ಆರೋಗ್ಯ ವರ್ಧನೆಗೆ ಆಯಿಲ್‌ ಪುಲ್ಲಿಂಗ್‌ ( Oil pulling ).

ಆರೋಗ್ಯ ವರ್ಧನೆಗೆ ಆಯಿಲ್‌ ಪುಲ್ಲಿಂಗ್‌ ( Oil pulling ).

 

ಬಾಯಲ್ಲಿ ಎಣ್ಣೆ ಹಾಕಿಕೊಂಡು ಮುಕ್ಕಳಿಸುವ ಆಯಿಲ್ ಪುಲ್ಲಿಂಗ್ ಎಂಬ ನಾಟಿ ಪದ್ಧತಿ ಈಚಿನ ದಿನಗಳಲ್ಲಿ ಅತ್ಯಂತ ಆರೋಗ್ಯಕರ ಅಭ್ಯಾಸವಾಗಿ ಜನಪ್ರಿಯವಾಗುತ್ತಿದೆ. ಹಲ್ಲು, ವಸಡು ಹಾಗೂ ದವಡೆಯ ಆರೋಗ್ಯ ಕಾಪಾಡುವಲ್ಲಿ ಮತ್ತು ದಂತ ಕುಳಿ, ಬಾಯಿ ದುರ್ವಾಸನೆ ತಡೆಯುವಲ್ಲಿ ಆಯಿಲ್ ಪುಲ್ಲಿಂಗ್ ಅತ್ಯಂತ ಪರಿಣಾಮಕಾರಿ ಎಂಬುದಕ್ಕೆ ವೈಜ್ಞಾನಿಕ ಸಂಶೋಧನೆಗಳೂ ಪುರಾವೆ ನೀಡಿವೆ. ದಿನಕ್ಕೆರಡು ಸಲ ಹಲ್ಲುಜ್ಜುವಂತೆ ಆಯಿಲ್ ಪುಲ್ಲಿಂಗ್ ಅನ್ನು ಸಹ ನಿಯಮಿತವಾಗಿ ಮಾಡುವುದನ್ನು ರೂಢಿಸಿಕೊಂಡರೆ, ಇದು ಕೇವಲ ಬಾಯಿ ಹಾಗೂ ದಂತ ಆರೋಗ್ಯಕ್ಕಷ್ಟೇ ಅಲ್ಲ ಸಮಗ್ರ ಆರೋಗ್ಯಕ್ಕೂ ಉತ್ತಮ.

 

ಸಂಸ್ಕರಿಸದ ( non refained ) ಅಂದರೆ ಗಾಣದ ಎಣ್ಣೆ ( cold pressed ) ಎಣ್ಣೆಯನ್ನು ಹಲವು ನಿಮಿಷಗಳ ಕಾಲ ಬಾಯಿಯಲ್ಲಿ ಇಟ್ಟುಕೊಂಡು ಎಲ್ಲೆಡೆ ತಗಲುವಂತೆ ಓಡಾಡಿಸುವುದು ಅಥವಾ ಮುಕ್ಕಳಿಸುವುದನ್ನು ಆಯಿಲ್ ಪುಲ್ಲಿಂಗ್ ಎನ್ನಲಾಗುತ್ತದೆ.

 

ಮೊದಲಿಗೆ ಒಂದು ಚಮಚ ಕೊಬ್ಬರಿ ಎಣ್ಣೆ / ಸಾಸಿವೆ ಎಣ್ಣೆ / ಎಳ್ಳೆಣ್ಣೆ / ಕಡಲೆಕಾಯಿ ಎಣ್ಣೆ / ಆಲಿವ್ ಎಣ್ಣೆ ಯನ್ನು ತೆಗೆದುಕೊಳ್ಳಿ. ಸಂಸ್ಕರಣೆಗೆ ಒಳಪಡದ (ರಿಫೈನ್ಡ್ ಮಾಡದ) ಯಾವುದೇ ಎಣ್ಣೆಯಾದರೂ ಅಡುಗೆ ಎಣ್ಣೆ ಆದೀತು. ಸಾಧ್ಯವಾದಷ್ಟು ಗಾಣದ ಎಣ್ಣೆ ಉಪಯೋಗಿಸಿ. ಎಳ್ಳೆಣ್ಣೆ ಅತ್ಯುತ್ತಮ ಎಂದು ಆಯುರ್ವೇದದಲ್ಲಿ ತಿಳಿಸಲಾಗಿದೆ. ಎಣ್ಣೆಯನ್ನು ಬಾಯಿಗೆ ಹಾಕಿಕೊಂಡು ಇಡೀ ಬಾಯಿಯ ತುಂಬ ಎಣ್ಣೆಯನ್ನು ಓಡಾಡಿಸಿ. ಎಣ್ಣೆ ಹಲ್ಲುಗಳ ಒಳಗಿನಿಂದಲೂ ಓಡಾಡಲಿ. ಮುಖ ಹಾಗೂ ಗಂಟಲಿನ ಸ್ನಾಯುಗಳನ್ನು ಬಳಸಿ ಹೀಗೆ ಮಾಡಬಹುದು.

