ಸುಧಾರಣೆಗಳ ಹರಿಕಾರ, ಸಾಧನೆಗಳ ಸರದಾರ ಬಿಪಿನ್ ರಾವತ್

ಡಿಸೆಂಬರ್ ೮ ಭಾರತದ ಪಾಲಿಗೆ ದುರ್ದಿನವೆಂದೇ ಹೇಳಬಹುದು. ಶತ್ರುಗಳಿಗೆ ಸಿಂಹ ಸ್ವಪ್ನವಾಗಿದ್ದ ಸಂಯುಕ್ತ ರಕ್ಷಣಾ ಸೇವೆಯ ಮುಖ್ಯಸ್ಥ ಬಿಪಿನ್ ರಾವತ್ ತಮಿಳುನಾಡಿನ ಕುನೂರಿನ ಬಳಿ ಸಂಭವಿಸಿದ ಹೆಲಿಕಾಪ್ಟರ್ ದುರಂತದಲ್ಲಿ ಹುತಾತ್ಮರಾದ ದಿನ. ಅಪ್ರತಿಮ ದೇಶಭಕ್ತ ರಾವತ್, ಭಾರತದ ತಂಟೆಗೆ ಬಂದ ಚೀನಾ ಮತ್ತು ಪಾಕಿಸ್ಥಾನಕ್ಕೆ ಸರಿಯಾದ ಪಾಠ ಕಲಿಸಿದ್ದರು. ಎಂತಹ ಕ್ಲಿಷ್ಟಕರ ಸನ್ನಿವೇಶದಲ್ಲಿಯೂ ಸಹ ಭಾರತದ ಸೈನ್ಯವನ್ನು ಅತ್ಯಾಧುನಿಕ ಶಸ್ತ್ರಾಸ್ತ್ರಗಳಿಂದ ಸಜ್ಜುಗೊಳಿಸಿ ಸದಾ ಜಾಗೃತವಾಗಿಟ್ಟಿದ್ದರು. 

63 ವರ್ಷz ಬಿಪಿನ್ ಲಕ್ಷ್ಮಣ ಸಿಂಗ್ ರಾವತ್ ಉತ್ತರಕಾಂಡ್ ರಾಜ್ಯದ ಪೌರಿ ಎಂಬಲ್ಲಿ ರಜಪೂತ ಕುಟುಂಬದಲ್ಲಿ ಜನಿಸಿದರು. ಡೆಹ್ರಾಡೂನ್ ಮತ್ತು ಶಿಮ್ಲಾದಲ್ಲಿ ಶಿಕ್ಷಣ ಪಡೆದು ದೇಶಸೇವೆ ಮಾಡುವ ಉದ್ದೇಶದಿಂದಲೇ ಭಾರತೀಯ ಮಿಲಿಟರಿ ಅಕಾಡೆಮಿ ಸೇರಿ ಸೈನಿಕ ಶಿಕ್ಷಣ ಪಡೆದರು. ನಂತರ ಡಿಫೆನ್ಸ್ ಸರ‍್ವೀಸಸ್ ಸ್ಟಾಫ್ ಕಾಲೇಜಿನಲ್ಲಿ ಪದವೀಧರರಾಗಿ ಹೊರಹೊಮ್ಮಿದರು. ಡಿಫೆನ್ಸ್ ವಿಷಯದಲ್ಲಿ ಡಾಕ್ಟರೇಟ್ ಪಡೆದದ್ದು ಇವರ ಹೆಗ್ಗಳಿಕೆಯಾಗಿದೆ. ಭಾರತೀಯ ಸೈನ್ಯದಲ್ಲಿ ಅನೇಕ ಉನ್ನತ ಹುದ್ದೆಗಳನ್ನಲಂಕರಿಸಿ, ಅಪರಿಮಿತ ಸೇವೆ ಸಲ್ಲಿಸಿದ ಹೆಗ್ಗಳಿಕೆ ಅವರದ್ದು. ಲೆಫ್ಟಿನೆಂಟ್ ಜನರಲ್ಲಾಗಿ ಸೇವೆಸಲ್ಲಿಸಿ ನಂತರ ಭಾರತೀಯ ಸೈನ್ಯದ ಮುಖ್ಯಸ್ಥರಾಗಿ 2017ರಲ್ಲಿ ನಿಯುಕ್ತರಾದರು.  ಇವರ ದಕ್ಷತೆ, ಪ್ರಾಮಾಣಿಕತೆ, ಶೌರ್ಯ ಮತ್ತು ದೇಶಪ್ರೇಮವನ್ನು ಗುರುತಿಸಿ ಸರ್ಕಾರ 2019, ಡಿಸೆಂಬರ್ 30 ರಂದು ರಾವತ್ ಅವರನ್ನು ಮೂರೂ ರಕ್ಷಣಾಪಡೆಗಳ ಮುಖ್ಯಸ್ಥರನ್ನಾಗಿ ನೇಮಿಸಿತು. 

