ದಿವಾಳಿತನದ ಹಾದಿಯಲ್ಲಿ ಶ್ರೀಲಂಕಾ.....

ದಿವಾಳಿತನದ ಹೊಸ್ತಿಲಲ್ಲಿ ಶ್ರೀಲಂಕಾ.....

 

ಭಾರತ ದೊಡ್ಡ ಮಟ್ಟದ ಸಹಾಯ ಹಸ್ತ ಚಾಚಬಹುದೇ.......!!??

 

ವಿಶ್ವದ ಕೆಲವೇ ಸುಂದರ ದ್ವೀಪ ಪ್ರದೇಶಗಳಲ್ಲಿ ನಮ್ಮ ನೆರೆಯ ಶ್ರೀಲಂಕಾ ದೇಶವು ಒಂದು. ಈ‌ ಸಿಂಹಳೀಯರ ದೇಶದ ಬಹಳಷ್ಟು ಸಾಂಸ್ಕೃತಿಕತೆ ನಮ್ಮ ಭಾರತದ ಶೈಲಿಯ ಜೊತೆ ಸಾಮ್ಯತೆ ಹೊಂದಿದೆ. ತಮಿಳುನಾಡಿನ ಅನೇಕರು ಅಲ್ಲಿ ಬದುಕು ಕಟ್ಟಿಕೊಂಡಿದ್ದಾರೆ. ಒಂದು ರೀತಿಯಲ್ಲಿ ಭೌಗೋಳಿಕವಾಗಿ ಸಹ ಅದು ಭಾರತದ ಮತ್ತೊಂದು ಭಾಗದಂತಿದೆ. ರಾಮಾಯಣ ಮಹಾ ಗ್ರಂಥದ ಕೆಲವು ಭಾಗಗಳು ಈ ಭೂಪ್ರದೇಶದೊಂದಿಗೆ ಸಂಬಂಧ ಹೊಂದಿದೆ.........

 

ಅಂತಹ ಸುಂದರ ದೇಶ ಕೆಲವು ವರ್ಷಗಳ ಹಿಂದೆ ಅತ್ಯಂತ ದೊಡ್ಡ ಪ್ರಮಾಣದ ಹಿಂಸೆಯನ್ನು ಅನುಭವಿಸಿತು.  ಜಾಫ್ನಾ ಪ್ರಾಂತ್ಯದ ತಮಿಳರ ಸ್ವತಂತ್ರ ರಾಷ್ಟ್ರದ ಹೋರಾಟ ತುಂಬಾ ಹಿಂಸಾತ್ಮಕವಾಗಿತ್ತು ಮತ್ತು ಮಾನವ ಬಾಂಬುಗಳು ಸಹ ಉಪಯೋಗಿಸಲ್ಪಟ್ಟವು. ಹೇಗೋ ಕೊನೆಗೆ ಮಿಲಿಟರಿ ಕಾರ್ಯಾಚರಣೆಯ ನಂತರ ಹಿಂಸೆ ಕೊನೆಯಾಯಿತು. 

 

ಅಲ್ಲಿಂದ ಶ್ರೀಲಂಕಾ ಪ್ರಗತಿಯ ಹಾದಿಯಲ್ಲಿ ನಡೆಯಿತು. ಸಿನೆಮಾ ಕ್ರೀಡೆ ಜಾನಪದ ಕರಕುಶಲ ವಸ್ತುಗಳು ಮುಂತಾದ ಕ್ಷೇತ್ರಗಳಲ್ಲಿ ಗಮನ ಸೆಳೆಯುವ ರೀತಿಯಲ್ಲಿ ಬೆಳೆಯಿತು.

 

ಎಲ್ಲಕ್ಕಿಂತ ಪ್ರವಾಸೋದ್ಯಮ ಶ್ರೀಲಂಕಾದ ಮುಖ್ಯ ‌ಆದಾಯವಾಯಿತು. ದಕ್ಷಿಣ ಭಾರತದ ಬಹಳಷ್ಟು ಪ್ರವಾಸಿಗರಿಗೆ ಶ್ರೀಲಂಕಾ ಒಂದು ವಿಶ್ರಾಂತಿ ಧಾಮವಾಯಿತು.

