ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟ...‌

Meal in a silver platter

Featured Image Source : Google

ಬೆಳ್ಳಿ ತಟ್ಟೆಯಲ್ಲಿ ಹೋಳಿಗೆ ಊಟ.......

 

ಆಹಾ ಎಷ್ಟೊಂದು ಅದ್ಭುತ ರಸದೂಟ......

 

ಕೆಲವು ವರ್ಷಗಳ ಹಿಂದೆ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿವಕುಮಾರ್ ಮತ್ತು ತಂಡ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿತ್ತು. ಹಾಗೆಯೇ ಮಾಜಿ ಮುಖ್ಯಮಂತ್ರಿ ಕುಮಾರಸ್ವಾಮಿ ಅವರು ಸಹ ಕಾರ್ಯಕರ್ತರ ಮನೆಯಲ್ಲಿ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ಚಿತ್ರಗಳ ಸುದ್ದಿ ಪ್ರಕಟವಾಯಿತು. ಈಗ ಹಾಲಿ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ, ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ, ಹಾಲಿ ಕೇಂದ್ರ ಮಂತ್ರಿ ಅಮಿತ್ ಶಾ  ಮತ್ತು ತಂಡ ಬೆಳ್ಳಿ ತಟ್ಟೆಯಲ್ಲಿ ಊಟ ಮಾಡುತ್ತಿರುವ ದೃಶ್ಯಗಳು ಮಾಧ್ಯಮಗಳಲ್ಲಿ ಪ್ರಸಾರವಾಗಿವೆ. ಏನೇ ಆಗಲಿ ಕಾರಣ ಏನೇ ಇರಲಿ ಅವರು ತುಂಬಾ ಅದೃಷ್ಟಶಾಲಿಗಳು ಮತ್ತು ಪುಣ್ಯವಂತರು. ಮುಂದೆ ಅವರು ಚಿನ್ನದ ತಟ್ಟೆಯಲ್ಲಿ ಊಟ ಮಾಡುವಂತಾಗಲಿ ಎಂದು ಶುಭ ಹಾರೈಸುತ್ತಾ........

 

ತಿನ್ನುವ ತಟ್ಟೆಯೇ ಬೆಳ್ಳಿಯದಾದರೆ ಇನ್ನು ಅದರಲ್ಲಿ ಉಣಬಡಿಸುವ ಊಟದ ಕ್ವಾಲಿಟಿ - ರುಚಿ ಹೇಗಿರಬಹುದು ಎಂದು ಆಸೆಬುರುಕತನದಿಂದ - ಅಸೂಯೆಯಿಂದ ಕಲ್ಪನೆ ಮಾಡಿಕೊಳ್ಳುತ್ತಾ......

 

ಅದು ದೇವರ ದಯೆಯೇ‌ ಆಗಿದ್ದರೆ, ಅವರೆಲ್ಲರೂ ನನಗಿಂತ ತುಂಬಾ ಒಳ್ಳೆಯವರು ಶ್ರಮಜೀವಿಗಳೇ  ಆಗಿದ್ದರೆ ಅದಕ್ಕಾಗಿ ಆ ದೇವರು ಅವರಿಗೆ ಆ ಅದೃಷ್ಟ ಕೊಟ್ಟಿದ್ದರೆ  ನನ್ನ ಕೆಟ್ಟತನಕ್ಕೆ ಆ ದೇವರನ್ನು ಶಪಿಸುತ್ತಾ.......‌

 

ನಾನು ರಾಜ್ಯಾದ್ಯಂತ ಕಾಲ್ನಡಿಗೆಯಲ್ಲಿ ಪ್ರವಾಸ ಮಾಡುವಾಗ ಸಾಕಷ್ಟು ಸರ್ಕಾರಿ ಬಾಲಕರ ವಿಧ್ಯಾರ್ಥಿ ನಿಲಯಗಳಲ್ಲಿ ರಾತ್ರಿ ಸಂವಾದ ಕಾರ್ಯಕ್ರಮ ನಡೆಸಿ ಅಲ್ಲಿಯೇ ಊಟ ಮಾಡಿ ಅವರೊಂದಿಗೆ ತಡ ರಾತ್ರಿಯವರೆಗೂ ಚರ್ಚಿಸುತ್ತಾ ಅಲ್ಲಿಯೇ ಮಲಗಿದ್ದೆನು. 

