ಅಪ್ಪ ಮತ್ತು ಯೋಗ

Father's day and yoga day

Featured Image Source: Google

ಅಪ್ಪನ ದಿನ ಮುಗಿಯಿತು.....

 

ಒಳ್ಳೆಯ ಅಪ್ಪ, ಪ್ರೀತಿಯ ಅಪ್ಪ, ತ್ಯಾಗದ ಅಪ್ಪ, ಸಾಹಸಿ ಅಪ್ಪ, ಬುದ್ದಿವಂತ ಅಪ್ಪ, ಜವಾಬ್ದಾರಿಯುತ ಅಪ್ಪ, ತಾಳ್ಮೆಯ ಅಪ್ಪ, ಪರೋಪಕಾರಿ ಅಪ್ಪ, ಶ್ರೀಮಂತ ಅಪ್ಪ, ದೊಡ್ಡ ಹುದ್ದೆಯ ಅಪ್ಪ, ವಂಚಕ ಅಪ್ಪ, ದಡ್ಡ ಅಪ್ಪ, ಸಿಡುಕ ಅಪ್ಪ, ಬಡವ ಅಪ್ಪ, ಮದ್ಯ ವ್ಯಸನಿ ಅಪ್ಪ, ಲಫಂಗ ಅಪ್ಪ, ಭ್ರಷ್ಟಾಚಾರಿ ಅಪ್ಪ, ಸ್ತ್ರೀಲೋಲ ಅಪ್ಪ, ಜೂಜುಕೋರ ಅಪ್ಪ, ಸೋಮಾರಿ ಅಪ್ಪ, ಸ್ವಾರ್ಥಿ ಅಪ್ಪ,..........

 

ಹೀಗೆ ಮುಗಿಯದ ಶತಾವತಾರದ ಅನೇಕ ಅಪ್ಪಂದಿರ ಉಗಮ ಸ್ಥಾನ ನಮ್ಮ ಸಮಾಜ. ಹಾಗೆಯೇ ಬಾಲ್ಯದಿಂದ ಮುಪ್ಪಿನವರೆಗೆ ಅಪ್ಪನ ಮೇಲಿನ ನಮ್ಮ ಅಭಿಪ್ರಾಯ ರೂಪಾಂತರ ಹೊಂದುತ್ತಲೇ ಇರುತ್ತದೆ. ಕೆಟ್ಟ ಅಪ್ಪ ಒಳ್ಳೆಯವನಾಗಿ, ಒಳ್ಳೆಯ ಅಪ್ಪ ಕೆಟ್ಟವನಾಗಿ, ಶ್ರೀಮಂತ ಅಪ್ಪ ಬಡವನಾಗಿ, ಬಡವ ಅಪ್ಪ ಶ್ರೀಮಂತನಾಗಿ ಸರ್ವಗುಣಗಳು ನಮ್ಮ ಗ್ರಹಿಕೆಗುನುಗುಣವಾಗಿ ಬದಲಾಗುತ್ತಲೇ ಇರುತ್ತದೆ. ಕೆಲವೊಮ್ಮೆ ಮಾತ್ರ ಅದು ಸ್ಥಿರವಾಗಿರುತ್ತದೆ.

 

