ಎಂಟು ವರ್ಷಗಳ ಮೋದಿ ‌ಆಡಳಿತ....

Eight years of Modi's rule

Featured Image Source: Time

ಎಂಟು ವರ್ಷಗಳ ಭಾರತ ಸರ್ಕಾರದ ಯು ಟರ್ನ್ ಆಡಳಿತ ಹೇಗಿದೆ.....

 

ಅತ್ಯುತ್ತಮ - ಉತ್ತಮ - ಸಾಧಾರಣ - ಕಳಪೆ .....

 

ಇದರ ಬಗ್ಗೆ ಬರೆಯುವ ಪ್ರತಿ ಅಕ್ಷರದ ಓದಿನಲ್ಲೂ ಟೀಕೆ ಅಥವಾ ಪ್ರಶಂಸೆಯನ್ನು ಹುಡುಕುವ ಕೆಲವು ಮನಸ್ಸುಗಳು ಈತ ಎಡಪಂಥೀಯನೋ ಬಲಪಂಥೀಯನೋ ಎಂದೇ ಓದುತ್ತಾರೆ. ಏಕೆಂದರೆ ಈ ಎಂಟು ವರ್ಷಗಳಲ್ಲಿ ಸಾಮಾಜಿಕ ಜಾಲತಾಣಗಳ ಪ್ರಭಾವದಿಂದಾಗಿ ನಾವೆಲ್ಲರೂ ಯಾವುದೋ ಪಕ್ಷದವರು, ಯಾವುದೋ ಧರ್ಮದವರು, ಯಾವುದೋ ಜಾತಿಯವರು, ಯಾವುದೋ ಸಿದ್ದಾಂತದವರು, ಯಾವುದೋ ಪ್ರದೇಶದವರು ಆಗಿದ್ದೇವೆಯೇ ಹೊರತು ನಿಜವಾದ ಭಾರತೀಯರಾಗಿ ಉಳಿದೇ ಇಲ್ಲ. ಮತ್ತೆ ಕೆಲವರು ಒಮ್ಮೊಮ್ಮೆ ಉತ್ಸಾಹ ಮತ್ತೊಮ್ಮೆ ನಿರಾಸೆಯಿಂದ ವೈಯಕ್ತಿಕ ನೆಲೆಯಲ್ಲಿ ಮಾತನಾಡುತ್ತಾರೆ. ಇನ್ನೊಂದಿಷ್ಟು ಜನ ತೀವ್ರ ಭಾವುಕತೆ ಅಥವಾ ತೀವ್ರ ನಿರ್ಲಕ್ಷ್ಯ ತೋರಿಸುತ್ತಾರೆ.

 

75 ವರ್ಷಗಳ ಸ್ವಾತಂತ್ರ್ಯ ನಂತರದ ದೇಶ, ಜಾಗತಿಕ ಮಟ್ಟದಲ್ಲಿ ನಮ್ಮ ಸ್ಥಾನ, ಸ್ಥಳೀಯ ಜೀವನಮಟ್ಟ ಮುಂತಾದ ವಿಷಯಗಳಲ್ಲಿ ನಿಜವಾದ ಪ್ರಗತಿಯ ಬಗ್ಗೆ ಸಮಗ್ರವಾಗಿ ಯೋಚಿಸಿ ಯಾವುದೇ ಪೂರ್ವಾಗ್ರಹ ಇಲ್ಲದೇ ಈ ಎಂಟು ವರ್ಷಗಳ ಆಡಳಿತ ವಿಮರ್ಶೆ ಮಾಡಬೇಕಾಗಿದೆ.

 

ಅಚ್ಚೇದಿನ್ ಘೋಷಣೆಯೊಂದಿಗೆ ಅಧಿಕಾರಕ್ಕೇರಿದ ಪ್ರಧಾನಿಯವರ ಈ ಎಂಟು ವರ್ಷಗಳನ್ನು ಹೇಗೆ ನೋಡುವುದು, ಹೇಗೆ ಅರ್ಥೈಸುವುದು.....

