ಆಟೋ ಚಾಲಕ ಮುಖ್ಯಮಂತ್ರಿ....

Auto driver to minister

ಆಟೋ ಚಾಲಕರೊಬ್ಬರು ಇದೀಗ ಮಹಾರಾಷ್ಟ್ರದ ಮುಖ್ಯಮಂತ್ರಿ,

ಚಹಾ ಮಾರುತ್ತಿದ್ದವರೊಬ್ಬರು ಭಾರತದ ಪ್ರಧಾನ ಮಂತ್ರಿ,

ದನ ಕಾಯುತ್ತಿದ್ದವರೊಬ್ಬರು ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು,

ಬುಡಕಟ್ಟು ಜನಾಂಗದವರೊಬ್ಬರು ರಾಷ್ಟ್ರಪತಿ ಆಗುತ್ತಿದ್ದಾರೆ,

ದಲಿತ, ಹಿಂದುಳಿದ, ರೈತ, ಕಾರ್ಮಿಕ, ಮಹಿಳೆಯರು, ಕುಗ್ರಾಮದವರು ರಾಜಕೀಯವಾಗಿ ಮತ್ತು ಆಡಳಿತಾತ್ಮಕವಾಗಿ ಅತ್ಯಂತ ಉನ್ನತ ಹುದ್ದೆಗಳನ್ನು ಅಲಂಕರಿಸಿದ್ದಾರೆ.......

 

ಪ್ರಜಾಪ್ರಭುತ್ವ ಮತ್ತು ಭಾರತದ ಸಂವಿಧಾನ ಈ ವಿಷಯದಲ್ಲಿ ತನ್ನ ಕರ್ತವ್ಯವನ್ನು ನಿರ್ವಂಚನೆಯಿಂದ ಮಾಡುತ್ತಿದೆ. ಅದಕ್ಕೆ ಅಭಿನಂದನೆಗಳು....

 

ಆದರೆ ಆ ಹುದ್ದೆಗೆ ಏರಿದ ವ್ಯಕ್ತಿಗಳು ತಮ್ಮ ಕರ್ತವ್ಯವನ್ನು, ತಾವು ಬೆಳೆದ ಸಮುದಾಯಗಳನ್ನು ನಿಜಕ್ಕೂ ಮೇಲ್ದರ್ಜೆಗೆ ಏರಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಿದ್ದಾರೆಯೇ ಎಂಬ ಪ್ರಶ್ನೆಯ ಹಿಂದಿನ ಉತ್ತರ ಹುಡುಕಿದಾಗ.......

 

ಸಾಕಷ್ಟು ನಿರಾಸೆ ಮೂಡಿಸಿದೆ. 

 

ಶೇಕಡಾ 90% ಸರ್ಕಾರಿ ಕಚೇರಿಗಳಲ್ಲಿ ಲಂಚ ನೀಡದೆ ಕೆಲಸ ಆಗುವುದಿಲ್ಲ. ಭ್ರಷ್ಟಾಚಾರ ಬಹುತೇಕ ಅಧೀಕೃತ ವ್ಯವಹಾರ ಎಂಬಂತಾಗಿದೆ.

 

ಶೇಕಡಾ 90% ಚುನಾವಣಾ ಪ್ರಕ್ರಿಯೆ, ಅಭ್ಯರ್ಥಿಗಳ ಆಯ್ಕೆ ಹಣ ಹೆಂಡ ಜಾತಿ ಧರ್ಮದ ಆಧಾರದ ಮೇಲೆಯೇ ನಡೆಯುತ್ತಿದೆ.......

 

ಶೇಕಡಾ 90% ಶಿಕ್ಷಣ, ಆರೋಗ್ಯ, ನ್ಯಾಯಾಂಗ ಎಲ್ಲವೂ ಉಳ್ಳವರ, ಬಲಾಡ್ಯರ ಪಾಲಾಗುತ್ತಿದೆ. ಬಡವರಿಗೆ ಅತ್ಯಂತ ಕೆಳಮಟ್ಟದ ಸೌಕರ್ಯ ದೊರೆಯುತ್ತಿದೆ.