 

ನಾನು ಬಾಲ್ಯದಲ್ಲಿ ಮನೆಯವರೊಂದಿಗೆ ಒಂದೇ ತಟ್ಟೆಯಲ್ಲಿ ಬಹುಶಃ ಅದು ಅಲ್ಯೂಮಿನಿಯಂ ಇರಬಹುದು ಒಟ್ಟಿಗೇ ಊಟ ಮಾಡಿದ ನೆನಪುಗಳು ಈಗಲೂ ಇನ್ನೂ ಹಸಿರಾಗಿದೆ. ಸ್ವಲ್ಪ ದೊಡ್ಡವರಾದ ನಂತರ ಮನೆಯಲ್ಲಿ ಎಲ್ಲರಿಗೂ ಪ್ರತ್ಯೇಕ ತಟ್ಟೆ ಲೋಟದ ವ್ಯವಸ್ಥೆಯಾಯಿತು. ಸುಮಾರು ‌40 ವರ್ಷಗಳ ನಂತರ ಈ ಪಾದಯಾತ್ರೆಯ ಸಮಯದಲ್ಲಿ ಕೆಲವು ಹಾಸ್ಟೆಲ್ ವಿದ್ಯಾರ್ಥಿಗಳು ಒಂದೇ ತಟ್ಟೆಯಲ್ಲಿ ಮೂರು ನಾಲ್ಕು ಜನ ಒಟ್ಟಿಗೆ ಊಟ ಮಾಡುವುದನ್ನು ಗಮನಿಸಿದೆ. ಕುತೂಹಲದಿಂದ ಅದಕ್ಕೆ ಕಾರಣ ಕೇಳಿದೆ. ವಿವಿಧ ಕಾರಣಗಳಿಗಾಗಿ ಆ ಸಮಯದಲ್ಲಿ ಹಾಸ್ಟೆಲ್ ನಲ್ಲಿ ತಟ್ಟೆಗಳ ಕೊರತೆ ಉಂಟಾಗಿ ಒಬ್ಬರಾದ ಮೇಲೆ ಒಬ್ಬರು ತಿನ್ನಲು ಸಮಯದ ಕೊರತೆಯ ಕಾರಣ ಒಂದೇ ತಟ್ಟೆಯಲ್ಲಿ ಊಟ ಮಾಡುತ್ತಿರುವುದಾಗಿ ತಿಳಿಸಿದರು. ಇದು ಬಹುತೇಕ ಎಲ್ಲಾ ಸರ್ಕಾರಿ ಹಾಸ್ಟೆಲ್ ಗಳ ಸ್ಥಿತಿ. ಅದು ಕೊರೋನಾ ಸಮಯ ಬೇರೆ. ದೈಹಿಕ ಅಂತರ ಕಾಪಾಡಬೇಕು ಎಂಬ ನಿಯಮ ಸಹ ಇತ್ತು.......

 

ಇನ್ನು ತಟ್ಟೆ ಇರಲಿ ಊಟಕ್ಕೂ ಪರದಾಡುವ ಅನೇಕರು ಈ‌ ದೇಶದಲ್ಲಿ ವಾಸಿಸುತ್ತಿದ್ದಾರೆ. ಅವರಿಗೆ ಊಟ ಕೊಡಬೇಕಾದ ಜವಾಬ್ದಾರಿ ಸ್ಥಾನದಲ್ಲಿ ಇರುವವರು ಬೆಳ್ಳಿಯ ತಟ್ಟೆಯಲ್ಲಿ ಊಟ ಮಾಡುವ ದೃಶ್ಯಗಳನ್ನು ಕಂಡಾಗ ಇದೆಲ್ಲಾ ಸಹಜವಾಗಿ ನೆನಪಾದವು....

