ತುಮಕೂರು ನಗರದ ಹಜರತ್ ಮದರ್ ಶಾ ಮಕಾನ್ ಆಡಳಿತದ ಮೇಲೆ ಎನ್ ಎಸ್ ಯು ಐ ಸಂಚಾಲಕ ಜೈನ್ ಶರೀಫ್ ಗಂಭೀರ ಆರೋಪ.

ತುಮಕೂರು:ನಗರದ ಹಜರತ್ ಮದರಷಾ ಮಕಾನ್(ವಕ್ಫ್)ವತಿಯಿಂದ ನಡೆಯುತ್ತಿರುವ ಕೈಗಾರಿಕಾ ತರಬೇತಿ ಸಂಸ್ಥೆಯಲ್ಲಿ ಕಿರಿಯ ತರಬೇತುದಾರರಾಗಿ ೧೯೯೭ ರಿಂದ ಕಾರ್ಯನಿರ್ವಹಿಸುತ್ತಿರುವ ನಾಲ್ಕು ಜನರನ್ನು ೬೦ ದಿನದ ಒಳಗೆ ಖಾಯಂಗೊಳಿಸಿ,ಹಿAದಿನ ಬಾಕಿ ನೀಡುವಂತೆ ಆದೇಶ ನೀಡಿದ್ದರೂ, ಕೈಗಾರಿಕಾ ತರಬೇತಿ ಸಂಸ್ಥೆಯ ಆಡಳಿತ ಮಂಡಳಿ ನೌಕರರನ್ನು ಖಾಯಂಗೊಳಿಸದೆ,ಸತಾಯಿಸುತ್ತಿದೆ ಎಂದು ಎನ್.ಎಸ್.ಯು.ಐ ರಾಷ್ಟ್ರೀಯ ಸಂಚಾಲಕ ಜೈನ್ ಷರೀಫ್ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿಂದು ಮಾತನಾಡಿದ ಅವರು,೧೯೯೭ ರಲ್ಲಿ ನಗರದ ಎಂ.ಜಿ.ರಸ್ತೆಯ ಜೈನ್ ಟೆಂಪಲ್ ಮುಂಭಾಗದಲ್ಲಿರುವ ವಕ್ಪ್ ಜಾಗದಲ್ಲಿ ಅಲ್ಪಸಂಖ್ಯಾತರ ಮಕ್ಕಳಿಗೆ ಅನುಕೂಲಕ್ಕಾಗಿ ವಕ್ಫ್ ಅನುದಾನದಲ್ಲಿ ಸರಕಾರದ ಅನುಮೋದನೆಗೆ ಒಳಪಟ್ಟು ಐಟಿಐ ಕಾಲೇಜು ತೆರೆದಿದ್ದು,ಐವರನ್ನು ಮಾಸಿಕ ೧೨೦೦ ರೂಗಳ ಮೂಲ ವೇತನಕ್ಕೆ ಕಿರಿಯ ತರಬೇತುದಾರರನ್ನಾಗಿ ನೇಮಕ ಮಾಡಿಕೊಂಡಿದ್ದು,ಇವರಲ್ಲಿ ಒಬ್ಬರನ್ನು ಮಾತ್ರ ಖಾಯಂ ಮಾಡಿ ಉಳಿದ ನಾಲ್ವರನ್ನು ಖಾಯಂ ಮಾಡದೆ, ವೇತನವನ್ನು ಹೆಚ್ಚಿಸದೆ ಸತಾಯಿಸಲಾಗುತ್ತಿದೆ.೨೦೧೨ರಲ್ಲಿ ಅಂದಿನ ಮುಖ್ಯಮಂತ್ರಿಗಳ ಆದೇಶದ ಅನ್ವಯ ಸದರಿ ನೌಕರರಿಗೆ ಮಾಸಿಕ ೧೨ ಸಾವಿರ ರೂ ವೇತನ ದೊರೆಯುತ್ತಿದೆ.ವಕ್ಫ್ ಆಡಳಿತ ಮಂಡಳಿ ಸದರಿ ನೌಕರರನ್ನು ಖಾಯಂ ಮಾಡದೆ, ಸತಾಯಿಸು ತ್ತಿದ್ದಾರೆ ಎಂದರು.