 

ಲಕ್ಷ ಲಕ್ಷ ಅಭಿಪ್ರಾಯಗಳು ನಮ್ಮ ಮುಂದಿವೆ. ಪ್ರಧಾನಿ ನರೇಂದ್ರ ಮೋದಿಯವರು ಒಬ್ಬ ಸಂತ ಎಂದು ಪ್ರಾರಂಭವಾಗಿ ದೇಶವನ್ನು ಹೀನಾಯ ಪರಿಸ್ಥಿತಿಗೆ ತಂದರು ಎಂಬಲ್ಲಿಗೆ ಬಂದು ನಿಲ್ಲುತ್ತದೆ.

 

ಅಂತಿಮ ಅಭಿಪ್ರಾಯ ಮತ್ತು ತೀರ್ಮಾನ ನಿಮ್ಮದೇ ಆದರೂ ಯಾವ ಅಂಶಗಳ ಆಧಾರದ ಮೇಲೆ ಇದನ್ನು ನಿರ್ಧರಿಸಬೇಕು ಎಂಬುದನ್ನು ಮಾತ್ರ ಇಲ್ಲಿ ಹೇಳಲಾಗಿದೆ.

 

ತುಂಬಾ ಸರಳವಾದ ಒಂದು ಲೆಕ್ಕಾಚಾರ.....

 

ಭೂತ - ಭವಿಷ್ಯದ ಆಧಾರದ ಮೇಲೆ ಸಮರ್ಥನೆ ಅಥವಾ ವಿರೋಧ ಬೇಡ. ಕೇವಲ ಅವರ ಎಂಟು ವರ್ಷಗಳ ಆಡಳಿತದಲ್ಲಿ ಆದ ಅನುಕೂಲ ಮತ್ತು ಅನಾನುಕೂಲಗಳನ್ನು ನಮ್ಮ ನೆಲೆಯಲ್ಲಿ ನಿಂತು ನೋಡೋಣ.

 

ಈ ಎಂಟು ವರ್ಷಗಳಲ್ಲಿ ನಮ್ಮ ವೈಯಕ್ತಿಕ ಬದುಕಿನಲ್ಲಿ ಆಗಿರುವ ಬದಲಾವಣೆ, ಹಾಗೆಯೇ ನಮ್ಮ ಕುಟುಂಬ, ನಮ್ಮ ಬೀದಿ, ನಮ್ಮ ಊರು ನಮ್ಮ ಹೋಬಳಿ, ತಾಲ್ಲೂಕು, ಜಿಲ್ಲೆ , ರಾಜ್ಯ ಮತ್ತು ದೇಶ ಇವೆಲ್ಲವೂ ಉತ್ತಮ ಗುಣಮಟ್ಟದಲ್ಲಿ ಅಭಿವೃದ್ಧಿ ಆಗಿದೆಯೇ ಅಥವಾ ಮೊದಲಿಗಿಂತ ಕಠಿಣ ಪರಿಸ್ಥಿತಿ ಎದುರಾಗಿದೆಯೇ ?

 

ತುಂಬಾ ನಿಷ್ಪಕ್ಷಪಾತವಾಗಿ ಯೋಚಿಸಬೇಕು. 360 ಡಿಗ್ರಿ ದೃಷ್ಟಿಕೋನದಿಂದ ಪರಿಶೀಲಿಸಬೇಕು. ಇಲ್ಲಿ ಬೇರೆಯವರಿಗೆ ಉತ್ತರಿಸುವುದಕ್ಕಿಂತ ನಮ್ಮ ಆತ್ಮಸಾಕ್ಷಿಗೆ ಉತ್ತರ ಹೇಳಬೇಕಿದೆ.

 

ಇಲ್ಲಿ ಮತ್ತೊಂದು ವಿಷಯ ನೆನಪಿಡಿ, ನರೇಂದ್ರ ಮೋದಿ ನಮ್ಮ ದೊಡ್ಡಪ್ಪ ಅಲ್ಲ, ರಾಹುಲ್ ಗಾಂಧಿ ನಮ್ಮ ಚಿಕ್ಕಪ್ಪ ಅಲ್ಲ, ಮಮತಾ ಬ್ಯಾನರ್ಜಿ ಮಾಯಾವತಿಯವರು ನಮ್ಮ ಆಂಟಿಯರಲ್ಲ. ಅವರು ನಮ್ಮಿಂದ ಅಜಗಜಾಂತರ ದೂರದಲ್ಲಿದ್ದಾರೆ. ಅವರಿಂದ ನಮಗೆ ವೈಯಕ್ತಿಕವಾಗಿ ಯಾವುದೇ ಲಾಭವೂ ಇಲ್ಲ ನಷ್ಟವೂ ಇಲ್ಲ.

