ದೇವನೂರು - ಆರೆಸ್ಸೆಸ್ ಮತ್ತು ನಾವು.....

Devanur - RSS and us.

Featured Image Source: Google 

ದೇವನೂರು - ಆರೆಸ್ಸೆಸ್ ಮತ್ತು ನಾವು... ‌‌‌‌

 

ದೇವನೂರು ಮಹಾದೇವ ಅವರ " ರಾಷ್ಟ್ರೀಯ ಸ್ವಯಂ ಸೇವಕ ಸಂಘದ ( RSS )ಆಳ ಅಗಲ " ಪುಸ್ತಕವನ್ನು ಓದಿದ ನಂತರ........

 

ಇಂದಿನ ಬಹುತೇಕ ಜಾಗೃತ ಮನಸ್ಥಿತಿಯ ಜನರು ಇದರ ಬಗ್ಗೆ ಸಾಕಷ್ಟು ಚರ್ಚಿಸುತ್ತಿದ್ದಾರೆ ಹಾಗೆಯೇ ಪರ ವಿರೋಧಗಳು ಸಹ ದಾಖಲಾಗುತ್ತಿವೆ. ಎಡಪಂಥ ಬಲಪಂಥದ ಸಂಘರ್ಷ ಒಂದು ಹಂತಕ್ಕೆ ತಲುಪುತ್ತಿದೆ. 

 

ದೇವನೂರು ಮಹಾದೇವ ಅವರು ಸೂಕ್ಷ್ಮ ಮನಸ್ಸಿನ ಸಾಹಿತಿ ಮತ್ತು ಸಾಮಾಜಿಕ ಹೋರಾಟಗಾರರು. ಎಲ್ಲಕ್ಕಿಂತ ಮುಖ್ಯವಾಗಿ ಶೋಷಿತ ಸಮುದಾಯಗಳ ಗಟ್ಟಿ ಧ್ವನಿ. ಸಹಜವಾಗಿ ಅದು ಸಾತ್ವಿಕ ಆಕ್ರೋಶವಾಗಿ ಈಗಿನ ಸಂದರ್ಭದಲ್ಲಿ ಹೊರಬಂದಿದೆ.

 

ಇದನ್ನು ಬೆಂಬಲಿಸುವ ಅಥವಾ ವಿರೋಧಿಸುವ ಮನಸ್ಥಿತಿ ಬಿಟ್ಟು ವಿಮರ್ಶಿಸುವ ಮನಸ್ಥಿತಿ ಈಗಿನ ಕಾಲಘಟ್ಟದಲ್ಲಿ ಹೆಚ್ಚು ಮಹತ್ವ ಪಡೆಯುತ್ತದೆ.

 

ಏಕೆಂದರೆ ಪರ ವಿರೋಧಗಳಿಗೆ ಕಾರಣಗಳು ಸಿಗುತ್ತವೆ. ಆದರೆ ಭಾರತೀಯ ಸಮಾಜದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ವಾಸ್ತವ ನೆಲೆಯಲ್ಲಿ ವಿಮರ್ಶಿಸಿದರೆ ಹೆಚ್ಚು ಅರ್ಥವಾಗುತ್ತದೆ ಮತ್ತು ಪ್ರಯೋಜನವಾಗುತ್ತದೆ.

 

ಈ ಕ್ಷಣದಲ್ಲಿ ಎಡ ಬಲಗಳ ಸಂಘರ್ಷ ತಾರಕಕ್ಕೇರಿದೆ. ಮೊದಲು ಎಡಪಂಥ ಬಲವಾಗಿತ್ತು. ಕಳೆದ 20/30 ವರ್ಷಗಳಲ್ಲಿ ಸಂಖ್ಯೆಯ ದೃಷ್ಟಿಯಿಂದ ಬಲಪಂಥ ಪ್ರಬಲವಾಗಿದೆ ಮತ್ತು ಅಧಿಕಾರ ಕೇಂದ್ರದಲ್ಲಿದೆ. ಬಂಡಾಯದ ಒಂದು ತಲೆಮಾರು ನಿರ್ಗಮಿಸಿ ಜಾಗತೀಕರಣದ ನೆರಳಲ್ಲಿ ಬೆಳೆಯುತ್ತಿರುವ ಹೊಸ ತಲೆಮಾರು ಮುನ್ನೆಲೆಗೆ ಬಂದಿದೆ.