 

ದುರಾದೃಷ್ಟವಶಾತ್ ಕೊರೋನಾ ವೈರಸ್ ಶ್ರೀಲಂಕಾ ಪಾಲಿಗೆ ಮರಣ ಮೃದಂಗವಾದಂತಿದೆ. ಅಂತರಾಷ್ಟ್ರೀಯ ವಿಮಾನ ಸೇವೆಯ ನಿಲುಗಡೆ, ಲಾಕ್ ಡೌನ್ ಮುಂತಾದ ಕಾರಣದಿಂದಾಗಿ ಎರಡು ವರ್ಷಗಳಲ್ಲಿ ಅಲ್ಲಿನ ಆರ್ಥಿಕ ಪರಿಸ್ಥಿತಿ ತುಂಬಾ ಹದಗೆಟ್ಟಿದೆ. ಸುದ್ದಿ ಮೂಲಗಳ ಪ್ರಕಾರ ಕಾಗದ ಮುದ್ರಣ ಇಲ್ಲದ ಕಾರಣ ವಿದ್ಯಾರ್ಥಿಗಳ ಪರೀಕ್ಷೆಯನ್ನು, ಮತ್ತೇನೋ ಕೊರತೆಯ ಕಾರಣದಿಂದಾಗಿ ಆಸ್ಪತ್ರೆಗಳಲ್ಲಿ ಶಸ್ತ್ರಚಿಕಿತ್ಸೆಯನ್ನು ಮುಂದೂಡಲಾಗಿದೆಯಂತೆ. ಅಂದರೆ ‌ಪರಿಸ್ಥಿತಿ ಅತ್ಯಂತ ಶೋಚನೀಯ ಸ್ಥಿತಿಗೆ ತಲುಪಿದೆ ಎಂದಾಯಿತು.......

 

ಭಾರತ ಸರ್ಕಾರದ ವಿದೇಶಾಂಗ ನೀತಿಯು ಈಗ ಅತ್ಯಂತ ಜವಾಬ್ದಾರಿಯುತವಾಗಿ ಈ ಪರಿಸ್ಥಿತಿ ನಿಭಾಯಿಸಬೇಕಾಗಿದೆ. ಶ್ರೀಲಂಕಾ ಭಾರತದ ಜೊತೆ ಉತ್ತಮ ಬಾಂಧವ್ಯ ಹೊಂದಿರುವ ದೇಶ. ಆದರೆ ಚೀನಾದ ಮಹತ್ವಾಕಾಂಕ್ಷೆಯ ವಿಸ್ತಾರಣಾ ನೀತಿಯಿಂದಾಗಿ ಪಾಕಿಸ್ತಾನ ನೇಪಾಳ ಬಾಂಗ್ಲಾದೇಶ ಶ್ರೀಲಂಕಾ ಮುಂತಾದ ‌ದೇಶಗಳೊಂದಿಗೆ ಭಾರತಕ್ಕಿಂತ ಹೆಚ್ಚು ಆಪ್ತವಾಯಿತು. ವಾಣಿಜ್ಯ ವ್ಯಾಪಾರ, ಸಾಲ ಮುಂತಾದ ಹಣಕಾಸು ವ್ಯವಹಾರಗಳಲ್ಲಿ ಪಾಲುದಾರಿಕೆ ಪಡೆಯಿತು. ಭಾರತ ಎಂದಿನಂತೆ ಸಹಜ ಸಂಬಂಧ ಮಾತ್ರ ಉಳಿಸಿಕೊಂಡಿತು.

 

ಆದರೆ ಈಗ ಪರಿಸ್ಥಿತಿ ಕೈಮೀರಿದೆ. ಇದು ವೈಯಕ್ತಿಕ ವಿಷಯವಲ್ಲ. ಇದೊಂದು ‌ದೂರದೃಷ್ಟಿಯ ವಿದೇಶಾಂಗ ನೀತಿ. ಇಲ್ಲಿ ವ್ಯಕ್ತಿಗಳ ಅಹಂ ಕೆಲಸ ಮಾಡಬಾರದು. ದೀರ್ಘ ಕಾಲದ ದೇಶದ ಹಿತಾಸಕ್ತಿ ಮುಖ್ಯ. ಇಂತಹ ಸಂಕಷ್ಟದ ಸಮಯದಲ್ಲಿ ಭಾರತ ಸರ್ಕಾರ, ಇಲ್ಲಿನ ದೊಡ್ಡ ಉದ್ಯಮಿಗಳು ಮತ್ತು ಸಾಧ್ಯವಾದರೆ ಜನರು ಸಹ ಶ್ರೀಲಂಕಾಗೆ ನೆರವಿನ ಹಸ್ತ ಚಾಚಬೇಕಿದೆ. ಕಷ್ಟದಲ್ಲಿದ್ದಾಗ ಮಾಡುವ ಸಹಾಯ ದೀರ್ಘಕಾಲ ನೆನಪಿನಲ್ಲಿ ಉಳಿಯುತ್ತದೆ.......