 

ಅಷ್ಟೇ ಅಲ್ಲ ಈ ಸರ್ಕಾರಿ ಹಾಸ್ಟೆಲ್ ಗಳಲ್ಲಿ ಪ್ರವೇಶಿಸಿದಾಗ ನಿಮ್ಮನ್ನು ಮೊದಲು ಸ್ವಾಗತಿಸುವ ಫಲಕವೆಂದರೆ ಒಂದು ವಾರದ ಊಟದ ಮೆನು. ಅದು ಪ್ರತಿಯೊಂದು ಗ್ರಾಮುಗಳ ಲೆಕ್ಕದಲ್ಲಿ ಇರುತ್ತದೆ.  ಸೋಮವಾರ ಬೆಳಗ್ಗೆ 250 ಗ್ರಾಂ ಉಪ್ಪಿಟ್ಟು ಮಧ್ಯಾಹ್ನ ಎರಡು ಚಪಾತಿ 150 ಗ್ರಾಂ ತರಕಾರಿ ಪಲ್ಯ, 200 ಗ್ರಾಂ ಅನ್ನ ಸಾಂಬಾರು ಸಂಜೆ ಮತ್ತೆ ಗ್ರಾಮುಗಳ ಲೆಕ್ಕದ ಊಟ. ವಾರಕ್ಕೆ ಎರಡು ದಿನ ಮೊಟ್ಟೆ ಮತ್ತು ಒಂದೆರಡು ದಿನ ಅದೇ ಗ್ರಾಮುಗಳ ಲೆಕ್ಕದ ಮಾಂಸಾಹಾರ.....

 

ಒಂದು ದೇಶದ ಭವಿಷ್ಯದ ಯುವ ಶಕ್ತಿಗೆ ಗ್ರಾಮುಗಳ ಲೆಕ್ಕಾಚಾರದ ಆಧಾರದಲ್ಲಿ ಊಟ ಒದಗಿಸಿದರೆ ದೇಶ ಬಲಾಢ್ಯವಾಗುವುದು ಹೇಗೆ ? ಇದನ್ನು ಸರ್ಕಾರಿ ಸಂಸ್ಥೆಗಳ ಪಾರದರ್ಶಕ ಲೆಕ್ಕಾಚಾರ ಎಂದು ಅಧಿಕಾರಿಗಳು ಮತ್ತು ರಾಜಕಾರಣಿಗಳು ಸಮರ್ಥಿಸಿಕೊಳ್ಳುತ್ತಾರೆ. ಅದು ಮೇಲ್ನೋಟಕ್ಕೆ ಸರಿ ಎನಿಸುತ್ತದೆ. ಆದರೆ ಆಂತರ್ಯದಲ್ಲಿ‌ ಭ್ರಷ್ಟಾಚಾರ ಮತ್ತು ಅಪನಂಬಿಕೆಯ ಕಾರಣದಿಂದ ಯುವ ಜನಾಂಗ ಪರೋಕ್ಷವಾಗಿ ಸಾಕಷ್ಟು ನರಳುತ್ತದೆ.....

