾ ಪ್ರಜೆಗಳ ಎಲ್ಲಾ ಕಾಲ ಸಂದರ್ಭದ ಕರ್ತವ್ಯ. ವಾಸ್ತವವಾಗಿ ಮಾಧ್ಯಮಗಳು ಆ ಕಾರ್ಯವನ್ನು ನಿರ್ವಹಿಸಬೇಕು. ಆದರೆ ಆಧುನಿಕ ಮಾಧ್ಯಮಗಳು ಸರ್ಕಾರಗಳ ಬಾಲಬಡುಕರಾದ ಕಾರಣ ಸಾಮಾನ್ಯ ಜನ ಸಮೂಹ ಸಂಪರ್ಕ ಕ್ರಾಂತಿಯ ಸಂಪೂರ್ಣ ಲಾಭ ಪಡೆದು ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸಿಕೊಂಡು ದೊಡ್ಡ ಮಟ್ಟದ ಧ್ವನಿ ಹೊರಡಿಸಬೇಕು. ಆ ಮೂಲಕ ಸಾರ್ವಜನಿಕ ಅಭಿಪ್ರಾಯ ಬಲಿಷ್ಠಗೊಳ್ಳಬೇಕು.

 

ಭಾರತದಲ್ಲಿ ಯಾವ ಕಾರಣಕ್ಕೂ ಸರ್ವಾಧಿಕಾರದ ಲಕ್ಷಣಗಳು ಬೇರು ಬಿಡಲು ಅವಕಾಶ ನೀಡಬಾರದು. ಅದು ಧರ್ಮದ ಆಧಾರವೇ ಆಗಿರಬಹುದು, ಅಭಿವೃದ್ಧಿಯ ಆಧಾರವೇ ಆಗಿರಬಹುದು. ಸ್ವಾತಂತ್ರ್ಯ ಇಲ್ಲದ ಎಲ್ಲಾ  ಪ್ರಗತಿಯೂ ಅನಾಗರಿಕ ಸಮಾಜದ ಲಕ್ಷಣಗಳು ಮಾತ್ರ.

ಅದು  ಮನುಷ್ಯನ ಮೂಲಭೂತ ಅವಶ್ಯಕತೆಗಳನ್ನು ನೆಪ ಮಾತ್ರ ಮಾಡಿ ಅವನ ನೆಮ್ಮದಿಯನ್ನು ಕಸಿದುಕೊಳ್ಳುತ್ತದೆ...........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್. ಕೆ.

9844013068...

Enjoyed this article? Stay informed by joining our newsletter!

Comments

You must be logged in to post a comment.

About Author