 

ಅತ್ಯುತ್ತಮ ಪ್ರಾಕೃತಿಕ ಸಂಪನ್ಮೂಲಗಳನ್ನು ಹೊಂದಿರುವ ನಮ್ಮ ದೇಶ ಅದರ ಸದುಪಯೋಗ ಪಡಿಸಿಕೊಂಡರೆ ನಿಜಕ್ಕೂ ಜನರ ಜೀವನಮಟ್ಟ ಇದಕ್ಕಿಂತಲೂ ಉತ್ತಮ ಪಡಿಸುವ ಎಲ್ಲಾ ಸಾಧ್ಯತೆಗಳಿವೆ. ಎಷ್ಟೊಂದು ನದಿಗಳು, ನಿತ್ಯಹರಿದ್ವರ್ಣದ ಕಾಡುಗಳು, ಪರ್ವತ ಶ್ರೇಣಿಗಳು, ಫಲವತ್ತಾದ ಭೂಮಿ, ವಿಶಾಲ ಭೂಪ್ರದೇಶದ, ಒಳ್ಳೆಯ ಮಾನವ ಸಂಪನ್ಮೂಲ ಹೀಗೆ ಎಲ್ಲವೂ ಇದೆ. ಆದರೆ ಅದರ ನಿರ್ವಹಣೆಯಲ್ಲಿ ವಿಫಲರಾಗುತ್ತಿದ್ದೇವೆ‌.

 

ಒಲಿಂಪಿಕ್ ಕ್ರೀಡೆಗಳಲ್ಲಿ ನಮ್ಮ ಸ್ಥಾನ, ನೊಬೆಲ್ ಪ್ರಶಸ್ತಿಯಲ್ಲಿ ನಮ್ಮ ಸ್ಥಾನ, ವಿಜ್ಞಾನ ತಂತ್ರಜ್ಞಾನದಲ್ಲಿ ನಮ್ಮ ಸ್ಥಾನ, ವ್ಯಾಪಾರ ವಾಣಿಜ್ಯೋದ್ಯಮದಲ್ಲಿ ನಮ್ಮ ಸ್ಥಾನ ವಿಶ್ವಮಟ್ಟದಲ್ಲಿ ಇನ್ನೂ ಎತ್ತರಕ್ಕೇರಬೇಕಿತ್ತು. ಆದರೆ ದುರಾದೃಷ್ಟವಶಾತ್ ಕೊಲೆ, ದರೋಡೆ, ಅತ್ಯಾಚಾರ, ಅಪಘಾತ, ಆತ್ಮಹತ್ಯೆ, ಕೋಮು ಗಲಭೆ, ಜಾತಿ ಸಂಘರ್ಷ, ರಾಜಕೀಯ ಕೆಸರೆರಚಾಟ ಎಲ್ಲವೂ ಸೇರಿ ಬದುಕಿನ ಗುಣಮಟ್ಟವನ್ನು ಕೆಳಹಂತಕ್ಕೆ ತಂದಿದೆ.

 

ಭವ್ಯ ಇತಿಹಾಸ ಪರಂಪರೆ ಹೊಂದಿದ್ದರು ಕೂಡ ಇತರ ಅಭಿವೃದ್ಧಿ ಹೊಂದಿದ ದೇಶಗಳಿಗೆ ಹೋಲಿಸಿದಾಗ ಅಸಮಾಧಾನ ಅತೃಪ್ತಿ ಖಂಡಿತ ನಮಗರಿವಿಲ್ಲದೇ ಹೊರ ಬರುತ್ತದೆ. 

 

ಇದಕ್ಕೆಲ್ಲ ಕಾರಣ ವ್ಯಕ್ತಿಗಳು ಕೆಳ ಹಂತದಿಂದ ಮೇಲೇರಿದ ಮೇಲೆ  ಈ ನೆಲದ ಋಣ ತೀರಿಸಲು ಪ್ರಾಮಾಣಿಕ ಪ್ರಯತ್ನ ಮಾಡದೆ ತನ್ನ ಸ್ವಂತ ಹಿತಾಸಕ್ತಿಗಾಗಿ ಅಧಿಕಾರ ದುರುಪಯೋಗ ಪಡಿಸಿಕೊಳ್ಳುವ ಚಟಕ್ಕೆ ಬಲಿಯಾಗಿದ್ದಾರೆ. ಕಡು ಬಡತನದ ವ್ಯಕ್ತಿಯೊಬ್ಬ ಶಾಸಕ ಮಂತ್ರಿ ಮುಂತಾದ ಅತ್ಯುನ್ನತ ಸ್ಥಾನಕ್ಕೇರಿದ ನಂತರ ಅದಕ್ಕಾಗಿ ತೃಪ್ತನಾಗಿ ಸಮಾಜಕ್ಕಾಗಿ ತನ್ನನ್ನು ಸಂಪೂರ್ಣ ಅರ್ಪಿಸಿಕೊಳ್ಳಬೇಕು ಎಂಬ ಮನೋಭಾವ ಜಾಗೃತವಾಗದೆ  ಮತ್ತಷ್ಟು ಹಣ ಮಾಡುವ ಆ ಮೂಲಕ ಮತ್ತಷ್ಟು ಅಧಿಕಾರ ವಿಸ್ತರಿಸುವ ಬಗ್ಗೆಯೇ ಕಾರ್ಯಪ್ರವೃತ್ತನಾಗುವುದು ಈ ದೇಶದ ದುರಂತ.

