ಹೆಚ್ಚುಕಡಿಮೆ ಒಂದೇ ರೀತಿ ಯೋಚಿಸುವವರ ನಡುವೆ ಕಾಣಿಸಿಕೊಂಡಿರುವ ಸೂಕ್ಷ್ಮ ಅಭಿಪ್ರಾಯಭೇದಗಳು

ಹೆಚ್ಚುಕಡಿಮೆ ಒಂದೇ ರೀತಿ ಯೋಚಿಸುವವರ ನಡುವೆ ಕಾಣಿಸಿಕೊಂಡಿರುವ ಸೂಕ್ಷ್ಮ ಅಭಿಪ್ರಾಯಭೇದಗಳು

........................................................................

ಒಟ್ಟಾರೆಯಾಗಿ ಒಂದೇ ರೀತಿ ಯೋಚಿಸುವ ನಮ್ಮ ನಮ್ಮ ನಡುವೆಯೂ ಈಚೆಗೆ ಸೂಕ್ಷ್ಮವಾದ ಭಿನ್ನಾಭಿಪ್ರಾಯಗಳು ಕಾಣಿಸಿಕೊಳ್ಳುತ್ತಿವೆ.ಇದು ಕೂಡ ಸಹಜವಾದ ಬೆಳವಣಿಗೆಯೇ.ಕೆಲವು ಸಲ ವೈಯಕ್ತಿಕ ವಿಷಯಗಳನ್ನು ಕೆದಕಿ ಬಾಣಪ್ರಯೋಗ ನಡೆಸುವ ಪರಿಪಾಠವೂ ಕನ್ನಡ ವಾಗ್ವಾದ ಪರಂಪರೆಯಲ್ಲಿ ಇದೆ. ಹಾಗೆ ನನ್ನ ಬಗ್ಗೆ ಕೆಲವು ವೈಯಕ್ತಿಕ ನಿಂದನೆಯ ಮಾತುಗಳನ್ನು ಪಂಜು ಗಂಗೊಳ್ಳಿ ಮಾಡಿರುವುದನ್ನು ನೋಡಿದೆ. ಅದು ನನಗೆ ಅಷ್ಟು ಮುಖ್ಯ ಅನಿಸಲಿಲ್ಲ.ನನಗೆ ಮುಖ್ಯ ಅನಿಸುವುದು ನಾವು ಈಗ ತೆಗೆದುಕೊಳ್ಳಬೇಕಾದ ನಿರ್ಧಾರಗಳ ಬಗ್ಗೆ. ಯೋಚನೆಯಲ್ಲಿ ನಿಖರತೆ ಸಾಧಿಸಬೇಕಾಗಿರುವುದರ ಬಗ್ಗೆ.

........................................................................

 

ವಾಸ್ತವದ ಆಚೆ ನೋಡಲು ಸೋಲುವ ಪಂಜು ಗಂಗೊಳ್ಳಿ 

...................................................................

೧)'ನಿಮಗೆ ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ ಎಂದು ಮಕ್ಕಳನ್ನು ಕೇಳುವವರು, ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಮಕ್ಕಳಿಂದ ಹೇಳಿಸುವವರು ಇಬ್ಬರೂ ಮೂಲಭೂತವಾದಿಗಳೇ'

 

೨)'ಗಂಡು ಮಕ್ಕಳು ತಾವು ಕಲಿಯುತ್ತಿರುವ ಶಾಲೆಗೇ ಕಲ್ಲು ಹೊಡೆಯುತ್ತಾರೆಂದರೆ, ಹೆಣ್ಣು ಮಕ್ಕಳು ಶಿಕ್ಷಣಕ್ಕಿಂತ ಧರ್ಮ ಮುಖ್ಯ ಅನ್ನುತ್ತಾರೆಂದರೆ 'ಸಂಚುಗಾರರು' ಇಂತಹ ಎಳೆ ಮಿದುಳುಗಳೊಳಗೆ ಧರ್ಮದ ನಶೆ ತುಂಬುವಲ್ಲಿ ಅಷ್ಟರ ಮಟ್ಟಿಗೆ ಯಶಸ್ವಿಯಾಗಿದ್ದಾರೆ ಎಂದೇ ಅರ್ಥ'

 

ಈ ಟಿಪ್ಪಣಿಗಳನ್ನು ಬರೆದಿರುವವರು ಕಾರ್ಟೂನಿಸ್ಟ್ ಪಂಜು ಗಂಗೊಳ್ಳಿ. ಮೇಲ್ನೋಟಕ್ಕೆ ಸರಿಯಾಗಿ ಹೇಳಿದ್ದಾರೆ ಎಂದು ಅನಿಸುವ ಹೇಳಿಕೆಗಳು ಇವು. ತನ್ನನ್ನು ಪಂಜು ಗಂಗುಲಿ ಎಂದು ಕರೆದುಕೊಳ್ಳುವ ಪಂಜು ಗಂಗೊಳ್ಳಿ ಏಕೆ ಹಾಗೆ ತನ್ನನ್ನು ಕರೆದುಕೊಳ್ಳುತ್ತಾರೋ ಗೊತ್ತಿಲ್ಲ.ಅದೊಂದು ತಮಾಷೆಯ ವಿಷಯ.ಇರಲಿ.

