Image Source: Times of India
ಅಹಿಂಸೆ ವಕ್ತಾರ ಜೈನ ಧರ್ಮದ 24 ನೆಯ ತೀರ್ಥಂಕರ ವರ್ಧಮಾನ ಮಹಾವೀರರ ಹುಟ್ಟುಹಬ್ಬ ಹಾಗು ಪ್ರೀತಿ ಮತ್ತು ಸೇವೆಯ ಹರಿಕಾರ ಜೀಸಸ್ ಅನುಯಾಯಿಗಳ ಶುಭ ಶುಕ್ರವಾರದ ಶುಭಾಶಯಗಳೊಂದಿಗೆ.....
ಸಸ್ಯಾಹಾರ ಮತ್ತು ಮಾಂಸಾಹಾರ.......
ಪ್ರಕೃತಿಯ ಮೂಲದಿಂದ ಒಂದು ಚಿಂತನೆ......
ಭಾರತದ ಎರಡು ಪ್ರಾಚೀನ ಧಾರ್ಮಿಕ ಪರಂಪರೆಗಳಲ್ಲಿ ಭೌದ್ದ ಧರ್ಮ ಮತ್ತು ಜೈನ ಧರ್ಮ ಬಹಳ ಮುಖ್ಯವಾದವು. ಸಿದ್ದಾರ್ಥನೆಂಬ ಗೌತಮ ಬುದ್ಧ ಬೌದ್ಧ ಧರ್ಮದ ಮೂಲ ಪುರುಷ. ಆದರೆ ಮಹಾವೀರ ಜೈನ ಧರ್ಮದ ಸ್ಥಾಪಕ ಅಥವಾ ಮೂಲ ಪುರುಷ ಅಲ್ಲ. ಆತ ಜೈನ ಪರಂಪರೆಯ 24 ನೆಯ ತೀರ್ಥಂಕರ.
ಜೈನ ಪರಂಪರೆ ಅತ್ಯಂತ ಕಠಿಣ ಅಹಿಂಸೆಯನ್ನು ಪ್ರತಿಪಾದಿಸುತ್ತದೆ. ಅದರಲ್ಲೂ ಸಂಪೂರ್ಣ ಸಸ್ಯಾಹಾರವನ್ನು ಮಾತ್ರ ಸ್ವೀಕರಿಸುತ್ತದೆ. ಆದರೆ ಬೌದ್ದ ಸಿಖ್ ಹಿಂದೂ ಇಸ್ಲಾಂ ಕ್ರಿಶ್ಚಿಯನ್ ಧರ್ಮಗಳು ಅಥವಾ ಮತಗಳು ಆಹಾರದ ವಿಷಯದಲ್ಲಿ ಅದನ್ನು ಬಳಸುವವರ ಸ್ವಾತಂತ್ರ್ಯ ಒಪ್ಪುತ್ತದೆ. ನಿನ್ನೆ 14/04/2022 ಗುರುವಾರ ಅಂಬೇಡ್ಕರ್ ಜಯಂತಿ ಮತ್ತು ಮಹಾವೀರ ಜಯಂತಿ ಒಟ್ಟಿಗೆ ಇದ್ದ ಕಾರಣ ಕರ್ನಾಟಕ ಸರ್ಕಾರ ಮಾಂಸ ಮಾರಾಟ ನಿಷೇಧಿಸಿತು. ಜೈನರು ಮಾಂಸಾಹಾರ ಸೇವಿಸುವುದಿಲ್ಲ ಅದು ಅವರ ನಿರ್ಧಾರ. ಆದರೆ ಅದನ್ನು ಸೇವಿಸುವವರಿಗೆ ಆ ದಿನ ನಿಷೇಧಿಸುವುದು ಪರೋಕ್ಷ ಹಿಂಸೆ ಆಗುವುದಿಲ್ಲವೇ ಎಂದು ಯೋಚಿಸುತ್ತಾ....
