ಸಣ್ಣ ಉದ್ದಿಮೆಗಳ ಸಂಕಷ್ಟ........

ಕೊರೋನಾ ಸಮಯದಲ್ಲಿ ಸಣ್ಣ ಉದ್ದಿಮೆಗಳ ಸಂಕಷ್ಟ ಮತ್ತು ಅದಕ್ಕೆ ಪರಿಹಾರಗಳು.........

 

ರಾಜ್ಯದ ಬಜೆಟ್ ಮಂಡನೆಗೆ ಕೆಲವೇ ದಿನಗಳು ಇರುವಾಗ ಮುಖ್ಯಮಂತ್ರಿಗಳ ಗಮನಕ್ಕಾಗಿ.......

 

" ಸಮಾಜಮುಖಿ " ಪತ್ರಿಕೆಗೆ ಬರೆದ ಲೇಖನ.......

 

********************************************

 

ಸರಿ ಸುಮಾರು 750 ದಿನಗಳು ಸರಿದು ಹೋದವು ಕೋವಿಡ್ 19 ಅಥವಾ ಕೊರೋನಾ ಎಂಬ ವೈರಸ್ ನಮ್ಮನ್ನು ಕಾಡಲು ಪ್ರಾರಂಭವಾಗಿ.......

 

ಅಲ್ಲಿಂದ ಇಲ್ಲಿಯವರೆಗೆ ವಿವಿಧ ರೂಪಾಂತರ ಹೊಂದುತ್ತಾ ಸಾಗಿರುವ ಈ ಸಾಂಕ್ರಾಮಿಕ ರೋಗ  ಮಕ್ಕಳಿಂದ ಮುದುಕರವರೆಗೆ ವಿವಿಧ ಭಾವನೆಗಳನ್ನು ಸೃಷ್ಟಿಸುತ್ತಾ ಸಾಗುತ್ತಲೇ ಇದೆ.....

 

ಭಾವನೆಗಳನ್ನು ಮೀರಿದ ಬದುಕೊಂದು ನರಳುತ್ತಾ ಚಲಿಸುತ್ತಿರುವುದು ಇಡೀ ಕೊರೋನಾದ ಬಹುದೊಡ್ಡ ಅಧ್ಯಾಯ.......

 

ರೋಗದ ಹೊಡೆತದಿಂದ ಸರ್ಕಾರಿ ನೌಕರರು, ಹಣಕಾಸು ಸಂಸ್ಥೆಗಳು, ಸ್ವಂತ ಮನೆ ಹೊಂದಿರುವ ಜೊತೆಗೆ ಬಾಡಿಗೆ ನೀಡಿರುವವರು, ಹೆಚ್ಚು ಪಿತ್ರಾರ್ಜಿತ ಆಸ್ತಿ ಹೊಂದಿರುವವರು, ಮನೆಯಿಂದಲೇ ಕಾರ್ಯನಿರ್ವಹಿಸುತ್ತಿರುವ ಐ ಟಿ - ಬಿ ಟಿ ಉದ್ಯೋಗಿಗಳು, ಸೇವಾ ವಲಯದ ವಿವಿಧ ವೃತ್ತಿ ನಿರತರು ಮುಂತಾದವರು ಹೇಗೋ ಆರ್ಥಿಕ ಹೊಡೆತದಿಂದ ಸ್ವಲ್ಪ ಮಟ್ಟಿಗೆ ಬಚಾವಾಗಿದ್ದಾರೆ.

