ವಿಧಾನ ಪರಿಷತ್ ಚುನಾವಣೆ: ಫಲಿತಾಂಶ ತೃಪ್ತಿ ತಂದಿದೆ: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ
ಬೆಳಗಾವಿ: ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಬಿಜೆಪಿ ಗೆ ಉತ್ತಮ ಫಲಿತಾಂಶ ದೊರೆತಿದ್ದು, ತೃಪ್ತಿ ತಂದಿದೆ ಎಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ತಿಳಿಸಿದರು.
ಅವರು ಇಂದು ವಾರಣಾಸಿಯಿಂದ ಬೆಳಗಾವಿಗೆ ಹಿಂತಿರುಗಿದ ಸಂದರ್ಭದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದರು.
ಸ್ಥಳೀಯ ಸಂಸ್ಥೆಗಳಿಂದ ವಿಧಾನ ಪರಿಷತ್ತಿಗೆ ನಡೆದ ಚುನಾವಣೆಯಲ್ಲಿ ಈಗಾಗಲೇ 11 ಸ್ಥಾನಗಳಲ್ಲಿ ಬಿಜೆಪಿ ಗೆಲುವು ಸಾಧಿಸಿದೆ.ಮೈಸೂರಿನಲ್ಲಿ ಮರುಎಣಿಕೆಗೆ ಮನವಿ ಮಾಡಿದ್ದು, ಇನ್ನೂ 13-14 ಸ್ಥಾನಗಳನ್ನು ಗೆಲ್ಲುವ ನಿರೀಕ್ಷೆ ಇದೆ. ಫಲಿತಾಂಶದ ಬಗ್ಗೆ ನಮ್ಮ ವರಿಷ್ಠರೊಂದಿಗೆ ಚರ್ಚೆ ಮಾಡುತ್ತೇವೆ. ಉತ್ತಮ ಫಲಿತಾಂಶ ಹೊರಬಂದಿದೆ. ಕಳೆದ ಬಾರಿ 6 ಸ್ಥಾನ ಗಳನ್ನು ಪಡೆದಿದ್ದೆವು. ಈಗ 5 ಸ್ಥಾನ ಗಳನ್ನು ಹೆಚ್ಚಾಗಿ ಪಡೆದುಕೊಂಡಿದ್ದೇವೆ. ಗ್ರಾಮ ಪಂಚಾಯಿತಿ ಸದಸ್ಯರ ಸಂಖ್ಯೆ ಕಳೆದ ಬಾರಿಗಿಂತ ಹೆಚ್ಚಳವಾಗಿದೆ. ಇದರ ಆಧಾರದ ಮೇಲೆ ಪಕ್ಷದ ಶಕ್ತಿಯನ್ನು ವೃದ್ಧಿಗೊಳಿಸಲು ಪ್ರಯತ್ನ ಮಾಡಲಾಗುವುದು. ಕೊರತೆಗಳನ್ನು ನೀಗಿಸಲು ಯತ್ನಿಸಲಾಗುವುದು ಎಂದರು.
ರಮೇಶ್ ಜಾರಕಿಹೊಳಿ ವಿರುದ್ಧ ಕ್ರಮಕೈಗೊಳ್ಳುವ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ಮುಖ್ಯ ಮಂತ್ರಿಗಳು ಪಕ್ಷದಲ್ಲಿ ಚರ್ಚೆ ಮಾಡಿ ತೀರ್ಮಾನಕ್ಕೆ ಬರಲಾಗುವುದು ಎಂದರು.
*ಕಾಂಗ್ರೆಸ್ ಅವರ ದಮ್ ಎಷ್ಟಿದೆ ಎಂದು ಗೊತ್ತಿದೆ*
ಬಿಜೆಪಿ ದಮ್ ಇಲ್ಲದ ಪಕ್ಷ ಎಂದು ವಿರೋಧಪಕ್ಷದ ನಾಯಕ ಸಿದ್ದರಾಮಯ್ಯ ಅವರ ಹೇಳಿಕೆಗೆ ಪ್ರತಿಕ್ರಿಯೆ ನೀಡಿದ ಅವರು ಮೊದಲು ಅವರ ದಮ್ ಎಷ್ಟಿದೆ ಎಂದು ಗೊತ್ತಿದೆ. ಮುಖ್ಯಮಂತ್ರಿಯಾಗಿ ಅವರ ಸ್ಥಾನವನ್ನೇ ಉಳಿಸಿಕೊಳ್ಳಲಾಗಲಿಲ್ಲ. ಮುಖ್ಯಮಂತ್ರಿಗಳ ನೇತೃತ್ವದಲ್ಲಿ ಕಾಂಗ್ರೆಸ್ ಅಧಿಕಾರ ಕಳೆದುಕೊಂಡಿದೆ ಅದನ್ನು ಅರ್ಥಮಾಡಿಕೊಳ್ಳಬೇಕು ಎಂದರು.
You must be logged in to post a comment.