ನಾವುಗಳು ಹಣ ಕೊಟ್ಟು ಕೊಂಡುಕೊಳ್ಳುವ ಸೊಪ್ಪುಗಳೆಂಬ ವಿಷ.
ಇತ್ತೀಚಿನ ದಿನಗಳಲ್ಲಿ ಅದರಲ್ಲೂ ಬೆಂಗಳೂರಿನಂತಹ ಪಟ್ಟಣಗಳಲ್ಲಿ ನಮಗೆ ನಿಜವಾಗಿಯೂ ಫ್ರೆಶ್ ಆಗಿರುವ ಸೊಪ್ಪುಗಳು ಸಿಗುವುದು ಬಹುತೇಕ ಅಪರೂಪ. ಹೆಚ್ಚಿನ ಎಲ್ಲ ಸೊಪ್ಪುಗಳನ್ನು ರಾಸಾಯನಿಕಗಳಲ್ಲಿ ಅದ್ದಿ ನಂತರ ಹಸಿರು ಬಣ್ಣದಲ್ಲಿ ಮುಳುಗಿಸಿ, ಆಗತಾನೆ ಕಿತ್ತುತಂದ ಫ್ರೆಶ್ ಆದ ಸೊಪ್ಪು ( ಹಾಗೆಯೇ ಕಾಣುವ ) ಎಂದು ಮಾರುತ್ತಾರೆ.
ಅವರು ಹಾಕುವ ಕೆಲವು ರಾಸಾಯನಿಕಗಳು ಹೀಗಿವೆ. Copper sulphate, Rhodamine oxide, Sulphur dioxide, Benzoic acids, Sorbic acid....ಇತ್ಯಾದಿ... ಇತ್ಯಾದಿ. ಇಷ್ಟು ಸಾಲದು ಎಂಬಂತೆ ಕೊನೆಗೆ ದಟ್ಟವಾದ ಘಾಡ ಹಸಿರು ಬಣ್ಣ ಬರಲು Malachite green ಎಂಬ ರಾಸಾಯನಿಕ ಬಣ್ಣ.
ಇಷ್ಟು ಸಾಲದು ಎಂಬಂತೆ ಒಂದು ಕಟ್ಟು ಸೊಪ್ಪಿನಲ್ಲಿ ಅರ್ಧಕ್ಕೆ ಅರ್ಧ ಕಸ, ಕಡ್ಡಿ, ಹುಲ್ಲು, ವಿಷಕಾರಿ ಪಾರ್ಥೇನಿಯಂ. ಸೊಪ್ಪು ಬಿಡಿಸಿಕೊಳ್ಳುವಸ್ಟರಲ್ಲಿ ತಲೆ ಕೆಟ್ಟುಹೋಗುತ್ತೆ. ನಾನೇನು ಹೆದರಿಸುತ್ತಿಲ್ಲ ನಿಮ್ಮಲ್ಲಿ ಕೆಲವರಾದರೂ ಇದನ್ನು ಗಮನಿಸಿರಬಹುದು.
ಪ್ರತಿಯೊಂದು ರಾಸಾಯನಿಕವೂ ನಮ್ಮ ದೇಹದಲ್ಲಿ ಹೋದರೆ ಕ್ಯಾನ್ಸರ್ ಅಲ್ಲದೆ ಕಿಡ್ನಿ , ಲಿವರ್ ಮುಂತಾದ ದೇಹದೊಳಗಿನ ಎಲ್ಲಾ ಅಂಗಾಂಗಗಳು ಹಾಳಾಗುವ ಸಾಧ್ಯತೆ ಹೆಚ್ಚು. ಮೆದುಳು ಮತ್ತು ಹೃದಯಕ್ಕೆ ಹಾನಿ ಸಂಭವಿಸುವ ಸಾಧ್ಯತೆಯೂ ಇದೆ.
ಇಷ್ಟೆಲ್ಲಾ ತೊಂದರೆಗಳು ಇರುವಾಗ, ಮಾರುವವರು ಕೇಳಿದಷ್ಟು ಹಣ ಕೊಟ್ಟು ತಂದು, ಜೊತೆಗೆ ಅನಾರೋಗ್ಯವನ್ನೂ ತಂದುಕೊಳ್ಳುವ ಬದಲು ನಾವು ಒಂದು ರೂಪಾಯಿ ಸಹ ಖರ್ಚಿಲ್ಲದೆ, ಬೇಕೆಂದಾಗಲೆಲ್ಲಾ ಕಿತ್ತುಕೊಂಡು ಅಡುಗೆಗೆ ಉಪಯೋಗಿಸಬಹುದಾದ ಫ್ರೆಶ್ ಸೊಪ್ಪುಗಳನ್ನು ಮನೆಯಲ್ಲಿ ವರ್ಷಪೂರ್ತಿ ಬೆಳೆಸಿಕೊಂಡರೆ ಹೇಗೆ....?
ಕೆಳಗೆ ಕೆಲವು ಫೋಟೋಗಳನ್ನು ಹಾಕಿದ್ದೇನೆ ನೋಡಿ. ನೀರು ಕುಡಿದು ರಸ್ತೆಯಲ್ಲಿ ಬಿಸಾಕಿ ಪರಿಸರ ಹಾಳು ಮಾಡುವ ಬಿಸ್ಲೇರಿ ಬಾಟಲ್, ಹಳೆಯ ಡಬ್ಬಗಳು ಇತ್ಯಾದಿ ನಿಮ್ಮ ಕೈಗೆ ಉಚಿತವಾಗಿ ಸಿಗುವ ಯಾವುದೇ ಆದರೂ ಆದೀತು.
