ಮನಸ್ಸುಗಳ ಅಂತರಂಗದ ಚಳವಳಿ......

Inner movement of minds

Featured Image Source: thriveglobal.com

ಮನಸ್ಸುಗಳ ಅಂತರಂಗದ ಚಳವಳಿ....

 

ಮಥನ - ಮಂಥನ - ಕಡಲ‌ ಆಳ - ಆಕಾಶ ಅನಂತ - ಭೂಮಿಯ ವಿಶಾಲ - ಮನಸ್ಸಿನ ಅಗಾಧ..........

 

ದೇಹ - ಮನಸ್ಸುಗಳನ್ನು ಘರ್ಷಿಸಲು ಬಿಡಿ............

 

ಸಾರ್ವಜನಿಕ ಜೀವನದಲ್ಲಿ ಚರ್ಚೆಯಾಗುವ ವಿಷಯಗಳಲ್ಲಿ ನಿಮಗೆ ಆಸಕ್ತಿ ಇದ್ದು ಆ ಬಗ್ಗೆ ನೀವು ಹೆಚ್ಚಿನ ಜ್ಞಾನ ಸಂಪಾದನೆ ಮಾಡಬೇಕು ಎಂಬ ಬಯಕೆ ನಿಮ್ಮದಾದರೆ ಕೇವಲ ಮಾಹಿತಿ ಸಂಗ್ರಹದಿಂದ ಅದು ಸಾಧ್ಯವಾಗುವುದಿಲ್ಲ. ಸಮಗ್ರ ಚಿಂತನೆ ನಿಮ್ಮ ಅರಿವಿಗೆ ಬರಬೇಕಾದರೆ........

 

ದೇಹ ಮತ್ತು ಮನಸ್ಸುಗಳನ್ನು ಘರ್ಷಣೆಗೆ ಒಳಪಡಿಸಬೇಕು. ವೈರುಧ್ಯಮಯ ವಿಚಾರಗಳಿಗೆ ಮುಕ್ತವಾಗಿ ತೆರೆದುಕೊಳ್ಳಬೇಕು. ಬೇರೆ ಬೇರೆ ಹಂತದಲ್ಲಿ, ಬೇರೆ ಬೇರೆ ನೆಲೆಯಲ್ಲಿ ವಿಶಾಲ ಮನೋಭಾವದಿಂದ ನಿಂತು ಯೋಚಿಸಬೇಕು. ನಮ್ಮ ಮನಸ್ಸಿನಲ್ಲಿ ಸಾಕಷ್ಟು ಗೊಂದಲ, ದ್ವಂದ್ವ, ಚಡಪಡಿಕೆ, ಅನುಮಾನಗಳು ಮೂಡಬೇಕು. ನಾವು ತೆಗೆದುಕೊಳ್ಳುವ ಅಭಿಪ್ರಾಯಗಳೇ ಎಷ್ಟೋ ಬಾರಿ ಮತ್ತೆ ಮರಳಿ ನಮ್ಮನ್ನೇ ಅಣಕಿಸುತ್ತವೆ. ಆಗ ಆತ್ಮಾವಲೋಕನ ಮಾಡಿಕೊಳ್ಳಬೇಕು. ತಕ್ಷಣದ ಮತ್ತು ದೀರ್ಘಾವಧಿಯ ಪರಿಣಾಮಗಳನ್ನು ಗಮನಿಸಬೇಕು. ಆಗ ನೀವು ಸತ್ಯ ಮತ್ತು ವಾಸ್ತವದ ಹತ್ತಿರ ಹೋಗಲು ಸಾಧ್ಯ.

 

ಓದು ಬರಹಗಳ ಮುಖಾಂತರ ಅಕ್ಷರಗಳಲ್ಲಿ ಅಭಿವ್ಯಕ್ತಿಗೊಂಡ ಭಾವನೆಗಳು ಸಹ ನಮ್ಮ ದಿಕ್ಕು ತಪ್ಪಿಸಬಹುದು. ಅಕ್ಷರಗಳನ್ನು ಪದಗಳಾಗಿ ಜೋಡಿಸಿ ಏನನ್ನು ಹೇಗೆ ಬೇಕಾದರೂ ತಿರುಚುತ್ತಾ ಸಮರ್ಥಿಸುತ್ತಾ ಮೆದುಳಿನ ಭಾಷೆಯಲ್ಲಿ ಪುಸ್ತಕಗಳನ್ನು ಪ್ರಕಟಿಸಿ, ಭಾಷಣ ಪ್ರವಚನಗಳನ್ನು ನೀಡಿ ಬದುಕು ಕಟ್ಟಿಕೊಳ್ಳುವುದಷ್ಟೇ ಅಲ್ಲದೆ ಸಮಾಜದ ಮುಖ್ಯವಾಹಿನಿಯಲ್ಲಿ ಹಣ ಅಧಿಕಾರ ಪ್ರಶಸ್ತಿಗಳನ್ನು ಪಡೆಯಬಹುದು. ಅದು ಅಕ್ಷರ ಸಾಮರ್ಥ್ಯದ ಮಾಯೆ ಅಥವಾ ಪ್ರತಿಭೆ. ಆದೇ ಆಧುನಿಕತೆಯ ಯಶಸ್ಸಿನ ಮಾನದಂಡವಾಗಿದೆ.

