ಕೃಷಿ ಮೇಳ‌ - 2022

ಕೃಷಿ ಮೇಳ 2022.....

Krishi Mela - 2022

 

Feature Image Source : Google

ಕರ್ನಾಟಕ ರಾಜ್ಯದ ಅತ್ಯಂತ ದೊಡ್ಡ ರೈತ ಸ್ನೇಹಿ ಕೃಷಿ ಮೇಳ ಬೆಂಗಳೂರಿನ ಗಾಂಧಿ ಕೃಷಿ ವಿಜ್ಞಾನ ಕೇಂದ್ರದಲ್ಲಿ ನವೆಂಬರ್ 3 ರಿಂದ 6 ವರೆಗೆ ನಡೆಯುತ್ತಲಿದೆ. ಈ ನಾಲ್ಕು ದಿನದಲ್ಲಿ ಸುಮಾರು 15 ಲಕ್ಷ ಜನ ಈ ಮೇಳದಲ್ಲಿ ಭಾಗವಹಿಸಬಹುದು ಎಂಬ ನಿರೀಕ್ಷೆಯಿದೆ......

 

ಪಶುಸಂಗೋಪನೆ - ಕೃಷಿ ಉತ್ಪನ್ನಗಳು - ಕೃಷಿ ಯಂತ್ರೋಪಕರಣಗಳು - ಕೀಟ ನಾಶಕ ಔಷಧಿಗಳು - ಹೊಸ ಕೃಷಿ ಸಂಶೋಧನೆಗಳು - ನೀರಾವರಿ ತಂತ್ರಜ್ಞಾನ - ಕೃಷಿ ಪತ್ರಿಕೆಗಳು - ಜಾನಪದ ಕಾರ್ಯಕ್ರಮಗಳು - ಕೃಷಿ ಪ್ರಶಸ್ತಿಗಳು - ವಿವಿಧ ಆಹಾರೋತ್ಪನ್ನಗಳು ಹೀಗೆ ಅನೇಕ ಉಪಯುಕ್ತ ಪ್ರದರ್ಶನ ಮತ್ತು ಮಾರಾಟ  ಏರ್ಪಡಿಸಲಾಗಿದೆ.

 

ಕೃಷಿ ಕ್ಷೇತ್ರದ ಸಂಶೋಧನೆ ಮತ್ತು ತಂತ್ರಜ್ಞಾನದ ಅಭಿವೃದ್ಧಿ ಕೇವಲ ಅಕಾಡೆಮಿಕ್ ಆಗಿ ಕೇವಲ ವಿಶ್ವವಿದ್ಯಾಲಯಗಳಿಗೆ ಮಾತ್ರ ಸೀಮಿತವಾಗಿದೆಯೇ ಅಥವಾ ಅದು ರಾಜ್ಯದ ಎಲ್ಲಾ ಸಾಮಾನ್ಯ ರೈತರಿಗೆ ತಲುಪುತ್ತಿದೆಯೇ ಎಂದು ಅವಲೋಕನ ಮಾಡಿಕೊಳ್ಳಬೇಕಿದೆ.

 

ಮಾಹಿತಿ ತಂತ್ರಜ್ಞಾನದ, ಸಂಪರ್ಕ ಕ್ರಾಂತಿಯ, ವಾಹನ ಅಭಿವೃದ್ಧಿಯ,

ವೈದ್ಯಕೀಯ ಸಂಶೋಧನೆಯ ಹೀಗೆ ಬೇರೆ ಕ್ಷೇತ್ರಗಳ ಎಲ್ಲವೂ ಕ್ಷಣಾರ್ಧದಲ್ಲಿ ಸಾಮಾನ್ಯರಿಗೆ ತಲುಪಿ ಅದು ಬೃಹತ್ ಮಾರುಕಟ್ಟೆಯಾಗಿ ಬೆಳವಣಿಗೆ ಹೊಂದುತ್ತದೆ. ಆದರೆ ಕೃಷಿ ವಿಷಯದಲ್ಲಿ ಇದು ಸಾಧ್ಯವಾಗುತ್ತಿಲ್ಲ. ತುಂಬಾ ನಿಧಾನಗತಿಯಲ್ಲಿ ರೈತರಿಗೆ ತಲುಪುತ್ತದೆ.