ಹೆಚ್.ಎಂ.ಎಸ್.ಐಟಿಐ ಕಿರಿಯ ತರಬೇತುದಾರರಾದ ಜಹೀರ್ ಅಹಮದ್,ಶ್ರೀಮತಿ ಫರ್ಜಾನಾ,ನಜೀರ್ ಅಹಮದ್ ಮತ್ತು ರಾಹಿಲಾಭಾನು ಅವರುಗಳು ಈ ಸಂಬಂಧ ೨೦೧೩ರಲ್ಲಿ ಕರ್ನಾಟಕ ರಾಜ್ಯ ಉಚ್ಚ ನ್ಯಾಯಾಲಯದಲ್ಲಿ ಖಾಯಂ ಮಾಡುವಂತೆ ನಿರ್ದೇಶನ ನೀಡಲು ದಾವೆ ಹೂಡಿದ್ದು, ಸದರಿ ನ್ಯಾಯಾಲಯ ೨೦೧೪ರ ಜನವರಿ ೨೪ ರಂದು ನಾಲ್ವರು ನೌಕರರ ಮನವಿಯನ್ನು ಪುರಸ್ಕರಿಸಿ,ಸದರಿ ನೌಕರರ ಸೇವೆಯನ್ನು ಖಾಯಂಗೊಳಿಸಿ,ಬಾಕಿ ವೇತನ ನೀಡುವಂತೆ ವಕ್ಫ್ ಆಡಳಿತ ಮಂಡಳಿಗೆ ಸೂಚನೆ ನೀಡಿದೆ.ಆದರೆ ವಕ್ಫ್ ಮಂಡಳಿಯವರು ಸದರಿ ಆದೇಶದ ವಿರುದ್ದ ರಿಟ್ ಪೀಟಿಷನ್ ಸಲ್ಲಿಸಿದ್ದು,೨೦೨೦ರ ನವೆಂಬರ್ ೨ ರಂದು ನೌಕರರ ಪರವಾಗಿಯೇ ತೀರ್ಪು ಬಂದಿರುತ್ತದೆ. ಇದನ್ನು ಪ್ರಶ್ನಿಸಿದ್ದ ಆಡಳಿತ ಮಂಡಳಿಯ ಮತ್ತೊಂದು ಮೇಲ್ಮನವಿಯನ್ನು ಹೈಕೋರ್ಟು ೨೦೨೧ರ ಜುಲೈ ತಿಂಗಳಲ್ಲಿ ವಜಾಗೊಳಿಸಿ,ಸದರಿ ನೌಕರರನ್ನು ಮುಂದಿನ ೬೦ ದಿನಗಳಲ್ಲಿ ಖಾಯಂಗೊಳಿಸಿ,ಅವರಿಗೆ ಬರಬೇಕಾಗಿರುವ ಬಾಕಿ ವೇತನವನ್ನು ನೀಡಬೇಕೆಂದು ಆದೇಶ ನೀಡಿದೆ. ಆದರೆ ತೀರ್ಪು ಬಂದು ೯೦ ದಿನ ಕಳೆದರೂ ನೌಕರರನ್ನು ಖಾಯಂಗೊಳಿಸದೆ,ಬಾಕಿ ವೇತನ ನೀಡದೆ ನ್ಯಾಯಾಲಯದ ಆದೇಶವನ್ನು ಉಲ್ಲಂಘನೆ ಮಾಡಲಾಗುತ್ತಿದೆ ಎಂದು ಜೈನ್ ಷರೀಫ್ ದೂರಿದರು.