ಸಮಾಜದ ಹಿತದೃಷ್ಟಿಯಿಂದ ಅಪ್ಪನನ್ನು ನನ್ನಪ್ಪ ಎಂದು ನೋಡುವುದರ ಜೊತೆಗೆ ಸಾಮಾಜಿಕ ಮನುಷ್ಯ -  ದೇಶದ ಪ್ರಜೆ ಎಂದೂ ಸಹ ನೋಡುವ ಮನೋಭಾವ ಬೆಳೆಸಿಕೊಳ್ಳಬೇಕು. ಏಕೆಂದರೆ ಅಪ್ಪನ ಪಾತ್ರ ಸೀಮಿತವಲ್ಲ. ಅದು ಬಹು ಆಯಾಮಗಳನ್ನು ಹೊಂದಿದೆ. ಆ ಎಲ್ಲಾ ಜವಾಬ್ದಾರಿಗಳನ್ನು - ಕರ್ತವ್ಯಗಳನ್ನು ಆತ ನಿರ್ವಹಿಸಿದಾಗ ಮಾತ್ರ ಒಂದು ಸಮಾಜ ಉತ್ತಮವಾಗಿರಲು ಸಾಧ್ಯ. ಇಲ್ಲದಿದ್ದರೆ ಭ್ರಷ್ಟ ಅಪ್ಪ, ಮೋಸಗಾರ ಅಪ್ಪ ನಮಗೆ ಒಳ್ಳೆಯವನಾಗಿ ಕಂಡರೂ ಸಾಮಾಜಿಕವಾಗಿ ವ್ಯವಸ್ಥೆ ಹದಗೆಡಲು ಕಾರಣವಾಗಿ ಭವಿಷ್ಯದಲ್ಲಿ ನಮ್ಮ ಮಕ್ಕಳ ಪಾಲಿಗೆ ಕೆಟ್ಟ ಸಮಾಜ ನಿರ್ಮಾಣವಾಗಲು ಕಾರಣವಾಗುತ್ತದೆ.

 

ಬಹುಶಃ ಇತ್ತೀಚಿನ ದಿನಗಳಲ್ಲಿ ಅದರ ಪರಿಣಾಮಗಳನ್ನು ಗುರುತಿಸಬಹುದಾಗಿದೆ. ನಮ್ಮ ಚಿಂತನೆಗಳು, ನಡವಳಿಕೆಗಳು ವಿಶಾಲತೆ ಪಡೆದಷ್ಟೂ ಒಳ್ಳೆಯ ನಾಗರಿಕ ಸಮಾಜ ನಿರ್ಮಾಣವಾಗುತ್ತದೆ. ಅಪ್ಪನನ್ನು ನಮಗೆ ಮಾತ್ರ ಸೀಮಿತವಾಗಿ‌ ಅರ್ಥೈಸಿದರೆ ಕುಟುಂಬ ವ್ಯವಸ್ಥೆ ಚೆನ್ನಾಗಿರಬಹುದು. ಆದರೆ ಅದರ ಒಟ್ಟು ಪರಿಣಾಮ ಸಮಾಜದ ಆಗುಹೋಗುಗಳ ನಿರ್ಲಕ್ಷ್ಯದಿಂದ ನಮ್ಮ ಪಾಡಿಗೆ ನಾವು ವಾಸಿಸಲು ಅಯೋಗ್ಯವಾದ ಸಮಾಜ ಸೃಷ್ಟಿಯಾಗುತ್ತದೆ.

 

ಆದ್ದರಿಂದ ಅಪ್ಪನ ದಿನ ಒಬ್ಬ ಒಳ್ಳೆಯ ಜವಾಬ್ದಾರಿಯುತ ನಾಗರಿಕ ದಿನ ಸಹ‌ ಹೌದು ಮತ್ತು ಅದು ಹೆಚ್ಚು ಅರ್ಥಪೂರ್ಣ ಎಂದು ಭಾವಿಸುತ್ತಾ.....

 

ಎಲ್ಲರಿಗೂ ಸ್ವಲ್ಪ ತಡವಾಗಿ ಅಪ್ಪನ ದಿನದ ಶುಭಾಶಯಗಳು.......

( ಜೂನ್ ‌19)

 

ಹಾಗೆಯೇ ಇಂದು ಯೋಗ ದಿನ ( ಜೂನ್ ‌21 )

 

