ಚುನಾವಣಾ ಫಲಿತಾಂಶ ಮತ್ತು ಗೆಳೆತನದ ಘನತೆ.

ನಾನೊಬ್ಬ ಮನುಷ್ಯ ಪ್ರೇಮಿಯಾಗಿ ಭಾರತದ ಪ್ರಜೆಯಾಗಿ ಕನ್ನಡ ತಾಯಿ ಭಾಷೆಯಲ್ಲಿ ಮಾತನಾಡುವ ಸಾಮಾನ್ಯ ವ್ಯಕ್ತಿ....

 

A human being with the citizen of India speaking in Kannada language......

 

ವಿವಿಧ ಭಾಷೆ ಹೊರತುಪಡಿಸಿ ಈ ಪ್ರಜ್ಞೆ ಸಾಮಾನ್ಯ ಜನರಲ್ಲಿ ಜಾಗೃತವಾಗದೆ ಈ ದೇಶದ ಶಾಂತಿಯುತ ಐಕ್ಯತೆ ತುಂಬಾ ಕಷ್ಟ......

 

ಜನಪ್ರಿಯತೆಯೇ ಸತ್ಯ. ಗೆದ್ದವನು ಹಿರೋ ಸೋತವನು ವಿಲನ್ ಎಂಬ ಮನೋಭಾವ, ಸೋತವನು ಕೂಡಾ ನಮ್ಮವನೇ ಎಂಬ ಸಹಾನುಭೂತಿ ಮತ್ತು ಕನಿಷ್ಟ ಸೌಜನ್ಯ ಇಲ್ಲದ ಮನಸ್ಥಿತಿಗಳಿಗೆ ಬಹಳಷ್ಟು ಜನ ಬಂದಾಗಿದೆ...

 

ಸುಮಾರು ಕೇವಲ ಒಂದು ತಿಂಗಳ ಕಾಲ ನಡೆಯುವ, ಅಪ್ಪಟ ಭಾರತೀಯ ಪ್ರಜೆಗಳ ನಡುವೆ ನಡೆಯುವ, ಬಹುತೇಕ ಅದೇ ಕ್ಷೇತ್ರದ ಜನರ ನಡುವೆ ನಡೆಯುವ ಒಂದು ಸಣ್ಣ ಸ್ಪರ್ಧೆಯನ್ನು ರಾಜಕೀಯ ಭಾಷೆಯಲ್ಲಿ ಚುನಾವಣೆ ಎಂದು ಕರೆಯಲಾಗುತ್ತದೆ. ಇದು ಜನರ ಸೇವೆ ಸಲ್ಲಿಸಲು ನಮ್ಮಲ್ಲಿಯೇ ಒಬ್ಬರನ್ನು ಪ್ರತಿನಿಧಿಯಾಗಿ ಆರಿಸುವ ಒಂದು ಪ್ರಕ್ರಿಯೆ....

 

ಅದಕ್ಕಾಗಿ ಕೆಲವು ಪಕ್ಷಗಳೆಂಬ ಸಂಘಟನೆಗಳನ್ನು ಮಾಡಿಕೊಳ್ಳಲಾಗಿದೆ. ಇಷ್ಟು ಸರಳ ವ್ಯವಸ್ಥೆಯ ಒಂದು ಚುನಾವಣೆ ನಮ್ಮ ನಡುವೆಯೇ ದ್ವೇಷವನ್ನು ಹುಟ್ಟುಹಾಕಿ ಇಡೀ ಜನರನ್ನು ಬದ್ದ ದ್ವೇಷಿಗಳಂತ ವೈಮನಸ್ಯ ಬೆಳೆಸಿದರೆ ನಮ್ಮ ವ್ಯಕ್ತಿತ್ವವನ್ನು ಮತ್ತೊಮ್ಮೆ ಆತ್ಮ ವಿಮರ್ಶೆಗೆ ಒಳಪಡಿಸಿಕೊಳ್ಳಬೇಕಾಗಿತ್ತದೆ....

