ಕಾಶ್ಮೀರ ಕಣಿವೆಯಲ್ಲಿ...

In the Kashmir Valley

Featured Image Source: etn global news

ರಕ್ಷಣೆಗಾಗಿ ಕಾಶ್ಮೀರ ಪಂಡಿತರ ಕೂಗು - 

ನಮ್ಮ ಜೀವಿಸುವ ಹಕ್ಕನ್ನು ನಿರಾಕರಿಸಲಾಗಿದೆ - ಅತ್ಯಂತ ಭಯಾನಕ ಸ್ಥಿತಿಯಲ್ಲಿ ನಾವಿದ್ದೇವೆ - ದಯವಿಟ್ಟು ರಕ್ಷಿಸಿ..........

 

ಇದು ಮಾಧ್ಯಮಗಳ ಸುದ್ದಿಯ ಮುಖ್ಯಾಂಶ......

 

ಇದಕ್ಕೆ ಯಾರೇ ಕಾರಣವಾಗಿರಲಿ, ಹಿಂದಿನ ಇತರೆ ಘಟನೆಗಳು ಏನೇ ಇರಲಿ, ಏನೇ ಆಡಳಿತಾತ್ಮಕ ವಿಫಲತೆಗಳು ಇರಲಿ ಈ ಕ್ಷಣದಲ್ಲಿ ಈ ನರಹತ್ಯೆಗಳನ್ನು ಮನುಷ್ಯರು ಎನಿಸಿಕೊಂಡಿರುವ ಪ್ರತಿಯೊಬ್ಬರು ಅತ್ಯಂತ ಪ್ರಜ್ಞಾಪೂರ್ವಕವಾಗಿ ಖಂಡಿಸಬೇಕು ಮತ್ತು ಅದನ್ನು ತಡೆಯಲು ಸರ್ಕಾರದ ಮೇಲೆ ಒತ್ತಡ ಹೇರಬೇಕು. ಧರ್ಮಗಳು ಯಾವುದೇ ಇರಲಿ, ಅವುಗಳ ಭೋದನೆ ಏನೇ ಇರಲಿ ಭಾರತದ ನೆಲದಲ್ಲಿ ಉದ್ದೇಶ ಪೂರ್ವಕವಾಗಿ ಇನ್ನೊಬ್ಬ ವ್ಯಕ್ತಿಯ ಹತ್ಯೆ ಅತ್ಯಂತ ಹೇಯ ಮತ್ತು ಅದನ್ನು ಮಾಡುವ ವ್ಯಕ್ತಿಯ ಧರ್ಮಕ್ಕೆ ಅವರೇ ಮಾಡಿಕೊಳ್ಳುವ ಅವಮಾನ. ಇದು ಎಲ್ಲಾ ಧರ್ಮಗಳಿಗು ಮತ್ತು ಭಾರತದ ನೆಲದಲ್ಲಿ ನಡೆಯುವ ಈ ರೀತಿಯ ಎಲ್ಲಾ ಹಿಂಸೆಗಳಿಗು ಸಮನಾಗಿ ಅನ್ವಯ.

 

ಇನ್ನೊಂದಿಷ್ಟು ನೇರವಾಗಿ ಮತ್ತು ಹಸಿಹಸಿಯಾಗಿ ಹಾಗೂ ಮೇಲ್ನೋಟದ ಸುದ್ದಿಗಳ ಆಧಾರದಲ್ಲಿ ಹೇಳಬೇಕೆಂದರೆ,

ಪಾಕಿಸ್ತಾನ ಪ್ರಾಯೋಜಿತ ಮುಸ್ಲಿಂ ಪ್ರತ್ಯೇಕವಾದಿ ಭಯೋತ್ಪಾದಕರು ಕಾಶ್ಮೀರದ ಹಿಂದುಗಳನ್ನು ಧರ್ಮ ಮತ್ತು ಪ್ರದೇಶದ ಆಧಾರದಲ್ಲಿ ಹತ್ಯೆ ಮಾಡುತ್ತಿದ್ದಾರೆ. ಈಗ ಭಾರತದ ಬಹುಸಂಖ್ಯಾತ ಹಿಂದುಗಳ ನಿರೀಕ್ಷೆ ಇಲ್ಲಿನ ಮುಸ್ಲಿಮರು ಇದನ್ನು ನೇರವಾಗಿ ಮತ್ತು ಸ್ಪಷ್ಟವಾಗಿ ಖಂಡಿಸಬೇಕು ಎಂದು. 