ತುಂಬಾ ಆಳವಾಗಿ ಯೋಚಿಸಿದಾಗ ಯಾರೂ ಸಂಪೂರ್ಣ ಮಾಂಸಾಹಾರಿಗಳಾಗಿರಲು ಸಾಧ್ಯವಿಲ್ಲ ಎನ್ನಲಾಗುತ್ತದೆ. ಅಷ್ಟೊಂದು ಆಳಕ್ಕೆ ಈ ಲೇಖನದಲ್ಲಿ ಹೋಗುತ್ತಿಲ್ಲ. ಕೇವಲ ದಿನನಿತ್ಯದ ಆಹಾರ ಕ್ರಮಗಳು ಮತ್ತು ಜನರ ಸಾಮಾನ್ಯ ಅಭಿಪ್ರಾಯ ಆಧರಿಸಿ ಸಸ್ಯಹಾರ ಮತ್ತು ಮಾಂಸಾಹಾರದ ಬಗ್ಗೆ ಒಂದು ಸಣ್ಣ ವಿಶ್ಲೇಷಣೆ.
ಇಲ್ಲಿ ಸಸ್ಯಹಾರ ಮತ್ತು ಮಾಂಸಾಹಾರದಲ್ಲಿ ಯಾವುದು ಉತ್ತಮ ಎಂಬ ಯಾವ ಅಭಿಪ್ರಾಯವನ್ನು ಸಹ ಹೇಳುತ್ತಿಲ್ಲ. ನಾನು ಆಹಾರ ತಜ್ಞನೂ ಅಲ್ಲ. ಆಹಾರ ಸ್ವಾತಂತ್ರ್ಯ ಅವರವರ ಆಯ್ಕೆ. ನಮ್ಮ ನಾಲಿಗೆಯ ರುಚಿ, ಮನೆತನದ ಸಂಪ್ರದಾಯ, ಆರೋಗ್ಯದ ಕಾಳಜಿ, ವೈದ್ಯರ ಸಲಹೆ, ದೇಶದ ಕಾನೂನಿನ ತಿಳಿವಳಿಕೆಯ ಆಧಾರದಲ್ಲಿ ಯಾವುದೇ ಆಹಾರ ಸೇವಿಸಬಹುದು.
ಯಾವುದೇ ಪ್ರಾಣಿಯನ್ನು ಹತ್ಯೆ ಮಾಡುವುದು ನೋವಿನ ವಿಷಯವೇ.......
ಅದು ಹಾವು, ಸೊಳ್ಳೆ, ತಿಗಣೆ, ನಾಯಿ, ಹಸು, ಹುಲಿ, ಜಿಂಕೆ, ಕೋಳಿ, ಮೀನು, ಹಂದಿ, ಮನುಷ್ಯ ಏನೇ ಆಗಿರಲಿ ಅದಕ್ಕೆ ನಾವು ಜೀವ ಕೊಡಲಿಕ್ಕೆ ಸಾಧ್ಯವಿಲ್ಲದಿರುವುದರಿಂದ ಅದನ್ನು ಹತ್ಯೆ ಮಾಡುವ ಯಾವ ಅಧಿಕಾರವೂ ಇಲ್ಲ.
ಅದೇ ರೀತಿ ಸಸ್ಯಗಳಿಗೂ ಜೀವ ಇರುವುದರಿಂದ ಅವು ತಮ್ಮ ವಂಶಾಭಿವೃದ್ಧಿಗಾಗಿ ನೀಡುವ ಹೂ ಹಣ್ಣು ಫಸಲುಗಳನ್ನು ಸಹ ನಾವು ಕಿತ್ತು ಕಡಿದು ಉಪಯೋಗಿಸುವುದು ನ್ಯಾಯವಲ್ಲ.
ಇದು ಒಂದು ರೀತಿಯ ವಾದ ಮತ್ತು ಮೇಲ್ನೋಟಕ್ಕೆ ಸರಿ ಎನಿಸುತ್ತದೆ.
ಜೀವಿಗಳಿಗೆ ಗಾಳಿ ನೀರು ಆಹಾರ ಜೀವನಾವಶ್ಯಕ ಅಂಶಗಳು. ಅದು ಇಲ್ಲದೇ ಒಂದು ಕ್ಷಣವೂ ಮುಂದುವರಿಯಲು ಸಾಧ್ಯವಿಲ್ಲ. ಹಾಗಾದರೆ ಪ್ರಾಣಿ ಪಕ್ಷಿ ಮನುಷ್ಯ ಏನನ್ನು ತಿನ್ನಬೇಕು ಎಂಬ ಪ್ರಶ್ನೆ ಉದ್ಭವಿಸುತ್ತದೆ.
