ಪಿರಿಯಾಪಟ್ಟಣ: ‘ವಿಧಾನ ಪರಿಷತ್ ಚುನಾವಣೆಯಲ್ಲಿ ಗೆಲ್ಲಲು ಎಲ್ಲಾ ಪಕ್ಷಗಳು ವಾಮಮಾರ್ಗ ಅನುಸರಿಸುವ ಮೂಲಕ ಸ್ವಾರ್ಥ ಸಾಧನೆಯಲ್ಲಿ ತೊಡಗಿವೆ’ ಎಂದು ಕನ್ನಡ ಚಳವಳಿ ವಾಟಾಳ್ ಪಕ್ಷದ ವಾಟಾಳ್ ನಾಗರಾಜ್ ಆರೋಪಿಸಿದರು.
ಮೈಸೂರು ಜಿಲ್ಲೆಯ ಪಿರಿಯಾಪಟ್ಟಣ ತಾಲ್ಲೂಕು ಕಚೇರಿ ಮುಂಭಾಗ ಗ್ರಾಮ ಪಂಚಾಯಿತಿಗಳಿಗೆ ಹೆಚ್ಚಿನ ಅನುದಾನ ಒದಗಿಸುವಂತೆ ಒತ್ತಾಯಿಸಿ ಗೋಣಿಚೀಲ ಚಳವಳಿ ನಡೆಸಿ ಅವರು ಮಾತನಾಡಿದರು.
‘ಪರಿಷತ್ ಚುನಾವಣೆಗೆ ಎಲ್ಲಾ ರಾಜಕೀಯ ಪಕ್ಷಗಳು ಅವರದ್ದೇ ಆದ ಚಿಂತನೆ ಮುಂದಿಟ್ಟುಕೊಂಡು ಮತ ಯಾಚಿಸುತ್ತಿವೆ. ಆದರೆ, ಪ್ರತಿ ತಾಲ್ಲೂಕಿನಲ್ಲೂ ಪ್ರತ್ಯೇಕ ಸಮಸ್ಯೆಗಳಿದ್ದು, ಅವುಗಳನ್ನು ಪರಿಹರಿಸುವ ಬಗ್ಗೆ ಯಾವುದೇ ಪಕ್ಷಗಳು ಚಿಂತಿಸುತ್ತಿಲ್ಲ’ ಎಂದು ದೂರಿದರು.
‘ಗ್ರಾಮ ಪಂಚಾಯಿತಿಗಳು ಪ್ರಜಾಪ್ರ ಭುತ್ವದ ಬುನಾದಿಯಾಗಿವೆ. ಗ್ರಾಮಗಳ ಸಮಸ್ಯೆಗಳಿಗೆ ಪಂಚಾಯಿತಿ ಸದಸ್ಯರು ಸ್ಪಂದಿಸುವ ಹೊಣೆಗಾರಿಕೆ ಹೊಂದಿದ್ದು, ಆ ಸದಸ್ಯರಿಗೆ ನೀಡುತ್ತಿರುವ ಬಿಡಿಗಾಸು ಗೌರವಧನ ಯಾವುದಕ್ಕೂ ಸಾಲುತ್ತಿಲ್ಲ. ಸಂಸದರು ಮತ್ತು ಶಾಸಕರು ಲಕ್ಷಗಟ್ಟಲೇ ವೇತನ ಸೇರಿದಂತೆ ಇತರೆ ಭತ್ಯೆಗಳನ್ನು ಪಡೆಯುತ್ತಿದ್ದು, ಗ್ರಾ.ಪಂ. ಸದಸ್ಯರ ಸಮಸ್ಯೆಯನ್ನು ಯಾರೂ ಗಮನಿಸುತ್ತಿಲ್ಲ’ ಎಂದು ಹೇಳಿದರು. ನಾನು ಆಯ್ಕೆಯಾದರೆ ತಾಲ್ಲೂಕಿನಲ್ಲಿರುವ ತಂಬಾಕು ರೈತರ ಸಮಸ್ಯೆಗಳನ್ನು ಬಗೆಹರಿಸುತ್ತೇನೆ’ ಎಂದು ಭರವಸೆ ನೀಡಿದರು. ಪ್ರತಿಭಟನೆಯಲ್ಲಿ ರೈತರಾದ ಶೈಲೇಶ್, ಅಂಕನಾಯಕ, ಶಿವಣ್ಣ, ಚೆನ್ನನಾಯಕ, ಗಂಗಾಧರ್, ವಸಂತ್ ಕುಮಾರ್ ಭಾಗವಹಿಸಿದ್ದರು.
You must be logged in to post a comment.