 

ಹೌದು ಕೆಲವೊಮ್ಮೆ ಹಿಂದುಗಳು ದೇಶದ ಇತರ ಭಾಗಗಳಲ್ಲಿ ಮುಸ್ಲಿಮರ ಮೇಲೆ ದೌರ್ಜನ್ಯ ಮಾಡಿದ ಅನೇಕ ಘಟನೆಗಳು ಸಹ ಇವೆ. ಆದರೆ ಆ ನೆಪದಲ್ಲಿ ದಯವಿಟ್ಟು ಇದನ್ನು ಸಮರ್ಥಿಸಿಕೊಳ್ಳದೆ ಭಾರತದ ಎಲ್ಲಾ ಮುಸ್ಲಿಂ ಸಂಘಟನೆಗಳು ಒಕ್ಕೊರಲಿನಿಂದ ಕಾಶ್ಮೀರ ಪಂಡಿತರ ಹತ್ಯೆಗಳನ್ನು ಖಂಡಿಸಬೇಕು ಮತ್ತು ಭಯೋತ್ಪಾದಕರಿಗೆ ಒಂದು ಎಚ್ಚರಿಕೆ ಹಾಗು ಹತ್ಯೆ ಮಾಡದಂತೆ ಒಂದು ಮನವಿಯನ್ನು ಮಾಡಿಕೊಳ್ಳಬೇಕು. 

 

ಇದರಿಂದ ಅಂತಹ ದೊಡ್ಡ ಬದಲಾವಣೆ ಕಾಶ್ಮೀರದಲ್ಲಿ ಆಗದೇ ಇರಬಹುದು. ಆದರೆ ಭಾರತದ ಬಹುಸಂಖ್ಯಾತ ಹಿಂದುಗಳಿಗೆ ಒಂದು ರೀತಿಯ ಸಮಾಧಾನ ಆಗಬಹುದು ಮತ್ತು ಮುಸ್ಲಿಮರ ಮೇಲೆ ಎಲ್ಲಾದರೂ ಹಲ್ಲೆಗಳು ಆದರೆ ಗಟ್ಟಿ ಧ್ವನಿಯಲ್ಲಿ ಇಲ್ಲಿನ ಪ್ರಗತಿಪರ ಹಿಂದುಗಳು ಮುಸ್ಲಿಂ ಸಮುದಾಯದ ಪರವಾಗಿ ಮಾತನಾಡುವ ನೈತಿಕತೆ ಇರುತ್ತದೆ.

 

ಹೌದು ಈ ಕ್ಷಣದಲ್ಲಿ ಇದು‌ ಒಂದು ತೋರಿಕೆಯ ಮಾತು ಎಂಬುದು ಸತ್ಯ. ಆದರೆ ಕನಿಷ್ಠ ವಿರುದ್ಧ ಧರ್ಮಗಳ ಹತ್ಯೆಯನ್ನು ಮೇಲ್ನೋಟಕ್ಕಾದರೂ‌ ಖಂಡಿಸುವ ಮೂಲಕ ನೈಜ ಸೌಹಾರ್ದಕ್ಕೆ ಒಂದು ಅಡಿಪಾಯ ಹಾಕಬೇಕಿದೆ. ಇಲ್ಲದಿದ್ದರೆ ಇದು ಸರಿಪಡಿಸಲಾಗದ ಕಂದಕ ನಿರ್ಮಿಸಿ ಅಪಾಯಕಾರಿ ಹಂತ ದಾಟಬಹುದು.