ವಾದದ ದೃಷ್ಟಿಯಿಂದ ಸಸ್ಯಗಳನ್ನು ಇದರಿಂದ ಹೊರಗಿಡೋಣ. ಅವುಗಳನ್ನು ನಿರ್ಜೀವ ವಸ್ತುಗಳೆಂದು ಪರಿಗಣಿಸೋಣ. ಅಂದ ಮೇಲೆ ಈ ಭೂಮಿಯಲ್ಲಿನ ಎಲ್ಲಾ ಜೀವಿಗಳು ಕೇವಲ ಸಸ್ಯಗಳು ಮತ್ತು ಆ ಜಾತಿಗೆ ಸೇರಿದ ಹಣ್ಣು, ತರಕಾರಿ ಮುಂತಾದುವುಗಳನ್ನು ಮಾತ್ರ ಸೇವಿಸಿ ಬದುಕುವುದು ಸಹಜ ಮತ್ತು ಸ್ವಾಭಾವಿಕ ನ್ಯಾಯ ಮತ್ತು ಜೀವನ ಕ್ರಮ ಎಂಬ ತೀರ್ಮಾನಕ್ಕೆ ಬರೋಣವೇ ?
ಇಲ್ಲಿ ಇನ್ನೂ ಒಂದು ರಿಯಾಯಿತಿ ಕೊಡಬಹುದು. ಅನೇಕ ಪ್ರಾಣಿಗಳಿಗೆ ಮನುಷ್ಯರಿಗಿರುವ ಬುದ್ದಿಶಕ್ತಿ, ಯೋಚನಾ ಕ್ರಮ, ನಾಗರಿಕತೆ, ರೂಪಿತ ನೀತಿ ನಿಯಮಗಳು ಇಲ್ಲದಿರುವುದರಿಂದ ಅದಕ್ಕೆ ಸಿಕ್ಕ ಸಸ್ಯವೋ ಪ್ರಾಣಿಯೋ ಯಾವುದೋ ಆ ಕ್ಷಣದ ಆಹಾರದ ಅವಶ್ಯಕತೆಗಳನ್ನು ಪೂರೈಸಿಕೊಳ್ಳುವುದರಿಂದ ಅದಕ್ಕೆ ತಿಳಿವಳಿಕೆ ಹೇಳಲು ಸಾಧ್ಯವಿಲ್ಲ. ಅದು ಅವುಗಳ ಸಹಜ ಆಹಾರ ಎಂದು ನಿರ್ಲಕ್ಷಿಸಬಹುದು. ಕೆಲವು ಕಾಡು ಪ್ರಾಣಿಗಳು ಮನುಷ್ಯರನ್ನು ತಿನ್ನುತ್ತವೆ. ಅದಕ್ಕೆ ಬುದ್ದಿ ಹೇಳಲು ಆಗುವುದಿಲ್ಲ. ಹೇಳಿದರೂ ಅದಕ್ಕೆ ಅರ್ಥವಾಗುವುದಿಲ್ಲ. ನಮ್ಮ ರಕ್ಷಣೆ ಮಾಡಿಕೊಂಡು ಅವುಗಳನ್ನು ಅದರ ಪಾಡಿಗೆ ಬಿಟ್ಟು ಬಿಡೋಣ.
ಈಗ ಮನುಷ್ಯ ಪ್ರಾಣಿಯ ಆಹಾರದ ಬಗ್ಗೆ ಯೋಚಿಸೋಣ.