 

ಒಂದು ಕಡೆ ಸಾರ್ವಜನಿಕರು ತಾವು ಕಷ್ಟ ಪಟ್ಟು ದುಡಿದ ಹಣವನ್ನು ತೆರಿಗೆ ರೂಪದಲ್ಲಿ ಸರ್ಕಾರಕ್ಕೆ ಸಲ್ಲಿಸುತ್ತಾರೆ. ಆ ಹಣವನ್ನು ಕೆಲವೇ ಜನ ಪ್ರಜಾಪ್ರಭುತ್ವದ ಹೆಸರಿನಲ್ಲಿ ಮಜಾ ಉಡಾಯಿಸುತ್ತಾರೆ. ಬಹುಸಂಖ್ಯಾತರು ಹೊಟ್ಟೆ ಪಾಡಿಗಾಗಿ ಇಡೀ ಜೀವನ ಅವರಿಗಾಗಿ ಜೀತದಾಳುಗಳಂತೆ ದುಡಿಯುತ್ತಾರೆ. ವಿಧಾನಸಭಾ ಅಧಿವೇಶನದ ಸಮಯದಲ್ಲಿ ರಾಜಕಾರಣಿಗಳು ಮತ್ತು ಅಧಿಕಾರಿಗಳು ನೂರಾರು ರೂಪಾಯಿಗಳ ಮೂರು ಹೊತ್ತಿನ ಊಟ ಮಾಡುತ್ತಾರೆ ಅದೂ ಸಾರ್ವಜನಿಕ ಹಣದಲ್ಲಿ........

 

ಕಲ್ಯಾಣ ಕರ್ನಾಟಕದ ಎಷ್ಟೋ ಮಕ್ಕಳು ಡೈರಿ ಮಿಲ್ಕ್ ಚಾಕೊಲೇಟ್ ತಿಂದೇ ಇಲ್ಲ. ಎಷ್ಟೋ ವಿದ್ಯಾವಂತರು ಪಂಚತಾರಾ ಹೋಟೆಲ್ ನೋಡೇ ಇಲ್ಲ. ಎಷ್ಟೋ ಜನರಿಗೆ ಬಫೆಟ್ ಊಟದ ಬಗ್ಗೆ ತಿಳಿದೇ ಇಲ್ಲ. ಇನ್ನೂ ಎಷ್ಟೋ ಜನ ಒಮ್ಮೆಯೂ ವಿಮಾನದಲ್ಲಿ ಪ್ರಯಾಣಿಸಿಲ್ಲ.

 

ಆದರೂ ಹೇಳಲಾಗುತ್ತದೆ " ಪ್ರಜೆಗಳಿಂದ - ಪ್ರಜೆಗಳಿಗಾಗಿ - ಪ್ರಜೆಗಳಿಗೋಸ್ಕರ ಇರುವುದೇ ಪ್ರಜಾಪ್ರಭುತ್ವ ಸರ್ಕಾರ " ಎಂದು. ಎಂತಹ ಕಪಟ ನಾಟಕ..

 

ಪ್ರಾಕೃತಿಕವಾಗಿ ಕರ್ನಾಟಕ ಒಂದು ಸಂಪದ್ಭರಿತ ರಾಜ್ಯ. ಇಲ್ಲಿನ ಪ್ರತಿ ಪ್ರಜೆಯೂ ಒಂದು ಆರೋಗ್ಯಪೂರ್ಣ ಮೂಲಭೂತ ಸೌಕರ್ಯಗಳನ್ನು ಹೊಂದಿ ನೆಮ್ಮದಿಯಿಂದ ಬದುಕಲು ಬೇಕಾದಷ್ಟು ಸಂಪನ್ಮೂಲಗಳನ್ನು ಹೊಂದಿದೆ. ಬಡತನಕ್ಕೆ ಇಲ್ಲಿ ಜಾಗವೇ ಇಲ್ಲ. ಆದರೆ ಈ ಆಡಳಿತ ವ್ಯವಸ್ಥೆ ಭ್ರಷ್ಟಾಚಾರ ಸ್ವಜನ ಪಕ್ಷಪಾತ ಅಹಂಕಾರ ಮತ್ತು ಸ್ವಾರ್ಥದಿಂದ ಸಾಕಷ್ಟು ಜನ ಅನೇಕ ಕಷ್ಟಗಳಿಂದ ನರಳುವಂತೆ ಮಾಡಿದೆ. ಅನೇಕ ಜನ ಈ ನೆಲದಲ್ಲಿ ಹುಟ್ಟಿದ್ದೇ ಒಂದು ಶಾಪ ಎಂದು ಪಶ್ಚಾತ್ತಾಪ ಪಡುವಂತೆ ಈ ವ್ಯವಸ್ಥೆ ಮಾಡಿದೆ. ಶಿಕ್ಷಣ ಆರೋಗ್ಯ ಆಹಾರದ ಬೆಲೆ ನಿಯಂತ್ರಿಸಲೇ ಸರ್ಕಾರಗಳಿಗೆ ಸಾಧ್ಯವಾಗಿಲ್ಲ. ರೈತರ ಆತ್ಮಹತ್ಯೆಯನ್ನೇ ನಿಲ್ಲಿಸಲು ಸಾಧ್ಯವಾಗಿಲ್ಲ.