 

ಕಾರ್ಟೂನ್ ಗಳ ಬಗ್ಗೆ ಬರುವುದಾದರೆ,ಹಿಜಾಬ್ ಪ್ರಕರಣ ಮುನ್ನೆಲೆಗೆ ಬಂದಮೇಲೆ ಅವರು ಅದರ ಬಗ್ಗೆ ಯಾವುದಾದರೂ ಕಾರ್ಟೂನ್ ಬರೆದಿದ್ದಾರೆಯೇ ನೋಡಿದೆ.ಬರೆದಿಲ್ಲ.ಈ ನಡುವೆ ಎರಡೂ ಕಡೆ ಇರುವ 'ಸಂಚುಗಾರರ' ಬಗ್ಗೆ ಅವರು ಬಹಳ ತಲೆಕೆಡಿಸಿಕೊಂಡಿದ್ದಾರೆ ಎನಿಸುತ್ತದೆ.ಇದು ಇನ್ನೊಬ್ಬ ಕಾರ್ಟೂನಿಸ್ಟ್ ಆದ ಮಹಮ್ಮದ್ ಅವರ ನಿಲುವು ಕೂಡ.ಜೊತೆಗಾರರು ಸಿಕ್ಕಿರುವುದರಿಂದ ಇವರಿಬ್ಬರಿಗೂ ಎರಡೂ ಕಡೆಯ ಮತೀಯವಾದಿಗಳ ಬಗ್ಗೆ ಯಾವತ್ತಿನಿಂದಲೂ ಚಾಲ್ತಿಯಲ್ಲಿರುವ ದೇಶಾವರಿ ಮಾತುಗಳನ್ನು ಆಡಿ ಸುಲಭದಲ್ಲಿ ಸಮಸ್ಯೆಯಿಂದ ದೂರ ನಿಲ್ಲುವುದಕ್ಕೆ ಯೋಚಿಸಿದಂತಿದೆ.

 

ಹೀಗೆ ಮಾತನಾಡುತ್ತಿರುವವರ ಮುಖ್ಯ ಸಮಸ್ಯೆಯೆಂದರೆ, ತಾವು ಎಲ್ಲವನ್ನೂ ನಿಷ್ಪಕ್ಷಪಾತವಾಗಿ ನೋಡುತ್ತಿದ್ದೇವೆ ಅಂದುಕೊಳ್ಳುವುದು.ಬಾಬ್ರಿ ಮಸೀದಿ ಕೆಡವಿದ ದಿನದಿಂದ ಭಾರತದಲ್ಲಿ ಎಂತಹ ಉನ್ಮಾದ ಸ್ಥಿತಿಯನ್ನು ಬಿತ್ತಲಾಯಿತು ಎಂಬುದು ಗೊತ್ತಿದ್ದೂ.

ಗುಜರಾತಿನಲ್ಲಿ ಮುಸ್ಲಿಮರ ಹತ್ಯೆ ಅದೆಷ್ಟು ದಾರುಣವಾಗಿ ನಡೆದುಹೋಯಿತು ಎಂಬುದು ಗೊತ್ತಿದ್ದೂ. ಮೋದಿ ಸರ್ಕಾರ ಬಂದಮೇಲೆ ಹಿಂದೂ ಮತಾಂಧರ ಅಸಹನೆ ಹೇಗೆ ನೂರುಪಟ್ಟು ಬೆಳೆಯಿತು ಎಂಬುದು ಗೊತ್ತಿದ್ದೂ.

ಈ ಎಲ್ಲಾ ಘಟನಾವಳಿಗಳಿಂದ ಸಾಮಾನ್ಯ ಮುಸ್ಲಿಮರು ಸದಾ ಭಯದಲ್ಲಿ ಬದುಕುವಂತಾಯಿತು ಎಂಬುದು ಗೊತ್ತಿದ್ದೂ. ಅಥವಾ ಇದೆಲ್ಲಾ ಇವರಿಗೆ ನಿಜಕ್ಕೂ ಗೊತ್ತಿಲ್ಲವೇ?