 

ಆದರೆ ಅದು ನಿಜವಾದ ಜ್ಞಾನವಲ್ಲ. ಶರಣ ವಚನಗಳಲ್ಲಿ ಕಾಣಬರುವ 

" ನುಡಿದಂತೆ ನಡೆಯಬೇಕು, ನಡೆದಂತೆ ನುಡಿಯಬೇಕು "

ಅಂದರೆ ಬದುಕು ಮತ್ತು ಬರಹದ ನಡುವೆ ಹೆಚ್ಚಿನ ಅಂತರ ಇರಬಾರದು. ಬರಹಕ್ಕೆ ಅಕ್ಷರ ಜ್ಞಾನ ಸಾಕು. ಆದರೆ ಬದುಕಲು ಜ್ಞಾನ ಮೀರಿದ ಹೃದಯವಂತಿಕೆ ಬೇಕು. 

 

ಇಂದು ನಾವು ಹುಡುಕಬೇಕಿರುವುದು ಅಕ್ಷರವಂತರನ್ನಲ್ಲ, ಜ್ಞಾನಿಗಳನ್ನಲ್ಲ, ಹೃದಯವಂತರನ್ನ.  ಸಾರ್ವಜನಿಕ ಜೀವನದ ಅಭಿಪ್ರಾಯಗಳನ್ನು ಅಕ್ಷರವಂತರು ರೂಪಿಸಬಾರದು ಹೃದಯವಂತರು ರೂಪಿಸಬೇಕು.

 

ಉದಾಹರಣೆಗೆ, ಈ ಸಮಾಜದ ಅತ್ಯಂತ ಹೀನ ಅತ್ಯಾಚಾರ ಪ್ರಕರಣಗಳಲ್ಲಿ, ಸಾಮಾನ್ಯವಾಗಿ ಎಲ್ಲರೂ ಅತ್ಯಾಚಾರಕ್ಕೆ ಒಳಗಾಗುವ ಮಹಿಳೆಯರ ಬಗ್ಗೆ ಮಾತನಾಡುತ್ತಾರೆ. ಅತ್ಯಾಚಾರ ಮಾಡಿದ ವ್ಯಕ್ತಿಗಳನ್ನು ತೀವ್ರವಾಗಿ ಶಿಕ್ಷಿಸಬೇಕು ಎಂದು ಒತ್ತಾಯಿಸುತ್ತಾರೆ. ಆದರೂ ಅತ್ಯಾಚಾರಗಳು ನಿಂತಿಲ್ಲ. ಕಾರಣ ಯೋಚಿಸಿ ನೋಡಿ. ಅತ್ಯಾಚಾರಕ್ಕೆ ಯಾರು ಬೇಕಾದರೂ ಒಳಗಾಗಬಹುದು. ಆದರೆ ಅತ್ಯಾಚಾರವನ್ನು ಎಲ್ಲರೂ ಮಾಡಲು ಸಾಧ್ಯವಿಲ್ಲ. ಕೆಲವೇ ಜನರಿಗೆ ಆ ರೀತಿಯ ವಿಕೃತ ಮನಸ್ಥಿತಿ ಇರುತ್ತದೆ. ನಾವು ಅತ್ಯಾಚಾರ ತಡೆಯಬೇಕಾದರೆ ಅತ್ಯಾಚಾರಿಗಳನ್ನು ಸಹ ಆಳವಾಗಿ ಅಧ್ಯಯನ ಮಾಡಬೇಕು. ಕೇವಲ ಭಾವನಾತ್ಮಕವಾಗಿ ಅತ್ಯಾಚಾರಿಗಳಿಗೆ ಗಲ್ಲು ಶಿಕ್ಷೆ ನೀಡಿ ಎಂದು ಕೂಗಾಡಿದರೆ ಸಮಸ್ಯೆಯ ಆಳ ನಮಗೆ ಅರಿವಾಗುವುದಿಲ್ಲ.