 

ಎಣ್ಣೆಯನ್ನು ಸುಮಾರು 10 - 15 ನಿಮಿಷ ಇಟ್ಟುಕೊಳ್ಳಲು ಪ್ರಯತ್ನಿಸಿ. ಮೊದಲಿಗೆ ಎಷ್ಟಾಗುತ್ತೋ ಅಷ್ಟೇ ಹೊತ್ತು ಇಟ್ಟುಕೊಳ್ಳಿ. ಈ ಎಣ್ಣೆ ಜತೆ ಎಂಜಲು ಸೇರಿ ಎಣ್ಣೆ ತೆಳುವಾಗುತ್ತದೆ ಹಾಗೂ ಬಿಳಿಯದಾಗುತ್ತದೆ. ಈ ಎಣ್ಣೆಯು ಬಾಯಿ ಹಾಗೂ ದೇಹದ ವಿಷಕಾರಕಗಳನ್ನು ಹೀರಿಕೊಂಡಿರುತ್ತದೆ. ಆದ್ದರಿಂದ ಈ ಎಣ್ಣೆಯನ್ನು ನುಂಗದಂತೆ ಜಾಗ್ರತೆ ವಹಿಸಿ. ನಂತರ ಬಾಯಿಯಲ್ಲಿರುವ ಎಣ್ಣೆಯನ್ನು ಉಗುಳಿಬಿಡಿ. ಕೂಡಲೇ ಶುದ್ಧ ನೀರನ್ನು ಬಾಯಿಯಲ್ಲಿ ಹಾಕಿ ಮುಕ್ಕಳಿಸಿ ಬಾಯಲ್ಲಿ ಎಣ್ಣೆ ಸ್ವಲ್ಪವೂ ಇರದಂತೆ ಹೊರಹಾಕಿ. ನಂತರ ಹುಲ್ಲುಜ್ಜಿ, ನಾಲಿಗೆಯನ್ನೂ ಸ್ವಚ್ಛಗೊಳಿಸಿಕೊಳ್ಳಿ. ಎಣ್ಣೆ ಜತೆ ಅರಿಶಿಣ ಸೇರಿಸಿದರೆ ಇನ್ನೂ ಉತ್ತಮ ಫಲಿತಾಂಶ ಪಡೆಯಬಹುದಾಗಿದೆ.

 

ಆಯಿಲ್ ಪುಲ್ಲಿಂಗ್ ಅನ್ನು ದಿನದ ಯಾವ ಹೊತ್ತಿನಲ್ಲಾದರೂ ಮಾಡಬಹುದು. ಸಾಂಪ್ರದಾಯಿಕವಾಗಿ ಬೆಳಗ್ಗೆ ಖಾಲಿ ಹೊಟ್ಟೆಯಲ್ಲಿ ಮಾಡುವಂತೆ ಸಲಹೆ ನೀಡಲಾಗುತ್ತದೆ. ರಾತ್ರಿ ಮಲಗುವ ಮುನ್ನ ಮಾಡುವುದೂ ಒಳ್ಳೆಯದು. ಏಕೆಂದರೆ ರಾತ್ರಿ ಸ್ವಚ್ಛ ಬಾಯಿಯೊಂದಿಗೆ ಮಲಗುವುದರಿಂದ ದಂತಕುಳಿ ಮತ್ತಿತರ ತೊಂದರೆಗಳು ಕಡಿಮೆಯಾಗುತ್ತವೆ. ಹಲ್ಲು- ದವಡೆ ಹಾಗೂ ಉಸಿರಿನ ದುರ್ವಾಸನೆ ಸಮಸ್ಯೆಯಿರುವವರು ದಿನಕ್ಕೆ 2 ಸಲ ಮಾಡಬಹುದು.

 

ಒಮ್ಮೆ ಆಯಿಲ್ ಪುಲ್ಲಿಂಗ್ ಮಾಡಿ ಬಾಯಿ ಸ್ವಚ್ಛಗೊಳಿಸಿದ ನಂತರ 20 - 30 ನಿಮಿಷ ಬಿಟ್ಟು ನಂತರವೇ ಆಹಾರ ಸೇವನೆ ಮಾಡಬೇಕು.