ಬಿಪಿನ್ ರಾವತ್ ಅವರ ಸೇವೆಯನ್ನು ಗುರುತಿಸಿ, ಅವರಿಗೆ ಪರಮ್ ವಿಶಿಷ್ಟ ಸೇವಾಪದಕ, ಉತ್ತಮ ಯುದ್ಧ ಸೇವಾ ಪದಕ, ಅತಿ ವಿಶಿಷ್ಟ ಸೇವಾಪದಕ, ಯುದ್ಧ ಸೇವಾಪದಕ, ವಿದೇಶ ಸೇವಾ ಪದಕ ಹೀಗೆ ಹಲವಾರು ಅತ್ಯುತ್ತಮ ಸೇವಾ ಪದಕಗಳು ಅವರನ್ನರಸಿಕೊಂಡು ಬಂದಿದ್ದವು. ಸ್ಟಾಫ್ ಸಮಿತಿಯ ೫೭ನೆಯ ಅಧ್ಯಕ್ಷರಾಗಿ, ೨೬ನೇ ಸೇನಾ ಮುಖ್ಯಸ್ಥರಾಗಿ, ಮೊದಲ ರಕ್ಷಣಾಪಡೆಗಳ ಮುಖ್ಯಸ್ಥರಾಗಿ ಸೇವೆ ಸಲ್ಲಿಸುವ ಭಾಗ್ಯ ರಾವತ್ ಅವರಿಗೆ ಒಲಿದು ಬಂದಿತ್ತು. 

ಬಿಪಿನ್ ರಾವತ್ ಅವರ ತಂದೆ ಲಕ್ಷ್ಮಣ್ ಸಿಂಗ್ ರಾವತ್ ಸಹ ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ಆಗಿ ಸೇವೆ ಸಲ್ಲಿಸಿ ನಿವೃತ್ತರಾದವರೇ. ಭಾರತೀಯ ಸೈನ್ಯದಲ್ಲಿ ಇವರು ಒಟ್ಟು 43 ವರ್ಷಗಳ ಸೇವೆ ಸಲ್ಲಿಸಿದ ಹಗ್ಗಳಿಕೆ ಇವರದ್ದು. ಇವರೊಟ್ಟಿಗೆ ಇವರ ಪತ್ನಿ ಮಧುಲಿಕಾರಾಜೇ ಸಿಂಗ್ ಸಹ ನಿಧನರಾದದದ್ದು ಶೋಚನೀಯ. ಮಧುಲಿಕಾ ಅವರು ರಕ್ಷಣಾ ಪಡೆ ಅಧಿಕಾರಿಗಳ ಪತ್ನಿಯರ ಸಂಘದ ಅಧ್ಯಕ್ಷರಾಗಿ ಸೇವೆ ಸಲ್ಲಿಸುತ್ತಿದ್ದರು. ಇವರಿಗೆ ಕೃತ್ತಿಕಾ ಮತ್ತು ತಾರಿಣಿ ಎಂಬ ಇಬ್ಬರು ಹೆಣ್ಣು ಮಕ್ಖಳಿದ್ದಾರೆ. ರಾವತ್ ಅವರು ನೇಪಾಳೀ ಸೈನ್ಯದ ಗೌರವ ಜನರಲ್ ಆಗಿದ್ದುದು ಇವರ ಶ್ರೇಷ್ಠತೆಯನ್ನು ಎತ್ತಿ ತೋರಿಸುತ್ತದೆ. 