 

ಅದೇ ರೀತಿ ದೇಹ ಸಹ ಎಲ್ಲಾ ಋತುಮಾನಗಳಿಗೆ ತೆರೆದುಕೊಳ್ಳಬೇಕು. ಚಳಿ, ಮಳೆ, ಗಾಳಿ, ಬಿಸಿಲಿನ ವಾತಾವರಣಕ್ಕೆ  ಮುಕ್ತವಾದಾಗಲೇ ದೇಹ ರೋಗ ನಿರೋಧಕ ಶಕ್ತಿಯನ್ನು ಬೆಳೆಸಿಕೊಳ್ಳಲು ಸಾಧ್ಯ. ದೇಹವನ್ನು ಎಲ್ಲಾ ಕಾಲದಲ್ಲೂ ಹವಾ ನಿಯಂತ್ರಣ ವ್ಯವಸ್ಥೆಯಲ್ಲಿ ಇಟ್ಟರೆ ಪ್ರತಿರೋಧಕ ಶಕ್ತಿ ಬೆಳೆಯುವುದಿಲ್ಲ. ಘರ್ಷಣೆಗೆ ದೇಹವನ್ನು ಮುಕ್ತವಾಗಿಸಬೇಕು.

 

ಆದ್ದರಿಂದ.......

 

ಹರಿಯಲು ಬಿಡಿ ಮನಸ್ಸನ್ನು

ಭೂಮಿ, ಆಕಾಶ, ಪಾತಾಳದವರೆಗೂ,

 

ವಿಹರಿಸಲು ಬಿಡಿ ಮನಸ್ಸನ್ನು

ನೀರು, ಗಾಳಿ, ಬೆಳಕಿನಾಳದಲ್ಲೂ,

 

ಅಲೆದಾಡಿಸಿ ಮನಸ್ಸನ್ನು

ಕಾಡು, ಪರ್ವತ, ಬೆಟ್ಟ ಗುಡ್ಡಗಳಲ್ಲೂ, 

 

ಸುತ್ತಾಡಿಸಿ ಮನಸ್ಸನ್ನು

ಸೃಷ್ಟಿಯ ಮೂಲೆ ಮೂಲೆಗೂ,

 

ಆಗ ನಿಮಗೆ ಸಿಗುವ ಗ್ರಹಿಕೆಯೊಂದಿಗೆ

ಒಳ ಹೊಕ್ಕಿ ನೋಡಿ,

 

ಧರ್ಮ ರಕ್ಷಿಸುತ್ತೇವೆ ಎಂದು ಹೇಳುವವರನ್ನು,

 

ಧರ್ಮ ವಿರೋಧಿಸುತ್ತೇವೆ ಎಂದು ವಾದಿಸುವವರನ್ನು,

 

ಆಸ್ತಿಕರ ನಂಬಿಕೆಯನ್ನು,

ನಾಸ್ತಿಕರ ವೈಚಾರಿಕತೆಯನ್ನು,

 

ಕೊಲೆ ಮಾಡುವವರ ಮನೋಭಾವವನ್ನು,

ಕೊಲೆಯಾಗುವವರ ಯಾತನೆಯನ್ನು,

 

ಅತ್ಯಾಚಾರಿಗಳ ಮನೋವ್ಯೆಕಲ್ಯತೆಯನ್ನು,

ನತದೃಷ್ಟೆಯರ ವೇದನೆಯನ್ನು,

 

ವೇದ ಮಂತ್ರ ಪಠಿಸುವವರನ್ನು, 

ಮೋಸ ಸುಲಿಗೆಯ ವಂಚಕರನ್ನು,

 

ಮೀಸಲಾತಿ ಪಡೆಯುವವರನ್ನು, ಮೀಸಲಾತಿ ವಿರೋಧಿಸುವವರನ್ನು,

 

ಪೂಜಾರಿ, ಮುಲ್ಲಾ, ಫಾದರ್, ಮಠಾದೀಶರುಗಳ ಮನಸ್ಥಿತಿಯನ್ನು,

 

ಅದನ್ನು ಕೇಳಿ ಆನಂದಿಸುವ ಜನರನ್ನು,

ಅದನ್ನು ದ್ವೇಷಿಸುವ ವ್ಯಕ್ತಿಗಳನ್ನು,

 

ವ್ಯೆಚಾರಿಕ ಮನೋಭಾವದವರನ್ನು, 

ಬುದ್ದಿ ಜೀವಿಗಳನ್ನು,

ರಾಜಕಾರಣಿಗಳನ್ನು, ಮತದಾರರನ್ನು,

 