 

ಕೃಷಿಯ ವೈವಿಧ್ಯತೆ ಇದಕ್ಕೆ ಒಂದು ಕಾರಣ ಇರಬಹುದು ಅಥವಾ ರೈತರ ತಿಳಿವಳಿಕೆ - ಪ್ರಾಯೋಗಿಕತೆ ಈ ಬದಲಾವಣೆಗೆ ಒಪ್ಪಿಕೊಳ್ಳದಿರಬಹುದು ಅಥವಾ ಈ ಸಂಶೋಧನೆಗಳು ಅಳವಡಿಸಿಕೊಳ್ಳಲು ಕಷ್ಟವಾಗಬಹುದು ಅಥವಾ ಆ ರೀತಿಯ ಅವಕಾಶಗಳ ಸಾಧ್ಯತೆ ಕಡಿಮೆ ಇರಬಹುದು ಅಥವಾ ಆರ್ಥಿಕ ಸಮಸ್ಯೆಗಳು ಇರಬಹುದು. 

 

ಹೊಸ ತಂತ್ರಜ್ಞಾನ ಅಥವಾ ಹೊಸ ತಳಿಗಳು ಮಣ್ಣಿನ ಗುಣಕ್ಕೆ ಮತ್ತು ರೈತರ ಮಾನಸಿಕ ಸ್ಥಿತಿಗೆ ಒಗ್ಗಿಕೊಳ್ಳುವ ನಿಟ್ಟಿನಲ್ಲಿ ಬಹುದೊಡ್ಡ ಸವಾಲು ಎದುರಿಸಬೇಕಾಗುತ್ತದೆ.

 

ಈ ಬಾರಿ ಅಲ್ಲಿ ಪ್ರಶಸ್ತಿ ಪಡೆದ ರೈತರ ಕುರಿತು ವಿವರಗಳನ್ನು ಓದಲಾಯಿತು. ಅವರಲ್ಲಿ ಬಹುತೇಕ ಮಹಿಳೆಯರು ಮತ್ತು ವಿದ್ಯಾವಂತ ಯುವಕರೇ ಇದ್ದರು.‌ ಅವರೆಲ್ಲರ ಸಾಧನೆ ತೃಪ್ತಿಕರವಾಗಿ ಇದೆ. ಆದರೆ ಅದು ಅತ್ಯಂತ ಸಣ್ಣ ಪ್ರಮಾಣದ ಯಶಸ್ಸು ಮತ್ತು ಬದುಕಲು ಕಟ್ಟಿಕೊಂಡ ಒಂದು ಉದ್ಯೋಗದಂತೆ ಮಾತ್ರ ಕಾಣಿಸಿತು. ಅದು ಸಹ ಆ ವ್ಯಕ್ತಿಗಳ ವೈಯಕ್ತಿಕ ಯಶಸ್ಸು ಎನಿಸಿತು. ಅದನ್ನು ಸಾಮೂಹಿಕವಾಗಿ ಅಳವಡಿಸಿಕೊಳ್ಳಲು ಬೇರೆ ರೈತರಿಗೆ ಅವರದೇ ಆದ ಸಮಸ್ಯೆಗಳು ಉದ್ದವಾಗುತ್ತದೆ.