 

ಇನ್ನು ಇವುಗಳನ್ನು ಹೊರತುಪಡಿಸಿ ಬೇರೆ ಅಂಗಡಿ ಮುಗ್ಗಟ್ಟು ಕಂಪನಿಗಳು ಇತ್ಯಾದಿ ವ್ಯಾಪಾರದ ಸ್ಥಳಗಳಲ್ಲಿ ಉದ್ಯೋಗದಲ್ಲಿರುವ ಮತ್ತು ಬಾಡಿಗೆಗೆ ಮನೆಗಳಲ್ಲಿ ವಾಸ ಮಾಡುತ್ತಿರುವ ಮಧ್ಯಮ ಮತ್ತು ಕೆಳ ಮಧ್ಯಮ ವರ್ಗದವರು, ಇನ್ನೂ ಕೆಳ ಹಂತದ ಕೂಲಿ ಕಾರ್ಮಿಕರು ಈ ಸನ್ನಿವೇಶದ ಆರ್ಥಿಕ ಕುಸಿತದಲ್ಲಿ ನಲುಗುತ್ತಿರುವುದು ಮತ್ತೊಂದು ಭಯಾನಕ ಪರಿಸ್ಥಿತಿ....

 

ರೈತರಿಗೆ ನೇರವಾದ ಹೊಡೆತ ಬೀಳದಿದ್ದರೂ ಅವರು ಬೆಳೆದ ಫಸಲು ಮಾರಾಟವಾಗದೆ ಮತ್ತೊಂದು ರೀತಿಯ ಸಂಕಟಕ್ಕೆ ಅವರನ್ನು ದೂಡಿತು.

 

ಆದರೆ ಈ ಎಲ್ಲವನ್ನೂ ಮೀರಿ ಬದುಕನ್ನೇ ಕಳೆದುಕೊಂಡ ಮತ್ತೊಂದು ವರ್ಗ ಸಣ್ಣ ಉದ್ದಿಮೆ ವಹಿವಾಟು ಮಾಡುತ್ತಾ ಜೀವನದ ಕನಸುಗಳ ಮೇಲೆ ಚಲಿಸುತ್ತಿದ್ದ ಸಮುದಾಯ...

 

ಸಣ್ಣ ಉದ್ದಿಮೆ ವಹಿವಾಟು ಎಂದು ಎಷ್ಟೇ ಸರಳೀಕರಣ ಮಾಡಿದರೂ ಅದರ ವೈವಿಧ್ಯತೆಯನ್ನು ಸಂಪೂರ್ಣ ಹಿಡಿದಿಡುವುದು ತುಂಬಾ ಕಷ್ಟ. ಉದ್ದಿಮೆಯ ಪ್ರಕಾರಗಳಲ್ಲಿ ಇರಬಹುದು ಅಥವಾ ಉದ್ದಿಮೆಯ ಮಾರುಕಟ್ಟೆ ಇರಬಹುದು ಅಥವಾ ಉದ್ದಿಮೆಯ ಹಣಕಾಸು ಬಂಡವಾಳ ಮತ್ತು ನಿರ್ವಹಣೆ ಇರಬಹುದು. ಇದು ಉದ್ದಿಮೆಯಿಂದ ಉದ್ದಿಮೆಗೆ ಮತ್ತು ವ್ಯಕ್ತಿಯಿಂದ ವ್ಯಕ್ತಿಗೆ ಹಾಗು ಪ್ರದೇಶದಿಂದ ಪ್ರದೇಶಕ್ಕೆ ಸಾಕಷ್ಟು ಭಿನ್ನತೆ ಹೊಂದಿರುತ್ತದೆ. ಕೊರೋನಾ ಕಾಲದ ಆರ್ಥಿಕ ವಿಷಮ ಪರಿಸ್ಥಿತಿ ಕೂಡ ಇದಕ್ಕೆ ಹೊರತಲ್ಲ. 

 

ಆದರೆ ಕೆಲವೇ ಕೆಲವು ಮುಖ್ಯವಾಗಿ ವೈದ್ಯಕೀಯ ಮತ್ತು ಅದಕ್ಕೆ ಸಂಬಂಧಿಸಿದ ಹಾಗು ಎಲೆಕ್ಟ್ರಾನಿಕ್ ಉಪಕರಣಗಳು ಮತ್ತು ಅದಕ್ಕೆ ಪೂರಕ ಕೆಲವು ಸಣ್ಣ ಉದ್ದಿಮೆಗಳನ್ನು ಹೊರತುಪಡಿಸಿ ಶೇಕಡಾ 80 ರಷ್ಟು ಸಣ್ಣ ಉದ್ದಿಮೆಗಳು ಸಂಕಷ್ಟಕ್ಕೆ ಗುರಿಯಾದವು.