 

ಗೊತ್ತಿದ್ದೂ ನಾಟಕ ಆಡುತ್ತಿದ್ದಾರೆ ಎಂದಾದರೆ,ಇದನ್ನೆಲ್ಲಾ ಇವರಿಗೆ ನೆನಪು ಮಾಡಿಕೊಡುವುದು ವ್ಯರ್ಥವೇ ಸರಿ.ರೂಮಿನ ಒಳಗೆ ಕೂತು ಕಾರ್ಟೂನ್ ಬಿಡಿಸುವವರಿಗೆ ಈ ದೇಶ ಎದುರಿಸುತ್ತಿರುವ ಸಮಸ್ಯೆಗಳನ್ನು ಇಡಿಯಾಗಿ ಗ್ರಹಿಸುವುದು ಅಷ್ಟು ಸುಲಭವಲ್ಲ. ಅದಕ್ಕೆ ತೀಕ್ಷ್ಣವಾದ ನೋಟ ಬೇಕಾಗುತ್ತದೆ. ಅಂತಹ ನೋಟ ಇವರಿಗೆ ಇದೆಯೇ ಎಂಬುದು ಗೊತ್ತಾಗುವುದು ನಿಜವಾದ ಬಿಕ್ಕಟ್ಟು ಕಾಣಿಸಿಕೊಂಡಾಗಲೇ. ಅಂತಹ ತಿಳುವಳಿಕೆ ಇಲ್ಲದಿದ್ದಾಗ ಮೋದಿ ಕುರಿತು ಕಾರ್ಟೂನ್ ಬಿಡಿಸುತ್ತಾ 'ಎಕೋ ಚೇಂಬರಿ'ನಲ್ಲಿ ಬಂದಿಯಾಗಿ ಬಿಡುತ್ತಾರೆ.

ಪಂಜು ಗಂಗೊಳ್ಳಿ ಎದುರಿಸುತ್ತಿರುವ ಸಮಸ್ಯೆ ಇದು.

 

ಇಂತಹ ಸಂದರ್ಭದಲ್ಲಿ ಒಬ್ಬನೇ ಕುಳಿತು ಧ್ಯಾನಸ್ಥ ಸ್ಥಿತಿಯಲ್ಲಿ ಕಾರ್ಟೂನ್ ಬಿಡುತ್ತಿರುವುದು ಸತೀಶ್ ಆಚಾರ್ಯ ಮಾತ್ರ ಎಂದು ನನಗೆ ಅನಿಸುತ್ತಿದೆ. ಸತೀಶ್ ಆಚಾರ್ಯ ಇಡೀ ಜಗತ್ತಿನ ವಿದ್ಯಮಾನಗಳನ್ನು ತೀಕ್ಷ್ಣವಾಗಿ ಗಮನಿಸಿ ಪ್ರಖರವಾದ ಕಾರ್ಟೂನ್ ಗಳನ್ನು ಬಿಡಿಸುತ್ತಿರುವ ನಮ್ಮ ನಡುವಿನ ಅತಿಮುಖ್ಯ ಕಾರ್ಟೂನಿಸ್ಟ್.

 

ಮೇಲಿನ ಮಾತನ್ನು ಹೋಲಿಕೆಗಾಗಿ ಹೇಳುತ್ತಿಲ್ಲ.ಯಾರನ್ನೂ ದೊಡ್ಡವನಾಗಿಯೋ ಸಣ್ಣವನಾಗಿಯೋ ಮಾಡಲು ಹೇಳುತ್ತಿಲ್ಲ. ಯಾವುದೇ ಕಾರ್ಟೂನಿಸ್ಟ್ ಗಾದರೂ ಇವತ್ತಿನ ಸನ್ನಿವೇಶದಲ್ಲಿ

ಎರಡೂ ಕಡೆಯ 'ಸಂಚುಗಾರ'ರು ತಲೆಯಲ್ಲಿ ಬಂದು ಕುಣಿಯಲು ಶುರುಮಾಡಬಾರದು.ತತ್ ತಕ್ಷಣ ನಾವು ಟೀಕಿಸಬೇಕಾದ್ದು ಬಹುಸಂಖ್ಯಾತ ಮತಾಂಧರನ್ನು ಎಂಬುದು ಮರೆತು ಹೋಗಬಾರದು.ಹಾಗೆ ಮಾಡಿದರೆ ಅದು ಹಿಂದೂ ಮತಾಂಧರ ಕೆಂಗಣ್ಣಿನಿಂದ ತಪ್ಪಿಸಿಕೊಳ್ಳಲು ಹೂಡುವ ಆಟವಾಗಿಬಿಡುತ್ತದೆ.

ಒಂದು ಕಣ್ಣಿನ ನೋಟವಾಗಿ ಬಿಡುತ್ತದೆ.

 

ಮಂಗಳೂರು ಹಿಂದೂ ಕೋಮುವಾದದ ಪ್ರಯೋಗಶಾಲೆಯಾದಾಗ ಎದುರು ಮಾತನಾಡುವ ಮುಸ್ಲಿಂ ಮತೀಯವಾದಿಗಳ ಗುಂಪೊಂದು ಕಾಣಿಸಿಕೊಂಡಿತು ಎಂಬುದು ಎಲ್ಲರಿಗೂ ಗೊತ್ತಿದೆ. 