ಸಹಜವೋ, ಅಸಹಜವೋ, ಸ್ವಾಭಾವಿಕವೋ, ಕೃತಕವೋ, ಪ್ರಾರಂಭದಿಂದಲೇ ಇದು ಇತ್ತೋ ಅಥವಾ ಅನಂತರ ಬೆಳವಣಿಗೆ ಹೊಂದಿತೋ ಏನೋ ಒಟ್ಟಿನಲ್ಲಿ ವಿಶ್ವದ ಆಹಾರ ಕ್ರಮದಲ್ಲಿ ಸಸ್ಯಹಾರ ಮತ್ತು ಮಾಂಸಹಾರ ಎಂದು ಎರಡು ವಿಭಾಗಗಳು ಸೃಷ್ಟಿಯಾಗಿದೆ. ನನಗಿರುವ ಮಾಹಿತಿಯಂತೆ ವಿಶ್ವ ಜನಸಂಖ್ಯೆಯ ಸುಮಾರು ಶೇಕಡಾ 75/80% ಜನರು ಸಸ್ಯಗಳನ್ನು ಒಳಗೊಂಡ ಮಾಂಸಹಾರವನ್ನು ಮತ್ತು ಉಳಿದವರು ಸಸ್ಯಹಾರವನ್ನು ಸೇವಿಸುತ್ತಾರೆ. ( ಸಂಪೂರ್ಣ ಸಸ್ಯಹಾರ ಸಾಧ್ಯವೇ ಇಲ್ಲ ಎಂಬ ವಾದವೂ ಇದೆ. ಅದನ್ನು ಆಹಾರ ತಜ್ಞರಿಗೆ ಬಿಟ್ಟುಬಿಡೋಣ )
ಭಾರತದ ಮಟ್ಟಿಗೆ ಈ ಆಹಾರ ಸಂಸ್ಕೃತಿ ದುರಾದೃಷ್ಟವಶಾತ್ ಇಲ್ಲಿನ ಶ್ರೇಣೀಕೃತ ಜಾತಿ ವ್ಯವಸ್ಥೆಯ ಜೊತೆ ತಳುಕು ಹಾಕಿಕೊಂಡು ಒಂದಷ್ಟು ಸಂಕೀರ್ಣ ಸಮಸ್ಯೆ ಸೃಷ್ಟಿಸಿದೆ.
ಈ ಹಿನ್ನೆಲೆಯಲ್ಲಿ ನಾವು ಆಹಾರ ಸ್ವಾತಂತ್ರ್ಯ, ಹಕ್ಕು, ಬಹುಸಂಖ್ಯಾತರ ಭಾವನೆ, ಮುಂತಾದ ರಾಜಕೀಯ - ಧರ್ಮ ಪ್ರೇರಿತ ವಿಚಾರಗಳನ್ನು ವಿಮರ್ಶಿಸಬೇಕಿದೆ.
ಸಸ್ಯಹಾರ ಒಳ್ಳೆಯದು, ಮಾಂಸಾಹಾರ ಒಳ್ಳೆಯದಲ್ಲ, ಪ್ರಾಣಿ ವಧೆ ಮಹಾಹಿಂಸೆ ಮುಂತಾದ ವಾದಗಳನ್ನು ಜಾತಿಯ ಮೇಲ್ವರ್ಗದವರು, ಜೈನರು ಮುಂತಾದವರು ಪ್ರತಿಪಾದಿಸುತ್ತಾರೆ. ಇದಕ್ಕೆ ಪ್ರತಿಯಾಗಿ ಮಾಂಸಹಾರ ಕೂಡ ಮಾನವನ ಸಹಜ ಆಹಾರ ಪದ್ದತಿ, ಅದು ಮನುಷ್ಯನ ಈ ಕ್ಷಣದ ಆಹಾರ ಸಮತೋಲನದ ಅತ್ಯವಶ್ಯಕ ವಿಧಾನ, ಈಗಿನ ಜನಸಂಖ್ಯೆಯ ದೃಷ್ಟಿಯಿಂದ ಸಸ್ಯಾಹಾರ ಸಾಕಾಗುವುದಿಲ್ಲ ಮತ್ತು ಪೌಷ್ಟಿಕಾಂಶ ದೊರೆಯುವುದಿಲ್ಲ. ಪ್ರಾಣಿ ವಧೆ ಹಿಂಸೆಯಾದರೂ ಮನುಷ್ಯ ಪ್ರಕೃತಿಯ ಮೇಲೆ ಸಾಧಿಸಿರುವ ನಿಯಂತ್ರಣದ ಕಾರಣಕ್ಕೆ ಮತ್ತು ಬಹುಸಂಖ್ಯಾತರ ಆಯ್ಕೆ ಮಾಂಸಹಾರ ಆಗಿರುವುದರಿಂದ ಆತನ ಆಹಾರ ಸಂಸ್ಕೃತಿಯನ್ನು ಗೌರವಿಸಬೇಕು ಮತ್ತು ಇದು ಅನಿವಾರ್ಯ ಎಂಬ ವಾದ ಮಂಡಿಸುತ್ತಾರೆ.
ವಾದಗಳೇನೋ ಸರಿ. ಸತ್ಯ ಸಹ ಎಲ್ಲೋ ಅಡಗಿದೆ. ಆದರೆ ವಾಸ್ತವ..........