 

ಈ ಸಣ್ಣ ಉದ್ದಿಮೆಗಳ ಆರ್ಥಿಕ ಸಂಕಷ್ಟಗಳ ಸರಮಾಲೆ ಕೇವಲ ಕೊರೋನಾ ಸಂದರ್ಭದಲ್ಲಿ ಮಾತ್ರ ಪ್ರಾರಂವಾಗಲಿಲ್ಲ. ಇದರ ನಿಜವಾದ ಗಂಭೀರ ಪರಿಣಾಮ ಹೆಚ್ಚಾಗಲು ಸುಮಾರು 5 ವರ್ಷಗಳ ಹಿಂದೆಯೇ ಮುನ್ನುಡಿ ಬರೆಯಲಾಗಿತ್ತು. ನೋಟುಗಳ ಅಮಾನ್ಯೀಕರಣ, ನಗದು ಚಲಾವಣೆಯ ಮೇಲೆ ನಿಯಂತ್ರಣ ಅದರ ನಡುವೆಯೇ ಜಿ.ಎಸ್ ಟಿ ಎಂಬ ತೆರಿಗೆ ಸುಧಾರಣೆಯ ಕ್ರಮದ ಸಮಯದಲ್ಲಿ ಸರ್ಕಾರ ಅವೈಜ್ಞಾನಿಕವಾಗಿ ಅನೇಕ ವಸ್ತುಗಳಿಗೆ ಹೆಚ್ಚು ತೆರಿಗೆ ವಿಧಿಸಿದ ಪರಿಣಾಮ ಮತ್ತು ಆಗ ಉಂಟಾದ ಗೊಂದಲದ ವಾತಾವರಣದ ಕಾರಣದಿಂದಾಗಿ ಹೊಡೆತದ ಮೇಲೆ ಹೊಡೆತ ಬೀಳಲಾರಂಭಿಸಿತ್ತು. ಉದ್ಯಮ ಸ್ನೇಹಿ ವಾತಾವರಣವೇ ಇರಲಿಲ್ಲ. ಅದರ ಮುಂದುವರಿದ ಭಾಗವೇ ಕೊರೋನಾ ಮತ್ತು ಲಾಕ್ ಡೌನ್......

 

ಲಾಕ್ ಡೌನ್ ಪ್ರಾರಂಭದ ದಿನಗಳನ್ನು ನೆನಪಿಸಿಕೊಳ್ಳಿ. ದೇಶದ ಪ್ರಧಾನಿಯೇ ಸ್ವತಃ ಈ ದೇಶ ಮತ್ತು  ಇಲ್ಲಿನ ಜನರನ್ನು ಕಾಪಾಡಲಿಕ್ಕಾಗಿ ಇಡೀ ದೇಶವನ್ನು 21 ದಿನಗಳವರೆಗೆ ಸಂಪೂರ್ಣ ಲಾಕ್ ಡೌನ್ ಮಾಡಲಾಗುತ್ತದೆ ಎಂದು ಹೇಳಿದಾಗ ಜನರ ಮನಸ್ಥಿತಿ ಹೇಗಿತ್ತು ಎಂಬುದನ್ನು....