ಈ ಗುಂಪನ್ನು ಸಮರ್ಥಿಸುವ ಪ್ರಶ್ನೆಯೇ ಇಲ್ಲ.

ಅವರನ್ನು ನಾವು ಕೆಲವರು ಸಮರ್ಥಿಸುತ್ತಿದ್ದೇವೆ ಎಂದು ಪಂಜು ಗಂಗೊಳ್ಳಿ ತಿಳಿದುಕೊಂಡಿರುವ ಹಾಗಿದೆ.

ಖಂಡಿತ ಇಲ್ಲ. ಹಿಂದೂ ಮತಾಂಧರ ವಿರುದ್ಧ ನನ್ನಂಥವರು ತೆಗೆದುಕೊಂಡಿರುವ ನಿಲುವು ಮುಸ್ಲಿಂ ಮತೀಯವಾದಕ್ಕೆ ಪೂರಕವಾಗುತ್ತದೆ ಎಂದಾಗಲೀ ಮುಸ್ಲಿಮರಲ್ಲಿ ಇನ್ನಷ್ಟು ಮೌಢ್ಯವನ್ನು ಹೆಚ್ಚಿಸುತ್ತದೆ ಎಂದಾಗಲೀ ನಾನು ಭಾವಿಸಿಲ್ಲ.ನಾನು ಹಿಜಾಬ್ ಮತ್ತು ಬುರ್ಖಾವನ್ನು ಸಾರಾಸಗಟಾಗಿ ಸಮರ್ಥಿಸಿದ್ದೇನೆ ಮತ್ತು ಆ ಮೂಲಕ ಮುಸ್ಲಿಂ ಮೂಲಭೂತವಾದ ಬೆಳೆಯಲು ಕಾರಣ ಆಗಿದ್ದೇನೆ ಎನ್ನುವುದು ಪಂಜು ಗಂಗೊಳ್ಳಿ ಆರೋಪ. ಹಾಗೆ ನಾನು ಎಲ್ಲಿ ಹೇಳಿದ್ದೇನೆ? ನಾನು ಬರೆದಿರುವ ಲೇಖನವನ್ನು ಅವರು ಸ್ವಲ್ಪ ತೆರೆದ ಕಣ್ಣಿನಿಂದ ನೋಡುವುದು ಒಳ್ಳೆಯದು.

 

ಪಂಜು ಗಂಗೊಳ್ಳಿಯವರಿಗೆ ಕೆಲವು ವಿಷಯಗಳು ನಿಜಕ್ಕೂ ಗೊತ್ತಿರುವಂತಿಲ್ಲ.ಇದೀಗ ನಿಮಗೆ 'ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ' ಎಂದು ಮುಸ್ಲಿಂ ವಿದ್ಯಾರ್ಥಿನಿಯರನ್ನು ಕೇಳುತ್ತಿರುವವರು ಯಾರು? ಅವರು ಮೂಲಭೂತವಾದಿಗಳಲ್ಲ. ಪತ್ರಕರ್ತರು ಎನಿಸಿಕೊಂಡು ಹಿಂದುತ್ವವಾದಿಗಳ ಜೊತೆಗೆ ಸೇರಿ ಇಡೀ ಸಮಾಜಕ್ಕೆ ಕೊಳ್ಳಿ ಇಡುತ್ತಿರುವವರು.

 

ಇನ್ನು 'ನಮಗೆ ಧರ್ಮವೇ ಮುಖ್ಯ' ಎಂದು ಮಕ್ಕಳಿಂದ ಹೇಳಿಸುತ್ತಿದ್ದಾರೆ ಎಂದು ಪಂಜು ಗಂಗೊಳ್ಳಿ ಏಕೆ ಭಾವಿಸಬೇಕು?ಮಕ್ಕಳ ಮಾತನ್ನು ಕೇಳುತ್ತಿದ್ದರೆ ಅವರು ಗಿಳಿಪಾಠ ಒಪ್ಪಿಸುತ್ತಿಲ್ಲ ಎಂಬುದು ಸ್ಪಷ್ಟವಾಗಿ ಕಾಣಿಸುತ್ತಿದೆ.