 

ಬಡತನದಿಂದ ಮೇಲೇರಿದ ವ್ಯಕ್ತಿ ಹೆಚ್ಚು ಹೆಚ್ಚು ಮಾನವೀಯ ಮೌಲ್ಯಗಳನ್ನು ಬೆಳೆಸಿಕೊಂಡು ಸರಳವಾಗಿ ಬದುಕುತ್ತಾ ಇಡೀ ಬದುಕನ್ನು ಸಮಾಜಕ್ಕೆ ಅರ್ಪಿಸುವ ತ್ಯಾಗ ಮರೆತು ಕೀಳರಿಮೆಗೆ ಒಳಗಾಗಿ ಬಡವರನ್ನು ದೂರ ಸರಿಸಿ ಶ್ರೀಮಂತರ ಸಹವಾಸಕ್ಕೆ ಹಾತೊರೆಯುವ ಆಘಾತಕಾರಿ ಮನಸ್ಥಿತಿ ದೇಶದ ಅಭಿವೃದ್ಧಿಗೆ ಮಾರಕವಾಗಿದೆ.

 

ಹರಿದ ಬಟ್ಟೆಯ, ಹಸಿದ ಹೊಟ್ಟೆಯ, ಸೋರು ಗುಡಿಸಲಿನ ಮನೆಯಲ್ಲಿ ಬೆಳೆದ ವ್ಯಕ್ತಿ ಐಷಾರಾಮಿ ಬದುಕಿನ ನೆರಳಲ್ಲಿ ತನ್ನನ್ನು ಮಾರಿಕೊಳ್ಳುವುದು ವಿಚಿತ್ರ ಎನಿಸುತ್ತಿದೆ. ನೆನಪುಗಳು ಕೇವಲ ಮಾಧ್ಯಮಗಳ ಮಾರಾಟದ ಸರಕು ಮಾತ್ರ.

 

ನಾವೆಲ್ಲರೂ ನಾವು ಏರಿದ ಮೆಟ್ಟಿಲುಗಳನ್ನು ಮರೆಯದೆ ಕನಿಷ್ಠ ನಮ್ಮ ಸುತ್ತಮುತ್ತಲಿನ ಸಹಪಾಠಿಗಳ - ಸಮಾಜದ ಬಗ್ಗೆ ಒಂದಷ್ಟು ಕಳಕಳಿ ಪ್ರೀತಿ ಅಭಿಮಾನ ವ್ಯಕ್ತಪಡಿಸಿದರೆ ಸಾಕು ಈ ನೆಲ ಧನ್ಯವಾಗುತ್ತದೆ. ಅದಕ್ಕಾಗಿ ಶ್ರಮಿಸೋಣ......

 

ಬಡವರು ಉನ್ನತ ಹುದ್ದೆಗೆ ಏರುವುದು ಮುಖ್ಯವಲ್ಲ. ಯಾವ ರೀತಿ ಸೇವೆ ಮಾಡುತ್ತಾರೆ ಎನ್ನುವುದು ಮುಖ್ಯ.

ಇಲ್ಲದಿದ್ದರೆ ಬಡತನ ನಾಚಿಕೆಯದ ತಲೆ ತಗ್ಗಿಸುತ್ತದೆ.

ಅಧಿಕಾರ ಶ್ರೀಮಂತಿಕೆ ಗಹಗಹಸಿ ನಗುತ್ತದೆ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author