 

ಲಾಕ್ ಡೌನ್ ಮುಂದುವರಿಯುತ್ತಾ ಸಾಗಿತು. ಬದುಕಿರುವುದೇ ಒಂದು ಸಾಧನೆ ಎಂಬಲ್ಲಿಗೆ ಜನ ಬಂದು ತಲುಪಿದರು. ಜೀವ ಜೀವನದ ಆಯ್ಕೆಯ ಭಯದಲ್ಲಿ ಇಡೀ ಸಮಾಜ ನಿಂತಿತ್ತು. ಜೀವನಾವಶ್ಯಕ ವಸ್ತುಗಳನ್ನು ಹೊರತುಪಡಿಸಿ ಇತರ ವಸ್ತುಗಳ ಬಗ್ಗೆ ನಿರ್ಲಕ್ಷ್ಯ ಉಂಟಾಯಿತು. ಗೆಳೆಯರು, ಪರಿಚಿತರು, ಸಂಬಂಧಿಗಳು ಕೊನೆಗೆ ಸ್ವತಃ ಅನೇಕರು ಕೊರೋನಾ ಪೀಡಿತರಾದರು. ಅವರನ್ನು ಬಹುತೇಕ ಅಸ್ಪೃಶ್ಯರಂತೆ ಕಾಣಲಾಯಿತು. ಸಂಬಂಧಗಳು ಮುರಿದು ಬಿದ್ದವು. ಸಾಕಷ್ಟು ವಲಸೆಗಳು ಸಹ ನಡೆದವು. 

 

ಕೆಲವು ತಿಂಗಳುಗಳ ನಂತರ ಸ್ವಲ್ಪ ಪರಿಸ್ಥಿತಿ ಸುಧಾರಿಸುತ್ತಿದೆ ಎಂದು ಭಾವಿಸುತ್ತಿದ್ದಂತೆ ಮತ್ತೆ ಮೊದಲಿಗಿಂತ ಹೆಚ್ಚಾಗಿ ಎರಡನೇ ಅಲೆ ಮತ್ತಷ್ಟು ಭೀಕರವಾಗಿ ಅಪ್ಪಳಿಸಿತು. ಮಾಧ್ಯಮಗಳು ಅತಿರೇಕದ ಸುದ್ದಿಗಳನ್ನು ಪ್ರಕಟಿಸಿದವು. ಅದು ಹಾಗೇ ಮುಂದುವರಿದು ಈಗ ಮೂರನೇ ಅಲೆಯ ನಡುವೆ ನಾವಿದ್ದೇವೆ.

 

ಈ ಎಲ್ಲದರ ನೇರ ದುಷ್ಪಪರಿಣಾಮ ಸಣ್ಣ ಉದ್ದಿಮೆಗಳ ಮೇಲಾಯಿತು.

 

ಇದನ್ನು ತಡೆಯಲು ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಪ್ಯಾಕೇಜ್ ಪ್ರಕಟಿಸಿದವು. ಬ್ಯಾಂಕುಗಳು ಒಂದಷ್ಟು ಸಮಯಾವಕಾಶ ಕಲ್ಪಿಸಿದವು...

 

ಆದರೆ ಈ ಪರಿಹಾರದ ಪ್ಯಾಕೇಜ್ ಗಳು, ಪ್ರೋತ್ಸಾಹದ ಸಾಲ ಸೌಲಭ್ಯಗಳು ಕಣ್ಣೊರೆಸುವ ಅಥವಾ ದೂರದೃಷ್ಟಿ ಇಲ್ಲದ ಅಥವಾ ಕೆಳ ಹಂತದಲ್ಲಿ ಕಷ್ಟದ ಅರಿವಿಲ್ಲದ ಅವಾಸ್ತವಿಕ ಯೋಜನೆಗಳು ಎಂಬುದು ಕೆಲವೇ ದಿನಗಳಲ್ಲಿ ಸಾಬೀತಾಯಿತು. ಏಕೆಂದರೆ ಈಗಿನ ಪರಿಸ್ಥಿತಿ ಹೇಗಿದೆ ಎಂದರೆ ಸಾಮಾನ್ಯ ಸಮಯದಲ್ಲಿ ಅತ್ಯುತ್ತಮ ಎನ್ನಬಹುದಾದ ಪ್ರೋತ್ಸಾಹದ ಕ್ರಮಗಳು ಈಗ ಅದಕ್ಕೆ ವಿರುದ್ಧವಾದ ಫಲಿತಾಂಶ ನೀಡಲು ಪ್ರಾರಂಭಿಸಿವೆ. ಏಕೆಂದರೆ ಬೇಡಿಕೆ ಮತ್ತು ಪೂರೈಕೆಯ ನಡುವೆ ಹೊಂದಾಣಿಕೆಯೂ ಇಲ್ಲ ಅಥವಾ ಒಂದು ಅಂದಾಜು ಸಹ ಮಾಡಲು ಸಾಧ್ಯವಾಗುತ್ತಿಲ್ಲ. ಈ ಕ್ಷಣದಲ್ಲಿ ಒಟ್ಟು ಸಣ್ಣ ಉದ್ದಿಮೆಗಳು ಆರ್ಥಿಕ ವ್ಯವಸ್ಥೆ ಕುಸಿದು ಬಿದ್ದಿದೆ ಕೆಲವು ಸಹಜ ಬೇಡಿಕೆಯ ಮತ್ತು ಆರ್ಥಿಕ ಭದ್ರತೆಯನ್ನು ತಲತಲಾಂತರದಿಂದ ಹೊಂದಿದ್ದ ಉದ್ದಿಮೆಗಳನ್ನು ಹೊರತುಪಡಿಸಿ.