 

ಮತಾಂಧತೆ ಬೇರೆ ಧರ್ಮಾಂಧತೆ ಬೇರೆ ಎಂದು ಈಗಾಗಲೇ ಹಲವು ಬಾರಿ ನಾನು ಹೇಳಿದ್ದೇನೆ. ಈ ಹಿನ್ನೆಲೆಯಲ್ಲಿ ಪಂಜು ಗಂಗೊಳ್ಳಿ ಮಾತನ್ನು ಒಪ್ಪಲಾಗುವುದಿಲ್ಲ.ಇಂದಿನ ಕಾಲಕ್ಕೆ ಕಣ್ಣುಮುಚ್ಚಿಕೊಂಡವರು ಮಾತ್ರ ಇಂಥ ಮಾತುಗಳನ್ನು ಆಡಬಲ್ಲರು.ಮೋದಿಯನ್ನು ಟೀಕಿಸಿದ ಕೂಡಲೇ ಮೇಧಾವಿತನ ಎನಿಸುವುದಿಲ್ಲ. ಮೋದಿ ಸುತ್ತ ಹರಡಿಕೊಂಡಿರುವ ಬೃಹತ್ ಜಾಲದ ಅರಿವು ಆಗದಿದ್ದರೆ ಅಂಥವರು ನಿಂತಲ್ಲೆ ನಿಂತುಕೊಂಡಿದ್ದಾರೆ ಎಂದೇ ಅರ್ಥ.ಅವರ ಕಣ್ಣೋಟಕ್ಕೆ ಆಯಾಸ ಅಡರಿಕೊಂಡಿದೆ ಎಂದು ಅರ್ಥ.

 

ಪಂಜು ಗಂಗೊಳ್ಳಿ ತಾನು ವಡ್ಡರ್ಸೆ ರಘುರಾಮ ಶೆಟ್ಟಿ ಮತ್ತು ಲಂಕೇಶ್ ಜೊತೆ ಇದ್ದೆ ಎಂದು ಆಗಾಗ ಹೇಳಿಕೊಳ್ಳುತ್ತಾರೆ. ಲಂಕೇಶ್ ಜೊತೆ ಇದ್ದ ಕೂಡಲೇ ಲಂಕೇಶರ ಹಾಗೆ ಆಗಿಬಿಡುತ್ತಾರೆ ಎಂಬುದಕ್ಕೆ ಯಾವ ಆಧಾರವೂ ಇಲ್ಲ. ಪಂಜು ಗಂಗೊಳ್ಳಿ ಯೋಚನಾಕ್ರಮದಲ್ಲಿ ಲಂಕೇಶ್ ಗೆ ಇದ್ದ ಗಟ್ಟಿತನ ನನಗೆ ಎಂದೂ ಕಾಣಿಸಿಲ್ಲ. ಲಂಕೇಶರ ಭಾಷೆಯ ಮೊನಚು ಅವರಲ್ಲಿ ಎಂದೂ ಕಾಣಿಸಿಕೊಂಡಿಲ್ಲ.ಬಾಬ್ರಿ ಮಸೀದಿ ಕೆಡವಿದ ಸಂದರ್ಭದಲ್ಲಿ ಲಂಕೇಶ್ 'ಇಟ್ಟಿಗೆ ಪವಿತ್ರವಲ್ಲ ಜೀವ ಪವಿತ್ರ'ಎಂದು ಹೇಳಿದ್ದರು. ಅಲ್ಲಿ ಅವರು ಬ್ಯಾಲೆನ್ಸ್ ಮಾಡುವ ಪ್ರಯತ್ನ ಮಾಡಿದ್ದಾರೆಯೇ?ನಾನೇಕೆ ಬಿಜೆಪಿಯನ್ನು ಒಪ್ಪುವುದಿಲ್ಲ'ಎಂದೂ ಬರೆದಿದ್ದರು.ಅನೇಕ ಸಂದರ್ಭದಲ್ಲಿ ಹಿಂದುತ್ವವಾದಿಗಳನ್ನು ಕಟುವಾಗಿ ಟೀಕಿಸಿದ್ದರು.

ಇದರ ಹಿಂದಿನ ತಾತ್ವಿಕತೆಯ ಅರಿವು ಪಂಜು ಗಂಗೊಳ್ಳಿಗೆ ಇರಬೇಕಾಗಿತ್ತು.

 