 

ಕೃಷಿ ಸಂಶೋಧನೆಗಳು ಸಮಗ್ರ ರೂಪ ಪಡೆಯಲು ಮತ್ತು ರೈತ ಸ್ನೇಹಿಯಾಗಲು ಇನ್ನೂ ಸಾಕಷ್ಟು ಶ್ರಮಪಡಬೇಕಾಗಿದೆ. ಇದು ಕೇವಲ ಇಳುವರಿಗೆ ಮಾತ್ರ ಸೀಮಿತವಾಗದೆ ಮಾರುಕಟ್ಟೆ, ಬೆಲೆ ನಿಯಂತ್ರಣ ಜೊತೆಗೆ ರೈತರ ವ್ಯಕ್ತಿತ್ವ ಅಥವಾ ತಿಳಿವಳಿಕೆಯ ಮಟ್ಟವನ್ನು ಹೆಚ್ಚಿಸುವ ನಿಟ್ಟಿನಲ್ಲಿ ಸಹ ಕೆಲಸ ಮಾಡಬೇಕಿದೆ.

 

ಕೃಷಿ ಪದ್ದತಿಯ ವಿಷಯದಲ್ಲಿ ರೈತರು ಹೆಚ್ಚು ಜ್ಞಾನ ಹೊಂದಿರಬಹುದು. ಆದರೆ ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯ ವಿಷಯಗಳು ಸೇರಿ ಒಟ್ಟಾರೆ ಅವರ ಬದುಕಿನ ಗ್ರಹಿಕೆ ಹೆಚ್ಚು ಸಂಪ್ರದಾಯವಾದಿಯಾಗಿರುವಾಗ ಆಧುನಿಕ ಮುಕ್ತ ವ್ಯವಸ್ಥೆಯ ಬದಲಾವಣೆಗಳು ಅವರನ್ನು ತಲುಪಲಾರದೆ ಸೋಲುತ್ತಿದೆ. ಕೃಷಿಯ ಮೂಲಕವೇ ವೈಜ್ಞಾನಿಕ - ವೈಚಾರಿಕ ಮತ್ತು ಸಮಗ್ರ ಚಿಂತನೆಯನ್ನು ಬೆಳೆಸಬೇಕಿದೆ.

 

ಇದು ಸಾಧ್ಯವಾಗದೇ ಇರುವುದರಿಂದಲೇ ಕೌಟುಂಬಿಕ, ಪ್ರೀತಿ ಪ್ರೇಮ ಆತ್ಮಹತ್ಯೆಗಳಿಗಿಂತ ರೈತ ಆತ್ಮಹತ್ಯೆಗಳೇ ಹೆಚ್ಚಾಗುತ್ತಿದೆ. ಅಂದರೆ ಸಮಾಜದ ಬದಲಾವಣೆಯ ದಿಕ್ಕನ್ನು ಬದುಕಿನ ಸಮಗ್ರ ನೋಟದಿಂದ ಗ್ರಹಿಸುವಲ್ಲಿ ರೈತ ಸಮುದಾಯ ವಿಫಲವಾಗಿದೆ ಎಂದು ಭಾವಿಸಬಹುದು ಅಥವಾ ಸಮಾಜ ಮತ್ತು ಆಡಳಿತ ವ್ಯವಸ್ಥೆ ರೈತರನ್ನು ಸರಿಯಾದ ದಿಕ್ಕಿನಲ್ಲಿ ಮುನ್ನಡೆಸದೆ ಅವರ ಅಜ್ಞಾನ ಅಥವಾ ಮುಗ್ದತೆಯನ್ನು ಶೋಷಿಸುತ್ತಿದೆ ಎಂದು ಭಾವಿಸಬಹುದು.

 

ಜನರು, ಮಾಧ್ಯಮಗಳು, ಅಧಿಕಾರಿಗಳು ಮುಖ್ಯವಾಗಿ ರೈತರ ಬಗ್ಗೆ ಇಲ್ಲಿಯವರೆಗೂ ಇರುವ ತೋರಿಕೆಯ ಅಭಿಪ್ರಾಯ ಬದಲಾಯಿಸಿಕೊಳ್ಳಬೇಕಿದೆ. ವಾಸ್ತವವಾಗಿ ಅವರಿಗೆ ಎಲ್ಲಾ ವೃತ್ತಿಗಳಿಗಿಂತ ಅತಿಹೆಚ್ಚು ಗೌರವ ಮತ್ತು ಮಾನ್ಯತೆ ನೀಡಬೇಕಾಗಿದೆ.