 

ನಮ್ಮದು ಹಿಂದೂ ಧರ್ಮ, ನಮ್ಮದು ಇಸ್ಲಾಂ ಧರ್ಮ, ನಮ್ಮದು ಕ್ರಿಶ್ಚಿಯನ್ ಧರ್ಮ, ನಮ್ಮದು ಬೌದ್ಧ ಧರ್ಮ, ನಮ್ಮದು ಸಿಖ್ ಧರ್ಮ, ನಮ್ಮದು ಜೈನ ಧರ್ಮ, ನಮ್ಮದು ಸನಾತನ ಧರ್ಮ ಎಂದು ಹೇಳಿಕೊಳ್ಳುವ ಜನರುಗಳು ಒಂದು ಚುನಾವಣಾ ಫಲಿತಾಂಶದ ನಂತರ ಕನಿಷ್ಠ ನಾಗರಿಕವಾಗಿ ವರ್ತಿಸಲು ಸಾಧ್ಯವಾಗದಿದ್ದರೆ ಧರ್ಮಗಳಿಗೆ ಅರ್ಥವೇ ಇರುವುದಿಲ್ಲ. ದಯವಿಲ್ಲದ ಧರ್ಮ ಅದಾವುದಯ್ಯ........

 

ಎಂತಹ ದೈಹಿಕ ಹೋರಾಟ ನಡೆಸಿ ವಿಜಯಿಯಾಗುವ ಕ್ರೀಡೆಗಳಲ್ಲಿ ಸಹ ಗೆದ್ದವರು ಮೊದಲಿಗೆ ಮಾಡುವುದು ಸೋತವರ ಕೈ ಕುಲುಕುವುದು ಅಥವಾ ಅಪ್ಪಿಕೊಳ್ಳುವುದು. ಆದರೆ ಈ ಚುನಾವಣೆಯಲ್ಲಿ ಗೆದ್ದವರು ಸೋತವರನ್ನು ಕೆಟ್ಟ ಪದಗಳಲ್ಲಿ ನಿಂದಿಸುವುದು ತುಂಬಾ ವಿಷಾದನೀಯ........

 

ಸಾಮಾಜಿಕ ಜಾಲತಾಣಗಳಲ್ಲಿ ಮತ್ತು ಮಾಧ್ಯಮಗಳಲ್ಲಿ ಈ‌ ಬೆಂಕಿಗೆ ತುಪ್ಪ ಸುರಿಯುವ ಕೆಲಸ ಮಾಡಲಾಗುತ್ತಿದೆ. ಒಳ್ಳೆಯ ನಡತೆ ಕೇವಲ ಹೇಳಲು ಮಾತ್ರ ಅನುಸರಿಸಲು ಕೆಟ್ಟ ನಡತೆಗಳೇ ಆದರ್ಶ ಎಂಬುದು ಮತ್ತೆ ಮತ್ತೆ ಸಾಬೀತಾಗುತ್ತಿದೆ........

 

ಗೆಳೆತನದ ಘನತೆ ಕಾಪಾಡೋಣ.........

 

ಮೊದಲಿಗೆ ಈ ಟಿವಿ ಮಾಧ್ಯಮಗಳ TRP  ಪ್ರೇರಿತ ವಿವೇಚನಾರಹಿತ ಪ್ರಚೋದಾತ್ಮಕ ಹೇಳಿಕೆಗಳನ್ನು ನಿರ್ಲಕ್ಷಿಸೋಣ.....

 

ಕುರುಕ್ಷೇತ್ರ - ಅಖಾಡ - ಯುದ್ಧ - ಮುಖಾಮುಖಿ - ಬೆಂಕಿ ಬಿರುಗಾಳಿ ಮುಂತಾದ ಕೆರಳಿಸುವ ಕಾರ್ಯಕ್ರಮಗಳನ್ನು ಹಾಸ್ಯಾಸ್ಪದವಾಗಿ ನೋಡೋಣ.....

 

ಒಬ್ಬರಿಗೊಬ್ಬರನ್ನು ಎತ್ತಿ ಕಟ್ಟಿ ತಮಾಷೆ ನೋಡುವ ಮಾಧ್ಯಮಗಳ ವಾಣಿಜ್ಯೀಕರಣ ಮತ್ತು ಅವಿವೇಕತನದ ಬಲೆಯೊಳಗೆ ಬೀಳದೆ, ಅದರಿಂದ ಪ್ರೇರಿತರಾಗದೆ, ಯಾರೋ ಒಬ್ಬನ ಪ್ರತಿಕ್ರಿಯೆಯನ್ನೇ ರಾಜ್ಯದ ಅಭಿಪ್ರಾಯ ಎನ್ನುವ ಸುಳ್ಳುಗಳನ್ನು ನಂಬದೆ ನಮ್ಮ ಸ್ವತಂತ್ರ ವಿವೇಚನಾ ಶಕ್ತಿ ರೂಪಿಸಿಕೊಳ್ಳೋಣ.