ನಾಗರಿಕತೆ ಬೆಳೆದಂತೆಲ್ಲಾ ಮನುಷ್ಯನ ಬದುಕು ಹೆಚ್ಚು ಸಂಕೀರ್ಣವಾಗ ತೊಡಗಿತು. ಅದರ ಪರಿಣಾಮ ಆತನ‌ ದೇಹ ಮತ್ತು ಮನಸ್ಸುಗಳು ನಿಧಾನವಾಗಿ ಘಾಸಿಯಾಗಲು ಪ್ರಾರಂಭವಾಯಿತು. ಅದರಿಂದ ಹೊರ ಬರಲು ವಿಶ್ವದ ಎಲ್ಲಾ ಪ್ರಾಚೀನ ನಾಗರಿಕತೆಗಳು ವಿವಿಧ ರೀತಿಯ ವಿಧಾನಗಳನ್ನು ಪರಿಶೋಧಿಸಿದವು. ಅದರ ಭಾರತೀಯ ವಿಧಾನಗಳಲ್ಲಿ ಪ್ರಮುಖವಾದುದು ಯೋಗ. ಅದಕ್ಕೆ ವೈಜ್ಞಾನಿಕ ರೂಪ ನೀಡಿ ಕ್ರಮಬದ್ದವಾಗಿ ಅಳವಡಿಸಿ ಅದನ್ನು ಜನಪ್ರಿಯ ಗೊಳಿಸಿದ್ದು ಪಂತಂಜಲಿ ಎಂಬ ಮಹರ್ಷಿ ಎಂದು ಗುರುತಿಸಲಾಗಿದೆ. ಇದು ನನ್ನ ತಿಳಿವಳಿಕೆ. ಇನ್ನೂ ಸ್ಪಷ್ಟ ಇತಿಹಾಸ ತಿಳಿದವರು ತಮ್ಮ ಅಭಿಪ್ರಾಯ ವ್ಯಕ್ತಪಡಿಸಬಹುದು.

 

ದೇಹ ಮತ್ತು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿ ಹೆಚ್ಚು ಆರೋಗ್ಯಯುತ ಜೀವನ ರೂಪಿಸಿಕೊಳ್ಳಲು ಯೋಗ ಒಂದು ಅತ್ಯುತ್ತಮ ವಿಧಾನ. ಇದು‌ ಜಾತಿ‌ ಧರ್ಮ ಭಾಷೆ ಪ್ರದೇಶ ಎಲ್ಲವನ್ನೂ ಮೀರಿದ್ದು. ಪ್ರಾಕೃತಿಕವಾದ ಸರಳ‌ ಸಹಜ ಸ್ವಾಭಾವಿಕ ವಿಧಾನ. ಇದು ಭಕ್ತಿ ಪೂರ್ವಕ ಆಧ್ಯಾತ್ಮವಲ್ಲ. ಎಲ್ಲೋ ಕೆಲವರು ಆಧುನಿಕವಾಗಿ ವ್ಯಾಪಾರೀಕರಣದ‌ ದೃಷ್ಟಿಯಿಂದ ಇದಕ್ಕೆ ಧಾರ್ಮಿಕ ರೂಪ ನೀಡಿರಬಹುದು. ವಾಸ್ತವದಲ್ಲಿ ಇದು ಆರೋಗ್ಯ ಪೂರ್ಣ ಜೀವನ ಶೈಲಿಯ ಒಂದು ಅದ್ಬುತ ಮಾರ್ಗ.

 

ಇದರ ಬಗ್ಗೆ ಹೆಚ್ಚು ಹೇಳುವ ಅವಶ್ಯಕತೆ ಇಲ್ಲ. ದಯವಿಟ್ಟು ‌ಸಾಧ್ಯವಿರುವ ಮತ್ತು ಅವಕಾಶವಿರುವ ಎಲ್ಲರೂ ತಮ್ಮ ಜೀವನದ ಅವಿಭಾಜ್ಯ ಅಂಗವಾಗಿ ಯೋಗವನ್ನು ಅಳವಡಿಸಿಕೊಂಡರೆ ಬದುಕು ಹೆಚ್ಚು ಸಹನೀಯ ಎನಿಸುತ್ತದೆ. ತಪ್ಪುಗಳು ಕಡಿಮೆಯಾಗುತ್ತದೆ. ಸುಖ ಸಂತೋಷ ಹೆಚ್ಚಾಗುತ್ತದೆ ಎಂದು ನಿಶ್ಚಿತವಾಗಿ ಹೇಳಬಹುದು.

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author