 

ಈಗ ಇದರ ಅಮೂಲಾಗ್ರ ಪುನಶ್ಚೇತನದ ಅತ್ಯಂತ ಅವಶ್ಯಕ ಕಾಲ ಘಟ್ಟದಲ್ಲಿ ನಾವಿದ್ದೇವೆ. ದೇಶ ಮತ್ತು ಸಮಾಜದ ಹಿತದೃಷ್ಟಿಯಿಂದ ಇದು ಅನಿವಾರ್ಯ ಸಹ.

 

ಕೆಲವೇ ದಿನಗಳ ಹಿಂದೆ ವಿಶ್ವ ಆರೋಗ್ಯ ಸಂಸ್ಥೆ ( WHO ) ಅಧಿಕೃತವಾಗಿ ನೀಡಿದ ಹೇಳಿಕೆಯಂತೆ ವೈರಸ್‌ಗಳು ಈ ಸೃಷ್ಟಿಯ ಸಹಜ ಜೀವಕೋಶಗಳು. ಅದನ್ನು ಸಂಪೂರ್ಣ ಹೋಗಲಾಡಿಸಲು ಸಾಧ್ಯವಿಲ್ಲ. ಅದರೊಂದಿಗೆ ಈಗಾಗಲೇ ಜೀವಿಸುತ್ತಿದ್ದೇವೆ ಮತ್ತು ಮುಂದೆಯೂ ಜೀವಿಸಲೇ ಬೇಕು ಅದರೊಂದಿಗೆ ಹೋರಾಡುತ್ತಾ.....

 

ಈ ಅಂಶಗಳನ್ನು ಆಡಳಿತ ವ್ಯವಸ್ಥೆ ಮೊದಲು ಅರ್ಥಮಾಡಿಕೊಳ್ಳಬೇಕು. ಅನಂತರವೇ ಇವುಗಳ ಪುನಶ್ಚೇತನದ ಮೊದಲ ಹೆಜ್ಜೆ ಇಡಲು ಸಾಧ್ಯ. ಏಕೆಂದರೆ ಸ್ಪಷ್ಟತೆ ಇಲ್ಲದ ಗೊಂದಲಮಯ ವಾತಾವರಣದಲ್ಲಿ ಯಾವುದೇ ಪರಿಹಾರ ಕ್ರಮಗಳು ಫಲ ನೀಡುವುದಿಲ್ಲ.