 

ರಾಜಕಾರಣಿಗಳೇನೋ ತಮ್ಮ ‌ಸ್ವಾರ್ಥಕ್ಕಾಗಿ ಮತ್ತೊಂದು ಕಾಶ್ಮೀರಿ ಫೈಲ್ಸ್ ಚಿತ್ರಕ್ಕೆ  ಚಿತ್ರಕಥೆ ‌ಸಿದ್ದ ಮಾಡುತ್ತಿರಬಹುದು. ಆದರೆ ಜನಸಾಮಾನ್ಯರಾದ ನಾವು‌ ಅಂತಹ ‌ರಾಕ್ಷಸ ಮನಸ್ಥಿತಿಗೆ ಇಳಿಯಬಾರದು. ಮುಖ್ಯವಾಗಿ ಮುಸ್ಲಿಂ ಸಮುದಾಯದವರು ಕಾಶ್ಮೀರದ ಮುಸ್ಲಿಂ ಬಂಧುಗಳಿಗೆ ಮನವಿ ಮಾಡಿಕೊಂಡು ಅಲ್ಲಿನ ಹಿಂದೂಗಳಿಗೆ ಸ್ವತಃ ಮುಂದೆ ನಿಂತು ರಕ್ಷಣೆ ಕೊಡುವ ಪ್ರಯತ್ನ ಮಾಡಬೇಕು. 

 

ಮುಂದೊಂದು ದಿನ ಇದೇ ಹಿಂದುಗಳು " ಕಾಶ್ಮೀರಿ ಫೈಲ್ಸ್ - ಎ‌ ನೊಬಾಲಿಟಿ ಆಫ್ ಕಾಶ್ಮೀರಿ ಮುಸ್ಲಿಮ್ಸ್ " ( ಕಾಶ್ಮೀರಿ ಮುಸ್ಲಿಮರ ದೈವಿಕ ಗುಣ ) ಎಂಬ ಚಿತ್ರ ಮಾಡುವುದನ್ನು ನೋಡಬೇಕು.

 

ಹೌದು ಇದು ಸಾಧ್ಯ. ನೀವು ನಿಜವಾದ ಹಿಂದುಗಳು ಮತ್ತು ಮುಸ್ಲಿಮರು ಆಗಿದ್ದರೆ, ನೀವು ನಿಜವಾಗಿ ಖುರಾನ್ ಭಗವದ್ಗೀತೆ ಓದಿದ್ದರೆ, ಭಾರತ ಪಾಕಿಸ್ತಾನದ ‌ಆಡಳಿತ ಮುಖ್ಯಸ್ಥರು ನಿಮ್ಮ ನಿಮ್ಮ ದೇವರು ಧರ್ಮಗಳಲ್ಲಿ ನಂಬಿಕೆ ಉಳ್ಳವರೇ ಆಗಿದ್ದರೆ ಇದು ಸಾಧ್ಯ. 

 

ಇಲ್ಲದಿದ್ದರೆ ಈ ದೇವರು ಧರ್ಮಗಳನ್ನು ‌ದಿಕ್ಕರಿಸಿ ಸಾಮಾನ್ಯ ಜನರೇ ಸಂವಿಧಾನದ ಅಡಿಯಲ್ಲಿ ಒಂದು ನಾಗರಿಕ ಸಮಾಜ ನಿರ್ಮಿಸಿಕೊಂಡು ಹಿಂದು ಮುಸ್ಲಿಂ ಎನ್ನದೇ ಕೇವಲ ಭಾರತದ ಪ್ರಜೆಗಳಾಗಿ‌ ದೇಶದ ಯಾವುದೇ ಮೂಲೆಯಲ್ಲಿ ಯಾರು ಬೇಕಾದರೂ   ವಾಸಿಸುವ ವಾತಾವರಣ ನಿರ್ಮಿಸಿಕೊಳ್ಳಬೇಕು. 

 

ಹಿಂದೂ ಮುಸ್ಲಿಂ ಪ್ರಗತಿಪರರು ತಮ್ಮ ತಮ್ಮ ಧರ್ಮಗಳ ಹಿಂಸೆಯ ವಿರುದ್ಧ ಧ್ವನಿ ಎತ್ತಿ ಮೂಲಭೂತವಾದಿ ಸಂಘಟನೆಗಳ ಸದ್ದಡಗಿಸಬೇಕು. ಈಗಲೂ ಮೌನವಾಗಿದ್ದು ನಾವೇ ಶ್ರೇಷ್ಠ ಮುಂದೆ ನಮಗೂ ಒಂದು ಸಮಯ ಬರುತ್ತದೆ ಎಂದು ಕಾದು ಕುಳಿತ ತೋಳಗಳಿಗೆ ಆಹಾರವಾಗಬಾರದು.

