ಮರಳಿ ಗೂಡಿಗೆ

ಮನಸ್ಸು ಗೊಂದಲದ ಗೂಡಾಗಿ, ಬುದ್ಧಿ ಏನನ್ನೋ ಯೋಚಿಸುವಾಗ ನಮಗೆ ಗೊತ್ತಿಲ್ಲದೇ ಕೆಲವು ಸತ್ಯಗಳು ನಮ್ಮನ್ನು ಕಾಡುತ್ತವೆ. ನಾವು ಪ್ರಗತಿಪರ ದೇಶದಲ್ಲಿ ಇದ್ದೇವೆ. ನಾವು ಮುಂದುವರೆದಿದ್ದೇವೆ. ಹಿಂದಿನದಕ್ಕಿಂತ ಎಷ್ಟೋ ಸುಧಾರಿಸಿದ್ದೇವೆಂಬ ಅತಿಯಾದ ಭ್ರಮೆಯಲ್ಲಿ ತೇಲುವಾಗ ನಮಗೆ ಕೆಲವು ಸತ್ಯಗಳು ಗೋಚರವಾಗುತ್ತವೆ. ನಾನು, ನನ್ನ ತಂದೆ, ನನ್ನ ತಾತ, ಅದರ ಹಿಂದಿನ ತಲೆಮಾರು ಒಟ್ಟಾರೆ ಸರಿಸುಮಾರು ೪ ತಲೆಮಾರುಗಳಿಗೆ ಹೋಲಿಸಿಕೊಂಡರೆ ನಾವು ಹೇಗೆ ಮುಂದುವರೆದಿದ್ದೇವೆ, ಏನೆಲ್ಲಾ ಬದಲಾವಣೆಗಳಾಗಿವೆ, ನಿಜವಾಗಲೂ ನಮ್ಮ ಅವಶ್ಯಕತೆಗಳೇನೆ ನಮಗೆ ಮನದಟ್ಟಾಗುತ್ತದೆ.

ನಮ್ಮ ತಾತ ರೈತನಾಗಿ ಅಪ್ಪನನ್ನು ವಿದ್ಯಾವಂತನಾಗಿ ಮಾಡುವ ಭರದಲ್ಲಿ ನಿಜವಾದ ಮೌಲ್ಯಗಳನ್ನು ತಿಳಿಸಲು ವಿಫಲನಾಗುತ್ತಾನೆ. ತಾನು ದುಡಿದು ತನ್ನ ಮಗನನ್ನು ನೆರಳಿನಲ್ಲಿ ಓದಿಸಲು ಹವಣಿಸುತ್ತಾನೆ. ತನಗೆ ಅನ್ನ ಕೊಡುವ ಕೆಲಸವನ್ನೇ, ಸಕಲ ಜೀವರಾಶಿಯನ್ನು ಸಲಹುವ ಭೂತಾಯಿಯ ಉಳುಮೆಯನ್ನೇ ಕೀಳರಿಮೆ ಎಂದೇ ಭಾವಿಸಿರುತ್ತಾನೆ. ತನ್ನ ಮಗ ವಿದ್ಯಾಂತನಾಗಬೇಕು. ನನ್ನ ಕಷ್ಟಕರ ಜೀವನ ಅವನಿಗೆ ಕಿಂಚಿತ್ತೂ ಸೋಕಬಾರದು ಎಂದು ತನ್ನ ಉಳುಮೆ, ಬಿತ್ತನೆ, ಫಸಲು ತೆಗೆಯುವ ಬಗೆ ಅವನಿಗೆ ತಿಳಿಸುವುದಿಲ್ಲ. ಮಗ ಆಸಕ್ತಿ ತೋರಿದರೂ ಈ ಬೇಡದೇ ಇರೋ ಉಸಾಬರಿ ನಿಂಗ್ಯಾಕಪ್ಪ? ಚೆನ್ನಾಗಿ ಓದಿಕೋಪ್ಪ ಎಂದು ಹೇಳಿ ಮಗನನ್ನು ನಿಜವಾದ ಜೀವನದ ಮೌಲ್ಯಗಳಿಂದ ವಂಚಿತನಾಗುವಂತೆ ಮಾಡುತ್ತಾ ಮಗನನ್ನು ಪುಸ್ತಕದ ಹುಳ ಮಾಡುತ್ತಾನೆ.

