Featured Image Source: healthline
ಸ್ವಾತಂತ್ರ್ಯ ಅಮೃತ ಮಹೋತ್ಸವ ಯಾರು ಹೇಗೆ ಆಚರಿಸಿದರೆ ಅದಕ್ಕೊಂದು ಸಾರ್ಥಕತೆ ಬರುತ್ತದೆ...........
ಧ್ವಜ ಹಾರಾಟ, ರಾಷ್ಟ್ರ ಗೀತೆಯ ಹಾಡುಗಾರಿಕೆ, ಜೈ ಭಾರತ್ ಘೋಷಣೆಗಳನ್ನು ಮೀರಿ ಇನ್ನೇನಾದರೂ ಮಾಡುವ ಸಂಕಲ್ಪವಿದೆಯೇ...
75 ವರ್ಷಗಳ ಸ್ವಾತಂತ್ರ್ಯದ ಈ ನೆನಪಿನಲ್ಲಿ ನಾವು ದೇಶಕ್ಕೆ ಕೊಡಬಹುದಾದ ಕೊಡುಗೆ ಏನು......
ಮೊದಲನೆಯದಾಗಿ,
ದೇಶದಲ್ಲಿ ಸಂಪೂರ್ಣ ಸಂಪರ್ಕ ಜಾಲ ಹೊಂದಿ ಇಲ್ಲಿನ ಸಂಪನ್ಮೂಲಗಳು ಮತ್ತು ಅಧಿಕಾರವನ್ನು ಹೊಂದಿ ಆರ್ಥಿಕ ಭದ್ರತೆಯಿಂದ ಇರುವುದರಲ್ಲಿ ಉತ್ತಮವಾಗಿರುವ ಕೇಂದ್ರ ಮತ್ತು ರಾಜ್ಯ ಸರ್ಕಾರದ ಅಧಿಕಾರಿಗಳು ಏನು ಮಾಡಬಹುದು ಎಂಬ ಪ್ರಶ್ನೆಗೆ ಉತ್ತರ ಹುಡುಕಿದಾಗ ....
ಕನಿಷ್ಠ ಈ ವರ್ಷದ ಮಟ್ಟಿಗೆ ಸ್ವಾತಂತ್ರ್ಯದ ಬಲಿದಾನಗಳ ತ್ಯಾಗಕ್ಕೆ ಪ್ರತಿಯಾಗಿ ಈ ಅಧಿಕಾರಿಗಳು ಯಾವುದೇ ಒತ್ತಾಯಪೂರ್ವಕವಾಗಿ ಲಂಚ ಸ್ವೀಕರಿಸಬಾರದು ( ಲಂಚ ತೆಗೆದುಕೊಳ್ಳುತ್ತಿರುವ ಅಧಿಕಾರಿಗಳಿಗೆ ಮಾತ್ರ ) ಅವರಾಗೇ ಕೊಟ್ಟರೆ ಅಥವಾ ಇನ್ಯಾರೋ ಶ್ರೀಮಂತರು ಎಂದು ಗೊತ್ತಾದಾಗ ಸ್ವಲ್ಪ ಲಂಚ ಸ್ವೀಕರಿಸಬಹುದು. ಏಕೆಂದರೆ ಪ್ರಾಯೋಗಿಕವಾಗಿ ಯೋಚಿಸಿದಾಗ ದಿಢೀರನೆ ನಾಳೆಯಿಂದಲೇ ಲಂಚ ಮುಕ್ತ ಮಾಡುವುದು ಅಸಾಧ್ಯ. ಕನಿಷ್ಠ ಈ ನೆಪದಲ್ಲಿಯಾದರೂ ಸ್ವಲ್ಪ ಸುಧಾರಣೆಯಾಗಲಿ ಎಂಬ ಆಶಯ. ಯಾವುದೇ ಅಭ್ಯಾಸಗಳನ್ನು ಅದರಲ್ಲೂ ಆರ್ಥಿಕ ಆದಾಯಗಳನ್ನು ತಕ್ಷಣ ನಿಲ್ಲಿಸಿದರೆ ಸ್ವಲ್ಪ ತೊಂದರೆಯಾಗುತ್ತದೆ ಮತ್ತು ಅದು ಜಾರಿಯಾಗುವುದೇ ಇಲ್ಲ. ನಿಧಾನವಾಗಿ ಸ್ವಲ್ಪ ಸ್ವಲ್ಪ ಸುಧಾರಣೆ ಮಾಡಿಕೊಂಡು ಹೋಗಬೇಕಾಗುತ್ತದೆ.