ಭಾರತದ ಈಗಿನ ಆರ್ಥಿಕ ಮತ್ತು ಸಾಮಾಜಿಕ ಸ್ಥಿತಿಗತಿಗಳನ್ನು ಗಮನಿಸಿದಾಗ.........
ಸಂಪೂರ್ಣ ಸಸ್ಯಹಾರದ ಸಂಪನ್ಮೂಲಗಳ ಕ್ರೋಡೀಕರಣ ಸಾಧ್ಯವಿಲ್ಲ ಮತ್ತು ಅದಕ್ಕಾಗಿ ಒತ್ತಾಯ ಒಳ್ಳೆಯದಲ್ಲ. ಹಾಗಾದರೆ ಮಾಂಸಹಾರ ಪ್ರೋತ್ಸಾಹಿಸಬೇಕೆ. ಅದೂ ಒಳ್ಳೆಯದಲ್ಲ.
ಈ ಕ್ಷಣದಲ್ಲಿ ನಿಂತು ಯೋಚಿಸಿದರೆ.......
ಆಹಾರ ಅವರವರ ಆಯ್ಕೆ. ಕಾನೂನಿನ ಅಡಿಯಲ್ಲಿ ನಿಷೇಧವಿಲ್ಲದ ಏನನ್ನಾದರೂ ತಿನ್ನಲಿ. ಆ ಸ್ವಾತಂತ್ರ್ಯ ಅವರಿಗಿದೆ.
ಏನೇ ಆಗಲಿ ಆಹಾರ ವಿಷಯ ಏನೇ ಇರಲಿ ಮಹಾವೀರರ ಅಹಿಂಸೆಯ ತತ್ವಗಳು ಇಂದು ಅತ್ಯಂತ ಪ್ರಸ್ತುತ ಅದನ್ನು ವಿಶಾಲ ಅರ್ಥದಲ್ಲಿ ಗ್ರಹಿಸಿ ಸಾಧ್ಯವಾದಷ್ಟು ಅಳವಡಿಸಿಕೊಳ್ಳಲು
ಪ್ರಯತ್ನಿಸೋಣ ಎಂದು ಆಶಿಸುತ್ತಾ....
******************************************
Image Source : News18
ವಿಶ್ವದ ಮಹಾನ್ ದಾರ್ಶನಿಕ ಜೀಸಸ್...
ನಿಮ್ಮ ಶತ್ರುಗಳನ್ನು ಪ್ರೀತಿಸಿ, ನಿಮ್ಮ ನೆರೆಹೊರೆಯವರನ್ನು ಪ್ರೀತಿಸಿ ಎಂದು ಶಾಂತಿಯ ಸಂದೇಶ ನೀಡಿದ ಮತ್ತು ವಿಶ್ವದಲ್ಲೇ ಅತಿಹೆಚ್ಚು ಅಭಿಮಾನಿಗಳನ್ನು, ಬೆಂಬಲಿಗರನ್ನು, ಹಿಂಬಾಲಕರನ್ನು ಹೊಂದಿರುವ ಕ್ರಿಶ್ಚಿಯನ್ ಧರ್ಮದ ಹುಟ್ಟಿಗೆ ಕಾರಣರಾದ ಯೇಸು ಕ್ರಿಸ್ತ ಅನೇಕ ವಿಷಯಗಳಲ್ಲಿ ಇಂದಿಗೂ ಪ್ರಸ್ತುತರಾಗುತ್ತಾರೆ.
ಸೇವೆಯ ಮುಖಾಂತರ ಬದುಕಿನ ಸಾರ್ಥಕತೆಯನ್ನು ಕಾಣುವ ಒಂದು ಅಪೂರ್ವ ಚಿಂತನೆಯನ್ನು ಬಹಳ ಹಿಂದೆಯೇ ಪ್ರತಿಪಾದಿಸಿದ ಕೀರ್ತಿ ಇವರಿಗೆ ಸಲ್ಲುತ್ತದೆ.
" ಓ ದೇವರೇ, ಇವರು ಏನು ಮಾಡುತ್ತಿದ್ದಾರೆ ಎಂದು ಇವರಿಗೇ ತಿಳಿದಿಲ್ಲ. ದಯವಿಟ್ಟು ಇವರನ್ನು ಕ್ಷಮಿಸು "
ಸ್ವತಃ ತನ್ನನ್ನು ಚಿತ್ರಹಿಂಸೆ ಕೊಟ್ಟು ಶಿಲುಬೆಗೇರಿಸುತ್ತಿದ್ದ ಜನರಿಗಾಗಿ ಯೇಸು ಕ್ರಿಸ್ತ ಪ್ರಾರ್ಥಿಸಿದರೆಂದರೆ ಅವರ ಕ್ಷಮಾಗುಣ ಎಷ್ಟಿರಬಹುದು ಊಹಿಸಿ....
ಇಂದು ಅದೇ ವ್ಯಕ್ತಿ ವಿಶ್ವದ ಅತ್ಯಂತ ಹೆಚ್ಚು ಜನ ಆರಾಧಿಸುವ ದೇವರಾಗಿದ್ದಾರೆ. ಈಗ ಒಳಿತಿಗಾಗಿ ಜನ ಅವರನ್ನು ಪ್ರಾರ್ಥಿಸುತ್ತಿದ್ದಾರೆ.
ಇಡೀ ಜಗತ್ತಿನ ಸೃಷ್ಟಿಕರ್ತರು ನಾವೇ ಎಂದು ಎಲ್ಲಾ ದೇವರುಗಳು ಹೇಳಿಕೊಳ್ಳುತ್ತಾರೆ. ಆದರೆ ಹಿಂದೂ ಮುಸ್ಲಿಂ ಕ್ರಿಶ್ಚಿಯನ್ ಗಳೆಂದು ಸೃಷ್ಟಿಸಿದ್ದು ಯಾರು ಮತ್ತು ಏಕೆ ಎಂಬ ಪ್ರಶ್ನೆಗೆ ಮಾತ್ರ ನಾವೇ ಉತ್ತರ ಹುಡುಕಿಕೊಳ್ಳಬೇಕು....!!!
ವಿಶ್ವದಾದ್ಯಂತ ಈಗ ಬಹುತೇಕ ದೇಶಗಳಲ್ಲಿ ಪ್ರಕ್ಷುಬ್ಧ ವಾತಾವರಣವಿದೆ. ಹಿಂದೆ ಇದ್ದ ಯುದ್ಧಗಳ ಜಾಗವನ್ನು ಈಗ ಭಯೋತ್ಪಾದನೆ ಎಂಬ ಭೂತ ಆಕ್ರಮಿಸಿಕೊಂಡಿದೆ. ಮರೆಯಲ್ಲಿ ನಿಂತು ಮಾಯಾವಿಯಂತೆ ಜನರನ್ನು ಕೊಲ್ಲುತ್ತಾ ಸಾಗುತ್ತಿದೆ. ಅಮಾಯಕರ ನೆತ್ತರು ಹರಿಯುತ್ತಿದೆ. ಜೊತೆಗೆ ರಷ್ಯಾ ಉಕ್ರೇನ್ ಯುದ್ದವೂ ತೀವ್ರ ಹಿಂಸಾತ್ಮಕ ರೂಪ ಪಡೆಯುತ್ತಿದೆ.
ಇಂತಹ ಸಂದರ್ಭದಲ್ಲಿ ಜೀಸಸ್ ನೆನಪಾಗುತ್ತಾರೆ.
ಶತ್ರುಗಳನ್ನು ಪ್ರೀತಿಸಿ, ನೆರೆಹೊರೆಯವರನ್ನು ಪ್ರೀತಿಸಿ ಎಂಬ ಅಮೋಘ ಸಂದೇಶ ನೀಡಿದವರು ಯೇಸು.
ಆದರೆ ಈಗ ಪ್ರೀತಿಸುವುದು ಇರಲಿ, ಗೆಳೆಯರನ್ನು, ನೆರೆಹೊರೆಯವರನ್ನು ನಂಬಲೂ ಸಾಧ್ಯವಾಗದ ಸ್ಥಿತಿಗೆ ತಲುಪಿದ್ದೇವೆ...
ಧರ್ಮ ಬೆಳೆದಂತೆಲ್ಲಾ ಅದರ ಆಚರಣೆಯಲ್ಲಿ ಮೂಡನಂಬಿಕೆಗಳು, ಮತಾಂತರಗಳು, ವಿಭಾಗಗಳು ಕ್ರಿಶ್ಚಿಯನ್ ಧರ್ಮದಲ್ಲೂ ಬೆಳೆದು ಬಂದವು. ಮತಾಂಧ ಜನರಿಂದ ಧಾರ್ಮಿಕ ಕಾರಣಗಳಿಗಾಗಿ ಅಪಾರ ಹಿಂಸೆ ಸಹ ನಡೆದಿದೆ.
