ತುಮಕೂರು : ನಗರದ ಹೊರವಲಯದಲ್ಲಿರುವ ರಿಂಗ್ ರೋಡ್ ಉದ್ಘಾಟನೆಗೆ ಮುನ್ನವೇ ಶಿಥಿಲಗೊಳ್ಳುತ್ತಿದ್ದು ಇದೊಂದು ಸ್ಮಾರ್ಟ್ ಸಿಟಿ ಲಿಮಿಟೆಡ್ ಪ್ರಾಯೋಜಕತ್ವದ ಅಪ್ರಯೋಜಕ ಕೆಲಸ ಎಂದರೆ ತಪ್ಪಾಗಲಾರದು. ಸುಮಾರು ೯೭ ಕೋಟಿ ವೆಚ್ಚದಲ್ಲಿ ಪುನರಾಭಿವೃದ್ದಿಗೊಳಿಸಿರುವ ಈ ರಸ್ತೆ ಅವ್ಯವಸ್ಥೆಗಳ ಆಗರವಾಗಿದೆ ಎಂದು ಡಾ.ರಫೀಕ್ ಅಹ್ಮದ್ ಆರೋಪಿಸಿದ್ದಾರೆ.
ನಗರದ ಗುಬ್ಬಿ ರೋಡ್ ನಿಂದ ಪ್ರಾರಂಭವಾಗಿ ಕ್ಯಾತ್ಸಂದ್ರ ಟೋಲ್ ಗೇಟ್ ಬಳಿ ಮುಕ್ತಾಯವಾಗುವ ಈ ರಸ್ತೆ ಸ್ಮಾರ್ಟ್ಸಿಟಿ ವತಿಯಿಂದ ಪುನರಾಭಿವೃದ್ದಿಗೊಂಡು ಉದ್ಘಾಟನೆ ಹಂತ ತಲುಪಿದೆ. ಆದರೆ ರಸ್ತೆ ಬದಿ ಸರತಿ ಸಾಲಿನಲ್ಲಿ ಅಳವಡಿಸಿರುವ ಬಹುತೇಕ ಎಲ್.ಇ.ಡಿ ಬಲ್ಬ್ಗಳು ಬೆಳಗುತ್ತಿಲ್ಲ, ಕೆಲವೊಂದು ಬೆಳಗುತ್ತಿದ್ದರೂ ಮಂದ ಬೆಳಕಿನಿಂದ ಕೂಡಿವೆ. ಈ ರಸ್ತೆಯೂ ಸಹ ಹದಗೆಟ್ಟಿದ್ದು ಅಸಮತೋಲನವಾಗಿ ಅಲ್ಲಲ್ಲಿ ಗುಂಡಿಗಳಂತೆ ಮಾರ್ಪಟ್ಟಿದೆ ಈ ಕಾರಣ ಮಳೆ ನೀರು ಹೊರಹೋಗದೆ ರಸ್ತೆ ಮೇಲೆ ನೀರು ನಿಲ್ಲುತ್ತಿದೆ. ಡಿವೈಡರ್ ಗಳು ಹಾಳಾಗಿದ್ದು ಅಪಘಾತಗಳು ಹೆಚ್ಚುತ್ತಿದೆ. ಸಿಸಿಟಿವಿ ಕ್ಯಾಮೆರಾ ಅಳವಡಿಸಿದ್ದು ಅವುಗಳು ಎಷ್ಟರ ಮಟ್ಟಿಗೆ ಚಾಲ್ತಿಯಲ್ಲಿವೆ ಎಂಬ ಅನುಮಾನ ಮೂಡಿದೆ. ಇಷ್ಟೆಲ್ಲಾ ಲೋಪಗಳಿದ್ದು ಜನಪ್ರತಿನಿಧಿಗಳು ಮತ್ತು ಅಧಿಕಾರಿಗಳು ಕಣ್ಮುಚ್ಚಿ ಕುಳಿತಿದ್ದಾರೆ ಎಂದು ಮಾಜಿ ಶಾಸಕರು ವಾಗ್ದಾಳಿ ನಡೆಸಿದ್ದಾರೆ.
97 ಕೋಟಿ ವೆಚ್ಚದಲ್ಲಿ ಸುಸಜ್ಜಿತವಾಗಿ ನಿರ್ಮಾಣಗೊಂಡು ನಗರದ ಅಭಿವೃದ್ದಿಗೆ ಹಿಡಿದ ಕೈಗನ್ನಡಿಯಂತೆ ಇರಬೇಕಾದ ಈ ರಸ್ತೆ ಉದ್ಘಾಟನೆಗೆ ಮುನ್ನವೇ ಶಿಥಿಲಾವಸ್ಥೆ ತಲುಪಿರುವುದು ದುರ್ದೈವದ ಸಂಗತಿ. ಸ್ಮಾರ್ಟ್ ಸಿಟಿ ಲಿಮಿಟೆಡ್ ಭ್ರಷ್ಟಾಚಾರ ಎಷ್ಟರ ಮಟ್ಟಿಗೆ ಇದೆ ಎಂದರೆ ನಗರದ ಪ್ರಮುಖ ಹೆದ್ದಾರಿಯಲ್ಲಿಯೇ ಇವರ ಅಸಮರ್ಪಕ ಕಾಮಗಾರಿಗಳು ನಾಟ್ಯವಾಡುತ್ತಾ ಸ್ಮಾರ್ಟ್ ಸಿಟಿ ಎಂಬ ಹೆಸರನ್ನೇ ನಾಚಿಸುವಂತಿದೆ. ಕೂಡಲೇ ಈ ಸಮಸ್ಯೆಗಳನ್ನು ಪರಿಹರಿಸಿ ಎಂದು ಡಾ.ರಫೀಕ್ ಅಹ್ಮದ್ ಆಗ್ರಹಿಸಿದ್ದಾರೆ.
You must be logged in to post a comment.