 

ಈ ಮಣ್ಣಿನಲ್ಲಿ ಹುಟ್ಟಿದ್ದೇವೆ, ಇಲ್ಲಿನ ಗಾಳಿ ನೀರು ಆಹಾರ ‌ಸೇವಿಸಿದ್ದೇವೆ. ಈ ದೇಶಕ್ಕೆ ಕೃತಜ್ಞರಾಗಿರುವುದು ನಮ್ಮ ಕರ್ತವ್ಯ ಮತ್ತು ಜವಾಬ್ದಾರಿ.

 

ಜಾತಿ ಧರ್ಮ ಭಾಷೆ ಎಲ್ಲವೂ ಮನುಷ್ಯನ ಸೃಷ್ಟಿ. ಮನುಷ್ಯನ ಏಳಿಗೆಯೇ ನಿಜವಾದ ಅಭಿವೃದ್ಧಿ. ಆ ದೃಷ್ಟಿಕೋನದಿಂದ ಆಡಳಿತವನ್ನು ನೋಡಬೇಕು.

 

ಅತ್ಯುತ್ತಮ ಆಡಳಿತ ಎಂಬ ಭಜನೆಯಾಗಲಿ ಅಥವಾ ಕೆಟ್ಟ ಆಡಳಿತ ಎಂಬ ದ್ವೇಷವೂ ಒಳ್ಳೆಯದಲ್ಲ. ಯಾವುದೋ ಪಕ್ಷ ಅಥವಾ ಪಂಥದ ವಕ್ತಾರರಂತೆ ಮಾತನಾಡುವುದು ಸುಲಭ. ಏಕೆಂದರೆ ಅವರನ್ನು ಹೊಗಳಲು ಮತ್ತು ಟೀಕಿಸಲು ಹಲವಾರು ಕಾರಣಗಳು ಸಿಗುತ್ತವೆ. ಅಂಕಿಅಂಶಗಳು ದೊರೆಯುತ್ತದೆ. ಆದರೆ ಅದು ವಾಸ್ತವ ಪರಿಸ್ಥಿತಿಯನ್ನು ಬಿಂಬಿಸುವುದಿಲ್ಲ.

 

ಕೆಲವು ಆರ್ಥಿಕ ತಜ್ಞರು, ರಾಜಕೀಯ ಚಿಂತಕರು, ಮಾಧ್ಯಮ ಪಂಡಿತರುಗಳು ಹಲವಾರು ವೇದಿಕೆಗಳಲ್ಲಿ ಅವರ ಅಭಿಪ್ರಾಯ ವ್ಯಕ್ತಪಡಿಸುತ್ತಾರೆ. ಸಾಮಾಜಿಕ ಜಾಲತಾಣಗಳಲ್ಲಿಯೂ ಅನೇಕರು ಮೋದಿಯವರ ಆಡಳಿತದ ಬಗ್ಗೆ ಲೇಖನಗಳನ್ನು ಬರೆಯುತ್ತಾರೆ. ಆದರೆ ನಾವುಗಳು ಇವುಗಳ ಪ್ರಭಾವಕ್ಕೆ ಒಳಗಾಗಬಾರದು. ಇದನ್ನು ಒಂದು ಮಾಹಿತಿ ಎಂದು ಪರಿಗಣಿಸಿ ಇದರ ಆಧಾರದ ಮೇಲೆ ನಾವೇ ಚಿಂತಿಸಿ ಒಂದು ಅಭಿಪ್ರಾಯ ರೂಪಿಸಿಕೊಳ್ಳಬೇಕು.

 