ಪಂಜು ಗಂಗೊಳ್ಳಿ ಬಗ್ಗೆ ನನಗೆ ಯಾವ ಪೂರ್ವಗ್ರಹವೂ ಇಲ್ಲ. ಆದರೆ ಅವರು ಕುಂದಾಪುರ ಕನ್ನಡ ಡಿಕ್ಷನರಿಯನ್ನು 'ಬುಕ್ ಬ್ರಹ್ಮ'ಜೊತೆ ಮಾರ್ಕೆಟಿಂಗ್ ಗೆ ಇಟ್ಟಾಗ ನನಗೆ ನಿರಾಸೆಯಾಯಿತು.ಆ ಬಗ್ಗೆ ನಾನು ಬರೆದಿದ್ದೆ ಕೂಡ. 'ಬುಕ್ ಬ್ರಹ್ಮ ದವರ ಜೊತೆ ಒಮ್ಮೆ ಮಾತಾಡಿ.'ನೀವು ಹಿಂದುತ್ವದ ಪರ ಇರುವವರಿಗೂ ವೇದಿಕೆ ಕೊಡುತ್ತಿದ್ದೀರಲ್ಲ,ಅದನ್ನು ಸಂದರ್ಶನದಲ್ಲಿ ನಾನು ಪ್ರಶ್ನಿಸಬಹುದೇ' ಎಂದು ಕೇಳಿ. ಕೂಡಲೇ ನಿಮ್ಮನ್ನು ದೂರ ಇರಿಸುತ್ತಾರೆ ಅಲ್ಲವೇ? ಅಷ್ಟನ್ನೂ ತಿಳಿಯಲಾರದ ಮಂಕು ಮಂಜು ಗಂಗೊಳ್ಳಿಗೆ ಏಕೆ ಆವರಿಸಿತು? 'ಬುಕ್ ಬ್ರಹ್ಮ' ಜೊತೆ ಸೇರಿಕೊಳ್ಳುವುದು ಸಹಜ ವರ್ತನೆ ಎಂಬ ವಾತಾವರಣ ಕನ್ನಡದಲ್ಲಿ ಇದೆ.ಸರಿ. ಅದಕ್ಕೆ ಗಂಗೊಳ್ಳಿಯೂ ಬಲಿಯಾದ ಹಾಗಿದೆ.ಅದರಿಂದ ಏನಾಗುತ್ತದೆ? 'ನಾವು ಎಡವೂ ಅಲ್ಲ ಬಲವೂ ಅಲ್ಲ' ಎಂಬ ಎಡಬಿಡಂಗಿತನ ವ್ಯಕ್ತಿತ್ವದೊಳಗೆ ಪ್ರವೇಶ ಮಾಡುತ್ತದೆ. ಟೀಕಿಸಿದ ಕೂಡಲೇ ನನ್ನನ್ನೂ ಸಂಘಿ ಎಂದು ಹೇಳುತ್ತಿದ್ದಾರೆ ಎಂಬ ಕನವರಿಕೆ ಶುರುವಾಗುತ್ತದೆ.ಈಗ ಪಂಜು ಗಂಗೊಳ್ಳಿಗೆ ಆಗಿರುವುದು ಅದೇ.ಕಾರ್ಟೂನ್ ಬರೆಯುತ್ತಿಲ್ಲ. ಅದು ಅವರಿಗೇ ಬಿಟ್ಟಿದ್ದು. ಮೈಸೂರಿನ 'ಆಂದೋಲನ'ಪತ್ರಿಕೆಯಲ್ಲಿ ಬರೆಯುತ್ತಿರುವ ಲೇಖನಗಳೂ ತೀರಾ ಜಾಳುಜಾಳಾಗಿವೆ.

 

ಈಚೆಗೆ ನನ್ನನ್ನು 'ಆರಾಮ ಕುರ್ಚಿಯಲ್ಲಿ ಕುಳಿತು ಬರೆಯುವ ಪ್ರಗತಿಪರ' ಎಂದು ಪಂಜು ಗಂಗೊಳ್ಳಿ ಹೇಳಿದ ಹಾಗಿದೆ. ನನ್ನ ಬಗ್ಗೆ ಬಂದ ಟೀಕೆಗಳ ಬಗ್ಗೆ ಹೆಚ್ಚಾಗಿ ನಾನು ಉತ್ತರಿಸಲು ಹೋಗುವುದಿಲ್ಲ.ಇಷ್ಟು ಹೇಳಬಲ್ಲೆ. ನಾನು ಪ್ರಗತಿಪರ ಅಲ್ಲ.ಆ ಪದವೇ ಈಗ ಹಳಸಿ ಹೋಗಿದೆ. ನಾನು ಹೋರಾಟಗಾರ ಕೂಡ ಅಲ್ಲ. ಭಾಷಣ ಉಪನ್ಯಾಸಗಳಲ್ಲಿ ನಾನು ಬಹಳ ಹಿಂದೆ. ಅಂತಹ ಅನೇಕರು ಬರಬರುತ್ತ ನಾಶವಾಗಿ ಹೋಗಿದ್ದನ್ನು ನೋಡಿದ್ದೇವೆ.ಇನ್ನು,ಜನರ ಜೊತೆ ಬೆರೆತಾಗ ಮಾತ್ರ ಬದುಕನ್ನು ಸಮಗ್ರವಾಗಿ ಅರಿಯುವ ದೃಷ್ಟಿಕೋನವೊಂದು ಬೆಳೆಯುತ್ತದೆ ಎನ್ನುವುದು ಸುಳ್ಳು. ಅನುಭವದ ಮೂಟೆ ಏನನ್ನೂ ಕಲಿಸದೇ ಹೋಗಬಹುದು. ಈಗ ಹಿಂದುತ್ವವನ್ನು ಬೆಂಬಲಿಸುತ್ತಿರುವವರ ಅನುಭವ ಏನು ಕಡಿಮೆ ಇದೆಯೇ. ಅನೇಕರಂತೂ ವಿದೇಶದಲ್ಲಿ ಕೂತ ಡಾಕ್ಟರ್ ಎಂಜಿನಿಯರ್ ಪ್ರೊಫೆಸರ್ ಗಳು.