 

ಕೆಲವೇ ಪ್ರಬಲರ ಸುಖ ಸಂತೋಷಕ್ಕಾಗಿ ಬಹುಸಂಖ್ಯಾತ ದುರ್ಬಲರು ಜೀತ ಮಾಡಬೇಕಾಗಿರುವುದು ವ್ಯವಸ್ಥೆಯ ದುರಂತ. ದಯವಿಟ್ಟು ಇನ್ನಾದರೂ ಎಚ್ವೆತ್ತುಕೊಳ್ಳಿ. 

 

ರಾಜ್ಯದ ಅನೇಕ ಜನ ಕೊರೋನಾ ನಂತರ ಸಾಕಷ್ಟು ಕಷ್ಟ ನಷ್ಟಗಳಲ್ಲಿ ಬದುಕು ಸಾಗಿಸುತ್ತಿರುವಾಗ ಅವರಿಗೆ ನೆರಳಾಗಬೇಕಾದ ಸಮಾಜ ಸೇವೆಯ ಹೆಸರಿನಲ್ಲಿ ಆಯ್ಕೆಯಾಗಿ ಆಡಳಿತ ಮಾಡುತ್ತಿರುವವರು ಸಂಕೋಚವಿಲ್ಲದೆ ಬೆಳ್ಳಿ ತಟ್ಟೆಯಲ್ಲಿ ಮಾಧ್ಯಮಗಳ ಮುಂದೆ ಬಹಿರಂಗವಾಗಿ ಊಟ ಮಾಡುವ ದಾರ್ಷ್ಟ್ಯ ತೋರಿಸುವವುದು ಉತ್ತಮ ಬೆಳವಣಿಗೆಯಲ್ಲ. 

 

ಬಾಳೆ ಎಲೆಯಲ್ಲಿ ಅನ್ನ ಮುದ್ದೆ ರೊಟ್ಟಿ ಚಪಾತಿ ತಿಂದು ಯಾವುದೋ ಒಂದು ಸರಳ ಮನೆಯಲ್ಲಿ ನಿದ್ದೆ ಮಾಡಿ ತಮ್ಮ ಸಮಯವನ್ನು ಸಾರ್ವಜನಿಕರಿಗೇ ಮುಡುಪಾಗಿಡುವ ಜನರನ್ನು ನಮ್ಮ ಪ್ರತಿನಿಧಿಗಳಾಗಿ ಆಯ್ಕೆ ಮಾಡೋಣ. ಸಮೂಹ ಸಂಪರ್ಕ ಕ್ರಾಂತಿಯ ಈ ಸಂದರ್ಭದಲ್ಲಿ ಈ ಸಾಧ್ಯತೆ ಖಂಡಿತ ಇದೆ. ದಯವಿಟ್ಟು ಸ್ವಲ್ಪ ಸಮಯವನ್ನು ಇದಕ್ಕಾಗಿ ಮೀಸಲಿಡಿ. ಉತ್ತಮ ಫಲಿತಾಂಶ ಬಂದೇ ಬರುತ್ತದೆ.....

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

Related Articles
About Author