ನಮ್ಮಲ್ಲಿ ಸ್ವತಂತ್ರ ಚಿಂತನೆಯ ಕೊರತೆ ಬಹಳ ಇದೆ. ನಾವು ತಜ್ಞರಲ್ಲದೇ ಇರಬಹುದು. ಆದರೆ ಯೋಚಿಸುವ ಶಕ್ತಿ ಇದೆಯಲ್ಲವೇ, ಎಲ್ಲಾ ಮಾಹಿತಿಗಳು ಬೆರಳ ತುದಿಯಲ್ಲಿ ಸಿಗುತ್ತದೆ. ಅದನ್ನು ಉಪಯೋಗಿಸಿಕೊಳ್ಳಬೇಕು. ನಾನೇ ಆಗಲಿ ಅಥವಾ ಯಾರೇ ಆಗಿರಲಿ ಏನೇ ಬರೆದರು ಅದು ನಮ್ಮ ಅಭಿಪ್ರಾಯ ಮಾತ್ರ. ದೇಶದ ಪ್ರತಿ ವ್ಯಕ್ತಿಯ ಸ್ವತಂತ್ರ ಚಿಂತನೆ ಬೆಳೆಸಿಕೊಂಡರೆ ಪ್ರಬುದ್ಧ ಸಮಾಜದ ನಿರ್ಮಾಣ ಸಾಧ್ಯ. ಚುನಾವಣಾ ರಾಜಕೀಯದಲ್ಲಿ ತನ್ನ ಮತವನ್ನು ಜವಾಬ್ದಾರಿಯಿಂದ ಚಲಾಯಿಸಲು‌ ಸಾಧ್ಯ.

 

ಈ ಹಿನ್ನೆಲೆಯಲ್ಲಿ ನರೇಂದ್ರ ಮೋದಿಯವರ ಎಂಟು ವರ್ಷದ ಆಡಳಿತವನ್ನು ವಿಮರ್ಶಸಬೇಕು. ಈ ಅವಧಿಯಲ್ಲಿ ದೇಶದ ಆರ್ಥಿಕ ಪರಿಸ್ಥಿತಿ ಮೇಲೇರಿದೆಯೇ ಅಥವಾ ಕುಸಿದಿದೆಯೇ, ಜಾತಿ ಧರ್ಮಗಳ ಸಾಮಾಜಿಕ ಸಾಮರಸ್ಯ ಉತ್ತಮವಾಗಿದೆಯೇ ಅಥವಾ ಹದಗೆಟ್ಟಿದೆಯೇ, ನಿರುದ್ಯೋಗಿಗಳ ಸಂಖ್ಯೆ ಕಡಿಮೆಯಾಗಿದೆಯೇ ಅಥವಾ ಹೆಚ್ಚಾಗಿದೆಯೇ, ಅವರು ಘೋಷಿಸುವ ಯೋಜನೆಗಳು ಕೇವಲ ಪುಸ್ತಕದಲ್ಲಿ ಮಾತ್ರವೇ ಅಥವಾ ವಾಸ್ತವವಾಗಿ ಜಾರಿಯಾಗುತ್ತಿದೆಯೇ, ಪ್ರಜಾಪ್ರಭುತ್ವ ವ್ಯವಸ್ಥೆಯ ಸಂಸ್ಥೆಗಳನ್ನು ಅವರು‌ ಸರಿಯಾಗಿ ನಿಭಾಯಿಸುತ್ತಿದ್ದಾರೆಯೇ ಅಥವಾ ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆಯೇ, ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ಆಡಳಿತ ಮಾಡುತ್ತಿದ್ದಾರೆಯೇ ಅಥವಾ ಸರ್ವಾಧಿಕಾರಿಯಂತೆ ವರ್ತಿಸುತ್ತಿದ್ದಾರೆಯೇ, ಅವರ ಪ್ರತಿ ಮಾತುಗಳಲ್ಲಿ ಇರುವ ಸ್ವಾಭಾವಿಕತೆ ಅಥವಾ ಕೃತಕತೆ ಎಷ್ಟು, ಅದರಲ್ಲಿ ಅಡಗಿರುವ ಪ್ರೀತಿ ವಿಶ್ವಾಸ ಕರುಣೆ ಸ್ವಾರ್ಥ - ನಿಸ್ವಾರ್ಥ ದ್ವೇಷ ಅಸೂಯೆ ಕ್ರೌರ್ಯದ ಪ್ರಮಾಣ ಯಾರ ಬಗ್ಗೆ ಹೇಗಿದೆ, ಭರವಸೆ ಮತ್ತು ಕಾರ್ಯಗತಗೊಳಿಸುವಿಕೆ ಇವುಗಳ ನಡುವಿನ ಅಂತರ ಎಷ್ಟಿದೆ ಮುಂತಾದ ವಿಷಯಗಳನ್ನು ‌ಸೂಕ್ಷ್ಮವಾಗಿ ಮತ್ತು ಕೂಲಂಕಷವಾಗಿ ನಮ್ಮ ಮನದಲ್ಲಿ ಚಿಂತನ ಮಂಥನ ನಡೆಸಬೇಕು.