ಹೀಗೆ ಜೀವನ ಸಾಗುತ್ತಾ ಮಗನಿಗೆ ಒಂದು ಒಳ್ಳೆಯ ನೌಕರಿ ಸಿಕ್ಕಿ, ಪಟ್ಟಣದಲ್ಲಿ ಮಗ ಸಂಸಾರ ನೌಕೆ ಎಳೆಯುವಷ್ಟರಲ್ಲಿ ತಂದೆ ಇಹಲೋಕ ತ್ಯಜಿಸುತ್ತಾನೆ. ಮಗ ನೆರಳಿನ ಜೀವನಕ್ಕೆ ಒಗ್ಗಿ ಹೋಗಿರುತ್ತಾನೆ. ತಂದೆಯ ಜಮೀನನ್ನು ಇನ್ನೊಬ್ಬರ ಪಾಲು ಮಾಡಿ ಅಂದರೆ ಪಾಲಿಗೋ, ವಾರಕ್ಕೋ ಕೊಟ್ಟು ತನ್ನ ಕೆಲಸ ಇದಲ್ಲವೆಂದು ಕೈತೊಳೆದುಕೊಳ್ಳುತ್ತಾನೆ. ತೆಗೆದುಕೊಂಡವನು ಎಷ್ಟು ಫಸಲು ತೆಗೆಯುತ್ತಾನೋ, ಹೇಗೆ ಬೆಳೆಯುತ್ತಾನೋ ಅನ್ನೋ ಅರಿವು ಇಲ್ಲದೇ ತನಗೆ ದಕ್ಕಿದಷ್ಟೇ ಪಾಲನ್ನು ತನಗೆ ಸಿಕ್ಕ ಮೃಷ್ಟಾನವೆಂದುಕೊಳ್ಳುತ್ತಾನೆ. ಅದರಲ್ಲಿ ಅವನಿಗೆ ಜ್ಞಾನೋದಯವಾಗಿ ಪಾಲು ಕೊಟ್ಟವನನ್ನು ವಿಚಾರಿಸಿದರೆ ಅವನು ’ಮಳೆ ಇಲ್ಲಾ ಸ್ವಾಮಿ, ಯಾರೂ ಕೆಲಸಕ್ಕೆ ಬರಲ್ಲ, ಜಾಸ್ತಿ ಬೇಕೆಂದರೆ ನೀವೆ ಮಾಡಿಸಿಕೊಳ್ಳಿ ಸ್ವಾಮಿ’ ಅನ್ನೋ ಮಾತು ಕೇಳುತ್ತಲೇ ಇವನಿಗೆ ಮೂರ್ಛೆ ಬಂದಂತಾಗುತ್ತದೆ.

ನಂತರ ತನ್ನ ಮಗನಿಗೆ ತಾನು ಮಾಡುವ ನೌಕರಿಗಿಂತ ಇನ್ನೂ ಉನ್ನತವಾದ ನೌಕರಿ ಮಾಡು ಎಂದು ಬೋಧಿಸುತ್ತಾನೆ. ಇನ್ನು ಹಳ್ಳಿಯ ಪರಿಸರ, ವ್ಯವಸಾಯದ ಮೌಲ್ಯಗಳು ತಿಳಿಯದೆ ಇವನು ತನ್ನ ಮಗನಿಗೆ ಇನ್ನೇನನ್ನು ತಿಳಿಸಿಯಾನು? ಅದರ ಗಂಧವೇ ಅರಿಯದ ಮಗ ಮುಂದೊಂದು ದಿನ ತನ್ನ ಅಪ್ಪ, ತಾತರ ಹೆಸರಿನಲ್ಲಿದ್ದ ಜಮೀನನ್ನು ಮಾರಿ ತನ್ನ ವ್ಯಾಪಾರ-ವಹಿವಾಟುಗಳಿಗೆ ಉಪಯೋಗಿಸಿಕೊಂಡು ತನ್ನ ಹಳ್ಳಿಯೆಂಬ ಕೊಂಡಿಯನ್ನೇ ಕತ್ತರಿಸಿಕೊಳ್ಳುತ್ತಾನೆ.