ಇಷ್ಟು ಮಾಡಿದರೆ ಈ ಅಮೃತ ಮಹೋತ್ಸವದ ವರ್ಷದಲ್ಲಿ ದೇಶಕ್ಕೆ ಎಷ್ಟೋ ಮಹತ್ವದ ಕೊಡುಗೆ ನೀಡಿದಂತಾಗುತ್ತದೆ. ಭ್ರಷ್ಟಾಚಾರದಿಂದ ರೋಸಿ ಹೋದ ಜನ ಸ್ವಲ್ಪ ನಿಟ್ಟುಸಿರು ಬಿಡುತ್ತಾರೆ ಮತ್ತು ದೇಶದ ಬಗ್ಗೆ ಹೆಮ್ಮೆ ಪಡುತ್ತಾರೆ. ಸರ್ಕಾರಿ ನೌಕರರೇ ನಿಮ್ಮಿಂದ ಕೇವಲ ಒಂದು ವರ್ಷ ಇಷ್ಟಾದರೂ ತ್ಯಾಗ ಮಾಡಬಹುದಲ್ಲವೇ. ದಯವಿಟ್ಟು ಯೋಚಿಸಿ. ಇದರಿಂದ ನೀವು ಕಳೆದುಕೊಳ್ಳುವುದು ಏನೂ ಇಲ್ಲ. ದೇಶಕ್ಕೆ ಒಂದು ಬಹುದೊಡ್ಡ ಸಂದೇಶ ನೀಡಿದಂತಾಗುತ್ತದೆ.
ಎರಡನೆಯದಾಗಿ, ಸಮಾಜ ಸೇವೆಯ ಹೆಸರಿನಲ್ಲಿ ರಾಜಕೀಯ ಪ್ರವೇಶಿಸಿರುವ ಜನ ಪ್ರತಿನಿಧಿಗಳು ಇನ್ನು ಮುಂದೆ ಈ ವರ್ಷ ನಡೆಯುವ ಚುನಾವಣೆಯಲ್ಲಿ ಸೋತರೂ ಪರವಾಗಿಲ್ಲ ಸ್ವಾತಂತ್ರ್ಯದ ಈ ಅಮೃತ ಮಹೋತ್ಸವದ ಅಂಗವಾಗಿ ಚುನಾವಣೆಯಲ್ಲಿ ಈಗಿನಂತೆ ಹಣವನ್ನು ನೀರಿನಂತೆ ಚೆಲ್ಲದೆ ಬೆಂಬಲಿಗರ ಕನಿಷ್ಠ ಊಟ ತಿಂಡಿ ಪ್ರಚಾರ ಸಾಮಗ್ರಿಗಳು ಮತ್ತು ದಿನನಿತ್ಯದ ಖರ್ಚುಗಳನ್ನು ಮಾತ್ರ ಮಾಡುತ್ತೇನೆ. ನನ್ನ ಪ್ರತಿಸ್ಪರ್ಧಿ ಇದನ್ನು ನೋಡಿಯೂ ಅದನ್ನು ಪಾಲಿಸದೆ ಹಣವನ್ನು ಯಥೇಚ್ಛವಾಗಿ ಖರ್ಚು ಮಾಡಿ ಸ್ವಾತಂತ್ರ್ಯ ಅಮೃತ ಮಹೋತ್ಸವಕ್ಕೆ ಅವಮಾನ ಮಾಡಿದರೂ ನಾನು ಮಾತ್ರ ಈ ಬಾರಿ ಆ ತಪ್ಪು ಮಾಡುವುದಿಲ್ಲ ಮತ್ತು ಜನರಿಗೆ ನನ್ನ ಯೋಜನೆಗಳ ಮೂಲಕವೇ ಮನವರಿಕೆ ಮಾಡಿಕೊಡಲು ಪ್ರಯತ್ನಿಸುತ್ತೇನೆ. ಜೊತೆಗೆ ಒಂದು ವೇಳೆ ಸೋಲಾದರೆ ತಾಯ್ನಾಡಿನ ಹೆಸರಿನಲ್ಲಿ ವೀರ ಸೋಲು ಒಪ್ಪಿಕೊಳ್ಳಲು ಸಿದ್ದನಿದ್ದೇನೆ ಎಂದು ಆತ್ಮಸಾಕ್ಷಿಯ ಪ್ರತಿಜ್ಞೆ ಮಾಡಿ ಹಾಗೇ ನಡೆದುಕೊಳ್ಳಬೇಕು. ಒಮ್ಮೆ ದೇಶಕ್ಕಾಗಿ ಸೋತರೆ ಜೀವವೇನು ಹೋಗುವುದಿಲ್ಲ. ದೇಶಕ್ಕೆ ಮಾಡಿದ ತ್ಯಾಗದಿಂದ ಆತ್ಮ ತೃಪ್ತಿ ಸಿಗುತ್ತದೆ. ಇಡೀ ದೇಶದ ಜನ ಸಮೂಹ ಈಗ ರಾಜಕಾರಣಿಗಳ ಬಗ್ಗೆ ಇರುವ ಆಕ್ರೋಶ ಮರೆತು ನಿಮ್ಮನ್ನು ಗೌರವಿಸುತ್ತಾರೆ. ದೇಶಕ್ಕೆ ಪ್ರಾಣ ತ್ಯಾಗ ಬಯಸುತ್ತಿಲ್ಲ. ಕೇವಲ ಗರಿಷ್ಠ ಒಂದು ಸೋಲಿನ ಸಾಧ್ಯತೆ ಮಾತ್ರ. ಅದನ್ನು ಪೂರೈಸಬಾರದೇ.
ದಯವಿಟ್ಟು ಯೋಚಿಸಿ.
ಮೂರನೆಯದಾಗಿ,
ಮತದಾರರು.....
ಶ್ರೀಮಂತರು ಮತ್ತು ಮೇಲ್ಮಧ್ಯಮ ವರ್ಗದವರು ಎಂದಿಗೂ ಓಟಿಗಾಗಿ ಯಾರು ಎಷ್ಟೇ ಹಣ ನೀಡಿದರು ಪಡೆಯಬಾರದು. ಅದು ನಿಮ್ಮ ಜವಾಬ್ದಾರಿ ಮತ್ತು ಕರ್ತವ್ಯ. ಮಧ್ಯಮ ವರ್ಗದವರು ಮತ್ತು ಕೆಳ ಮಧ್ಯಮ ವರ್ಗದವರು ಕನಿಷ್ಠ ಈ ಅಮೃತ ಮಹೋತ್ಸವದ ವರ್ಷದಲ್ಲಿ ಎಷ್ಟೇ ಕಷ್ಟ ಆದರೂ ಚುನಾವಣೆಯಲ್ಲಿ ಯಾವುದೇ ರೀತಿಯ ಹಣ ಧರ್ಮ ಜಾತಿ ಮುಂತಾದ ಆಮಿಷಕ್ಕೆ ಬಲಿಯಾಗದೆ ಮತ ಚಲಾಯಿಸಿ ಸ್ವಾತಂತ್ರ್ಯದ ತ್ಯಾಗ ಬಲಿದಾನಗಳಿಗೆ ಕೃತಜ್ಞತೆ ಸಲ್ಲಿಸಬೇಕು. ಇಂದು ಸ್ವಲ್ಪವಾದರೂ ನೆಮ್ಮದಿಯಾಗಿ ಸ್ವತಂತ್ರವಾಗಿ ಜೀವನ ಮಾಡುತ್ತಿದ್ದರೆ ಅದಕ್ಕೆ ಸ್ವಾತಂತ್ರ್ಯ ಹೋರಾಟಗಾರರೇ ಕಾರಣ. ಅವರ ಋಣ ತೀರಿಸಬೇಕು.
