ಸಾವರ್ಕರ್ ಅವರು ದೇಶ ವಿರೋಧಿಯೇ?!

Savarkar

Featured Image Source: campus chronicle

ಸಾವರ್ಕರ್ ಒಬ್ಬರು ಹೋರಾಟಗಾರರು ಎನ್ನುವುದರಲ್ಲಿ ಎರಡು ಮಾತಿಲ್ಲ. ಆದರೆ ಸದ್ಯದ ಸ್ಥಿತಿಯಲ್ಲಿ ಒಂದು ದೊಡ್ಡ ಮಟ್ಟದಲ್ಲಿ ಸಾವರ್ಕರ್ ಪರ ವಿರೋಧ ಚರ್ಚೆಗಳಾಗುತ್ತಿವೆ. ಕೇವಲ ಸಾವರ್ಕರ್ ಬಗ್ಗೆ ಮಾತ್ರ ಹೀಗೆ ಪರ ವಿರೋಧದ ಚರ್ಚೆ ಆಗುತ್ತಿಲ್ಲ. ಗಾಂಧಿಯವರ ಪರವಾಗಿ ವಾದಿಸುತ್ತಾರೆ. ಗಾಂಧಿಯವರನ್ನು ವಿರೋಧಿಸುವವರೂ ಇದ್ದಾರೆ. ನೆಹರೂ ಅವರ ಆಡಳಿತದ ಬಗ್ಗೆ ಸಾಕಷ್ಟು ಚರ್ಚೆಗಳು ಆಗಿವೆ. ಆಗುತ್ತಿದೆ. ಮೋದಿ ಅವರನ್ನು ವಿಶ್ವ ನಾಯಕ ಎಂದು ಒಂದು ವರ್ಗ ಹೇಳುತ್ತದೆ. ಮೋದಿ ಅವರನ್ನು ಟೀಕಿಸುವವರೂ ಸಾಕಷ್ಟು ಸಂಖ್ಯೆಯಲ್ಲಿದ್ದಾರೆ. ಬದುಕು ವೈಯುಕ್ತಿಕ ಆಗಿರಲಿ ಅಥವಾ ಸಾಮಾಜಿಕವಾಗಿರಲಿ ಟೀಕೆ, ಟಿಪ್ಪಣಿಗಳು ಇದ್ದದ್ದೇ. ಅದೇ ರೀತಿ ಒಂದಷ್ಟು ಜನರು ಸಾವರ್ಕರ್ ಪರವಾಗಿ ವಾದ ಮಾಡಿದರೆ ಇನ್ನೊಂದು ವರ್ಗ ಅವರನ್ನು ವಿರೋಧಿಸುತ್ತದೆ.

ಸಾವರ್ಕರ್ ಅವರನ್ನು ಕೈಗೆ ದಕ್ಕಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಅವರ ಹೋರಾಟದ ರೀತಿ ಪಕ್ಕನೆ ಅರ್ಥವಾಗದು. ಸಾವರ್ಕರ್ ಅವರ ಬಗ್ಗೆ ಸಂಪೂರ್ಣವಾಗಿ ತಿಳಿದುಕೊಳ್ಳಬೇಕು ಅಂದರೆ ಅವರ ಪರವಾದ ಮತ್ತು ವಿರೋಧದ ಎರಡೂ ಅಭಿಪ್ರಾಯದ ಮುಕ್ತವಾಗಿ ತಿಳಿದುಕೊಳ್ಳಬೇಕು. ಆಗ ಮಾತ್ರ ಸಾವರ್ಕರ್ ವ್ಯಕ್ತಿತ್ವ ಯಾವ ಬಗೆಯದು, ಅವರದು ಯಾವ ರೀತಿಯ ಹೋರಾಟ ಎನ್ನುವುದು ಅರ್ಥವಾಗುತ್ತದೆ.

ಸಾವರ್ಕರ್ ಅಂದ ಕೂಡಲೇ ಒಂದು ವರ್ಗ ಯಾಕೆ ಅವರ ಮೇಲೆ ಮುರಿದುಕೊಂಡು ಬೀಳುತ್ತದೆ ಅಂದರೆ ಆ ಸಮೂಹ ಗುಂಪುಗಳಿಗೆ ಸಾವರ್ಕರ್ ಅವರನ್ನು ದೇಶಭಕ್ತರೆಂದು ನೀಡುವ ಗೌರವ ಇಷ್ಟವಾಗುವುದಿಲ್ಲ. ಅವರ ಪಕ್ಷ ಬೇರೆ. ಅವರ ಗುಂಪು ಕೂಡ ಬೇರೆ. ಅವರ ಗುಂಪಿನ ಯಾವುದೇ ಹೋರಾಟಗಾರ ಇದ್ದರೆ ಅವರನ್ನು ಗೌರವದಿಂದ ಕಾಣುವ ಆ ಗುಂಪಿಗೆ ಬಿ. ಜೆ. ಪಿ ಪಕ್ಷದವರು ಸಾವರ್ಕರ್ ಅವರನ್ನು ವೈಭವೀಕರಿಸುತ್ತಾರೆ ಎಂದು ವಾದಿಸುತ್ತಾರೆ.

