ಗುರು ಪೂರ್ಣಿಮಾ......

Guru poornima 2022

Featured Image Source: Shutterstock 

ಶಿಕ್ಷೆಗಿಂತ ಶಿಕ್ಷಣವೇ ಮುಖ್ಯವಾಗದ ಹೊರತು......

 

ಗುರು ಪೂರ್ಣಿಮಾ ಹಬ್ಬವಾಗುವುದಿಲ್ಲ.......

 

ಮಾರಣಾಂತಿಕ ಅಪರಾಧಗಳನ್ನು ಹೊರತುಪಡಿಸಿ ಸಾಮಾನ್ಯ ತಪ್ಪುಗಳಿಗೆ ಶಿಕ್ಷಣವೇ ಶಾಶ್ವತ ಪರಿಹಾರ. ಆ ಶಿಕ್ಷಣ ನೀಡುವವರೇ ಗುರುಗಳು.....

 

ಪರೀಕ್ಷೆಯಲ್ಲಿ ನಕಲು ಮಾಡಿದಾಗ, ಓದದೇ ಶಾಲೆಗೆ ಗೈರು ಹಾಜರಾದಾಗ, ವಾಹನ ಚಾಲನೆಯ ಸಂದರ್ಭದಲ್ಲಿ ನಿಯಮ ಉಲ್ಲಂಘಿಸಿದಾಗ, ನಮ್ಮ ಕೆಲಸಗಳಿಗೆ ಲಂಚ ಕೊಡುವಾಗ ಮತ್ತು ಪಡೆಯುವಾಗ, ಚುನಾವಣೆಯಲ್ಲಿ ಹಣ ಹೆಂಡ ಹಂಚುವಾಗ ಮತ್ತು ಸ್ವೀಕರಿಸುವಾಗ, ಆಹಾರ ಕಲಬೆರಕೆ ಮಾಡುವಾಗ ಹೀಗೆ ಹಲವಾರು ಸಾಮಾನ್ಯ ಮತ್ತು ಸಂಸ್ಕಾರ ರಹಿತ ಕೆಲಸ ಮಾಡುವಾಗ ಭಾರತೀಯ ಸಂಸ್ಕೃತಿಯಲ್ಲಿ ಶಿಕ್ಷೆಗಿಂತ ಶಿಕ್ಷಣ ಮಹತ್ವ ಪಡೆದರೆ ಸಮಾಜದಲ್ಲಿ ಮತ್ತಷ್ಟು ಉತ್ತಮ ನಾಗರಿಕರ ಬೆಳವಣಿಗೆ ಸಾಧ್ಯ. ಶಿಕ್ಷೆಯು ಕೇವಲ ಒಂದು ಬೆದರು ಬೊಂಬೆ ಮಾತ್ರ ಆಗಿರಬೇಕು. 

 

ಹಾಗಾದರೆ ಯಾರು ಆ ಗುರುಗಳು......

 

ಅರಿವೇ ಗುರು, ಪ್ರಕೃತಿಯೇ ಗುರು ಎಂಬಲ್ಲಿಂದ ಕಲಿಕೆಯ ಪ್ರತಿ ಹಂತವನ್ನು ಗುರು ಎಂದೇ ಪರಿಗಣಿಸಲಾಗುತ್ತದೆ.

 

ಆದರೆ ವಿಶಾಲ ಅರ್ಥದಲ್ಲಿ ನಮ್ಮ ಬದುಕನ್ನು ರೂಪಿಸುವ, ನಿಯಂತ್ರಿಸುವ, ನಮ್ಮ ಆಲೋಚನೆಯನ್ನು ಸಂಪೂರ್ಣ ಆಕ್ರಮಿಸುವ, ನಮ್ಮ ವ್ಯಾವಹಾರಿಕ ಜಗತ್ತನ್ನು ನಿರ್ಧರಿಸುವ, ನಮ್ಮ ಬದುಕಿನ ಗುರಿಯನ್ನು, ಸಾರ್ಥಕತೆಯನ್ನು ಮುನ್ನಡೆಸುವ ಶಕ್ತಿಯನ್ನು ಗುರು ಎಂದು ಕರೆಯಬಹುದು.