 

" ಆರೆಸ್ಸೆಸ್ ಪ್ರಾಣ ಎಲ್ಲೆಲ್ಲಿದೆ ? "

ಎಂಬುದನ್ನು ಆರೆಸ್ಸೆಸ್ ಸಂಸ್ಥಾಪಕರು ಮತ್ತು ಅದರ ಮುಖ್ಯ ಚಿಂತಕರ ಹೇಳಿಕೆಗಳನ್ನೇ ಮೂಲವಾಗಿಟ್ಟುಕೊಂಡು ಅದರ ಮೂಲ ಆಶಯವನ್ನು ಬಿಚ್ಚಿಟ್ಟಿದ್ದಾರೆ. ಬಹುತೇಕ ಈ ಎಲ್ಲಾ ಅಂಶಗಳು ಅಥವಾ ಆರೋಪಗಳು ಆರೆಸ್ಸೆಸ್ ಪ್ರಾರಂಭದಿಂದ ಇಲ್ಲಿಯವರೆಗೂ ಇರುವುದೇ ಆಗಿದೆ. 

ಬಹುಶಃ ಖಾಸಗಿಯಾಗಿ ಅತ್ಯಂತ ಮುಕ್ತ ಮತ್ತು ಆತ್ಮೀಯ ವಾತಾವರಣದಲ್ಲಿ ಆರೆಸ್ಸೆಸ್ ಪ್ರಮುಖರು ಇದನ್ನು ಬಹುತೇಕ ಒಪ್ಪಿಕೊಳ್ಳಬಹುದು.

 

ಆರೆಸ್ಸೆಸ್ ಸಿದ್ದಾಂತ ಮನುಸ್ಮೃತಿ, ಬ್ರಾಹ್ಮಣ್ಯ, ಹಿಂದುತ್ವ, ರಾಷ್ಟ್ರೀಯತೆ, ಮುಸ್ಲಿಂ ಕ್ರಿಶ್ಚಿಯನ್ ವಿರೋಧ, ಅಖಂಡ ಭಾರತ ಇವುಗಳೇ ಕಾಲಕಾಲಕ್ಕೆ ಹೊಸ ರೂಪ ಪಡೆಯುತ್ತಿರುವುದು ಬಹಿರಂಗ ಸತ್ಯ. ಅದಕ್ಕಾಗಿ ಅದು ಅನುಸರಿಸುತ್ತಿರುವ ಮಾರ್ಗಗಳು ಮುಖವಾಡಗಳ ( ಹಿಡನ್ ಅಜೆಂಡಾ ) ವಂಚನೆ ಎಂಬುದನ್ನು ದೇವನೂರು ಈ ಪುಸ್ತಕದಲ್ಲಿ ದಾಖಲಿಸಿದ್ದಾರೆ. " ಗಾಂಧಿಯನ್ನು ನಾನೇಕೆ ಕೊಂದೆ " ಎಂಬ ಪುಸ್ತಕ ಮತ್ತು ನಾಥುರಾಂ ಘೋಡ್ಸೆಯ ವಿಜೃಂಭಣೆಯ ಸನ್ನಿವೇಶದಲ್ಲಿ ಅದಕ್ಕೆ ವಿರುದ್ಧ ಚಿಂತನೆಯೂ ಅಷ್ಟೇ ವೇಗವಾಗಿ ಮತ್ತು ಆಕ್ರಮಣಕಾರಿಯಾಗಿ ಪ್ರತಿಕ್ರಿಯೆ ರೂಪದಲ್ಲಿ ಹೊರಬರುತ್ತಿರುವುದು ಸಹಜವಾದದ್ದೇ ಆಗಿದೆ. 

 