 

ಕೇವಲ ಕಾಶ್ಮೀರ ಪಂಡಿತರ ವಿಷಯದಲ್ಲಿ ಮಾತ್ರವಲ್ಲ ಈ ಸಮಾಜದಲ್ಲಿ ಯಾವುದೇ ಜನರ ಮೇಲೆ ಹಿಂಸೆ ನಡೆದರೆ ಇಡೀ ಜನ ಸಮೂಹ ಅದರ ವಿರುದ್ಧ ಪ್ರತಿಕ್ರಿಯೆ ವ್ಯಕ್ತಪಡಿಸಿದರೆ ಖಂಡಿತ ಸರ್ವ ಜನಾಂಗದ ಶಾಂತಿಯ ತೋಟದಲ್ಲಿ ಮತ್ತೆ ಸುಂದರ ಹೂವುಗಳು ಅರಳುವ ಎಲ್ಲಾ ಸಾಧ್ಯತೆಗಳು ಇವೆ. 

 

ಒಂದೇ ಬಳ್ಳಿಯ ಹೂಗಳು ನಾವು,

ಒಬ್ಬರೊನ್ನೊಬ್ಬರು ಸಹಕರಿಸಿಕೊಂಡು ಬೆಳೆಯೋಣ.

 

ಒಂದೇ ದೋಣಿಯ ಪಯಣಿಗರು ನಾವು,

ಹೊಡೆದಾಟ,ಬಡಿದಾಟ ನಿಲ್ಲಿಸಿ ನೆಮ್ಮದಿಯಾಗಿ ಪಯಣಿಸೋಣ.

 

ಒಂದೇ ಮಣ್ಣಿನ ಮಕ್ಕಳು ನಾವು,

ಎಲ್ಲರೂ ಸಮಾನಾಗಿ ಹಂಚಿಕೊಂಡು ಜೀವಿಸೋಣ.

 

ಒಂದೇ ನಾಡಿನ ಪ್ರಜೆಗಳು ನಾವು,

ಭಿನ್ನ ವಿಚಾರಗಳ ನಡುವೆಯೂ ಸೌಹಾರ್ದತೆ ಕಾಪಾಡೋಣ.

 

ಎಲ್ಲರ ದೇಹ ರಚನೆಯೂ ಮೂಳೆ,ಮಾಂಸ, ರಕ್ತ,ಚರ್ಮದ ಹೊದಿಕೆ.

ಹಾಗಿದ್ದರೂ ಏಕೆ ನಮ್ಮೊಳಗೆ ಶ್ರೇಷ್ಠ ಕನಿಷ್ಠ.

 

ಸೃಷ್ಟಿಗೇ ಇಲ್ಲದ ತಾರತಮ್ಯ ಅದರ ಕುಡಿಗಳಾದ ನಮಗೇಕೆ.

 

ಅಯ್ಯಾ ಹಿಂದು, ಅಯ್ಯಾ ಮುಸ್ಲಿಂ, ಅಯ್ಯಾ ಕ್ರಿಶ್ಚಿಯನ್, ಅಯ್ಯಾ ಸಿಖ್,

ಏನಯ್ಯಾ ನಿಮ್ಮ ಕಿತಾಪತಿ,

 

ಹುಟ್ಟಿನಲ್ಲಿ, ಸಾವಿನಲ್ಲಿ,

ಒಂದೇ ರೀತಿ ಇರುವಾಗ ಬದುಕಿನಲ್ಲಿ ಯಾಕೆ ಬೇದ.

 

ಅಯ್ಯಾ ಮೂರ್ಖರೆ, 

ಎಷ್ಟು ಸಾರಿ ಹೇಳುವುದು,

 

ನೀವು ತಿನ್ನುವ ಅನ್ನ ಒಂದೇ, 

ಕುಡಿಯುವ ನೀರು ಒಂದೇ,

ಉಸಿರಾಡುವ ಗಾಳಿ ಒಂದೇ, ನಗುವೊಂದೇ, ಅಳುವೊಂದೇ,

ಜ್ವರವೊಂದೇ, ಕೋಪವೊಂದೇ,

 

ಮತ್ತೇನಯ್ಯ ದಾಡಿ ನಿಮಗೆ,

ಬಿಡಿ ಇದೆಲ್ಲಾ, ನಿಯತ್ತಾಗಿರಿ ಸೃಷ್ಟಿಗೆ,

ಆಗ ನೋಡಿ ಅದರ ಮಜಾ,............

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author