 

ಆಯಿಲ್ ಪುಲ್ಲಿಂಗ್‌ನಲ್ಲಿ ಬಳಸುವ ಎಣ್ಣೆ ಹಾಗೂ ಅರಿಶಿಣದಿಂದ ಹಲವು ಆರೋಗ್ಯ ಲಾಭಗಳಿವೆ. ಇವು ಬಾಯಿಯಲ್ಲಿನ ತ್ವಚೆಯಿಂದ ವಿಷಕಾರಕಗಳನ್ನು ಹೀರಿಕೊಳ್ಳುತ್ತವೆ. ಎಣ್ಣೆಯು ಲಿಪೊಫಿಲಿಕ್ ( liphophilic ) ಆಗಿದ್ದು, ಇದು ಇತರ ಎಣ್ಣೆಗಳನ್ನು ಆಕರ್ಷಿಸುತ್ತದೆ. ನಮ್ಮ ತ್ವಚೆಯ ಕೊಬ್ಬಿನ ಪದರುಗಳಲ್ಲಿ ವಿಷಕಾರಕಗಳು ಅಡಗಿಕೊಂಡಿರುವುದರಿಂದ ಇವನ್ನು ಎಣ್ಣೆ ಹೀರಿಕೊಳ್ಳುವ ಮೂಲಕ ವಿಷಕಾರಕಗಳನ್ನು ದೇಹದಿಂದ ಹೊರಕ್ಕೆ ಹಾಕುತ್ತದೆ.

 

ಆಯುರ್ವೇದದಲ್ಲಿ..

 

ಆಯಿಲ್ ಪುಲ್ಲಿಂಗ್ ಎಂಬುದು ಭಾರತೀಯ ನಾಟಿ ವೈದ್ಯಕೀಯ ಪದ್ಧತಿಯಲ್ಲಿ ಹೆಚ್ಚು ಪ್ರಚಲಿತದಲ್ಲಿದ್ದರೂ ಚರಕ ಸಂಹಿತೆಯಲ್ಲೂ ಇಂಥದೇ ಎರಡು ಪದ್ಧತಿಗಳ ಉಲ್ಲೇಖವಿದೆ. ಬಾಯಿ ಸ್ವಚ್ಛಗೊಳಿಸುವ ಎರಡು ಪದ್ಧತಿಗಳನ್ನು ಗಂಡುಷಾ ಹಾಗೂ ಕವಳ ಗೃಹ ಎಂದು ವಿಭಾಗಿಸಲಾಗಿದೆ. ಇವು ತಲೆನೋವು, ಮಧುಮೇಹ, ಆಸ್ತಮಾ ಸೇರಿದಂತೆ 30 ವಿವಿಧ ರೋಗಗಳಿಗೆ ಮತ್ತು ದೋಷಗಳಿಗೆ ಪರಿಹಾರ ನೀಡುತ್ತದೆ ಎಂದು ಹೇಳಲಾಗಿದೆ. ಗಂಡುಷಾದಲ್ಲಿ ಬಾಯಿಗೆ ಗಿಡಮೂಲಿಕೆ ಭರಿತ ದ್ರವವನ್ನು ಹಾಕಿ ಮೂರರಿಂದ ಐದು ನಿಮಿಷಗಳ ಕಾಲ ಬಿಡಲಾಗುತ್ತದೆ. ಆದರೆ ಕವಳ ಗೃಹ ಪದ್ಧತಿಯಲ್ಲಿ ಬಾಯಿಯಲ್ಲಿ ಎಷ್ಟು ಸಾಧ್ಯವೋ ಅಷ್ಟೇ ಪ್ರಮಾಣದ ದ್ರವವನ್ನು ಹಾಕಿ ಮೂರು ನಿಮಿಷಗಳ ಕಾಲ ಬಿಟ್ಟು ಮುಕ್ಕಳಿಸಿ ಉಗುಳಲಾಗುತ್ತದೆ. ಇದು ರುಚಿ ಗ್ರಂಥಿಗಳನ್ನು ಉತ್ತೇಜಿಸುತ್ತದೆ, ಬಾಯಿ ತಾಜಾ ಎನಿಸುವಂತೆ ಮಾಡುತ್ತದೆಯಲ್ಲದೇ ಮನಸ್ಸಿಗೂ ಆಹ್ಲಾದ ನೀಡುತ್ತದೆ. ಈ ಬಾಯಿ ಸ್ವಚ್ಛಗೊಳಿಸುವ ಪದ್ಧತಿ ಉಸಿರು ದುರ್ವಾಸನೆ, ಶುಷ್ಕ ಮುಖ, ಬಾಯಿರುಚಿ ಇಲ್ಲದಿರುವುದು ಮತ್ತಿತರ ತೊಂದರೆಗಳನ್ನು ಹಾಗೂ ಕಫ ದೋಷವನ್ನು ನಿವಾರಿಸುತ್ತದೆ ಎನ್ನಲಾಗಿದೆ.