 

ಯಾವುದೇ ಕ್ಷಣದಲ್ಲಿ ಲಾಕ್ ಡೌನ್ ಎಂಬ ಭೂತ ಜನರ ಮನಸ್ಸಿನಿಂದ ಸ್ಪಷ್ಟವಾಗಿ ದೂರ ಸರಿಯುವಂತೆ ಮಾಡಬೇಕು. ಲಾಕ್ ಡೌನ್ ಸಹಜ ಮತ್ತು ಅನಿವಾರ್ಯ ಅಸ್ತ್ರ ಎಂಬ ಪರಿಸ್ಥಿತಿ ನಿರ್ಮಾಣ ಆಗುವವರೆಗೂ ಮಾಧ್ಯಮಗಳು ಸೇರಿ ಯಾರೂ ಆ ಬಗ್ಗೆ ಹೆಚ್ಚು ಚರ್ಚಿಸಬಾರದು. ವಿದೇಶಗಳ ಲಾಕ್ ಡೌನ್ ಪರಿಣಾಮ ಮತ್ತು ಭಾರತದ ಪರಿಸ್ಥಿತಿ ತುಂಬಾ ಭಿನ್ನವಾಗಿದೆ. ಪದೇ ಪದೇ ಲಾಕ್ ಡೌನ್ ಎದುರಿಸುವ ಆರ್ಥಿಕ ಶಕ್ತಿ ಭಾರತಕ್ಕಿಲ್ಲ.

 

ಯಾರು ಏನೇ ಹೇಳಲಿ, ನಾನು ಸಹ ಆರ್ಥಿಕ ತಜ್ಞನಲ್ಲ. ಭಾರತದ ಜನರ ಮಾನಸಿಕ ಮತ್ತು ಸಾಮಾಜಿಕ ವ್ಯವಸ್ಥೆಯನ್ನು ನೋಡಿದ ಅನುಭವದಲ್ಲಿ ಹೇಳುವುದಾದರೆ ಈಗಿರುವುದಕ್ಕಿಂತ  ಒಂದಷ್ಟು ಹೆಚ್ಚು ನಗದು ವ್ಯವಹಾರಕ್ಕೆ ಅನುಮತಿ ನೀಡಬೇಕು. ಇದು ಮುಖ್ಯವಾಗಿ ಸಣ್ಣ ಉದ್ದಿಮೆಗಳ ಈ ಕ್ಷಣದ ಪುನಶ್ಚೇತನಕ್ಕೆ ಕಾರಣವಾಗುವ ಎಲ್ಲಾ ಸಾಧ್ಯತೆ ಇದೆ. ಕನಿಷ್ಠ 50000 ವಾದರೂ ಮಿತಿ ಇದ್ದರೆ ಒಳ್ಳೆಯದು.

 

ಬ್ಯಾಂಕಿಂಗ್ ಅಥವಾ ಹಣಕಾಸು ಸಂಸ್ಥೆಗಳಲ್ಲಿ ಕ್ರಾಂತಿಕಾರಕ ಬದಲಾವಣೆಯ ಅವಶ್ಯಕತೆ ಇದೆ. ಸಣ್ಣ ಉದ್ದಿಮೆಗಳ ಅಭಿವೃದ್ಧಿಯ ದೃಷ್ಟಿಯಿಂದ ಇದನ್ನು ರೂಪಿಸಬೇಕು. ಇಲ್ಲಿಯವರೆಗಿನ ಸಾಂಪ್ರದಾಯಿಕ ಶೈಲಿಯ ಸಾಲ ಸೌಲಭ್ಯಗಳ ನೀಡಿಕೆಯಿಂದ ನಿರೀಕ್ಷಿತ ‌ಫಲಿತಾಂಶ ಇಲ್ಲ ಮತ್ತು ಅದರ ದುರುಪಯೋಗವೇ ಹೆಚ್ಚು ಎಂಬುದು ನಮಗೆಲ್ಲ ತಿಳಿದಿದೆ.

