ಜ್ಞಾನಶಕ್ತಿ ಪ್ರಸಾರ ಅಭಿಯಾನದ ಅಂತರ್ಗತ ಶಾಲೆಗಳಿಗೆ ಗ್ರಂಥ ವಿತರಣಾ ಕಾರ್ಯಕ್ರಮ !

ಬೆಂಗಳೂರು :  ಇಲ್ಲಿನ ಬಸವನಗುಡಿ ವಿಧಾನಸಭಾ ಕ್ಷೇತ್ರದ ಶಾಸಕರಾದ ಮಾನ್ಯ ಶ್ರೀ. ರವಿಸುಬ್ರಹ್ಮಣ್ಯ ನವರು 'ಶಾಸಕರ ಕ್ಷೇತ್ರಾಭಿವೃದ್ಧಿ ನಿಧಿ'ಯಿಂದ ತಮ್ಮ ಕ್ಷೇತ್ರದಲ್ಲಿ ಬರುವ 10 ಸರ್ಕಾರಿ ಶಾಲೆಗಳಲ್ಲಿ ಶ್ರೀ ಸಿದ್ದೇಶ್ವರ ಧರ್ಮ ಜಾಗೃತಿ ಸಂಸ್ಥೆ ಪ್ರಕಾಶನ ಮಾಡಿದ ಮಕ್ಕಳಿಗೆ ಉಪಯುಕ್ತವಾದ ಸಂಸ್ಕಾರ, ವ್ಯಕ್ತಿತ್ವ ವಿಕಸನ, ಇತ್ಯಾಧಿ ಗ್ರಂಥಗಳ ವಿತರಣೆ ಮಾಡಿದರು.

ಈ ಕಾರ್ಯಕ್ರಮದ ಉದ್ದೇಶವನ್ನು ವಿವರಿಸುತ್ತಾ ಶ್ರೀ.ಮೋಹನ್ ಗೌಡ ಇವರು ಮಾತನಾಡಿ ಕಳೆದ ಒಂದು ತಿಂಗಳಿನಿಂದ 'ಜ್ಞಾನಶಕ್ತಿ ಪ್ರಸಾರ ಅಭಿಯಾನ'ವನ್ನು ರಾಜ್ಯದ ಎಲ್ಲಾ ಶಾಲೆಗಳಲ್ಲಿ ಮಾಡಲಾಗುತ್ತಿದೆ. ಮಕ್ಕಳಲ್ಲಿ ಉತ್ತಮ ಸಂಸ್ಕಾರ ನಿರ್ಮಾಣವಾಗಬೇಕು, ಅವರಲ್ಲಿ ವ್ಯಕ್ತಿತ್ವ ವಿಕಸನವಾಗಬೇಕು, ರಾಷ್ಟ್ರ-ಧರ್ಮ- ಸಮಾಜದ ಬಗ್ಗೆ ಜಾಗೃತಿ, ಕಳಕಳಿ ಮೂಡಬೇಕೆಂಬ ಉದ್ದೇಶದೊಂದಿಗೆ ಕಳೆದ 15 ವರ್ಷಗಳಿಂದ ಮಕ್ಕಳಿಗಾಗಿ 'ಬಾಲಸಂಸ್ಕಾರ ವರ್ಗ'ಗಳನ್ನು ನಡೆಸಲಾಗುತ್ತಿದೆ. ಮಕ್ಕಳ ವ್ಯಕ್ತಿತ್ವ ವಿಕಸನ, ಮನಸ್ಸಿನ ಏಕಾಗ್ರತೆಯನ್ನು ಹೇಗೆ ಸಾಧಿಸಬೇಕು ?, ಪ್ರಥಮ ಚಿಕಿತ್ಸೆ, ಆಯುರ್ವೇದ, ಆಹಾರ ಪದ್ದತಿ, ಸಾತ್ವಿಕ ಉಡುಪುಗಳು, ಆಪತ್ಕಾಲದ ಪೂರ್ವ ತಯಾರಿ, ಇಂಥಹ 130 ಕ್ಕೂ ಅಧಿಕ ವಿಷಯಗಳ ಬಗ್ಗೆ ಗ್ರಂಥಗಳನ್ನು ಪ್ರಕಾಶಿಸಲಾಗಿದೆ. ಇಲ್ಲಿಯ ತನಕ ರಾಜ್ಯಾದ್ಯಂತ ಅನೇಕ ಶಾಲೆಗಳಿಗೆ ಭೇಟಿ ಮಾಡಿ ಗ್ರಂಥಗಳನ್ನು ವಿತರಿಸಲಾಗಿದೆ, ಅದೇ ರೀತಿ ಮಾನ್ಯ ಶಾಸಕರಾದ ಶ್ರೀ. ರವಿಸುಬ್ರಹ್ಮಣ್ಯನವರು ಶಾಸಕರ ಅನುದಾನ ನಿಧಿಯಲ್ಲಿ ಅವರ ಕ್ಷೇತ್ರದಲ್ಲಿ ಬರುವ 10 ಸರ್ಕಾರಿ ಶಾಲೆಗಳಿಗೆ ಗ್ರಂಥಗಳ ವಿತರಣೆಯನ್ನು ಮಾಡುತ್ತಿದ್ದಾರೆ' ಎಂದರು.