ನ್ಯಾಯಾಲಯದ ಆದೇಶ ಪಾಲನೆ ಮಾಡದೆ ವಿಳಂಬ ಮಾಡುತ್ತಿರುವ ವಕ್ಫ್ ಮಂಡಳಿ,ಸುಪ್ರೀಂ ಕೋರ್ಟಿನಲ್ಲಿ ಸದರಿ ವಿಚಾರವಾಗಿ ವಿಶೇಷ ಮೇಲ್ಮನವಿ ಸಲ್ಲಿಸಲು ಮುಂದಾಗಿರುವುದು ನಮ್ಮ ಗಮನಕ್ಕೆ ಬಂದಿದೆ.ಸದರಿ ನೌಕರರು ಕಳೆದ ೨೫ ವರ್ಷಗಳಿಂದ ಸಾವಿರಾರು ಮಕ್ಕಳಿಗೆ ಪಾಠ ಮಾಡಿ,ಅವರು ಜೀವನ ರೂಪಿಸಿಕೊಳ್ಳಲು ಕಾರಣರಾಗಿದ್ದಾರೆ.ಹೊಲಿಗೆ ತರಬೇತಿ ಪಡೆದ ಸಾವಿರಾರು ಹೆಣ್ಣು ಮಕ್ಕಳು ಇಂದು ಸ್ವಾಭಿಮಾನದ ಬದುಕು ಸಾಗಿಸುತ್ತಿದ್ದಾರೆ.ಹಾಗಿದ್ದರೂ ಕೂಡ ವಕ್ಫ್ ಮಂಡಳಿ, ಜಿದ್ದಿಗೆ ಬಿದ್ದವರಂತೆ ನ್ಯಾಯಾಲಯದ ಆದೇಶದ ಅನ್ವಯ ನೌಕರರ ವೇತನ ಹೆಚ್ಚಳ ಮಾಡದೆ,ಅವರಿಗೆ ಕೇಸ್ ವಾಪಸ್ಸ ಪಡೆಯುವಂತೆ ಪರೋಕ್ಷ ಬೆದರಿಕೆ ಹಾಕುವ ಕೆಲಸವನ್ನು ಮಾಡುತ್ತಿದೆ,ಇದು ಖಂಡನೀಯ. ಕೂಡಲೇ ನಾಲ್ವರು ನೌಕರರನ್ನು ಖಾಯಂಗೊಳಿಸಬೇಕು ಮತ್ತು ಅವರಿಗೆ ಬರಬೇಕಾಗಿರುವ ಬಾಕಿ ವೇತನವನ್ನು ಬಿಡುಗಡೆ ಮಾಡಬೇಕೆಂದು ಎನ್.ಎಸ್.ಯು ಐ ಒತ್ತಾಯಿಸುತ್ತಿದೆ.ಒಂದು ವೇಳೆ ಇದೇ ರೀತಿಯ ವಿಳಂಬ ನೀತಿ ಅನುಸರಿಸಿದರೆ, ನೌಕರರ ಪರವಾಗಿ ಬೀದಿಗಿಳಿದು ಹೋರಾಟ ಮಾಡಲಿದೆ ಎಂದು ಜೈನ್ ಷರೀಫ್ ಸ್ಪಷ್ಟಪಡಿಸಿದರು.

ತುಮಕೂರು ಜಿಲ್ಲಾ ವಕ್ಫ್ ಸಮಿತಿಗೆ ಮಾಸಿಕ ೨೨ ಲಕ್ಷ ರೂ ಆದಾಯ ಬರುತ್ತಿದೆ.ನ್ಯಾಯಾಲಯದ ಆದೇಶದ ಅನ್ವಯ ನಾಲ್ವರು ನೌಕರರಿಗೆ ಅಂದಾಜು ೧.೩೫ ಕೋಟಿ ರೂಗಳ ಬಾಕಿ ವೇತನ ನೀಡಬೇಕಾಗುತ್ತದೆ.ಇಷ್ಟೊಂದು ಆದಾಯವಿದ್ದರೂ ತಮ್ಮದೆ ಸಮುದಾಯದ ನೌಕರರಿಗೆ ಕಿರುಕುಳ ನೀಡುತ್ತಾ, ನ್ಯಾಯಾಲಯದ ಆದೇಶ ಪಾಲಿಸದೆ ಸತಾಯಿಸುತ್ತಿರುವುದು ಎಷ್ಟು ಸರಿ ಎಂದು ಪ್ರಶ್ನಿಸಿದ ಎನ್.ಎಸ್.ಯು.ಐ ರಾಷ್ಟ್ರೀಯ ಸಂಯೋಜಕ ಜೈನ್ ಷರೀಫ್,ಶೀಘ್ರದಲ್ಲಿಯೇ ರಾಜ್ಯ ವಕ್ಫ್ ಮಂಡಳಿಯ ಅಧ್ಯಕ್ಷರು ತುಮಕೂರಿಗೆ ಆಗಮಿಸುತ್ತಿದ್ದು, ಅವರಿಗೆ ಮನವಿ ಸಲ್ಲಿಸಲಾಗುವುದು ಎಂದರು.

ಸುದ್ದಿಗೋಷ್ಠಿಯಲ್ಲಿ ಕೆಪಿಸಿಸಿ ಸಾಮಾಜಿಕ ಜಾಲತಾಣದ ರಾಜ್ಯ ಕಾರ್ಯದರ್ಶಿ ಮಹಮದ್ ಸಾಧಿಕ್, ಎನ್.ಎಸ್.ಯು.ಐ ಮುಖಂಡರ ಅಮಾನ್‌ ಉಪಸ್ಥಿತರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author