1987ರಲ್ಲಿ ಸೊಮ್ ದೊರಾಂಗ್ಚು ಕಣಿವೆಯಲ್ಲಿ ಚೀನೀ ಸೈನಿಕರು ಕಾಣಿಸಿಕೊಂಡಾಗ ಅವರನ್ನು ಸಮರ್ಥವಾಗಿ ಹಿಮ್ಮೆಟ್ಟಿಸಿದ್ದು ರಾವತ್ ಅವರೇ. ಅಷ್ಟೇ ಅಲ್ಲ, ನೇಪಾಳ, ಬಾಂಗ್ಲಾದೇಶ, ಭೂತಾನ್, ಮೈನ್‌ಮಾರ್, ಕಜಕಿಸ್ಥಾನ್, ಟರ‍್ಕಮೆನಿ ಸ್ತಾನ್, ಶ್ರೀಲಂಕ, ರಷ್ಯಾ, ವಿಯಟ್ನಾಂ, ಟಾಂಜೇನಿಯಾ, ಕೆನ್ಯಾ, ಅಮೇರಿಕಾ, ಮಾಲ್ಡೀವ್ಸ್ ದೇಶಗಳ ಸೇನಾ ನೆಲೆಗಳಿಗೆ ಭೇಟಿನೀಡಿ ದ್ವಿಪಕ್ಷೀಯ ಮಾತುಕತೆ ನಡೆಸಿದ್ದೂ ಸಹ ಇದೆ. ಪಾಕಿಸ್ತಾನದ ಬಾಲ್ ಕೋಟ್‌ನಲ್ಲಿ ಜೈಶ್-ಇ-ಮೊಹಮದ್ ಉಗ್ರ ಕೇಂದ್ರದ ಮೇಲೆ ಫೆಬ್ರವರಿ 2019ರಲ್ಲಿ ಸರ್ಜಿಕಲ್ ದಾಳಿ ನಡೆದಾಗಿ ರಾವತ್ ಭಾರತೀಯ ಸೈನ್ಯದ ಮುಖ್ಯಸ್ಥರಾಗಿದ್ದರು. ಅದಕ್ಕೂ ಮುನ್ನ 2015ರಲ್ಲಿ ಮೈನ್ಮಾರ್ ಗಡಿಯಲ್ಲಿಯೂ ಸರ್ಜಿಕಲ್ ಸ್ಟ್ರೈಕ್ ಮಾಡಿ ಅಕ್ರಮವಾಗಿ ದೇಶದೊಳಗೆ ನುಸುಳುವುದನ್ನು ತಡೆಗಟ್ಟಿದ್ದರು. 

ಸದಾ ಅವರು ತಮ್ಮ ಸೈನಿಕರಿಗೆ ಹೇಳುತ್ತಿದ್ದುದಿಷ್ಟೆ,  ತತ್ವ ಸಿದ್ದಾಂತಗಳು ನಮಗೆ ಸಾಂಸ್ಥಿಕ ಆತ್ಮ ಸಾಕ್ಷಿಯನ್ನು ನೀಡುತ್ತದೆ, ಒಂದು ವಿಶಿಷ್ಟ ಪಾತ್ರ ಮತ್ತು ಎಲ್ಲಕ್ಕಿಂತ ಹೆಚ್ಚಾಗಿ ಒಂದು ಅನನ್ಯ ಗುರುತನ್ನು ನೀಡುತ್ತದೆ. ಆದ್ದರಿಂದ ನಾವು ಜನರಿಂದ ಭಿನ್ನವಾಗಿರಬೇಕಾದ ಸಂದರ್ಭಗಳಿವೆ. ಏಕೆಂದರೆ ನಾವು ವಿಭಿನ್ನವಾಗಿ ವರ್ತಿಸುವ ನಿರೀಕ್ಷೆಯಿದೆ.

ಶತ್ರುಗಳ ಎದೆಯಲ್ಲಿ ನಡುಕವನ್ನುಂಟು ಮಾಡಿ, ದೇಶವನ್ನು ವಿದೇಶಿ ಧಾಳಿಯಿಂದ ರಕ್ಷಿಸಿದ ರಾವತ್ ವಿಧಿಯಿಂದ ತಮ್ಮನ್ನು ರಕ್ಷಿಸಿಕೊಳ್ಳಲು ಸಾಧ್ಯವಾಗಲಿಲ್ಲವಲ್ಲಾ ಎಂಬ ನೋವು ನಮ್ಮೆಲ್ಲರನ್ನೂ ಕಾಡುವುದು ಸಹಜ. ಆದರೂ ಇವರ ಸೇವೆ, ಶೌರ್ಯ, ದೇಶಪ್ರೇಮ, ಇವೆಲ್ಲ ನಮ್ಮ ಯುವಕರಿಗೆ ಸ್ಫೂರ್ತಿ ನೀಡಿದರೆ ಅದೇ ನಾವವರಿಗೆ ಸಲ್ಲಿಸುವ ಶ್ರದ್ಧಾಂಜಲಿ.

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author