ಶುಭ ಹಾರೈಕೆಗಳು.....

ವೈಚಾರಿಕ ಸತ್ಯದ ಹುಡುಕಾಟದಲ್ಲಿ......

 

ಒಂದಷ್ಟು ಮಾನಸಿಕ ಕಸರತ್ತು.......

 

ಬೇಸರವಾದರೆ ಕ್ಷಮೆಯಿರಲಿ......

 

ಶುಭ ಹಾರೈಕೆಗಳು..............

 

ನಮ್ಮ ಅತ್ಯಂತ ಪ್ರೀತಿ ಪಾತ್ರರು, ಒಡಹುಟ್ಟಿದವರು, ಪ್ರಖ್ಯಾತರು, ಸಾಧಕರು ಅಥವಾ ನಾವು ಮೆಚ್ಚುವ ಯಾರಾದರೂ ಅಪಘಾತ ಅಥವಾ ಅನಾರೋಗ್ಯದಿಂದ ಅಥವಾ ಇನ್ನಾವುದೇ ಕಾರಣದಿಂದಾಗಿ ವೈದ್ಯಕೀಯ ಚಿಕಿತ್ಸೆಗಾಗಿ ಆಸ್ಪತ್ರೆಗೆ ದಾಖಲಾಗಿರುವಾಗ ನಾವು ಮಾಡುವ ಪ್ರಾರ್ಥನೆ, ಪೂಜೆ, ಹೋಮ, ಹವನಗಳು ಯಾವುದೋ ರೂಪದಲ್ಲಿ ಆ ವ್ಯಕ್ತಿಗೆ ತಲುಪಿ ಆತ ಚೇತರಿಸಿಕೊಳ್ಳುವ ಸಾಧ್ಯತೆ ಇದೆಯೇ ಅಥವಾ ಅದು ನಮ್ಮ ಆಶಯ ಮತ್ತು ಮಾನಸಿಕ ತೃಪ್ತಿಗಾಗಿ ಮಾತ್ರವೇ.......

 

ಇಲ್ಲಿ ನಿಮ್ಮ ಹಾರೈಕೆ ನಂಬಿಕೆ ಭಕ್ತಿ ಭಾವನೆ, ಒಂದು ಶಕ್ತಿಯ ರೂಪದಲ್ಲಿ ತರಂಗಾಂತರವಾಗಿ ಆ ವ್ಯಕ್ತಿಗೆ ಅಥವಾ ಅವರನ್ನು ಗುಣಪಡಿಸುವ ವ್ಯಕ್ತಿಗೆ ಹೇಗೋ ಮಾಯೆಯಲ್ಲಿ ಅಥವಾ ಪಂಚಭೂತಗಳ ಮೂಲಕ ತಲುಪಿ ಅವರು ಗುಣಮುಖರಾಗುತ್ತಾರೆ ಎಂಬುದು ನಿಮಗೆ ಖಚಿತವಾಗಿದ್ದರೆ ನಿಮ್ಮ ಅಭಿಪ್ರಾಯ ಹಾಗೆಯೇ ಇರಲಿ. ನಾನು ಅದಕ್ಕೆ ಅಡ್ಡಿಪಡಿಸುವುದಿಲ್ಲ. ಹಾಗೆ ಆಗುವುದಿದ್ದರೆ ತುಂಬಾ ಸಂತೋಷ. ಆದರೆ ಒಂದು ವೈಜ್ಞಾನಿಕ ಹಿನ್ನೆಲೆಯಲ್ಲಿ ನಮಗೆ ನಾವು ಪ್ರಶ್ನೆ ಹಾಕಿಕೊಂಡಾಗ ನಮಗೆ ಸಿಗುವ ಉತ್ತರ.....

