ಸುಪ್ರೀಂ ನ್ಯಾಯಪೀಠದಿಂದ ಭಿನ್ನ ತೀರ್ಪು: ಸಿಜೆಐ ಅಂಗಳಕ್ಕೆ ಹಿಜಾಬ್ ವಿವಾದ

Different verdict from Supreme Court: Hijab dispute to CJI's court

Featured Image Source: Google 

ನವದೆಹಲಿ: ದೇಶಾದ್ಯಂತ ಸಂಚಲನ ಸೃಷ್ಟಿಸಿದ್ದ ರಾಜ್ಯದ ಹಿಜಾಬ್ ವಿವಾದ ಕುರಿತು ಸುಪ್ರೀಂ ಕೋರ್ಟ್ ನ್ಯಾಯಪೀಠ ವಿಭಿನ್ನ ತೀರ್ಪು ನೀಡಿದ ಕಾರಣ ಹಿಜಾಬ್ ವಿವಾದವೀಗ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಅವರ ಅಂಗಳಕ್ಕೆ ತಲುಪಿದೆ. 

ಕರ್ನಾಟಕ ಹೈಕೋರ್ಟ್ ಆದೇಶವನ್ನು ಪ್ರಶ್ನಿಸಿ ಉಡುಪಿಯ ವಿದ್ಯಾರ್ಥಿನಿಯರು ಸಲ್ಲಿಸಿದ್ದ ಅರ್ಜಿಯನ್ನು ಆಲಿಸಿದ ಸುಪ್ರೀಂ ಕೋರ್ಟ್ ನ್ಯಾಯಪೀಠ ಒಮ್ಮತದ ತೀರ್ಪು ನೀಡುವಲ್ಲಿ ವಿಫಲವಾಗಿದೆ.  ಹಾಗಾಗಿ ಮುಂದಿನ ವಿಚಾರಣೆಯನ್ನು ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆ ಮಾಡಿದೆ. 

ಇದೀಗ ವಿಚಾರಣೆಗಾಗಿ ವಿಸ್ತ್ರೃತ ಪೀಠ ರಚನೆ ಮಾಡಬೇಕಿದ್ದು ಅಲ್ಲಿಯವರೆಗೆ ಹೈಕೋರ್ಟ್ ತೀರ್ಪಿನ ಅನುಸಾರ ಯಥಾಸ್ಥಿತಿ ಕಾಪಾಡಿಕೊಳ್ಳಬೇಕೆಂದು ಮುಖ್ಯ ನ್ಯಾಯಮೂರ್ತಿ ಆದೇಶ ನೀಡಿದ್ದಾರೆ.

ಈ ದಿನ ಹಿಜಾಬ್ ವಿವಾದದ ಅಂತಿಮ ತೀರ್ಪು ಬರುವುದಿತ್ತು. ಆದರೆ ನ್ಯಾಯಮೂರ್ತಿ ಹೇಮಂತ್ ಗುಪ್ತ ಹಾಗೂ ನ್ಯಾಯಮೂರ್ತಿ ಸುಧಾಂಶು ಧುನಿಯಾ  ಭಿನ್ನವಾಗಿ ತೀರ್ಪು ನೀಡಿದ್ದಾರೆ.  ಹೇಮಂತ್ ಗುಪ್ತ ವಿದ್ಯಾರ್ಥಿನಿಯರ ಮೇಲ್ಮನವಿಯನ್ನು ತಳ್ಳಿ ಹಾಕಿದ್ದರೆ ಸುಧಾಂಶು ಅವರು ಪುರಸ್ಕರಿಸಿದ್ದಾರೆ. ಇಬ್ಬರು ನ್ಯಾಯಮೂರ್ತಿಗಳ ನಡುವಿನ ಈ ಭಿನ್ನಾಭಿಪ್ರಾಯದ ಕಾರಣದಿಂದ ಪ್ರಕರಣವೀಗ ಮುಖ್ಯ ನ್ಯಾಯಮೂರ್ತಿಗಳ ಪೀಠಕ್ಕೆ ವರ್ಗಾವಣೆಯಾಗಿದೆ.

ಏನಿದು ಹಿಜಾಬ್ ವಿವಾದ?