 

ಇಲ್ಲಿಯೂ ನಮಗೆ ಲಾಭವಾಗುವ ವಿಷಯಗಳು ಉತ್ತಮ ಮತ್ತು ತೊಂದರೆಯಾಗುವ ವಿಷಯಗಳು ಕೆಟ್ಟದ್ದು ಎಂಬ ಆಧಾರದಲ್ಲಿ ಅಭಿಪ್ರಾಯ ವ್ಯಕ್ತಪಡಿಸದೆ ಒಟ್ಟು ದೇಶದ ಹಿತಾಸಕ್ತಿಯಿಂದ ನೋಡಬೇಕು. ಆಗ ಮಾತ್ರ ಭಾರತದ ಪ್ರಧಾನಿ ನರೇಂದ್ರ ಮೋದಿಯವರ ಎಂಟು ವರ್ಷಗಳ ಆಡಳಿತದ ಬಗ್ಗೆ ನಿಷ್ಪಕ್ಷಪಾತ ಮತ್ತು ವಾಸ್ತವ ವಿಮರ್ಶೆ ಸಾಧ್ಯ. ಅಷ್ಟು ಸಮಯ ಮತ್ತು ಆಸಕ್ತಿ ಇದ್ದರೆ ಮಾತ್ರ ಇದರ ಬಗ್ಗೆ ಒಂದಷ್ಟು ಖಚಿತವಾಗಿ ಮಾತನಾಡಬಹುದು. ಅವರ ಅವಧಿಯ Quality ಮತ್ತು Quantity ಯ ಪ್ರಮಾಣ ನಿರ್ಧರಿಸಬಹುದು.

 

ಭಾರತದ ಶ್ರೀಮಂತರ ಸಂಖ್ಯೆ ಎಷ್ಟು ಹೆಚ್ಚಾಗುತ್ತಿದೆ, ಆರ್ಥಿಕ ಗಾತ್ರ ಹೇಗೆ ಬೆಳೆಯುತ್ತಿದೆ, ದೇಶದ ಜಾಗತಿಕ ವರ್ಚಸ್ಸು ಹೇಗೆ ವೃದ್ಧಿಸುತ್ತಿದೆ ಎಂದು ಯೋಚಿಸುವ ಮನಸ್ಸುಗಳು ಹಾಗೆಯೇ ರೈತರು, ಕೂಲಿ ಕಾರ್ಮಿಕರು, ಮಹಿಳೆಯರು, ನಿರ್ಗತಿಕರು, ಸಾಮಾನ್ಯ ವರ್ಗದ ಜನ ಹೇಗೆ ನರಳುತ್ತಿದ್ದಾರೆ ಎಂಬುದನ್ನೂ ಗಣನೆಗೆ ತೆಗೆದುಕೊಳ್ಳಬೇಕು.

 

ಬುಲೆಟ್ ಟ್ರೈನ್ ಮತ್ತು ಹಸಿವಿನ ಸಾವು ಎರಡೂ ನಿಮ್ಮನ್ನು ಕಾಡಬೇಕು, ಗಾಂಧಿ ಮತ್ತು ಗೋಡ್ಸೆ ಅರ್ಥವಾಗಬೇಕು, ಅಂಬೇಡ್ಕರ್ ಮತ್ತು ಮನುಸ್ಮೃತಿಯ ವಾಸ್ತವ ಪ್ರಜ್ಞೆ ಇರಬೇಕು. ಕಾರ್ಲ್ ಮಾರ್ಕ್ಸ್ ಮತ್ತು ಗೌತಮ್ ಅದಾನಿ ಸ್ವಲ್ಪ ಮಟ್ಟಿಗೆ ತಿಳಿದಿರಬೇಕು.

 

ಆಗ ಭಾರತದ ದಿಕ್ಕು ದೆಸೆಯ ಬಗ್ಗೆ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದು. ಮೋದಿಯವರ ಸಾಮರ್ಥ್ಯ ಮತ್ತು ಯೋಗ್ಯತೆ ಅಳೆಯಬಹುದು. ಅದರೊಂದಿಗೆ ನಮ್ಮ ಅರ್ಹತೆಗಳನ್ನು, ಮಾನವೀಯತೆಯನ್ನು ಆತ್ಮಾವಲೋಕನ ಮಾಡಿಕೊಳ್ಳಬಹುದು.