ಆದರೆ ಆಧುನಿಕತೆ ಬೆಳೆದಂತೆಲ್ಲಾ ಕ್ರಿಶ್ಚಿಯನ್ ಧರ್ಮ ಸೇವಾ ಮನೋಭಾವವನ್ನು, ಸರಳತೆಯನ್ನು, ನಾಗರಿಕ ಪ್ರಜ್ಞೆಯನ್ನು, ಶಾಂತಿ ಸಹಕಾರವನ್ನು ಮೈಗೂಡಿಸಿಕೊಳ್ಳುತ್ತಾ ಸಾಗಿತು. ಮುಖ್ಯವಾಗಿ ಪಾಶ್ಚಾತ್ಯ ದೇಶಗಳ ಸಂಸ್ಕೃತಿಯನ್ನು ಈ ನಿಟ್ಟಿನಲ್ಲಿ ಗಮನಿಸಬಹುದು.
ಆಡಳಿತದಲ್ಲಿ ಧಮನಕಾರಿ ಧೋರಣೆ, ಯುದ್ಧ, ಆಕ್ರಮಣ ಇದ್ದರೂ ವ್ಯಕ್ತಿ ಸ್ವಾತಂತ್ರ್ಯ, ವಿಶಾಲ ಮನೋಭಾವ, ಮಹತ್ವಾಕಾಂಕ್ಷೆ, ಕ್ರಿಯಾತ್ಮಕತೆಯಿಂದ ಕ್ರಿಶ್ಚಿಯನ್ ಧರ್ಮ ಹೆಚ್ಚು ಜನಪ್ರಿಯವೂ ಸಹನೀಯವೂ ಆಗಿದೆ. ಅದಕ್ಕೆ ಕಾರಣ ಜೀಸಸ್ ಅವರ ಸರಳ ಭೋದನೆಗಳು ಮತ್ತು ಮಾನವೀಯ ಕಳಕಳಿಯ ವಿಚಾರ ಸರಣಿಗಳು.
ವಿಶ್ವದ ಎರಡು ಮಹಾಯುದ್ಧಗಳಲ್ಲಿ ಕ್ರಿಶ್ಚಿಯನ್ ಧರ್ಮದ ದೇಶಗಳದೇ ಪ್ರಮುಖ ಪಾತ್ರ, ಹಾಗೆಯೇ ಧರ್ಮ ಒಂದು ಅಫೀಮು ಎಂದು ಆಕ್ರೋಶ ಭುಗಿಲೆದ್ದು ಕ್ರಾಂತಿಕಾರಕ ಚಿಂತನೆ ರೂಪ ಪಡೆದದ್ದು ಕ್ರಿಶ್ಚಿಯನ್ ಧರ್ಮದಲ್ಲೇ..
ಹೀಗೆ ತನ್ನ ಚಿಂತನೆಗಳಿಂದಲೇ ಇಂದು ವಿಶ್ವದ ಜನಸಂಖ್ಯೆಯಲ್ಲಿ ಅತಿಹೆಚ್ಚು ಜನರನ್ನು ತನ್ನ ಪರಿಧಿಯೊಳಗೆ ಸೇರಿಸಿಕೊಂಡಿರುವ ಕ್ರಿಶ್ಚಿಯನ್ ಧರ್ಮ ಮತ್ತು ಬೈಬಲ್ ನ ಹುಟ್ಟಿಗೆ ಕಾರಣವಾದ ಯೇಸು ಕ್ರಿಸ್ತನನ್ನು ಈ ಶುಭ ಶುಕ್ರವಾರದಂದು ನೆನೆಯುತ್ತಾ....
ವಿಶ್ವ ಶಾಂತಿಗಾಗಿ ಜನರಲ್ಲಿ ಪ್ರಾರ್ಥಿಸುತ್ತಾ....
ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ.
ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,
ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,
ಮನಸ್ಸುಗಳ ಅಂತರಂಗದ ಚಳವಳಿ.
ವಿವೇಕಾನಂದ. ಹೆಚ್.ಕೆ.
9844013068.........
You must be logged in to post a comment.