 

ಧ್ಯಾನಸ್ಥ ಸ್ಥಿತಿಯಲ್ಲಿ ಎರಡು ಮಹತ್ತರ ಕಾದಂಬರಿಗಳನ್ನೂ 'ರಾಮಾಯಣ ದರ್ಶನಂ' ಕಾವ್ಯವನ್ನೂ ಬರೆದ ಕುವೆಂಪು ಪರಿಚಿತರನ್ನೂ ತನ್ನ ಕೋಣೆಗೆ ಬಿಟ್ಟುಕೊಳ್ಳುತ್ತಿರಲಿಲ್ಲ.ಲೇಖಕನಾದವನು ಆಕ್ಟಿವಿಸ್ಟ್ ಆಗಿರಲೇಬೇಕೆಂದೇನೂ ಇಲ್ಲ.'ಈ ರೀತಿಯಾಗಿದ್ದುಕೊಂಡು ಏನು ಸಾಧಿಸಲಿದ್ದಾರೆ ಇವರು' ಎಂಬ ಪಂಜು ಗಂಗೊಳ್ಳಿ ವ್ಯಂಗ್ಯ ನನಗೆ ಅಷ್ಟು ಮುಖ್ಯ ಅನಿಸುವುದಿಲ್ಲ.ಲೇಖಕ ಸಾಧನೆಗಾಗಿ ಏನನ್ನೂ ಮಾಡುವುದಿಲ್ಲ.ಆತ ಮುಖ್ಯವಾಗುವುದು ಆತನ ವಿಚಾರಗಳಿಂದ.ಪಂಜು ಗಂಗೊಳ್ಳಿಗೆ ಇದೆಲ್ಲ ಅರ್ಥವಾಗಲು ಸಾಧ್ಯ ಇಲ್ಲ.ಕನಿಕರ ಪಡಬೇಕಷ್ಟೇ.

 

ಕೊನೆಯ ಮಾತು -

 

ಹಿಂದುತ್ವವಾದ ಮತ್ತು ಅದನ್ನು ಸಮರ್ಥಿಸುವವರ ನಿಲುವುಗಳನ್ನು ಮೂಲಭೂತವಾದ ಎಂದು ಹೇಳುವ ಯಾರೇ ಆಗಲಿ, ಇಂದಿನ ವಾಸ್ತವವನ್ನು ಸರಿಯಾಗಿ ಗ್ರಹಿಸುತ್ತಿಲ್ಲ ಎಂದೇ ಅರ್ಥ. ಏಕೆ ಅನೇಕರಿಗೆ ಕಟು ವಾಸ್ತವವನ್ನು ಮರೆಸುವ ಮೂಲಭೂತವಾದ ಎಂಬ ಪದದ ಇಂದು ತುಂಬಾ ಮೋಹಕವಾಗಿ ಕಾಣಿಸುತ್ತಿದೆ?ಏನದು ಮೂಲಭೂತವಾದ?

 

ಬಿಜೆಪಿ ಸರ್ಕಾರ ಎನ್ ಆರ್ ಸಿ ಜಾರಿಗೆ ಮುಂದಾದ ನಂತರದ ದಿನಗಳಲ್ಲಿ ಎರಡೂ ಕಡೆಯ ಮೂಲಭೂತವಾದದ ಎಂಬ ಮಾತಿಗೆ ಅರ್ಥವೇ ಉಳಿದಿಲ್ಲ. ಮಾತನಾಡಲೇ ಬೇಕೆಂದಿದ್ದರೆ ಅದೀಗ ಮೂಲಭೂತವಾದ ವರ್ಸಸ್ ಫ್ಯಾಸಿಸಂ ಆಗಿದೆ ಎಂಬುದನ್ನು ಗುರುತಿಸಿ ಮುಂದುವರಿಯಬೇಕಾಗಿದೆ.

 

..............................................................,....