 

ಹಳ್ಳಿ, ಜಮೀನು, ಬೇಸಾಯ ಇವೆಲ್ಲವೂ ವಿದ್ಯಾವಂತವರಿಗಲ್ಲ. ಎಲ್ಲವೂ ಅನಕ್ಷರಸ್ಥರಾಗಿ, ಅಲ್ಪಸ್ವಲ್ಪ ಓದಿದವರಿಗೆ ಎಂಬ ಭಾವನೆ ಗಟ್ಟಿಯಾಗಿ ಬೇರೂರಿರುತ್ತದೆ.

ಇನ್ನು ಹಳ್ಳಿಯಲ್ಲಿ ಉಳಿದ ರೈತರು ಹೆಣ್ಣು ಮಕ್ಕಳನ್ನು ಮದುವೆ ಮಾಡುವಾಗ ರೈತನ ಮಗ ಎಂದರೆ ಮೂಗು ಮುರಿದು, ಇಂಜಿನಿಯರ್ ಎಂದರೆ ಮೇಲಕ್ಕೆ ಹಾರಿ ಕೆಳಕ್ಕೆ ಬಿದ್ದು ಹೆಣ್ಣು ಮಕ್ಕಳನ್ನು ಮದುವೆ ಮಾಡುತ್ತಾರೆ. ತಮಗೂ ಹೀಗೇ ಮಾಡಿದ್ದರೆ ಮದುವೆ ಆಗುತ್ತಿತ್ತೇ ಎಂಬ ಆಲೋಚನೆಗಳು ಸಹ ಅವರನ್ನು ಕಾಡದಷ್ಟು ಕುರುಡರಾಗುತ್ತಾರೆ.

ಎಲ್ಲಾ ರೈತರು ತಮ್ಮ ಮಕ್ಕಳಿಗೆ ವಿದ್ಯಾಭ್ಯಾಸವನ್ನು ಕೊಡಿಸುವುದರಲ್ಲಿ ಪಟ್ಟಣಿಗರನ್ನು ಹಿಂದಿಕ್ಕಿದ್ದಾರೆ. ವಿಪರ್ಯಾಸವೆಂದರೆ, ಹೆಣ್ಣು ಮಕ್ಕಳು ಓದುತ್ತಾರೆ, ಕೆಲವು ಗಂಡು ಮಕ್ಕಳು ಮಾತ್ರ ಹಿಂದುಳಿಯುತ್ತಾರೆ. ಆದರೆ ಜೀವನದ ಮೌಲ್ಯಗಳನ್ನು ಧಾರೆ ಎರೆಯುವುದರಲ್ಲಿ ಎಡವುತ್ತಾರೆ.

ಹೆಣ್ಣು ಮಕ್ಕಳ ಮದುವೆ ಸರದಿ ಮುಗಿದು, ಗಂಡು ಮಕ್ಕಳ ಸರದಿ ಬಂದಾಗ ಬೇರೆಯವರು ಹಳ್ಳಿಗೆ ನಮ್ಮ ಹೆಣ್ಣು ಮಕ್ಕಳನ್ನು ಕೊಡುವುದಿಲ್ಲವೆಂದಾಗ ತಮ್ಮ ತಪ್ಪಿನ ಅರಿವಾಗುತ್ತದೆ. ಪಟ್ಟಣದವರು ಹಾಗೊಮ್ಮೆ ಹೀಗೊಮ್ಮೆ ನಮ್ಮ ತಂದೆ ತಾಯಿಗಳು ದವಸ ಧಾನ್ಯಗಳನ್ನು ಹೇಗೆ ಬೆಳೆಯುತ್ತಿದ್ದರು ಎಂದು, ನಮ್ಮ ತಾತ, ಅಜ್ಜ ಎಷ್ಟು ಗಟ್ಟಿಯಾಗಿದ್ದರು ಎಂದು ಬೀಗುತ್ತಾ, ಮತ್ತೆ ಯಾಂತ್ರಿಕ ಜೀವನದಲ್ಲಿ ಮುಳುಗಿ ತಮ್ಮತನವನ್ನು ಕಳೆದುಕೊಂಡು ಮಕ್ಕಳಿಗೆ ಓದದಿದ್ದಾಗ ನೀನು ಓದಲಿಲ್ಲವೆಂದರೆ ಊರಲ್ಲಿರುವ ಪಾಳು ಜಮೀನೇ ಗತಿ ಎಂದು ಜಮೀನನ್ನು ಗುಮ್ಮನ ರೀತಿ ಹೋಲಿಸುತ್ತಾರೆ. ಈ ಕೀಳರಿಮೆ ಮಕ್ಕಳಿಗೆ ಹಳ್ಳಿಯ ಚಿತ್ರಣ, ಅಲ್ಲಿನ ಪರಿಸರವನ್ನು ಭಯ, ಕೀಳರಿಮೆ ಹುಟ್ಟಿಸಿ ಇನ್ನಷ್ಟು ದಿಗ್ಮೂಢರಾಗಿಸುತ್ತದೆ.