ಸರಿಯಾದ ರೀತಿಯಲ್ಲಿ ಕತ್ತರಿಸಿಕೊಂಡು, ಮನೆಯಲ್ಲಿ ಬೆಳಕು ಬೀಳುವ ಜಾಗದಲ್ಲಿ ಒಳ್ಳೆಯ ಮಣ್ಣು / ನರ್ಸರಿ ಗಳಲ್ಲಿ ಮಾರುವ ಗೊಬ್ಬರದ ಮಣ್ಣು / ಅಥವಾ cocopits ಹಾಕಿ ರೆಡಿ ಮಾಡಿಕೊಳ್ಳಿ. ಮೊದಲು ನಿಮ್ಮ ಅಡುಗೆ ಮನೆಯಲ್ಲಿಯೇ ಇರುವ ಕೊತ್ತಂಬರಿ, ಮೆಂತ್ಯೆ ಮೊದಲು ಹಾಕಿ ದಿನಕ್ಕೊಮ್ಮೆ ನೀರು ಹಾಕುತ್ತಾ ಇರಿ. 15 - 30 ದಿನದಲ್ಲಿ ನಿಮ್ಮ ಮೊದಲ ನಿಜವಾದ ಆರ್ಗ್ಯಾನಿಕ್ ಸೊಪ್ಪು ಕೀಳಲು ರೆಡಿ.
ಮಣ್ಣಿನಿಂದ 3 ಇಂಚು ಮೇಲೆ ಸೊಪ್ಪು ಕತ್ತರಿಸಿಕೊಳ್ಳಿ ಅಥವ ಎಲೆಗಳನ್ನು ಮಾತ್ರ ಬಿಡಿಸಿಕೊಳ್ಳಿ. ಉಳಿದ ಬೇರಿನಿಂದ ಹೊಸ ಸೊಪ್ಪು 15 ದಿನಗಳಲ್ಲಿ ಪುನಃ ಚಿಗುರುತ್ತೆ. ಹೀಗೆಯೇ ಪಾಲಾಕ್, ಪುದೀನಾ, ಸಬ್ಬಸ್ಸಿಗೆ, ಹರಿವೆ, ಪುಂಡಿ.....ಹೀಗೆ ನಿಮಗೆ ಬೇಕಾದ ಸೊಪ್ಪು ಬೆಳೆಸಿಕೊಳ್ಳಿ. ಒಂದೆರಡು ಗಿಡಗಳನ್ನು ಬಲಿಯಲು ಬಿಟ್ಟು ಅದರ ಬೀಜಗಳನ್ನೇ ಪುನಃ ಮುಂದಿನ ಬೆಳೆಗೆ ಉಪಯೋಗಿಸಿ.
ಒಂದು ಹತ್ತು ತರ ಸೊಪ್ಪು ಬೆಳೆಸಿಕೊಳ್ಳಿ. ದಿನವೂ ಫ್ರೆಶ್ ಆದ, ಹಣ ಖರ್ಚಿಲ್ಲದೆ ಸಿಗುತ್ತೆ. ಅಷ್ಟೂ ಮುಗಿಯುವ ಹೊತ್ತಿಗೆ ಮೊದಲ ದಿನ ಕಿತ್ತ ಸೊಪ್ಪು ಪುನಃ ಬಂದಿರುತ್ತೆ. ಹಾಗೆಯೇ ಹಸಿಮೆಣಸಿನಕಾಯಿ, ಶುಂಠಿ, ಬೆಳ್ಳುಳ್ಳಿ ಸಹಾ ಬೆಳೆದುಕೊಳ್ಳಿ.
ಸೊಪ್ಪಿನಿಂದ ತೆಗೆದ ಕಡ್ಡಿ, ಕಾಫಿ, ಟೀ ಚರಟ, ರಾತ್ರಿ ಉಳಿದ ಅನ್ನ ಇತ್ಯಾದಿ ನಿಮ್ಮ ಸೊಪ್ಪಿನ ಪಾಟಿಗೆ ವಾಪಸ್ಸು ಹಾಕಿ. ಅದೇ ಗೊಬ್ಬರ ಆಗುತ್ತೆ.
ನೀವೇ, ನಿಮ್ಮ ಮನೆಯಲ್ಲಿಯೇ, ನಿಮ್ಮ ಕೈಯಾರೆ ಬೆಳಸಿ, ನೀವೇ ಬೇಕೆಂದಾಗ ಕಿತ್ತು ಅಡುಗೆ ಮಾಡಿ ಮನೆಮಂದಿಗೆಲ್ಲಾ ಬಡಿಸಿದರೆ ಎಷ್ಟು ಚೆನ್ನಾಗಿರುತ್ತದೆ ಅಲ್ವಾ....?
ಚಿತ್ರ, ಲೇಖನ :- ಮಂಜುನಾಥ್ ಪ್ರಸಾದ್.
You must be logged in to post a comment.