 

ಹೌದು,

ಇದು ಪ್ರಜಾಪ್ರಭುತ್ವ ಮತ್ತು  ಮುಕ್ತ ಅಭಿವ್ಯಕ್ತಿ ಸ್ವಾತಂತ್ರ್ಯದ‌ ದೇಶ ನಿಜ. ಹಾಗಂತ ಹುಚ್ಚುಚ್ಚಾಗಿ ಅವಶ್ಯಕತೆ ಇಲ್ಲದಿದ್ದರೂ ಚರ್ಚೆಯ ನೆಪದಲ್ಲಿ ಕೆಟ್ಟದಾಗಿ ಪ್ರತಿಕ್ರಿಯಿಸುವುದು ಬೇಡ.

 

ನಾವೆಲ್ಲರೂ ಸ್ನೇಹಿತರು. ಯಾವುದೋ ಒಂದು ಪಕ್ಷದ ಬಗ್ಗೆ ಒಲವಿರಬಹುದು. ಅದರ ಅರ್ಥ ನಾವು ಅದನ್ನು ದೊಡ್ಡ ಗಂಟಲಿನಲ್ಲಿ ಕೂಗಾಡಿ ಈಗಿರುವ ನಮ್ಮ ಪ್ರೀತಿ ವಿಶ್ವಾಸಕ್ಕೆ ಧಕ್ಕೆ ಮಾಡಿಕೊಳ್ಳುವುದು ಬೇಡ.

 

ಈ ಪಕ್ಷ ಬಂದರೆ ಹಾಗೆ,

ಆ ಪಕ್ಷ ಬಂದರೆ ಹೀಗೆ ,

ಎಂದು ನಮ್ಮೊಳಗೆ ಕಚ್ಚಾಡುವುದು ಬೇಡ. 

ಅಂತಹ ಕ್ರಾಂತಿಕಾರಿ ಬದಲಾವಣೆ ಈ ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ.

 

ನಿಮ್ಮ ಅಭಿಪ್ರಾಯ ವ್ಯಕ್ತಪಡಿಸಿ. ತುಂಬಾ ಸಂತೋಷ.

ಆದರೆ ಸಭ್ಯತೆಯ ಗೆರೆ ದಾಟದೆ, ನಾವೇ ಸರಿ ಎಂದು ಹಠ ಮಾಡದೆ ದುರಹಂಕಾರ ಪ್ರದರ್ಶಿಸದೆ ನಮ್ಮ ಅಭಿಪ್ರಾಯ ಒಪ್ಪಲೇ ಬೇಕು ಎಂದು ಒತ್ತಡ ಹೇರದೆ

 ನಗುನಗುತ್ತಾ ಪ್ರತಿಕ್ರಿಯಿಸಿ.

 

ಸೋಷಿಯಲ್ ಮೀಡಿಯಾಗಳಲ್ಲಿ ಎಷ್ಟೋ ಸಾಹಿತ್ಯಿಕ ಸಾಂಸ್ಕೃತಿಕ ಸಾಮಾಜಿಕ ಕೌಟುಂಬಿಕ  ಹಳೆಯ ಸ್ನೇಹಿತರ ತಮ್ಮ ಊರಿನವರ‌ ಹಾಗೆ ನಾನಾ ಗುಂಪುಗಳಿವೆ. ಈ ಚುನಾವಣಾ ಸಮಯದಲ್ಲಿ ಕೇವಲ ಯಾರೋ ಸ್ವಾರ್ಥಿಗಳ ರಾಜಕೀಯ ದಾಳಗಳಾಗುವುದು ಬೇಡ.

 

ಟಿವಿಗಳಲ್ಲಿ ಅಜನ್ಮ ಶತ್ರುಗಳಂತೆ ಜಗಳವಾಡುವ ನಾಯಕರು ಕಾರ್ಯಕ್ರಮ ಮುಗಿದ ನಂತರ ನಿರೂಪಕನನ್ನೂ ಕರೆದುಕೊಂಡು ರಾತ್ರಿ ಊಟಕ್ಕೆ ಹೋಗುವುದು ಬಹಳಷ್ಟು ಇದೆ. 