ಎಷ್ಟೇ ಓದಿ ವಿದ್ಯಾವಂತರಾದರೂ ನಮಗೆ ತಿನ್ನಲು ಅನ್ನ, ಕುಡಿಯಲು ನೀರು ಬೇಕೇ ಬೇಕು. ಈಗಿನ ನಾಗರೀಕ ಜನರು ಶುದ್ಧವಾದ ನೀರಿಗೆ, ಸ್ವಚ್ಛ ಗಾಳಿಗೆ, ರಾಸಾಯನಿಕ ರಹಿತ ಊಟಕ್ಕೆ ಹಂಬಲಿಸುತ್ತಾರೆ.

ನಾವು ಜೀವನವನ್ನು ಸರಳವಾಗಿ ಮಾಡಿಕೊಳ್ಳುವ ಭರದಲ್ಲಿ ಚಿಂತೆಯನ್ನು, ರೋಗವನ್ನು ಬರಮಾಡಿಕೊಳ್ಳುತ್ತಿದ್ದೇವೆ. ಎಲ್ಲವೂ ಸುಲಭವಾಗುತ್ತಿರುವಾಗ ಮನಸ್ಸು ತಾಂತ್ರಿಕ ವಿದ್ಯಮಾನಗಳ ಗೀಳಿಗೆ ಬಲಿಯಾಗುತ್ತಿದೆ. ಎಲ್ಲವೂ ಯಂತ್ರೋಪಕರಣಗಳಿಂದ ಸರಳವಾಗುತ್ತಿರುವಾಗ ದೇಹ ಆಲಸ್ಯ, ಸೋಮಾರಿತನದ ಗೂಡಾಗುತ್ತಿದೆ. ಮನಸ್ಸು ಕುಚೇಷ್ಟೆಗಳ ಬೆನ್ನೇರಿರುತ್ತಿದೆ.

ಈಗಿನ ಕಾಲಮಾನದಲ್ಲಿ ಯುವ ಪೀಳಿಗೆ ನಮ್ಮ ಹಿಂದಿನ ೩-೪ ತಲೆಮಾರುಗಳನ್ನು ಆಶ್ಚರ್ಯಚಕಿತರಾಗಿ ಅಂದರೆ ವಿದ್ಯುತ್, ಟಿವಿ, ಮೊಬೈಲ್, ವಾಟ್ಸ್ ಆಪ್ ಗೊತ್ತಿರಲಿಲ್ಲವಲ್ಲ ಎಂದು ಕೇಳಿ ಪಿಳಿಪಿಳಿ ಕಣ್ಣು ಬಿಟ್ಟು ಕೇಕೆ ಹಾಕುತ್ತಿದ್ದಾರೆ. ತುಂಬಾ ದೂರ ಕ್ರಮಿಸಿ ಮತ್ತೆ ನಮ್ಮನ್ನು ನಾವೇ ನೋಡಿ ನಗುವಂತಾಗಿದೆ. ಇದೇ ವಿಪರ್ಯಾಸದ ಬದುಕು. ಯಾವ ನಾಗರೀಕತೆಗೆ ನಮ್ಮ ಹಿಂದಿನವರು ಬೆರಗಾಗಿದ್ದರೋ, ಅದನ್ನು ಮೀರಿ ಮತ್ತೆ ಹಳೆಯ ಜೀವನಕ್ಕೆ ಹಾತೊರೆಯುವಂತಾಗುವ ದಿನಗಳಿಗೆ ನಾವು ಹೆಚ್ಚು ಹೊತ್ತು ಕಾಯಬೇಕಿಲ್ಲವೆಂದೆನಿಸುತ್ತದೆ. ನಾವು ಇಷ್ಟು ದೂರ ಕ್ರಮಿಸಲು ತೆಗೆದುಕೊಂಡ ಸಮಯವು ನಮಗೆ ಬೇಕಾಗುವುದಿಲ್ಲ ಹಿಂತಿರುಗಲು ಮತ್ತೆ ನಮ್ಮ ಗೂಡಿಗೆ, ಮರಳಿ ಮಣ್ಣಿಗೆ.