 

ಹುಟ್ಟಿನಿಂದ ಸಾಯುವವರೆಗೂ ಒಂದಲ್ಲಾ ಒಂದು ರೀತಿಯಲ್ಲಿ ಪ್ರತಿಯೊಬ್ಬರೂ ಗುರುಗಳೇ, ಪ್ರತಿಯೊಬ್ಬರೂ ಶಿಕ್ಷಕರೇ. ಕಲಿಕೆ ಕಲಿಸುವಿಕೆ ಮಾನವ ಜನಾಂಗದ ಅಂತ್ಯದವರೆಗೂ ಸಾಗುತ್ತಲೇ ಇರುತ್ತದೆ.

 

ಆದರೆ, ಅಕ್ಷರಗಳೋ, ಕಲೆಯೋ, ತಾಂತ್ರಿಕತೆಯೋ, ಚಾಕಚಕ್ಯತೆಯೋ ಇನ್ನೇನೋ ಕಲಿಕೆಗಿಂತ ಮುಖ್ಯವಾಗಿ ಪ್ರೀತಿ ವಿಶ್ವಾಸ ವಿನಯ ಮಾನವೀಯತೆ ಜೀವಪರ ಸಹಜೀವನ ಪರಿಸರ ಗೌರವ ಮುಂತಾದ ಅಂಶಗಳ ಕಲಿಕೆಯೇ ಅತ್ಯುತ್ತಮ ಮತ್ತು ಮೊದಲ ಆದ್ಯತೆಯಾಗಬೇಕು. ಆಗ ಮಾತ್ರ ನಾಗರಿಕ ಸಮಾಜ ಸುಸ್ಥಿತಿಯಲ್ಲಿ ಇರಲು ಸಾಧ್ಯ.

 

ಯಾವುದೋ ದಾರಿ ಎಲ್ಲಿಗೋ ಪಯಣ ಈ ಬದುಕಿನಲ್ಲಿ,..........

 

ಹುಟ್ಟುವುದೇ ಅಪ್ಪ ಅಮ್ಮನ ರಕ್ತ - ಕರುಳ ಸಂಬಂಧದೊಂದಿಗೆ,

 

ಅಕ್ಕ ತಂಗಿಯರು - ಅಣ್ಣ ತಮ್ಮಂದಿರು ನಮ್ಮ ಜೊತೆಯ ಸಹ ಪಯಣಿಗರು,

 

ಪಕ್ಕದ ಮನೆಯ ಸುಮಾ ಆಂಟಿ, ಚಾಕಲೇಟ್ ಕೊಡಿಸಿದ ರವಿಮಾಮ,

ನನ್ನದೇ ವಯಸ್ಸಿನ ಪ್ರಜ್ವಲ, ಜಗಳ ಕಾಯುವ ಉಜ್ವಲ,

ಈಗಲೂ  ಕಾಡುವ ಗುಮ್ಮಾ,

 

ಶಾಲೆಯಲ್ಲಿ ಜೊತೆಯಾದ ರಾಹುಲ್, ಮಂಜ, ಪೀಟರ್, ಸ್ವಾತಿ,‌ ಮಲ್ಲಿಗೆ, ಪಾಶ,

 

ವಿದ್ಯೆ ಕಲಿಸಿದ RMV, PNK, ರೋಸಿ, ಮೇರಿ, ಕಮಲ, ವಿಮಲ ಮಿಸ್ ಗಳು,

 

ನನ್ನ ತುಂಟಾಟಗಳಿಗೆ ಬೆದರಿದ - ಬೆದರಿಸಿದ ಫಾತಿಮ, ಅಂಜಲಿ,

ಆಯಾ - ದೀದಿಗಳು,

 

ಯೌವ್ವನದ ದಿನಗಳ ಗೆಳೆಯರಾದ ರಾಬರ್ಟ್, ಹರೀಶ, ಕರಿಯ, ಚಂದ್ರ, ಮಚ್ಚ ಮಹೇಶ,

 

ಜ್ವರ ಬಂದರೆ, ಗಾಯಗಳಾದರೆ ನೆನಪಾಗುವ ಡಾಕ್ಟರ್ ಕಿರಣ್,

ಡಾಕ್ಟರ್ ಸುಷ್ಮಾ, 

 