ದೇವನೂರು ಬರೆದ ಆರೆಸ್ಸೆಸ್ ಬಗೆಗಿನ ಎಲ್ಲಾ ವಿಷಯಗಳು ಸಂಪೂರ್ಣ ಸತ್ಯ ಎಂದು ಭಾವಿಸಿದ ಮೇಲೂ‌ ಆರೆಸ್ಸೆಸ್ ಬಗ್ಗೆ ಒಂದು ಸಹಾನುಭೂತಿ ಇಟ್ಟುಕೊಳ್ಳಲೇ ಬೇಕು. ಏಕೆಂದರೆ ಆರೆಸ್ಸೆಸ್ ಈ‌ ದೇಶದ ನಮ್ಮದೇ ಜನರಿರುವ ಒಂದು ಬೃಹತ್ ಸಂಘಟನೆ. ಅದನ್ನು ತಿರಸ್ಕರಿಸಿ ದೇಶ ಕಟ್ಟಲು ಸಾಧ್ಯವಿಲ್ಲ. ಹಾಗೆಯೇ ಆರೆಸ್ಸೆಸ್ ಕಾರ್ಯಕರ್ತರು ಮತ್ತು ಬೆಂಬಲಿಗರು ದೇವನೂರುರವರನ್ನು ಸಹ ಗೌರವಿಸಲೇ ಬೇಕು. ಏಕೆಂದರೆ ದೇಶ ಕಟ್ಟುವ ಪ್ರಕ್ರಿಯೆಯಲ್ಲಿ ಸಮನ್ವಯ ಬಹಳ ಮುಖ್ಯ. ಸೈದ್ಧಾಂತಿಕ ಘರ್ಷಣೆ ದೇಶದ ಭದ್ರತೆ ಮತ್ತು ಅಭಿವೃದ್ಧಿಗೆ ಮಾರಕವಾಗಬಾರದು. ಇದು ಅಣ್ಣ ತಮ್ಮಂದಿರ ನಡುವಿನ ಸೈದ್ಧಾಂತಿಕ ಭಿನ್ನಾಭಿಪ್ರಾಯವೇ ಹೊರತು ಅದಕ್ಕಿಂತ ಹೆಚ್ಚಿನ ಮಹತ್ವ ಕೊಡಬಾರದು. ಇದು ಅಜನ್ಮ ಶತ್ರುಗಳ ನಡುವಿನ ಹೋರಾಟವಲ್ಲ.

 

ಭಾರತ ವಿಶ್ವದಲ್ಲೇ ಅತಿಹೆಚ್ಚು  ವೈವಿಧ್ಯತೆ ಮತ್ತು ಎರಡನೇ ಅತಿದೊಡ್ಡ ಜನಸಂಖ್ಯೆ ಹೊಂದಿರುವ ದೇಶ. ಹೊಂದಾಣಿಕೆ ಇಲ್ಲದ ಹಠ ಮತ್ತು ದ್ವೇಶಗಳು ನಮ್ಮನ್ನು ವಿನಾಶದ ಅಂಚಿಗೆ ತಳ್ಳುತ್ತದೆ.

 

ತುಂಬಾ ಸರಳವಾಗಿ ಮತ್ತು ನೇರವಾಗಿ ಹೇಳಬೇಕೆಂದರೆ, ದೇವನೂರು ಮಹಾದೇವ ಅವರು ಈ ಪುಸ್ತಕದಲ್ಲಿ ಪ್ರಸ್ತಾಪಿಸಿರುವ ಅಂಶಗಳು ಮತ್ತು ಆರೆಸ್ಸೆಸ್ ಮೂಲ ಆಶಯ ಬಹುತೇಕ ಹತ್ತಿರದಲ್ಲೇ ಇದೆ. ಆದರೆ ಅದರ ಕಾರ್ಯತಂತ್ರದಲ್ಲಿ ಸಾಕಷ್ಟು ಬದಲಾವಣೆಗಳನ್ನು ಕಾಣಬಹುದು. ಆರೆಸ್ಸೆಸ್ ಒಂದು ಶಿಸ್ತಿನ, ತಾಳ್ಮೆಯ, ದೂರದೃಷ್ಟಿಯ, ಸೂಕ್ಷ್ಮ ಅವಲೋಕನದ, ತಂತ್ರಗಾರಿಕೆಯ, ಜನರ ನಾಡಿ ಮಿಡಿತ ಗ್ರಹಿಸುವ, ಅಧಿಕಾರ ಬಲದ ಪ್ರಾಮುಖ್ಯತೆ ಅರಿತಿರುವ, ಪ್ರಜಾಪ್ರಭುತ್ವದ ಶಿಷ್ಠಚಾರವನ್ನು ಮೇಲ್ನೋಟಕ್ಕೆ ಅನುಸರಿಸುವಂತೆ ನಟಿಸುವ ಕಾರ್ಯತಂತ್ರವನ್ನು ಬದಲಾದ ಕಾಲಘಟ್ಟದಲ್ಲಿ ರೂಪಿಸಿಕೊಂಡಿದೆ. ಈಗ ಅದರ ಸದಸ್ಯರ ಸಂಖ್ಯೆ ಸುಮಾರು 10 ಕೋಟಿ. ಅದರಲ್ಲಿ ‌9 ಕೋಟಿ 50 ಲಕ್ಷ ಸದಸ್ಯರಿಗೆ ಅದು ಭೋದಿಸುವ ವಿಚಾರ ಬೇರೆ. ಇನ್ನುಳಿದ 50 ಲಕ್ಷ ಜನರ ಆಂತರಿಕ ವಿಚಾರ ಲಹರಿಯೇ ಬೇರೆ. ಇಷ್ಟು ಸೂಕ್ಷ್ಮ ಮನಸ್ಥಿತಿ ಸಾಮಾನ್ಯ ಜನರಿಗೆ ಇರುವುದಿಲ್ಲ. 