 

ಅತಿಮುಖ್ಯವಾಗಿ ಜಡ್ಡುಗಟ್ಟಿ ಹೋಗಿರುವ ಸಣ್ಣ ಉದ್ದಿಮೆಗಳ ಇಲಾಖೆಯ ಆದ್ಯತೆಯನ್ನೇ ಬದಲಾಯಿಸಬೇಕು. ಅಂದರೆ ಕೇವಲ ಅನುಮತಿ ಅಥವಾ ಹಣಕಾಸು ಸೌಲಭ್ಯ ಮಾತ್ರವಲ್ಲ ಬೇಡಿಕೆ ಮತ್ತು ಪೂರೈಕೆಗಳ ಮಾರುಕಟ್ಟೆ ವಿಸ್ತರಣೆಗೆ ಮಹತ್ವ ನೀಡಬೇಕು. ವಿಶ್ವದ ಬಹುದೊಡ್ಡ ಮಾರುಕಟ್ಟೆ ಎಂದು ಪರಿಗಣಿಸಿ ವಿದೇಶಿ ಕಂಪನಿಗಳು ಇಲ್ಲಿ ಹೂಡಿಕೆ ಮಾಡಿ ಲಾಭ ಮಾಡುತ್ತಿರುವಾಗ ನಮ್ಮ ಸಣ್ಣ ಉದ್ದಿಮೆಗಳು ವಿನಾಶದ ಅಂಚಿಗೆ ಬಂದಿರುವುದು ವಿಷಾದನೀಯ.

 

ಎಂದಿನಂತೆ ಸಹಜವಾಗಿ ಭ್ರಷ್ಟಾಚಾರದ ಪ್ರಸ್ತಾಪ ಮಾಡದೇ ಇರಲು ಸಾಧ್ಯವಿಲ್ಲ. ಏಕೆಂದರೆ ವಸ್ತುಗಳ ಗುಣಮಟ್ಟ ಕುಸಿಯಲು ಭ್ರಷ್ಟಾಚಾರವೇ ಬಹುಮುಖ್ಯ ಕಾರಣ. ಗುಣಮಟ್ಟ ಮತ್ತು ಸ್ಪರ್ಧಾತ್ಮಕ ಮಾರುಕಟ್ಟೆಯಲ್ಲಿ ಬೆಲೆ ನಿಯಂತ್ರಣ ಮಾಡದೆ ಸಣ್ಣ ಉದ್ದಿಮೆಗಳ ಪುನಶ್ಚೇತನ ಅಸಾಧ್ಯ ಎಂದೇ ಹೇಳಬಹುದು.

 

ಇದು ಈ ಕ್ಷಣದಲ್ಲಿ ಮೂಡಿದ ಸಾಮಾನ್ಯ ಅಭಿಪ್ರಾಯ. ಇನ್ನಷ್ಟು ಆಳವಾಗಿ ಅಧ್ಯಯನ ಮಾಡಿದ ಪರಿಣಿತರ ಮತ್ತಷ್ಟು ಸಲಹೆಗಳನ್ನು ಆಡಳಿತ ವ್ಯವಸ್ಥೆ ಗಂಭೀರವಾಗಿ ಪರಿಗಣಿಸಿದರೆ ಈ ಕೊರೋನಾ ಸಂದರ್ಭದಲ್ಲಿ ಸಹ ಖಂಡಿತ ಸಣ್ಣ ಉದ್ದಿಮೆಗಳ ಪುನಶ್ಚೇತನದ ಎಲ್ಲಾ ಸಾಧ್ಯತೆ ಇದೆ.

 

ಇತ್ತೀಚೆಗೆ ಬೀದರ್ ಜಿಲ್ಲೆಯಿಂದ ರಾಮನಗರ ಜಿಲ್ಲೆಯವರೆಗೆ 385 ದಿನ 11500 ಕಿಲೋಮೀಟರ್ ಕಾಲ್ನಡಿಗೆಯಲ್ಲಿ ಸಂಚರಿಸಿದ ಅನುಭವದ ಆಧಾರದಲ್ಲಿ ಒಂದು ಸಣ್ಣ ಅಭಿಪ್ರಾಯ ಈ ಲೇಖನದ ಮುಖಾಂತರ....

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author