ಒಂದು ಕಾಲದಲ್ಲಿ ಅಲ್ಪಸ್ವಲ್ಪ ಸಿಗುವ ವಿದ್ಯುತ್ ಬೆಳಕಿಗೆ ಖುಷಿಪಟ್ಟು ಕುಣಿದಾಡುತ್ತಿದ್ದೆವು. ಈಗ ವಿದ್ಯುತ್ ಅನ್ನುವುದು ಸರ್ವೇ ಸಾಮಾನ್ಯದಂತಾಗಿದೆ. ಈಗ ಮೇಣದ ಬತ್ತಿಯ ಊಟವೇ ವಿಶೇಷವಾಗಿದೆ. ಹಿಂದೆ ಮೂರ್ಖರ ಪೆಟ್ಟಿಗೆ (ಟಿವಿ)ಯನ್ನು ನೋಡಿ ಜನ ಹೇಗೆ ಬೆರಗಾಗಿದ್ದರೋ ಈಗ ಅದು ಸರ್ವೆ ಸಾಮಾನ್ಯ, ಅತಿ ಸಾಮಾನ್ಯನ ಬೇಸಿಕ್ ನೀಡ್ ಆಗಿದೆ. ವಾರದ ಮೊದಲ ದಿನ ಬರುವ ಒಂದು ಭಾನುವಾರದ ಸಿನಿಮಾಗಾಗಿ ಕುತೂಹಲದಿಂದ ಕಾಯುತ್ತಿದ್ದವರು ಈಗ ವಾಕರಿಕೆ ಬರುವಷ್ಟರಮಟ್ಟಿಗೆ ಚಾನೆಲ್, ೨೪x೭ ಪ್ರಸಾರ ಮಾಡುವ ಸಿನಿಮಾ ಚಾನೆಲ್‌ಗಳನ್ನು ನೋಡಿ ಜನ ತಲೆನೋವೆಂದು ಟಿವಿಯನ್ನು ಸ್ಥಗಿತಗೊಳಿಸುತ್ತಿದ್ದಾರೆ.

ಹಿಂದೆ ಫೋನ್ ಅಂದರೆ ಅದು ಒಂದು ಅದ್ಬುತ. ಹೇಗೆ ಈ ಅಶರೀರವಾಣಿಯ ಕಾರ್ಯವೈಖರಿ ಎಂದುಕೊಳ್ಳುತ್ತಿದ್ದವರು. ಈಗ ಅದು ಕಾಲ ಕಸವಾಗಿದೆ. ಎಲ್ಲವನ್ನೂ ಅವಶ್ಯಕತೆಗಳಿಗಿಂತ ಹೆಚ್ಚಾಗಿ ಉಪಯೋಗಿಸುತ್ತಾ ಅದರ ಮೌಲ್ಯಗಳು ಮುಕ್ಕಾಗುವಂತೆ, ಹೆಚ್ಚಾದರೆ ಅಮೃತವೂ ವಿಷವಾಗುವಂತೆ, ಅದರ ಸಾಧಕ ಬಾಧಕಗಳನ್ನು ವಿಶ್ಲೇಷಿಸಿ, ಅದರ ಬಾಧಕಗಳ ನಿಯಂತ್ರಣಕ್ಕೆ ತಂದು ಮುಂದಿನ ಪೀಳಿಗೆ ಮೇಲೆ ಆಗುವ ದುಷ್ಪರಿಣಾಮಗಳನ್ನು ಮನಗಂಡು ಅದರ ನಿಯಂತ್ರಣಕ್ಕೆ ಹೊಸ ಆವಿಷ್ಕಾರವನ್ನು ಹುಡುಕಲು ಮನುಷ್ಯ ಮತ್ತೆ ಹೆಣಗಾಡುತ್ತಿದ್ದಾನೆ. ಹಿಂದಿನ ಏನೂ ಇಲ್ಲದ ಜೀವನವೇ ಆನಂದದಾಯಕವಾಗುತ್ತಿತ್ತು ಎಂದು ಕೊರಗುತ್ತಿದ್ದಾನೆ.