ಸಾವರ್ಕರ್ ಅವರ ದೇಶಭಕ್ತಿ ಅನ್ನುವುದು ಒಂದು ರಾಜಕೀಯ ವಿಷಯವಾಗಿ ವೋಟ್ ಬ್ಯಾಂಕ್ ನೊಂದಿಗೆ ಥಳುಕು ಹಾಕಿಕೊಂಡಿರುವುದು ಈ ದೇಶದ ನಿಜವಾದ ದುರಂತ. ಸಾವರ್ಕರ್ ಅವರನ್ನು ದೇಶದ್ರೋಹಿ ಎಂದು ಕರೆದರೆ ಒಂದಷ್ಟು ವೋಟು ಬೀಳುತ್ತದೆ. ಆ ಕಾರಣಕ್ಕಾಗಿ ಒಂದು ಸಮೂಹ ಸಾವರ್ಕರ್ ಅವರನ್ನು ಅವರು ಬದುಕು ಹೋರಾಟದ ಬಗ್ಗೆ ರವೆಯಷ್ಟು ತಿಳಿದುಕೊಳ್ಳದೆ ಅವರೊಬ್ಬ ದೇಶದ್ರೋಹಿ ಎಂದು ವಾದಿಸುತ್ತಾರೆ. ಆ ಮೂಲಕ ಒಂದಷ್ಟು ಜನರನ್ನು ಸಮುದಾಯದವರನ್ನು ಒಲಿಸಿ ಅವರಿಂದ ವೋಟು ಪಡೆಯುವ ಪ್ರಯತ್ನವಿದು.

ನೀವು ಗಮನಿಸಬಹುದು. ಕೇವಲ ಒಂದು ಪಕ್ಷದ ರಾಜಕೀಯ ನಾಯಕರಿಗೆ ಸಾವರ್ಕರ್ ಒಂದು ವಿಷಯ. ಅದೇ ದೇಶಭಕ್ತಿಯನ್ನು ಕಾಯಕವಾಗಿಸಿಕೊಂಡ ಯಾವುದೇ ಹೋರಾಟಗಾರರು ಸಾವರ್ಕರ್ ಬಗ್ಗೆ ಯಾವುದೇ ಕೊಂಕು ತೆಗೆಯುವುದಿಲ್ಲ. ಅಂಡಮಾನ್ ಜೈಲಿನಲ್ಲಿ ಕಾಲಾಪಾನಿ ಶಿಕ್ಷೆ ಅನುಭವಿಸುತ್ತ ಗಾಣ ತಿರುಗಿಸುತ್ತ ವಂದೇ ಮಾತರಂ ಎಂದು ಕೂಗುತ್ತಿದ್ದ ಅವರ ಕೂಗಿನಲ್ಲಿನ ದೇಶಭಕ್ತಿ ಅವರ ಮನಸ್ಸನ್ನು ಮುಟ್ಟುವುದಿಲ್ಲ. ಅವರಿಗೆ ಬೇಕಾಗಿರುವುದು ಜನರಿಂದ ಸಿಗುವ ವೋಟುಗಳು! ಹಾಗಾಗಿ ಸಾವರ್ಕರ್ ಅವರನ್ನು ಕೇವಲ ಸಿಗುವ ನಾಲ್ಕು ವೋಟುಗಳ ಕಾರಣಕ್ಕೆ ವಿರೋಧಿಸುವ ಆ ಗುಂಪಿನ ಬೊಬ್ಬೆ ಕೇವಲ ಅರಣ್ಯ ರೋಧನ.

ದೇಶಭಕ್ತಿಯ ಅಗಸದಲ್ಲಿ ಸಾವರ್ಕರ್ ಅವರು ಪ್ರಖರವಾಗಿ ಕಂಗೊಳಿಸುವ ಸೂರ್ಯನಂತೆ. ಅವರ ದೈತ್ಯ ದೇಶಭಕ್ತಿಯ ಭಾವನೆಗಳು ಇನ್ನು ದಶಕಗಳು ಕಳೆದರೂ ದೇಶಭಕ್ತರಿಗೆ ದಾರಿ ತೋರಿಸುವ ಬೆಳಕಿನಂತೆ! ಅದರ ಮಧ್ಯೆ ಸಾವರ್ಕರ್ ಅವರು ದೇಶದ್ರೋಹಿ, ಕಳ್ಳ, ನಾಟಕೀಯ ವ್ಯಕ್ತಿ ಎನ್ನುವ ಕೂಗು ಅಮಾವಾಸ್ಯೆಯ ಕತ್ತಲಲ್ಲಿ ದಟ್ಟ ಅರಣ್ಯದಲ್ಲಿ ಯಾರಿಗೂ ಕೇಳಿಸದ ಒಂದು ಕೂಗಿನಂತೆ! ಎಂದಾದರೂ ಒಂದು ದಿನ ಸಾವರ್ಕರ್ ಅವರನ್ನು ಒಪ್ಪಿಕೊಳ್ಳದೆ ಅವರಿಗೆ ಬೇರೆ ಮಾರ್ಗವಿಲ್ಲ. ಅಂತಹದೊಂದು ಸುದಿನ ಶೀಘ್ರವೇ ಬರಲಿ. ಎಲ್ಲರೂ ಸಾವರ್ಕರ್ ಅವರ ದೇಶಭಕ್ತಿಯನ್ನು ಒಪ್ಪಿಕೊಳ್ಳುವಂತಾಗಲಿ!! 

 

Enjoyed this article? Stay informed by joining our newsletter!

Comments

You must be logged in to post a comment.

Related Articles
About Author