 

ನಾವು ಮಾಡುವ ಯಾವುದೇ ರೂಪದ ಹಾರೈಕೆಗಳು ಯಾವುದೇ ರೂಪದಲ್ಲಿ ಆ ವ್ಯಕ್ತಿಗೆ ಸಿಗುವುದಿಲ್ಲ. ಆ ವ್ಯಕ್ತಿಯ ದೇಹದ ಸಾಮರ್ಥ್ಯ, ಅವರಿಗೆ ಆಗಿರುವ ಆರೋಗ್ಯದ ಸ್ವರೂಪ, ಅವರ ವಯಸ್ಸು, ವೈದ್ಯಕೀಯ ಕ್ಷೇತ್ರದ ಸಂಶೋಧನೆ ಮತ್ತು ಅವರಿಗೆ ಸಿಗುವ ಚಿಕಿತ್ಸೆಯ ಗುಣಮಟ್ಟ ಅವಲಂಬಿಸಿರುತ್ತದೆ. ಅವರು ಚೇತರಿಸಿಕೊಳ್ಳಬಹುದು ಅಥವಾ ಸಾವನ್ನಪ್ಪಬಹುದು. ಇದೇ ವಾಸ್ತವ. ಇಡೀ ವಿಶ್ವದ 700 ಕೋಟಿ ಜನ ಮತ್ತು ಅವರ ನಂಬಿದ ದೇವರುಗಳು ಸೇರಿ ಪ್ರಾರ್ಥಿಸಿದರೂ ಪರಿಣಾಮ ಮಾತ್ರ ಅದರ ನಿಯಂತ್ರಣದಲ್ಲಿ ಇರುವುದಿಲ್ಲ.

 

ಈ ರೀತಿಯ ಭಾವನಾತ್ಮಕ ಅಥವಾ ದೈವಿಕ ಶಕ್ತಿಯ ಮೇಲಿನ ನಂಬಿಕೆಯೇ ಅದರ ಫಲಿತಾಂಶಗಳನ್ನು ಆಧರಿಸಿ ಅದರ ಮೇಲಿನ ವಿಶ್ವಾಸಕ್ಕೆ ಧಕ್ಕೆ ತರುತ್ತದೆ. ಕೆಲವರಿಗೆ ಒಳ್ಳೆಯದಾದಾಗ ಹಾರೈಕೆಯ ಕೃಪೆಯೆಂದೂ, ಕೆಟ್ಟದಾದಾಗ ಆ ವ್ಯಕ್ತಿಯ ದುರಾದೃಷ್ಟ ಅಥವಾ ಅವರ ಕರ್ಮದ ಫಲವಾಗಿ ಆಯಸ್ಸು ಮುಗಿಯಿತೆಂದು ಹೇಳುತ್ತಾರೆ. ಇದು ಒಂದು ರೀತಿಯ ಜೂಜಾಟದ ಫಲಿತಾಂಶದಂತಾಗುತ್ತದೆ.

 

ಅದಕ್ಕೆ ಬದಲಾಗಿ ವಾಸ್ತವ ಪ್ರಜ್ಞೆಯಿಂದ ನಾವು ಇದಕ್ಕೆ ಪ್ರತಿಕ್ರಿಯಿಸಿದರೆ ಫಲಿತಾಂಶಗಳನ್ನು ಸ್ಥಿತ ಪ್ರಜ್ಞೆಯಿಂದ ಸ್ವೀಕರಿಸಲು ಸಾಧ್ಯವಾಗುತ್ತದೆ. ಬದುಕಿರುವ ನಾವು ನಮ್ಮ ನೋವುಗಳನ್ನು ಕಡಿಮೆ ಮಾಡಿಕೊಳ್ಳಬಹುದು ಮತ್ತು ಪ್ರಕೃತಿಯ ಸಹಜ ನ್ಯಾಯದ ಅಡಿಯಲ್ಲಿ ಸಮಾಧಾನವೂ ಸಿಗುತ್ತದೆ. ನಮ್ಮ ಅವಲಂಬಿತರ ಬಗ್ಗೆ ಗಮನವನ್ನು ಹರಿಸಬಹುದು.