ಪಂಜು ಗಂಗೊಳ್ಳಿ ಟಿಪ್ಪಣಿ -

 

ನಮ್ಮಲ್ಲಿ ಕೆಲವರು 'ಈಸಿ ಚೇರ್' ಪ್ರಗತಿಪರರಿದ್ದಾರೆ. ಇವರ ಹಾರಾಟ ಚೀರಾಟ ಏನೇ ಇದ್ದರೂ ಅವೆಲ್ಲ ಅವರ ಫೇಸ್ ಬುಕ್ ಗೋಡೆಯ ಮೇಲೆ ಮಾತ್ರ. ನಿಜಜೀವನದಲ್ಲಿ ಇಂತಹವರು ಇವರ ಮನೆಯ ಮುಂದೆಯೇ ಯಾವುದಾದರು ಸಾಮಾಜಿಕ ಅನ್ಯಾಯದ ವಿರುದ್ಧ ಪ್ರತಿಭಟನೆ ನಡೆಯುತ್ತಿದ್ದರೆ ಕಿಟಕಿಯಿಂದ ನೋಡಿ ಅದರ ಬಗ್ಗೆ ಇದೇ ಫೇಸ್ ಬುಕ್ಕಲ್ಲಿ ಒಂದಷ್ಟು ಟೀಕೆಟಿಪ್ಪಣಿ ಮಾಡುತ್ತಾರೆಯೇ ವಿನಃ ಮನೆಯ ಮೆಟ್ಟಿಲು ದಾಟಿ ಹೊರಬಂದು ಅದರಲ್ಲಿ ಸೇರಿಕೊಳ್ಳುವವರಲ್ಲ. ವಸಂತ ಬನ್ನಾಡಿ ಅಂತಹ ಒಬ್ಬರು ಫೇಸ್ ಬುಕ್ ಪ್ರಗತಿಪರರು.

 

ನಿನ್ನೆ 'ನಿಮಗೆ ಶಿಕ್ಷಣ ಮುಖ್ಯವೋ ಧರ್ಮ ಮುಖ್ಯವೋ ಎಂದು ಮಕ್ಕಳನ್ನು ಕೇಳುವವರು, ಶಿಕ್ಷಣಕ್ಕಿಂತ ಧರ್ಮವೇ ಮುಖ್ಯ ಎಂದು ಮಕ್ಕಳಿಂದ ಹೇಳಿಸುವವರು ಇಬ್ಬರೂ ಮೂಲಭೂತವಾದಿಗಳೇ' ಎಂದು ಒಂದು ಸ್ಟೇಟಸ್ ಹಾಕಿದ್ದೆ. ಅಷ್ಟಕ್ಕೇ ನಾನು ಇವರ ದೃಷ್ಟಿಯಲ್ಲಿ ಸಂಘೀ ಮನಸ್ಥಿತಿಯವನಾಗಿಬಿಟ್ಟೆ! ವಾಸ್ತವದಲ್ಲಿ, ಇಂದು ಸಂಘಪರಿವಾರ ಒಂದೊಂದು ಅಜೆಂಡಾ ಹುಟ್ಟು ಹಾಕಿ ಹೆಚ್ಚು ಹೆಚ್ಚು ಹಿಂದೂಗಳನ್ನು ತನ್ನ ತೆಕ್ಕೆಗೆ ತೆಗೆದುಕೊಳ್ಳುವಲ್ಲಿ ಯಶಸ್ವಿಯಾಗಲು ಬನ್ನಾಡಿಯಂತಹ ಎಡಬಿಡಂಗಿ ಪ್ರಗತಿಪರರೂ ತಮ್ಮದೇ ಕೊಡುಗೆ ನೀಡುತ್ತಿದ್ದಾರೆ. ಅದು ಒಂದು ಕಡೆಯಾದರೆ, ಇನ್ನೊಂದು ಕಡೆ ಇಂತಹವರು ಹಿಜಾಬನ್ನು, ಬುರ್ಕಾವನ್ನು ಸಾರಾಸಗಟಾಗಿ ಸಮರ್ಥಿಸುವ ಮೂಲಕ ಅತ್ತ ಮುಸ್ಲಿಂ ಹೆಣ್ಣುಮಕ್ಕಳ ಮೇಲೆ ಮುಸ್ಲಿಂ ಮೂಲಭೂತವಾದಿಗಳ ಹಿಡಿತ ಇನ್ನಷ್ಟು ಬಿಗಿಯಾಗಲು ಸಹಕರಿಸುತ್ತಿದ್ದಾರೆ. ಬರೇ ಮೆಜಾರಿಟಿ ಮೂಲಭೂತವಾದವನ್ನು ವಿರೋಧಿಸುತ್ತ ಮೈನಾರಿಟಿ ಮೂಲಭೂತವಾದದತ್ತ ಕುರುಡರಂತೆ ವರ್ತಿಸುವ ವಸಂತ ಬನ್ನಾಡಿಯಂತಹ ಈಸಿ ಚೇರ್ ಪ್ರಗತಿಪರರು ಏನನ್ನು ಸಾಧಿಸಬಲ್ಲರು?

Enjoyed this article? Stay informed by joining our newsletter!

Comments

You must be logged in to post a comment.

Related Articles
About Author