ಶಾಲಾ ತರಗತಿಗಳಲ್ಲಿ ಹಿಜಾಬ್ ಧರಿಸಿ ಪಾಠ ಕೇಳಲು ಅವಕಾಶ ಕಲ್ಪಿಸಬೇಕೆಂದು ಉಡುಪಿ ಜಿಲ್ಲೆಯ ಆರು ವಿದ್ಯಾರ್ಥಿನಿಯರು ಪ್ರತಿಭಟನೆ ನಡೆಸುವುದರೊಂದಿಗೆ ಈ ವಿವಾದ ಹುಟ್ಟಿಕೊಂಡಿತ್ತು.ಉಡುಪಿಯ ಸರ್ಕಾರಿ ಪದವಿ ಪೂರ್ವ ಬಾಲಕಿಯರ ಕಾಲೇಜಿನ ವಿದ್ಯಾರ್ಥಿನಿಯರು ತಮಗೆ ಹಿಜಾಬ್ ಧರಿಸಿ ತರಗತಿಗೆ ಹಾಜರಾಗಲು ಅವಕಾಶ ಕಲ್ಪಿಸಬೇಕೆಂದು ಪಟ್ಟು ಹಿಡಿದಿದ್ದರು. ಈ ಪ್ರತಿಭಟನೆಗೆ ರಾಜ್ಯದ ನಾನಾ ಕಡೆಗಳಲ್ಲಿ ಬೆಂಬಲ ದೊರಕಿದ್ದು ಮಂಡ್ಯದ ಕಾಲೇಜು ವಿದ್ಯಾರ್ಥಿನಿಯೊಬ್ಬಳು ಶಾಲಾ ಆವರಣದಲ್ಲೇ ಅಲ್ಲಾಹು ಅಕಬರ್ ಘೋಷಣೆ ಕೂಗಿ ಸುದ್ದಿಯಾಗಿದ್ದಳು. ಹತ್ತನೇ ತರಗತಿ ಹಾಗೂ ಪಿಯು ಪರೀಕ್ಷೆಗಳ ಸಮಯದಲ್ಲಿ ಕೂಡ ಹಿಜಾಬ್ ಧರಿಸಲು ಅವಕಾಶ ನೀಡಬೇಕೆಂಬ ಕೂಗು ಬಲವಾಗಿತ್ತು.  ಈ ಸಂಬಂಧ ವಿದ್ಯಾರ್ಥಿನಿಯರು ಶಿಕ್ಷಣ ಸಂಸ್ಥೆಗಳಲ್ಲಿ ಹಿಜಾಬ್ ಅಥವಾ ಇಸ್ಲಾಂ ಸಾಂಪ್ರದಾಯಿಕ ವಸ್ತ್ರ ಧರಿಸಲು ಅವಕಾಶ ನೀಡದ ರಾಜ್ಯ ಸರ್ಕಾರದ ನಿರ್ದಾರವನ್ನು ಪ್ರಶ್ನಿಸಿ ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿದ್ದರು.

ಈ ವರ್ಷ ಮಾರ್ಚ್ 15ರಂದು ಹೈಕೋರ್ಟ್ ಈ ಬಗ್ಗೆ ತೀರ್ಪು ನೀಡಿ ಹಿಜಾಬ್ ಧಾರಣೆ ಅತ್ಯಗತ್ಯ ಧಾರ್ಮಿಕ ಆಚರ್ಣೆಯ ಭಾಗವಲ್ಲ  ಶಿಕ್ಷಣ ಸಂಸ್ಥೆಗಳಲ್ಲಿ ಏಕರೂಪದ ಡ್ರೆಸ್ ಕೋಡ್ ನ್ನು ಸೂಚಿಸಿರುವುದು ಮೂಲಭೂತ ಹಕ್ಕುಗಳ ಉಲ್ಲಂಘನೆಯಲ್ಲ ಎಂದು ಹೇಳಿತ್ತು. ಈ ತೀರ್ಪು ಪ್ರಶ್ನಿಸಿ ವಿದ್ಯಾರ್ಥಿನಿಯರು ಸುಪ್ರೀಂ ಕೋರ್ಟ್ ಮೊರೆ ಹೋಗಿದ್ದರು.

ಹತ್ತು ದಿನದ ಕಾಲ ವ್ಯಾಪಕ ವಿಚಾರಣೆ ನಡೆಸಿದ ಕೋರ್ಟ್ ಇಂದು ಭಿನ್ನವಾದ ತೀರ್ಪು ನೀಡಿದೆ. ಸುಪ್ರೀಂ ಕೋರ್ಟ್ ನಲ್ಲಿ ಹಿಜಾಬ್ ನಿಷೇಧದ ವಿರುದ್ಧ ಹಿರಿಯ ವಕೀಲರಾದ ಕಪಿಲ್ ಸಿಬಲ್, ದುಷ್ಯಂತ್ ದವೆ, ಸಲ್ಮಾನ್ ಖುರ್ಷಿದ್, ರಾಜೀವ್ ಧವನ್, ಸಂಜಯ್ ಹೆಗ್ಡೆ, ದೇವದತ್ ಕಾಮತ್ ವಾದಿಸಿದ್ದರೆ ರಾಜ್ಯ ಸರ್ಕಾರದ ಪರ ಸಾಲಿಸಿಟರ್ ಜನರಲ್ ತುಷಾರ್ ಮೆಹ್ತಾ, ಕರ್ನಾಟಕ ಎಜಿ ಪ್ರಭುಲಿಂಗ ನಾವಡಗಿ ಮತ್ತು ಎಎಸ್‌ಜಿ ಕೆ.ಎಂ.ನಟರಾಜ್  ವಾದ ಮಂಡಿಸಿದ್ದರು.

Photo courtesy: Google

Enjoyed this article? Stay informed by joining our newsletter!

Comments

You must be logged in to post a comment.

Related Articles
About Author