 

ಸ್ವಾವಲಂಬನೆಯ ಭಾರತ ಆಗಬೇಕಾದರೆ ಸ್ವಾಭಿಮಾನಿ ಭಾರತ ಮೊದಲ ಆಧ್ಯತೆಯಾಗಬೇಕು. ಗುಲಾಮಗಿರಿ ಅಥವಾ ಭಜನೆ ಮಂಡಳಿ ಬಿಡಿ. ಸ್ವತಂತ್ರ ಚಿಂತನೆ  ಬೆಳೆಸಿಕೊಳ್ಳಿ. ಮನಸ್ಸಿನ ಅಗಾಧವಾದ ಸರೋವರದಲ್ಲಿ ಸ್ವಚ್ಛಂದವಾಗಿ ವಿಹರಿಸಿ. ಸ್ವಾತಂತ್ರ್ಯದ ಸವಿಯನ್ನು ಅನುಭವಿಸಿ.....

 

ಇದನ್ನು ಯೂಟರ್ನ್ ಆಡಳಿತ ಎಂದು ಕರೆಯಲು ಕಾರಣ, ಎಂಟು ವರ್ಷಗಳ ಹಿಂದಿನ ಎಲ್ಲಾ ಪಕ್ಷಗಳ ಆಡಳಿತ ಹೆಚ್ಚು ಕಡಿಮೆ ಒಂದೇ ರೀತಿಯ ಆದರೆ ವಿವಿಧ ರೂಪದ ಆಡಳಿತ ಕ್ರಮಗಳು. ಆದರೆ ಕಳೆದ ಎಂಟು ವರ್ಷಗಳ ಆಡಳಿತ ಅದಕ್ಕೆ ವಿರುದ್ಧ ಮತ್ತು ಹೆಚ್ಚು ಆಕ್ರಮಣಕಾರಿ ಕ್ರಮಗಳನ್ನು ಕೈಗೊಂಡಿದೆ. ಅದನ್ನು ಒಟ್ಟಾರೆಯಾಗಿ ನೋಡಿದಾಗ.....

 

ವಿದೇಶಿ ಆರ್ಥಿಕ ನೀತಿಗಳು,

ಸ್ವದೇಶಿ ಚಿಂತನೆಯ ಮಾತುಗಳು,

ವಿದೇಶಿ ತಂತ್ರಜ್ಞಾನದ ಅಳವಡಿಕೆ,

ಸ್ವದೇಶಿ  ತಂತ್ರಜ್ಞಾನದ ನಡವಳಿಕೆ,

 

ಕಟ್ಟಡ ಮಾತ್ರ ಸ್ವದೇಶಿಯದು,

ಒಳಾಂಗಣ ವಿನ್ಯಾಸ ಮಾತ್ರ ವಿದೇಶಿಯದು,

ಮೇಲೆ ಥಳುಕು,

ಒಳಗೆ ಬಳುಕು.....

 

ಮೇಲ್ನೋಟಕ್ಕೆ ಸರಳತೆ,

ಒಳಗಡೆ ಶ್ರೀಮಂತಿಕೆ,

 

ರಾಜಕೀಯವಾಗಿ ಅತ್ಯಂತ ಬುದ್ಧಿವಂತಿಕೆ,

ಬುದ್ದಿವಂತಿಕೆಯಲ್ಲಿ ಮಾತ್ರ ಅತ್ಯಂತ ಮಡಿವಂತಿಕೆ....

 

ರೈತರ ಬಗ್ಗೆಯೇ ಸದಾ ಆಲೋಚನೆ,

ಏಕೆಂದರೆ ಅಂಬಾನಿ ಅದಾನಿಗಳ ಒಳಾಲೋಚನೆ..

 

ಮಾಧ್ಯಮಗಳ ಅತ್ಯಂತ ಪ್ರೀತಿಯ ಡಾರ್ಲಿಂಗ್,

ಆದರೆ ಒಂದೇ ಒಂದು ಪತ್ರಿಕಾಗೋಷ್ಠಿ ಮಾಡದೆ ಆ ಪ್ರೀತಿಯ ನಿರ್ಲಕ್ಷ್ಯ...