ಅಕ್ಷರ ಜ್ಞಾನ, ರಾಜಕೀಯ ಚತುರತೆ, ಸಾಪ್ಟ್ ವೇರ್ ಬುದ್ಧಿವಂತಿಕೆ, ಸಿನಿಮಾ ಜನಪ್ರಿಯತೆ, ಮಾಧ್ಯಮ ಕ್ರಿಯಾತ್ಮಕತೆ, ಉದ್ಯಮ ಸಾಹಸಶೀಲತೆ, ಷೇರು ಮಾರುಕಟ್ಟೆ ಚಾಣಕ್ಷತನ, ಮಾಡೆಲಿಂಗ್ ಆಕರ್ಷಣೆ ಮುಂತಾದ ಎಲ್ಲಾ ಕ್ಷೇತ್ರಗಳ ಸಾಧನೆಗಿಂತ ಹೆಚ್ಚಿನ ಮಾನ್ಯತೆ ಸಾಮಾನ್ಯ ರೈತ ಸಮುದಾಯಕ್ಕೆ ನೀಡಬೇಕಿದೆ. ಏಕೆಂದರೆ ಈ ಎಲ್ಲಾ ಸಾಧನೆಗಳ ಮೂಲ ಬೇರು ಕೃಷಿ. 

 

ತಾಯ ಎದೆಹಾಲಿನಿಂದ ಸಾಯುವ ಅಂತಿಮ ಕ್ಷಣದವರೆಗೆ ನಾವು ಜೀವಿಸಲು ಅತ್ಯವಶ್ಯಕವಾದ ಆಹಾರ ಸಿಗುವುದು ಕೃಷಿಯಿಂದ ಮತ್ತು ಅದನ್ನು ರೈತ ಸಮುದಾಯ ಬೆಳೆಯುತ್ತದೆ. ಆ ಕೃತಜ್ಞತೆ ಪ್ರತಿ ವ್ಯಕ್ತಿಯ ಮನದಲ್ಲಿ ಸದಾ ನೆನಪಿನಲ್ಲಿರಬೇಕು. 

 

ಎಲ್ಲಾ ಧರ್ಮಗಳ ಧಾರ್ಮಿಕ ನಂಬಿಕೆಗಳು ದೇವರ ಸುತ್ತ ಸುತ್ತುವ ಬದಲು ಆಹಾರದ ಹಾಗು ಆ ಮೂಲಕ ಪ್ರಕೃತಿಯ ಸುತ್ತಲೂ ಸುತ್ತಿದರೆ ಅದು ಹೆಚ್ಚು ಪ್ರಾಯೋಗಿಕ ಮತ್ತು ನಾಗರಿಕ ಸಮಾಜ ಸೃಷ್ಡಿಯಾಗಲು ಸಹಾಯವಾಗುತ್ತದೆ. ಬಹುಶಃ ಪ್ರಕೃತಿಯನ್ನು ಮರೆಯುತ್ತಾ, ಅದನ್ನು ನಾಶಪಡಿಸುತ್ತಾ ನಾವು ಹೊಂದುತ್ತಿರುವ ಬೆಳವಣಿಗೆ ನಿಧಾನವಾಗಿ ನಮ್ಮನ್ನು ಇನ್ನಷ್ಟು ಸಂಕಷ್ಟಗಳಿಗೆ ದೂಡಬಹುದು.

 

ಅಭಿವೃದ್ಧಿ ಪ್ರಕೃತಿಯ ಸಮೀಕರಣದೊಂದಿಗೆ ಸಾಗಿದರೆ ಬದುಕು ಸಹನೀಯವಾಗುತ್ತದೆ. ಆಡಳಿತ ಕಂಪ್ಯೂಟರೀಕರಣವಾಗಲಿ ಆದರೆ ಜೀವನ ಪ್ರಾಕೃತಿಕವಾಗಿಯೇ ಇರಲಿ........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಎಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author