 

ಮೀಸಲಾತಿಯೇ ಇರಲಿ, ಮಹಿಳಾ ಸ್ವಾತಂತ್ರ್ಯ - ಸಮಾನತೆಯೇ ಇರಲಿ, ಜಾತಿ ವ್ಯವಸ್ಥೆಯೇ ಇರಲಿ, ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಘರ್ಷಣೆಗಳೇ ಇರಲಿ,

ಅಲ್ಪಸಂಖ್ಯಾತರ ಧಾರ್ಮಿಕ ಸ್ವಾತಂತ್ರ್ಯವೇ ಇರಲಿ, ಕಾರ್ಪೊರೇಟ್ ಆಡಳಿತವೇ ಇರಲಿ, ರಾಜಕೀಯ ಅಧಿಕಾರವೇ ಇರಲಿ ಎಲ್ಲವನ್ನೂ ತನ್ನ ಮೂಲ ಆಶಯಕ್ಕೆ ಅನುಗುಣವಾಗಿ ರೂಪಿಸಿಕೊಳ್ಳುವ ಚಾಣಕ್ಯ ನೀತಿ ಆರೆಸ್ಸೆಸ್ ಮಾಡುತ್ತದೆ. ಹಾಗಾಗಿ ಅದಕ್ಕೆ ಸಾಮಾನ್ಯ ವರ್ಗದ ಬೆಂಬಲವು ದೊರೆತಿದೆ.

 

ಆಧ್ಯಾತ್ಮದ ತವರೂರು, ವೇದ ಉಪನಿಷತ್ತು ಮನುಸ್ಮೃತಿಗಳ ಆಧಾರದ ಮೇಲೆ ಬೆಳೆದು ಬಂದ ದೇಶವನ್ನು ಪ್ರಜಾಪ್ರಭುತ್ವದ ಹೆಸರಿನಲ್ಲಿ ಪಾಶ್ಚಿಮಾತ್ಯ ಸಂಸ್ಕೃತಿಯ ಪ್ರಭಾವಕ್ಕೆ ಒಳಗಾಗಿ ಅಸ್ಪೃಶ್ಯರೊಬ್ಬರು ಸ್ವಾತಂತ್ರ್ಯ ಸಮಾನತೆ ಮುಂತಾದ ಸಾಮಾಜಿಕ ನ್ಯಾಯದ ಸಂವಿಧಾನ ರಚನೆಯನ್ನು ಆರೆಸ್ಸೆಸ್ ಮನೋಭಾವ ಒಪ್ಪಿಕೊಳ್ಳಲು‌ ಸಾಧ್ಯವಾಗುತ್ತಿಲ್ಲ. ಹಾಗೆಂದು ಅದನ್ನು ತಿರಸ್ಕರಿಸುವುದು ಕಷ್ಟ. ಅದರ ಪರಿಣಾಮವೇ ಆರೆಸ್ಸೆಸ್ ಮತ್ತು ದೇವನೂರು ಮಹಾದೇವ ಅವರ ಪುಸ್ತಕದ ಚರ್ಚಾ ವಿಷಯ.

 

ದೇವನೂರರ ಪುಸ್ತಕವನ್ನು ಸಾರಾಸಗಟಾಗಿ ತಿರಸ್ಕರಿಸುವವರ ಅಭಿಪ್ರಾಯದ ಜೊತೆಗೆ ಆರೆಸ್ಸೆಸ್ ಅನ್ನು ಬಲವಾಗಿ ದ್ವೇಷಿಸುವ ಜನರ ಅಭಿಪ್ರಾಯ ಸಹ ಗಮನಿಸಿದ ನಂತರ......