ಅಧಿಕಾರಿಗಳನ್ನು, ಸೇವಕರನ್ನು,

ಬಡವ, ಶ್ರೀಮಂತ, ದರಿದ್ರರನ್ನು,

 

ನಿರ್ಲಿಪ್ತರನ್ನು, ಆಕ್ರಮಣಕಾರಿಗಳನ್ನು,

ಸ್ವಾತಂತ್ರ್ಯ ಜೀವಿಗಳನ್ನು, ಸ್ವೇಚ್ಚಾಚಾರಿ ಮನೋಭಾವದವರನ್ನು,

 

ಆಳ ಚಿಂತಕರನ್ನು, 

ಉಢಾಪೆ ಮನಸ್ಥಿತಿಯವರನ್ನು,

 

ಅಲ್ಲಿಂದ ಮುಂದೆ ...

 

ನಿಮ್ಮ ಮನಸ್ಸಿನಾಳಕ್ಕೆ ಪ್ರವೇಶಿಸಿ,

ಪ್ರೀತಿ, ದ್ವೇಷ, ಕ್ರೌರ್ಯ, ಕರುಣೆ, ಕಷ್ಟ ಸುಖಗಳನ್ನೂ ಮೀರಿ,

ನವರಸಗಳನ್ನು ಅನುಭವಿಸಿ.

 

360 ಡಿಗ್ರಿ ಕೋನದಲ್ಲಿ ಆಲೋಚಿಸಿ.

 

ಅರಿಷಡ್ವರ್ಗಗಳನ್ನು ನಿಯಂತ್ರಿಸಿ.

ಎಲ್ಲವೂ ಅದಮೇಲೆ ವಾಸ್ತವ ಲೋಕಕ್ಕೆ ಮರಳಿ.

 

ಈಗ ಜ್ಙಾನದ ಮೊದಲ ಮೆಟ್ಟಿಲ ಮೇಲಿದ್ದೀರಿ ಅಷ್ಟೆ.

 

ಸಾಯುವವರೆಗಿನ ನಿಮ್ಮ ಮುಂದಿನ ಬದುಕೇ ವಾಸ್ತವ.

 

ಸಹಜತೆಯೇ ಸೃಷ್ಟಿಯ ಸತ್ಯ.

ನಾನು, ನೀವು, ಎಲ್ಲರೂ ಅದರ ಅಣುಗಳು ಮಾತ್ರ.

 

ಯಾರೋ ಬರೆದ ಯಾರೋ ಹೇಳಿದ ವಿಷಯಗಳಿಗಿಂತ ನಿಮ್ಮ ಸ್ವಂತ ಅಭಿಪ್ರಾಯವೇ ನಿಮ್ಮನ್ನು ರೂಪಿಸುತ್ತದೆ.

ನಿಮ್ಮ ಮೆದುಳಿನ ಗ್ರಹಿಕೆಯೇ ನಿಮಗೆ ಮಾರ್ಗದರ್ಶನ.........

 

ಇಷ್ಟು ಶ್ರಮ ಸಮಯ ಆಸಕ್ತಿ ತಾಳ್ಮೆ ವಿಶಾಲತೆ ಇಲ್ಲದಿದ್ದರೆ ಸಾರ್ವಜನಿಕ ಜೀವನದ ವಿಷಯಗಳಲ್ಲಿ ಸರಿಯಾದ ಅಭಿಪ್ರಾಯ ರೂಪಿಸಿಕೊಳ್ಳುವುದು ಕಷ್ಟ. ಕೇವಲ ಆ ಕ್ಷಣದಲ್ಲಿ ತೋಚಿದ ಒಂದು ಅಭಿಪ್ರಾಯ ವ್ಯಕ್ತಪಡಿಸಬಹುದಷ್ಟೆ. ಇಂದು ಈ ರೀತಿಯ ಮುಖವಾಡಗಳ ಜನರೇ ಹೆಚ್ಚಾಗಿ ಸಾಮಾಜಿಕ ಮೌಲ್ಯಗಳು ಅಧಃಪತನದ ಹಾದಿಯಲ್ಲಿವೆ. ಅದನ್ನು ಮತ್ತೆ ಸರಿದಾರಿಗೆ ತಂದು ಕನಿಷ್ಠ ಜನ ಸಮೂಹ ಏನಾದರೂ ಯೋಚಿಸಲಿ, ಹೇಗಾದರೂ ಯೋಚಿಸಲಿ, ಆದರೆ ಹೃದಯವಂತಿಕೆಯಿಂದ ಯೋಚಿಸುವಂತಾಗಲಿ ಎಂಬುದೇ ಮನಸ್ಸುಗಳ ಅಂತರಂಗದ ಚಳವಳಿ..........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಎಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author