 

ಶ್ರೀಲಂಕಾದ ಹಿಂದಿನ ವಿದೇಶಾಂಗ ನೀತಿಯ ತಪ್ಪುಗಳು, ಎಲ್ ಟಿ ಟಿ ಇ ಕಾಲದ ಭಾರತ ದ್ವೇಷ ಮುಂತಾದುವುಗಳನ್ನು ನೆನಪಿನಲ್ಲಿ ಇಟ್ಟುಕೊಳ್ಳದೆ ನೆರವು ನೀಡಬೇಕು. ಒಂದು ನೆರೆಯ ರಾಷ್ಟ್ರ ದಿವಾಳಿಯಾಗಲು ಬಿಡಬಾರದು. ಭಾರತೀಯ ಸರ್ಕಾರ ಮತ್ತು ವಿದೇಶಾಂಗದ ಅಧಿಕಾರಿಗಳು ಈ ಬಗ್ಗೆ ಗಂಭೀರವಾಗಿ ಯೋಚಿಸಬೇಕಿದೆ.

 

ಬೌದ್ದ ವಿಹಾರಗಳ  ಬುದ್ದ ಚಿಂತನೆಯ ಶ್ರೀಲಂಕಾ ನಮ್ಮ ಸಹೋದರರ ವಾಸಸ್ಥಾನ. ಮೌರ್ಯರ ಕಾಲದಲ್ಲಿ ಅಶೋಕ ಚಕ್ರವರ್ತಿ ತನ್ನ ಮಕ್ಕಳನ್ನು ಬೌದ್ಧ ಧರ್ಮದ ಪ್ರಚಾರಕ್ಕಾಗಿ ಶ್ರೀಲಂಕಾಗೆ ಕಳುಹಿಸಿದ ಇತಿಹಾಸವಿದೆ. ಅಲ್ಲಿನ ಜನರ ಹೆಸರುಗಳು, ತೋಟದಲ್ಲಿ ಬೆಳೆಯುವ ಹಣ್ಣುಗಳು, ವಸ್ತ್ರ ವಿನ್ಯಾಸ ಕಟ್ಟಡಗಳು ಎಲ್ಲವೂ ಭಾರತವನ್ನೇ ನೆನಪಿಸುತ್ತದೆ.....

 

ಅಂತಹ ದೇಶ ಆಹಾರದ ಆಹಾಕಾರ ಎದುರಿಸುತ್ತಿರುವಾಗ ಅವರ ನೆರವಿಗೆ ಧಾವಿಸುವುದು ನಮ್ಮ ಕರ್ತವ್ಯ. ಭಾರತ ಸರ್ಕಾರ ಮತ್ತು ತಮಿಳುನಾಡು ಸರ್ಕಾರ ಇನ್ನೂ ಹೆಚ್ಚು ಆಸಕ್ತಿ ವಹಿಸಿ ಶ್ರೀಲಂಕಾ ದೇಶಕ್ಕೆ ಸಹಾಯ ಹಸ್ತ ಚಾಚಲಿ ಎಂಬ ಆಶಯದೊಂದಿಗೆ.......

 

ಹಾಗೆಯೇ ಯಾವುದಾದರೂ ಸಂಘ ಸಂಸ್ಥೆಗಳು ಅನುಕೂಲ ಆಸಕ್ತಿ ಇದ್ದರೆ ಶ್ರೀಲಂಕಾದ ಭಾರತದಲ್ಲಿರುವ ರಾಯಭಾರಿ ಕಚೇರಿಯನ್ನು ಸಂಪರ್ಕಿಸಿ ಒಂದಷ್ಟು ವಸ್ತುಗಳನ್ನು ಆ ದೇಶದ ಜನರಿಗೆ ಕಳುಹಿಸಲು ಪ್ರಯತ್ನಿಸಬಹುದು. ಅದಕ್ಕೆ ಸ್ವಲ್ಪ ಪ್ರಚಾರ ಸಿಕ್ಕಿದರೆ ಮತ್ತಷ್ಟು ಜನ‌ ಜೊತೆಯಾಗಬಹುದು......

 

ಧನ್ಯವಾದಗಳು...

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068.........

Featured Image Source: Al Ajmeera

 

Enjoyed this article? Stay informed by joining our newsletter!

Comments

You must be logged in to post a comment.

About Author