ಆದರೂ ಒಂದು ರೀತಿಯ ಬದಲಾವಣೆಗಳು ಹುಟ್ಟಿಕೊಳ್ಳುತ್ತಿರುವುದು ಸುಳ್ಳಲ್ಲ. ಕನ್ನಡದ ಒಂದು ತಿಥಿ ಸಿನಿಮಾವನ್ನು ಎಷ್ಟೋ ಜನರು ನೋಡಿ ಮೆಚ್ಚಿಕೊಂಡಿದ್ದಾರೆ. ಏನೂ ಆಡಂಬರವಿಲ್ಲದ, ದೃಶ್ಯಗಳನ್ನು ವೈಭವೀಕರಿಸದ, ದಿನನಿತ್ಯ ಬಳಕೆಯ ಸಂಭಾಷಣೆಯಿಂದ ಕೂಡಿದ ಒಂದು ಸಾಮಾನ್ಯ ಸಿನಿಮಾ. ಅಂದರೆ ಮತ್ತೆ ಮತ್ತೆ ನಾವು ಮುಂದುವರೆದಿದ್ದೇವೆ ಎಂದು ಅಲ್ಲಲ್ಲಿ ಸುತ್ತುತ್ತಿದ್ದೇವೆ. ನಾವು ಎಲ್ಲಿ ಕಳೆದುಹೋಗಿಲ್ಲ, ಕಳೆದು ಹೋಗಿದ್ದೇವೆ ಎನ್ನುವ ಭ್ರಮೆಯಲ್ಲಿದ್ದೇವೆ.

ಸ್ಚಚ್ಛ ಗಾಳಿಗಾಗಿ ದೆಹಲಿಯ ಜನ ಹಂಬಲಿಸುತ್ತಿದ್ದಾರೆ. ಕೃತಕ ಸ್ವಚ್ಛ ಪರಿಸರದ ಗಾಳಿಯ ಪಾರ್ಕ್‌ಗಳನ್ನು ನಿರ್ಮಿಸಿಕೊಳ್ಳುತ್ತಿದ್ದಾರೆ. ಇಂಥ ಪರಿಸ್ಥಿತಿಗೆ ಬೆಂಗಳೂರು, ಹೈದರಾಬಾದ್ ಜನ ಹೆಚ್ಚು ದಿನ ಕಾಯಬೇಕಾಗಿಲ್ಲ. ಕಾರಣ ಹೆಚ್ಚು ವಾಹನಗಳ ದಟ್ಟಣೆ ಕೂಡಿರುವ ಪ್ರದೇಶಗಳಲ್ಲಿ ನಮ್ಮ ಈ ಎರಡೂ ರಾಜ್ಯಗಳೂ ಮುಂಚೂಣಿಯಲ್ಲಿವೆ.

ಪಟ್ಟಣದಲ್ಲಿ ಬೆಂಕಿಪೊಟ್ಟಣದ ಮನೆಗಳಲ್ಲಿ ವಾಸಿಸುತ್ತಿದ್ದವನಿಗೆ ದೂರ ಪರಿಸರದ ಸ್ವಚ್ಛ ಗಾಳಿಯಲ್ಲಿ, ಹಕ್ಕಿಗಳ ಕಲರವದಲ್ಲಿ ಹೆಂಚಿನ ಮನೆ ಮಾಡಿ ಜೀವಿಸುವುದರ ಬಗ್ಗೆ ಮನಸ್ಸು ಹಾತೊರೆಯುತ್ತಿದೆ. ಎಲ್ಲಾ ತರಹದ ಮೃಷ್ಟಾನ್ನ ಉಂಡರೂ, ಹಳ್ಳಿಯ ಅಂಬಲಿ ನೆನಪಾಗುತ್ತಿದೆ. ಆ ರುಚಿಗಾಗಿ ಕೊರಗುತ್ತಿದ್ದಾನೆ. ಸುಖದ ಸುಪ್ಪತ್ತಿಗೆ ಇದ್ದರೂ ಆಚೆ ಹಜಾರದಲ್ಲಿ ಈಚಲು ಚಾಪೆಯಲ್ಲಿ ಚಂದ್ರನ ನೋಡುತ್ತಾ ಮಲಗುತ್ತಿದ್ದ ದಿನಗಳು ಬಾಧಿಸುತ್ತ್ತಿವೆ. ಎಲ್ಲವೂ ಇದ್ದರೂ ಏನೂ ಇಲ್ಲವೆಂಬ ಭಾವನೆ ಕಾಡುತ್ತಿದೆ.