ವಾರದ ಕೊನೆಯಲ್ಲಿ ನಡೆಯುತ್ತಿದ್ದ ಪಾರ್ಟಿಗಳ ಕಾಯಂ ಸಪ್ಲೈಯರ್

ಪ್ರಕೃತಿ ಡಾಬಾದ ಚಮಕ್ ಚಮಕ್ ನಂಜುಂಡ,

 

ನನ್ನಲ್ಲಿ ಅನೇಕ ಯೌವ್ವನದ ಕನಸುಗಳನ್ನು ಬಿತ್ತಿದ ಅಂದಿನ ಸಿನಿಮಾ ನಾಯಕ ನಾಯಕಿಯರಾದ ರಾಜ್ ಕುಮಾರ್, ಎನ್.ಟಿ. ರಾಮರಾವ್, ಎಂಜಿಆರ್, ಅಮಿತಾಬ್ ಬಚ್ಚನ್‌, ಕಲ್ಪನಾ, ಜಮುನಾ, ಜಯಲಲಿತಾ, ಹೇಮಮಾಲಿನಿ,

 

ಕೆಲಸಕ್ಕೆ ಸೇರಿದ ಕಂಪನಿಯ ಬಾಸ್ ಅಭಿರಾಜ್, ಸಹಪಾಠಿಗಳಾದ 

ವತ್ಸಲ, ವಾಣಿ, ಶ್ರೀದೇವಿ, ಜೋಸೆಫ್, ವಿಕ್ರಮ್, ಕುಮಾರ್,  ಮೌಲ, ಶೆಟ್ಟಿ,

 

ಬಾಳ ಸಂಗಾತಿಯಾದ ಕೋಮಲ, ಅವರ ಅಪ್ಪ, ಅಮ್ಮ, ಅಣ್ಣ ತಂಗಿ,

ಮುದ್ದಾದ ನಮ್ಮ ಮಕ್ಕಳಾದ ಅಗಸ್ತ್ಯ, ಪ್ರದ್ಯುಮ್ನ, ನಿಹಾರಿಕ,

 

ನಮ್ಮ ಮಕ್ಕಳ ಶಾಲೆಯ ಶಿಕ್ಷಕರು, ಅವರ ಪ್ರಿನ್ಸಿಪಾಲ್ ವೆಂಕಟರಾಯರು, ಪದ್ಮಾವತಮ್ಮನವರು,

 

ನಂತರದಲ್ಲಿ ಬಂದ ನನ್ನ ಸೊಸೆಯರಾದ ಸೋನು, ಮಿಹಿರ, ಅಳಿಯ ಡಾಕ್ಟರ್ ಶಶಾಂಕ್,

 

ಮುಂಜಾನೆಯ ವಾಕಿಂಗ್ ಗೆಳೆಯರಾದ ನಾರಾಯಣಸ್ವಾಮಿ, ಶ್ರೀಕಂಠು, ವೆಂಕಟೇಶ, ಶ್ರೀನಿವಾಸಯ್ಯ,

 

ಓ, ಇನ್ನು ನಮ್ಮನ್ನಾಳಿದ ಮುಖ್ಯಮಂತ್ರಿಗಳು, ಅಧಿಕಾರಿಗಳು ಎಷ್ಟೋ,

 

ನನ್ನನ್ನು ಕಾಡಿದ ಭ್ರಷ್ಟರು, 

ವಂಚಕರು ಎಷ್ಟೋ,

 

ನನಗೆ ಸ್ಪೂರ್ತಿಯಾದ ಕ್ರೀಡಾಪಟುಗಳು, ವಿಜ್ಞಾನಿಗಳು, ಸಮಾಜ ಸೇವಕರು, ಹೋರಾಟಗಾರರು ಎಷ್ಟೋ,

 

ಅಬ್ಬಬ್ಬಾ.....‌..

 

ಯಾರೋ ಗುರುಗಳು, ಎಷ್ಟೊಂದು ಗುರುಗಳು,

ನಾನೇ ಗುರುವಾಗಿದ್ದು ಯಾರಿಗೆ,

 

ಈ ಗುರು ಹುಣ್ಣಿಮೆಯ ಬೆಳಕಿನಲ್ಲಿ ನೆನಪುಗಳ ಯಾತ್ರೆ ಸಾಗುತ್ತಲೇ ಇದೆ.....

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author