 

ಪ್ರಖ್ಯಾತ ಕುಖ್ಯಾತರಿಗೆ ಸದಾ ತೆರದ ಬಾಗಿಲ ಸ್ವಾಗತ,

ಸಾಮಾನ್ಯರಿಗೆ ಪಕೋಡ ವ್ಯಾಪಾರದ ಉಚಿತ ಸಲಹೆ....

 

ಒಟ್ಟಾರೆ,

ಶ್ರೀಮಂತರ, ವಿದ್ಯಾವಂತರ, ಬುದ್ದಿವಂತರ, ಮೇಲ್ವರ್ಗದವರ, ವ್ಯಾಪಾರಿಗಳ, ಬಲಾಢ್ಯರ, ದೇಶಭಕ್ತರ, ದೈವ ಭಕ್ತರ, ಸಂಪ್ರದಾಯಿಗಳ, ಶಿಸ್ತು ಬದ್ಧವರ, ಶಿಷ್ಟಾಚಾರಿಗಳ ಪರವಾದ ಮತ್ತು ಅವರುಗಳು ಉತ್ತಮವಾಗಿ ಜೀವನ ನಿರ್ವಹಿಸಲು ಅನುಕೂಲಕರ ಆಡಳಿತ ನೀಡುತ್ತಿರುವ ಸರ್ಕಾರ.

 

ಬಡವರ, ಶ್ರಮಜೀವಿಗಳ, ಕೆಳವರ್ಗದವರ, ಅಷ್ಟೇನು ವಿದ್ಯಾವಂತರು - ಪ್ರತಿಭಾವಂತರಲ್ಲದ, ಸ್ವಲ್ಪ ಮಟ್ಟಿಗೆ ಅಶಿಸ್ತಿನ, ವೈಚಾರಿಕ ಮನೋಭಾವದ, ಸ್ವತಂತ್ರ ಚಿಂತನೆಯ ಜನರಿಗೆ ತುಂಬಾ ಕಷ್ಟ ಎನಿಸುವ ಆಡಳಿತ ವ್ಯವಸ್ಥೆ ನಿರ್ಮಾಣವಾಗಿದೆ.

 

ಸಾಮಾಜಿಕ ಸಾಮರಸ್ಯ ಅಧೋಗತಿಗೆ ಇಳಿದಿದೆ. ಸೇಡು‌ ಅಸೂಯೆ ಹೆಚ್ಚಾಗುತ್ತಿದೆ. ಒಂದಷ್ಟು ಅಹಂಕಾರ ಬೆಳೆದಿದೆ.

 

ಈ ಎಂಟು ವರ್ಷಗಳ ಆಡಳಿತದಲ್ಲಿ ರಾಜಕೀಯ ಜಾಗೃತಿ ಜನರಲ್ಲಿ ಮೂಡುತ್ತಿದೆ. 

 

ಅನೇಕ ಉತ್ತಮ ಯೋಜನೆಗಳ ಘೋಷಣೆ ಸಹ ಆಗುತ್ತಿದೆ. ಆದರೆ ಅದರ ನಿರ್ವಹಣೆ ಕೇವಲ ಅಂಕಿಅಂಶಗಳಿಗೆ ಮಾತ್ರ ಸೀಮಿತವಾಗುತ್ತಿದೆ.

 

ಹೀಗೆ ಹಲವಾರು ಮುಖಗಳು ಈ ಎಂಟು ವರ್ಷಗಳಲ್ಲಿ ಕಾಣಬರುತ್ತದೆ. ಇದು ಒಂದು ಸರಳ ವಿವರಣೆ ಮತ್ತು ಸಾಮಾನ್ಯನೊಬ್ಬನ ಅಭಿಪ್ರಾಯ ಮಾತ್ರ. ಇದನ್ನು ಮೀರಿ ನಿಮ್ಮದೇ ಸ್ವತಂತ್ರ ಅಭಿಪ್ರಾಯ ಸಹ ಇರುತ್ತದೆ.

ಅದನ್ನು ಗೌರವಿಸುತ್ತಾ.......

 

ನಾವೆಲ್ಲರೂ ಒಂದೇ  - ಅದೇ ಭಾರತೀಯರು,

ಅಭಿಪ್ರಾಯ ಭೇದಗಳು ಇದ್ದರೂ ಸಹ....

 

ಧನ್ಯವಾದಗಳು...

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author