 

ವೈಚಾರಿಕತೆ ಎಂಬುದು ಕೇವಲ ವಿಜ್ಞಾನ ಮಾತ್ರವಲ್ಲ ಅದು ಧಾರ್ಮಿಕ ನಂಬಿಕೆಯೂ ಅಲ್ಲ. ಸಾರ್ವತ್ರಿಕ ಸತ್ಯಗಳನ್ನು ಗುರುತಿಸಿ ಸ್ವೀಕರಿಸುವ ಮನೋಭಾವ. ಸಾರ್ವತ್ರಿಕ ಸತ್ಯವನ್ನು ಪ್ರಕೃತಿಯ ಮೂಲದಿಂದ ಗ್ರಹಿಸುವ ವಿಧಾನವೂ ಸಹ ವೈಚಾರಿಕ ಪ್ರಜ್ಞೆ ಎಂದು ಹೇಳಬಹುದು.

 

ಸಮಾಜವನ್ನು ಆ ನೆಲೆಯಲ್ಲಿ ನಾವು ರೂಪಿಸಿದರೆ ಮನುಷ್ಯ ದುಃಖದ ಪರಿಸ್ಥಿತಿಯನ್ನು ಇನ್ನಷ್ಟು ಉತ್ತಮವಾಗಿ ನಿರ್ವಹಿಸಬಹುದು.

 

ಹಾರೈಕೆಗಳಿಂದ ಕಳೆದುಕೊಳ್ಳುವುದು ಏನೂ ಇಲ್ಲ. ಪೂಜೆ, ಪ್ರಾರ್ಥನೆ, ನಮಾಜು ಮಾಡಿದರೆ ಪರಿಸ್ಥಿತಿಯ ತೀವ್ರತೆ ಕಡಿಮೆಯಾಗುತ್ತದೆ. ವಿಧಿಯ ಆಟ ಬಲ್ಲವರಿಲ್ಲ. ಸಮಾಜದ ಎಲ್ಲಾ ಜನರಿಗೂ ಒಂದೇ ರೀತಿಯ ಮಾನಸಿಕ ಸಾಮರ್ಥ್ಯ ಇರುವುದಿಲ್ಲ. ದೇವರ ಪ್ರಾರ್ಥನೆ ಅಂತಿಮ ಪ್ರಯತ್ನ. ಅದನ್ನೂ ನಿರಾಕರಿಸಿದರೆ ಜನರಿಗೆ ಇರುವ ಒಂದು ಆಯ್ಕೆಯೂ ಇಲ್ಲದೆ ಮಾನಸಿಕ ಖಿನ್ನತೆಗೆ ಒಳಗಾಗಬಹುದು ಎಂದು ಅನೇಕ ವೈದ್ಯರೇ ಹೇಳುತ್ತಾರೆ.

 

ಅಂದರೆ, ಮನುಷ್ಯನ ಅರಿವಿನ ಕೊರತೆ ನಿವಾರಿಸಲು ಆತನ ಮಾನಸಿಕ ಉದ್ವೇಗ ತಡೆಯಲು ಸೃಷ್ಟಿಸಿದ ಒಂದು ವಿಧಾನವೇ ಹಾರೈಕೆಗಳು ಎಂದು ತಿಳಿದುಬರುತ್ತದೆ. 

 

ಇದೇ ಹಾರೈಕೆಗಳನ್ನು ಅನೇಕ ಶುಭ ಕಾರ್ಯಗಳಿಗೂ ಮಾಡಲಾಗುತ್ತದೆ. ಇದೂ ಕೂಡ ವ್ಯಕ್ತಿಯ ಮಾನಸಿಕ ಶಕ್ತಿಯ ವೃದ್ದಿಯ ಒಂದು ತಂತ್ರವೇ ಹೊರತು ವಾಸ್ತವವಲ್ಲ. ಸ್ಪರ್ಧೆ ಅಥವಾ ಪರೀಕ್ಷೆಯ ಸಮಯದಲ್ಲಿ ಅವರವರ ಹಿತ ಚಿಂತಕರು ತುಂಬಾ ಶ್ರದ್ದಾ ಭಕ್ತಿಯಿಂದ ಹಾರೈಸುತ್ತಾರೆ. ಅದರಲ್ಲಿ ಕೆಲವರು ಯಶಸ್ವಿಯಾಗುತ್ತಾರೆ ಮತ್ತೆ ಕೆಲವರು ವಿಫಲವಾಗುತ್ತಾರೆ. ಅಂದರೆ ಇದೊಂದು ಆಶಯ ಮಾತ್ರ.......