 

ಆಯಿಲ್ ಪುಲ್ಲಿಂಗ್‌ನ ಪರಿಣಾಮಗಳ ಕುರಿತು ನಡೆದ ಸಂಶೋಧನೆಗಳು ಆಯಿಲ್ ಪುಲ್ಲಿಂಗ್ ವಸಡು ರೋಗದ ಮೊದಲ ಹಂತ ( Gingivitis ) ಅನ್ನು ಕಡಿಮೆ ಮಾಡುತ್ತದೆ ಎಂಬುದನ್ನು ದೃಢಪಡಿಸಿದೆ. ಆಯಿಲ್ ಪುಲ್ಲಿಂಗ್‌ನಿಂದ ಜಿಂಗಜಿವಿಟಿಸ್‌ಗೆ ಕಾರಣವಾಗುವ ಬ್ಯಾಕ್ಟೀರಿಯಾಗಳು ನಾಶವಾಗುತ್ತವೆ.

 

ಆಯಿಲ್ ಪುಲ್ಲಿಂಗ್ ನಿಂದಾಗುವ ಪ್ರಯೋಜನಗಳು.

 

- ಸ್ವಚ್ಛ ಬಾಯಿ ಹಾಗೂ ತಾಜಾ ಉಸಿರು

 

- ಬಿಳಿ ಹಲ್ಲು ( ಅದೂ ಯಾವುದೇ ರಾಸಾಯನಿಕ ವೈಟ್‌ನರ್‌ಗಳನ್ನು ಬಳಸಿ ಹಲ್ಲು ಹಾಳುಮಾಡಿಕೊಳ್ಳದೆ)

 

- ಹಲ್ಲಿನ ಮೇಲಿನ ಕಂದು ಕಲೆಗಳ ನಿರ್ಮೂಲನೆ

 

- ಒಟ್ಟಾರೆ ಹಲ್ಲಿನ ಆರೋಗ್ಯದ ಸುಧಾರಣೆ

 

- ವಸಡಿನಿಂದ ರಕ್ತಸ್ರಾವವಾಗುವುದಕ್ಕೆ ತಡೆ

 

- ಗಂಟಲು ಒಣಗುವಿಕೆ ಶಮನ

 

- ತುಟಿ ಒಡೆಯುವುದಕ್ಕೆ ತಡೆ

 

- ಮೈಗ್ರೇನ್ ತಲೆನೋವಿಗೆ ತಡೆ ಉಂಟಾಗುತ್ತದೆ.

 

- ದೈಹಿಕ ಸಾಮರ್ಥ್ಯ ಹಾಗೂ ಮಾನಸಿಕ ಶಕ್ತಿಯಲ್ಲಿ ವರ್ಧನೆ ಉಂಟಾಗುತ್ತದೆ

 

- ಸಂಧಿವಾತ ಹಾಗೂ ಮರಗಟ್ಟಿದಂತಾಗುವುದನ್ನು ಕಡಿಮೆ ಮಾಡುತ್ತದೆ.

 

- ಮೂಗು ಹಾಗೂ ಸೈನಸ್ ಕಟ್ಟುವಿಕೆ ಪ್ರಮಾಣದಲ್ಲಿ ಇಳಿಕೆಯಾಗುತ್ತದೆ ಹಾಗೂ ಗೊರಕೆಯೂ ಕಡಿಮೆಯಾಗುತ್ತದೆ.

 

- ಇನ್ನೂ ಬಹು ಮುಖ್ಯವಾಗಿ, ಮುಖದಲ್ಲಿ ವಯೋಸಹಜ ಮೂಡುವ ನೆರಿಗೆಗಳನ್ನು ಹೋಗಲಾಡಿಸಿ, ಮುಖ ಯೌವನ ಹಾಗೂ ಕಾಂತಿಯುತವಾಗಿ ಇರುವುದು.

 

ಲೇಖನ :- ಮಂಜುನಾಥ್ ಪ್ರಸಾದ್.

Enjoyed this article? Stay informed by joining our newsletter!

Comments

You must be logged in to post a comment.

About Author