ಇನ್ನು ಬಡವರು ಚುನಾವಣಾ ಸಂದರ್ಭದಲ್ಲಿ ಯಾರೇ ಯಾವುದೇ ಕಾರಣದಿಂದ ಎಷ್ಟೇ ಹಣ ವಸ್ತುಗಳು ಏನೇ ಕೊಡಲಿ ಅವುಗಳನ್ನು ಸ್ವೀಕರಿಸಿ ತಮ್ಮ ಕಷ್ಟಗಳನ್ನು ಸ್ವಲ್ಪವಾದರೂ ಪರಿಹರಿಸಿಕೊಳ್ಳಬೇಕು. ಆದರೆ ಯಾರು ಹಣ ಮತ್ತು ಇತರ ವಸ್ತುಗಳನ್ನು ಕೊಟ್ಟರೋ ಅವರನ್ನು ದ್ರೋಹಿಗಳು ಎಂದು ಪರಿಗಣಿಸಿ ಹಣ ನೀಡದ ವ್ಯಕ್ತಿಗೆ ಮತ ಹಾಕಬೇಕು. ಹೇಗಿದ್ದರೂ ಇದು ಗುಪ್ತ ಮತದಾನ. ಯಾರಿಗೂ ತಿಳಿಯುವುದಿಲ್ಲ. ಒಂದು ವೇಳೆ ಎಲ್ಲರೂ ಹಣ ನೀಡಿದರೆ ಅತ್ಯಂತ ಕಡಿಮೆ ಹಣ ನೀಡಿದ ವ್ಯಕ್ತಿಗೆ ಮತ ಚಲಾಯಿಸಬೇಕು. ಆಗ ಮುಂದಿನ ಚುನಾವಣೆಯಲ್ಲಿ ಅಭ್ಯರ್ಥಿಗಳು ಹಣ ಕೊಡಲು ಹಿಂದೇಟು ಹಾಕಬಹುದು. ಬಡವರು ಪ್ರಜಾಪ್ರಭುತ್ವದ ರಕ್ಷಣೆಗೆ ಕನಿಷ್ಠ ಇಷ್ಟಾದರೂ ಪ್ರಯತ್ನಿಸಲಿ. ಅಂದರೆ ಹಣ ನೀಡದ ವ್ಯಕ್ತಿಗೆ ಮತ ಚಲಾಯಿಸುವ ಮೂಲಕ ಸ್ವಾತಂತ್ರ್ಯ ಅಮೃತ ಮಹೋತ್ಸವದ ಸಂದರ್ಭದಲ್ಲಿ ಬಡವರಿಂದ ದೇಶಕ್ಕೆ ಒಂದು ಸಂದೇಶ ರವಾನೆಯಾಗಲಿ.
ಈ ಅಮೃತ ಮಹೋತ್ಸವದ ಸಂದರ್ಭದಲ್ಲಿ ಸಮಾಜದ ಇನ್ನೂ ಹಲವಾರು ವರ್ಗದವರು ಹೇಗೆ ಇದನ್ನು ಆಚರಿಸಬಹುದು ಎಂಬುದನ್ನು ಮುಂದಿನ ದಿನಗಳಲ್ಲಿ ಚರ್ಚಿಸೋಣ.