 

ಇದು ಒಂದು ನಕಾರಾತ್ಮಕ ಚಿಂತನೆ ಎಂದು ಭಾವಿಸಬೇಡಿ. ವಿಷಯಗಳನ್ನು ವಿವಿಧ ದೃಷ್ಟಿಕೋನದಿಂದ ಅರ್ಥಮಾಡಿಕೊಳ್ಳುವ ಮೂಲಕ ಚಿಂತನಾ ಶೈಲಿಯನ್ನು ವಿಸ್ತಾರ ಮಾಡಿಕೊಳ್ಳುವ ಒಂದು ವಿಧಾನ. ಮನಸ್ಸು ಪಕ್ವಗೊಳ್ಳಲು ಅರಿವಿನ ಆಳದ ಮೂಲಕ ಮಾನಸಿಕ ನಿಯಂತ್ರಣ ಹೊಂದಲು, ಸತ್ಯದ ಹತ್ತಿರ ತಲುಪಲು ಇರುವ ಎಲ್ಲಾ ಮಾರ್ಗಗಳನ್ನು ನಾವು ಪರಿಶೀಲಿಸಬೇಕು. ಇಲ್ಲದಿದ್ದರೆ ವಾಸ್ತವದಿಂದ ತುಂಬಾ ದೂರ ಉಳಿದು  ಸ್ಥಾಪಿತ ಹಿತಾಸಕ್ತಿಗಳು ನಮ್ಮನ್ನು ದುರುಪಯೋಗ ಪಡಿಸಿಕೊಂಡು ಶೋಷಿಸಲು ನಾವೇ ಅವರಿಗೆ ದಾರಿ ಮಾಡಿಕೊಟ್ಟಂತೆ ಆಗುತ್ತದೆ.

 

ವ್ಯಕ್ತಿತ್ವ ಎಂಬುದು ಕೇವಲ ಕೆಲವೇ ವಿಷಯಗಳ ಪಾಂಡಿತ್ಯವಲ್ಲ. ಅದು ಎಲ್ಲಾ ವಿಷಯಗಳ, ಜೀವನ ವಿಧಾನದ ಒಂದು ಕಂಪ್ಲೀಟ್ ಪ್ಯಾಕೇಜ್. ಅದನ್ನು ಪಡೆಯಲು ಸಮಗ್ರ ಚಿಂತನೆ ಮತ್ತು ನಿರಂತರ ಪ್ರಯತ್ನ ಅಗತ್ಯ. ಅದು ನಿಮ್ಮ Quality of life ಉನ್ನತೀಕರಣಗೊಳಿಸುತ್ತದೆ......

 

ಯೋಚಿಸುವ ಮತ್ತು ವಿಷಯಗಳನ್ನು ಸ್ವೀಕರಿಸುವ ಎಲ್ಲಾ ಮಾನಸಿಕ ಬಾಗಿಲುಗಳು ಸದಾ ಮುಕ್ತವಾಗಿರಲಿ. ಇದರಿಂದ ನೀವು ಪಡೆದುಕೊಳ್ಳುವುದೇ ಹೆಚ್ಚು ಎಂಬುದು ವಾಸ್ತವಿಕ ಸತ್ಯ.........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068.........

Enjoyed this article? Stay informed by joining our newsletter!

Comments

You must be logged in to post a comment.

About Author