ಬಹುತೇಕ ಜನರು ಅದರಲ್ಲೂ ಯುವ ಪೀಳಿಗೆ ಪಟ್ಟಣಗಳಿಗೆ ವಲಸೆ ಬಂದು ಕೆಲವರು ಮಾತ್ರ ಹಳ್ಳಿಗಳಲ್ಲಿ ಇದ್ದಾರೆಂಬ ಆತಂಕವಿದ್ದಾಗಲೇ ನಮಗೆ ಮತ್ತೆ ಕೆಲವರಲ್ಲಿ ಆ ಸೆಳೆತವಿದೆ ಎಂಬ ಆಶಾಕಿರಣ ಸಂತೋಷವನ್ನು ಮೂಡಿಸುತ್ತಿದೆ. ನಮ್ಮ ದೇಶ ಹಳ್ಳಿಗಳ ದೇಶ ಎಂಬ ಮಾತು ಒಕ್ಕಣೆಯಾಗದೆ ನಿಜವಾಗಲಿ.

ಎಲ್ಲರೂ ಪಟ್ಟಣಗಳಿಗೆ ಬಂದರೆ ಮುಂದೊಂದು ದಿನ ಅನ್ನ ಬೆಳೆಯುವ ರೈತನೇ ರಾಜನಾಗುತ್ತಾನೆ. ಯಾರನ್ನು ನಾವು ಸ್ಥಿತಿವಂತರು ಎಂದು ಸೋಕಾಲ್ಡ್ ಎಜುಕೇಟೆಡ್ಸ್ (ಡಾಕ್ಟರ್, ಇಂಜಿನಿಯರ್, ಮ್ಯಾನೇಜರ್ ಇತ್ಯಾದಿ) ಇವರನ್ನು ಆಳಬಲ್ಲವನಾಗುತ್ತಾನೆ. ಅವರ ಕಾಂಚಾಣ ಇವನ ಮನೆಯ ತೋರಣವಾಗುತ್ತದೆ, ರಾಸುಗಳಿಗೆ ನೆಲದ ಹಾಸಾಗುತ್ತದೆ. ಇದು ತುಂಬಾ ದೂರವಿಲ್ಲ. ನಮ್ಮನ್ನು ನಾವು ಬಡಿದೆಚ್ಚರಿಸಿಕೊಳ್ಳಬೇಕು. ಜಾಗೃತಗೊಳಿಸಬೇಕು. ನಮ್ಮ ಮನೆ ಮನಗಳಲ್ಲಿ ಅರಿವು ಮೂಡಿಸಬೇಕು.

ವಿದ್ಯಾವಂತರಾಗೋಣ. ಅದಕ್ಕಿಂತ ಹೆಚ್ಚಾಗಿ ವಿನಯವಂತರಾಗೋಣ. ಜೀವನದ ಮೌಲ್ಯಗಳು, ಸಂಸ್ಕಾರಗಳನ್ನು ಮೈಗೂಡಿಸಿಕೊಳ್ಳೋಣ. ಸ್ನೇಹಿತರೇ, ಎಲ್ಲರೂ ಯೋಚಿಸಲು ಪ್ರಾರಂಭಿಸಿ. ನಮಗೆ ನಿಜವಾದ ಅವಶ್ಯಕತೆಗಳು ಏನು ಎಂಬುದು. ಅಳಿದು ಹೋಗುವ ಈ ದೇಹ ಏನನ್ನಾದರೂ ಯುವ ಪೀಳಿಗೆಗೆ ಉಳಿಸುವಂತಾಗಲಿ. ಭೂಮಿಗೆಲ್ಲ ನೆಲದ ಹಾಸು ಹಾಕಲು ಸಾಧ್ಯವಿಲ್ಲವೆಂದರೆ, ನಾವಾದರೂ ಚಪ್ಪಲಿಯನ್ನು ಹಾಕಿಕೊಳ್ಳೋಣ. ಕೊನೇ ಪಕ್ಷ ನಮ್ಮನ್ನು ನಾವು ಉದ್ಧಾರ ಮಾಡಿಕೊಳ್ಳೋಣ.

 

 -ವಿಭಾ ರಾಗೌ

Vibhadivya25@gmail.com

 

 

Enjoyed this article? Stay informed by joining our newsletter!

Comments

You must be logged in to post a comment.

About Author