ಕೇವಲ ಧ್ವಜ ಡಿಪಿ ಮಾಡಿಕೊಳ್ಳುವುದು ಮುಂತಾದ ಆಚರಣೆಗಳಿಂದ ತೋರಿಕೆ ಹೊರತುಪಡಿಸಿ ಹೆಚ್ಚಿನ ಪ್ರಯೋಜನವಿಲ್ಲ. ಅಂತರಂಗದ ಜಾಗೃತಿ ಮೂಡಿದರೆ ಮತ್ತು ಅದರಂತೆ ನಡೆದುಕೊಂಡರೆ ಮಾತ್ರ ಸ್ವಲ್ಪ ಬದಲಾವಣೆ ಸಾಧ್ಯ ಮತ್ತು ಅದೇ ನಿಜವಾದ ಕೊಡುಗೆ. " ಎದೆಯ ದನಿಗೂ ಮಿಗಿಲಾದ ಶಾಸ್ತ್ರವಿವುದೇ " ಎಂಬ ಕವಿವಾಣಿಯಂತೆ ನಾವು ನಡೆದುಕೊಳ್ಳಬೇಕು.
ಇಲ್ಲದಿದ್ದರೆ ಅಪ್ಪ ಅಮ್ಮ ಮಕ್ಕಳು ಪ್ರತಿದಿನ ಗುಡ್ ಮಾರ್ನಿಂಗ್ ಎಂದು ಹೇಳಿಕೊಂಡಷ್ಟೇ ಕೃತಕವಾಗುತ್ತದೆ ಧ್ವಜಗಳ ವಿಜೃಂಭಣೆ. ಏಕೆಂದರೆ ತಂದೆ ತಾಯಿ ಮಕ್ಕಳ ಶುಭೋದಯದ ಹಾರೈಕೆ ಅದು ಜೀವಿತದ ಕೊನೆಯವರೆಗೂ ಬಯಸುವುದೇ ಆಗಿದೆ. ಅದನ್ನು ಹೊರಗೆ ಹೇಳಿಕೊಳ್ಳುವ ಅವಶ್ಯಕತೆ ಇಲ್ಲ. ಹಾಗೆಯೇ ಧ್ವಜ ವಂದನೆ ರಾಷ್ಟ್ರಗೀತೆ ಮತ್ತು ಜೈ ಭಾರತ್ ಘೋಷಣೆಗಳು ಸದಾ ನಮ್ಮ ಎದೆಯ ಧ್ವನಿಗಳು. ಅವು ಮೊಳಗುತ್ತಲೇ ಇರುತ್ತದೆ. ಅದರ ಮೂಲಕ ದೇಶ ಭಕ್ತಿಯನ್ನು ನಿರೂಪಿಸಬೇಕಾಗಿಲ್ಲ. ಭಾರತವಲ್ಲದೇ ನಮಗೆ ಬೇರೆ ಯಾವ ದೇಶವಿದೆ. ಆದ್ದರಿಂದ ನಮ್ಮ ನಡವಳಿಕೆಗಳ ಮೂಲಕ ಕೃತಜ್ಞತೆ ಸಲ್ಲಿಸಿ ಜೊತೆಗೆ ಬಲಿಷ್ಠ ಮತ್ತು ಮಾನವೀಯ ಮೌಲ್ಯಗಳ ಭಾರತ ನಿರ್ಮಿಸಲು ನಾವೆಲ್ಲರೂ ಆತ್ಮಸಾಕ್ಷಿಯಾಗಿ ಸಂಕಲ್ಪ ಮಾಡೋಣ.
ದೇಶ ಭಕ್ತಿ ಎಂಬುದು ಧ್ವಜ ಹಾಡು ಘೋಷಣೆಯಲ್ಲ.
ಅದು ನಮ್ಮ ರಕ್ತ ಮಾಂಸ ಉಸಿರು ನರ ನಾಡಿಗಳಲ್ಲಿ ಸಹಜವಾಗಿ ಅಡಗಿರುವ ಒಂದು ನಡವಳಿಕೆ.
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ,
ವಿವೇಕಾನಂದ ಹೆಚ್.ಕೆ.
9844013068......
You must be logged in to post a comment.