 

ಕೇಸರೀಕರಣವೂ ಅಪಾಯ,

ಇಸ್ಲಾಂಮೀಕರಣವೂ ಅಪಾಯ,

ಭಾರತೀಕರಣವೇ ಉಪಾಯ ಎಂದು ಅನಿಸುತ್ತಿದೆ. ಅಂದರೆ ಸರ್ವ ಧರ್ಮಗಳ ಸಮನ್ವಯದ ವೈವಿಧ್ಯತೆಯಲ್ಲಿ ಏಕತೆಯ ಭಾರತವೇ ಬಲಿಷ್ಠ ಭಾರತ ಮತ್ತು ಶ್ರೇಷ್ಠ ಭಾರತ.

 

ಎರಡೂ ವರ್ಗಗಳ ದ್ವೇಷ ಅಸೂಯೆ ದೇಶದ ಹಿತಾಸಕ್ತಿಗೆ ಬಹಳ ಅಪಾಯ. ಯಾವುದೋ ಒಂದು ಪಂಗಡದ ಪರವಾಗಿ ಬರೆಯುವುದು, ಬೆಂಬಲಿಸುವುದು ಸುಲಭ ಮತ್ತು ನೇರ ಎಂಬುದು ನಿಜ. ಆದರೆ ಇಂದಿನ ಸನ್ನಿವೇಶದಲ್ಲಿ ಸತ್ಯದ ಪ್ರತಿಪಾದನೆಗಿಂತ ಪ್ರೀತಿಯ ಪ್ರತಿಪಾದನೆ, ಸಮನ್ವಯದ ಪ್ರತಿಪಾದನೆ ಬಹಳ ಮುಖ್ಯ ಮತ್ತು ಅವಶ್ಯ ಎಂಬುದು ನನ್ನ ವೈಯಕ್ತಿಕ ಅಭಿಪ್ರಾಯ.

ಪ್ರೀತಿಗೆ ಮಾತ್ರ ಎಲ್ಲವನ್ನೂ ಎಲ್ಲರನ್ನೂ ಒಳಗೊಳ್ಳುವ ಸಾಮುದಾಯಿಕ ಶಕ್ತಿ ಇದೆ. ಅದು ದೀರ್ಘಕಾಲದಲ್ಲಿ ಒಳ್ಳೆಯ ಪರಿವರ್ತನೆ ಮಾಡುತ್ತದೆ.

 

ಬುದ್ದರ ಧ್ಯಾನಸ್ಥ ಪ್ರಜ್ಞೆ,

ಬಸವಣ್ಣನವರ ಸಮಾನತೆಯ ಪ್ರಜ್ಞೆ,

ವಿವೇಕಾನಂದರ ಸಾಂಸ್ಕೃತಿಕ ಪ್ರಜ್ಞೆ,

ಮಹಾತ್ಮ ಗಾಂಧಿಯವರ ನೈತಿಕ ಪ್ರಜ್ಞೆ,

ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಾನವೀಯತೆಯ ಸಾಂವಿಧಾನಿಕ ಪ್ರಜ್ಞೆ......

 

ಭಾರತದ ಮೂಲ ಆತ್ಮವಾಗಲು ಅತ್ಯಂತ ಹೆಚ್ಚು ಅರ್ಹವಾಗಿದೆ. ಇವು ಎಲ್ಲವನ್ನೂ ಸಮನಾಗಿ ಕಾಣುವ ಭಾರತೀಯ ಮಣ್ಣಿನ ಗುಣಗಳನ್ನು ಹೊಂದಿವೆ. ದಯವಿಟ್ಟು ಯಾವುದೇ ಒತ್ತಡವಿಲ್ಲದೆ ಈ ಬಗ್ಗೆ ಯೋಚಿಸಿ. ಸಮನ್ವಯದ ಪರಿವರ್ತನಾ ಹಾದಿ ಹೆಚ್ಚು ವಾಸ್ತವ ಎನಿಸುತ್ತದೆ. ಇಲ್ಲದಿದ್ದರೆ ಘರ್ಷಣೆ ನಮ್ಮನ್ನು ನಾಶಪಡಿಸುತ್ತದೆ ನಮ್ಮ ಸಿದ್ದಾಂತಗಳು ಯಾವುದೇ ಆಗಿದ್ದರು ಸಹ.........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author