ಈ ಸಂದರ್ಭದಲ್ಲಿ ವಿದ್ಯಾರ್ಥಿಗಳನ್ನು ಕುರಿತು ಮಾತನಾಡಿದ ಶಾಸಕರು 'ಇಂದು ಸಮಾಜದಲ್ಲಿ ಪರಿವರ್ತನೆಯನ್ನು ತರಬೇಕು, ನಮ್ಮ ಸಂಸ್ಕೃತಿಯ ಉಳಿವಿಗಾಗಿ ಏನಾದರೂ ಮಾಡಬೇಕೆಂಬ ತುಡಿತದೊಂದಿಗೆ ಸಂಸ್ಥೆಯು ಮಾಡುತ್ತಿರುವ ಕಾರ್ಯ ಅತ್ಯಂತ ಶ್ಲಾಘನೀಯ !, ಇಂದು ಈ ಭಾಗದ ಶಾಲೆಗಳಲ್ಲಿ ನಿಮಗೆ ಅಗತ್ಯವಿರುವ, ನಮ್ಮ ಸಂಸ್ಕೃತಿಯನ್ನು ಪರಿಚಯಿಸುವಂತಹ ಗ್ರಂಥಗಳನ್ನು ನೀಡಬೇಕೆಂಬ ಉದ್ದೇಶದೊಂದಿಗೆ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಸಂಸ್ಥೆಯು ಪ್ರಕಾಶನ ಮಾಡಿರುವ ಈ ಗ್ರಂಥಗಳಲ್ಲಿ ದೈನಂದಿನ ಜೀವನ ಆದರ್ಶ ಹೇಗಿರಬೇಕು ?, ವ್ಯಕ್ತಿತ್ವ ವಿಕಸನ, ಆಚಾರ ಧರ್ಮ ಸೇರಿದಂತೆ ಹಲವಾರು ವಿಷಯಗಳ ಬಗ್ಗೆ ವಿವರಿಸಲಾಗಿದೆ. ಅಷ್ಟೇ ಅಲ್ಲದೇ ಪಾಶ್ಚಿಮಾತ್ಯರ ಅಂಧಾನುಕರಣೆಯ ಹಾನಿಗಳು, ಟಿ.ವಿ-ಮೊಬೈಲ್ ನಿಂದಾಗುವ ದುಷ್ಪರಿಣಾಮ ಹಾಗೂ ಅದಕ್ಕೆ ಮಾಡಬೇಕಾದ ಉಪಾಯಗಳು, ಆಧುನಿಕ ವಿಜ್ಞಾನಕ್ಕಿಂತ ಅಧ್ಯಾತ್ಮದ ಶ್ರೇಷ್ಠ ಹೇಗಿದೆ ? ಇದರ ಬಗ್ಗೆಯೂ ಮಾಹಿತಿ ನೀಡುವ ಗ್ರಂಥಗಳು ಲಭ್ಯವಿದೆ. ಹಾಗಾಗಿ, ಪ್ರತಿಯೊಬ್ಬರೂ ಈ ಗ್ರಂಥಗಳನ್ನು ಓದಬೇಕು ಮತ್ತು ಅದರಲ್ಲಿರುವ ವಿಷಯಗಳನ್ನು ಆಚರಣೆಯಲ್ಲಿ ತರಬೇಕು' ಎಂದು ಉಪಸ್ಥಿತ ವಿದ್ಯಾರ್ಥಿಗಳಿಗೆ ಕರೆ ನೀಡಿದರು ಹಾಗೂ ಸಾಂಕೇತಿಕವಾಗಿ ವಿದ್ಯಾರ್ಥಿಗಳಿಗೆ ಗ್ರಂಥಗಳ ವಿತರಣೆ ಮಾಡಿದರು.

ಈ ಸಂಧರ್ಭದಲ್ಲಿ ಸುಂಕೇನಹಳ್ಳಿ ಪ್ರೌಢ ಶಾಲೆಯ ಪ್ರಾಂಶುಪಾಲರಾದ ಸೌ. ಭವ್ಯ, ಸುಂಕೇನಹಳ್ಳಿಯ ಪ್ರಾಥಮಿಕ ಶಾಲೆಯ ಸೌ. ವಿಜಯಾ, ಅದೇ ರೀತಿಯ ಕತ್ರಿಗುಪ್ಪೆ, ಎನ್.ಆರ್ ಕಾಲೋನಿ, ಶ್ರೀನಗರ, ಗುಟ್ಟಳ್ಳಿ, ಬಸವನಗುಡಿ, ಗವಿಪುರಂ ಮುಂತಾದ ಶಾಲೆಯ ಶಿಕ್ಷಕರು ಉಪಸ್ತಿತರಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

About Author