 

ಸೀರೆ ಪಂಚೆ ಮಿಕ್ಸಿ ಕುಕ್ಕರ್ ದುಡ್ಡು ಬಾಡು ಬಾರುಗಳಿಗಿರುವ ಓಟಿನ ಶಕ್ತಿ, ಸುಳ್ಳು ಮತ್ತು ಆಕರ್ಷಕ ಮಾತುಗಳಿಗಿರುವ ಓಟು ಸೆಳೆಯುವ‌ ಆಕರ್ಷಣೆ ಖಂಡಿತ ನಮ್ಮ ಅಭಿಪ್ರಾಯಗಳಿಗೆ ಇಲ್ಲ.

 

ಆದ್ದರಿಂದ,

ದಯವಿಟ್ಟು ಗೆಳೆಯರೆ,

ಚುನಾವಣಾ ಕಾರಣದಿಂದ ನಾವುಗಳು ಮನಸ್ತಾಪ ಮಾಡಿಕೊಳ್ಳುವುದು ಬೇಡ. ನಾವೆಲ್ಲರೂ ಸಾಮಾನ್ಯರು. ದ್ವೇಷಕ್ಕಿಂತ ಪ್ರೀತಿ ವಿಶ್ವಾಸವೇ ಮುಖ್ಯ ನೆನಪಿರಲಿ. 

 

ಹಾಗೆಂದು ಸರಿ ತಪ್ಪುಗಳ ಚರ್ಚೆ ಮಾಡಬಾರದು ಎಂದಲ್ಲ. ಪ್ರಜಾಪ್ರಭುತ್ವದ  ಯಶಸ್ಸು ಅಡಗಿರುವುದೇ ಚರ್ಚೆಗಳಲ್ಲಿ. ಚರ್ಚೆಗಳಿಂದ ಅನೇಕ ಹೊಸ ಹೊಸ ವಿಷಯಗಳು ಹುಟ್ಟುತ್ತವೆ. ಆದರೆ ಮಾನವೀಯ ಮೌಲ್ಯಗಳ ಹರಣವಾಗದಂತೆ ನಾವೆಲ್ಲರೂ ಎಚ್ಚರಿಕೆ ವಹಿಸಬೇಕು. ಗೆದ್ದವರಿಗೆ ಪ್ರೋತ್ಸಾಹ ಸೋತವರಿಗೆ ಉತ್ಸಾಹ ಇದು ನಮ್ಮ ಆಶಯವಾಗಿರಲಿ.

 

ಎಂದಿನಂತೆ ಗೆಳೆತನದ ಘನತೆ ಕಾಪಾಡೋಣ........‌‌‌‌‌...‌

ಧನ್ಯವಾದಗಳು.

********************************************

 

9/3/2022 ಬುಧವಾರ ಕೊಪ್ಪಳ ಜಿಲ್ಲೆಯ ಗಂಗಾವತಿಯಲ್ಲಿ ಮತ್ತು ಇಂದು 12/3/2022 ಶನಿವಾರ ಕಲಬುರ್ಗಿ ಜಿಲ್ಲೆಯ ಸೇಡಂ‌ ನಲ್ಲಿ ನಮ್ಮ ಸಮಾನ ಮನಸ್ಕ ಪ್ರಬುದ್ಧ ಮನಸ್ಸುಗಳ ಗೆಳೆಯರು ಯುದ್ದ ವಿರೋಧಿ ಸತ್ಯಾಗ್ರಹ ಮಾಡುತ್ತಿದ್ದಾರೆ. ಮಾನವೀಯ ಮೌಲ್ಯಗಳನ್ನು ಎತ್ತಿ ಹಿಡಿಯುವ ಎಲ್ಲರಿಗೂ ತುಂಬು ಹೃದಯದಿಂದ ಅಭಿನಂದನೆಗಳನ್ನು ಸಲ್ಲಿಸುತ್ತಾ ಇದು ಯುದ್ದ ನಿಲ್ಲುವವರೆಗೂ ಮತ್ತಷ್ಟು ವ್ಯಾಪಕತೆ ಪಡೆಯಲಿ ಎಂದು ಆಶಿಸೋಣ ಮತ್ತು ಪ್ರಯತ್ನಿಸೋಣ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068.........

Enjoyed this article? Stay informed by joining our newsletter!

Comments

You must be logged in to post a comment.

About Author