ಸಂಗೀತದಿಂದ ಚತುರ್ವಿಧ ಪರುಷಾರ್ಥ ಸಾಧನೆ

ತುಮಕೂರು: ’ಮಾನವನ ಶಾರೀರಿಕ, ಮಾನಸಿಕ, ಬೌದ್ಧಿಕ ಮತ್ತು ಆಧ್ಯಾತ್ಮಿಕ ಆಯಾಮಗಳ ಮೇಲೆ ಸಂಗೀತವು ಪ್ರಭಾವ ಬೀರುತ್ತದೆ. ಜಗತ್ತಿಂದು ಜ್ಞಾನದಾಹಿ ಸಮಾಜನಿರ್ಮಾಣಕ್ಕೆ ಒತ್ತು ನೀಡುತ್ತಿದ್ದು ಯಾವುದೇ ರಾಷ್ಟ್ರದ ಸಾಂಸ್ಕೃತಿಕ ಮೌಲ್ಯಗಳನ್ನು ಸಂಗೀತದ ಮೂಲಕ ಪರಿಣಾಮಕಾರಿಯಾಗಿ ಬಿಂಬಿಸಬಹುದು’, ಎಂದು ತುಮಕೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಸ್ವಾಮಿ ವೀರೇಶಾನಂದ ಸರಸ್ವತೀ ಅಬಿಪ್ರಾಯಪಟ್ಟರು. ಅವರು ಬೆಂಗಳೂರಿನ ಗಾಯನ ಸಮಾಜದಲ್ಲಿ ಆಯೋಜಿಸಲಾಗಿದ್ದ ರಾಜ್ಯಮಟ್ಟದ ಐವತ್ತೊಂದನೇ ಸಂಗೀತ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು.

ಪೂಜ್ಯರು ಮುಂದುವರೆದು ಮಾತನಾಡುತ್ತಾ, ’ಮನಸ್ಸನ್ನು ಏಕಾಗ್ರಗೊಳಿಸಲು, ಅಜ್ಞಾನದಿಂದ ಮುಕ್ತವಾಗಿಸಲು ಮತ್ತು ಆನಂದ ಶಾಂತಿಯನ್ನು ಗಳಿಸಲು ಸಂಗೀತವು ಅತ್ಯವಶ್ಯಕ. ಸಂಗೀತದಿಂದ ಸಸ್ಯಗಳು ಬೆಳೆಯುತ್ತವೆ ಎಂಬುದು ವಿಜ್ಞಾನಿ ಜಗದೀಶ್‌ಚಂದ್ರ ಬೋಸ್‌ರ ಅಭಿಮತ. ಸಮಾಜದಲ್ಲಿ ಉತ್ತಮ ಸಂಗೀತದ ಪ್ರಸರಣದಿಂದ ಭಯೋತ್ಪಾದನೆಯನ್ನು ಕಡಿಮೆ ಮಾಡಬಹುದು ಎಂಬುದು ಭಾರತರತ್ನ ಡಾ. ಎ.ಪಿ.ಜೆ. ಅಬ್ದುಲ್ ಕಲಾಂರ ಇಂಗಿತ. ಮಾನವನ ವಿಕಾಸದ ವೇಗವನ್ನು ಅವನು ಸ್ವಾರ್ಥವನ್ನು ಮೀರುವ ಪರಿಮಾಣದಿಂದ ನಿರ್ಧರಿಸಬಹುದು ಎಂಬುದು ವಿಜ್ಞಾನಿ ಆಲ್ಬರ್ಟ್ ಐನ್‌ಸ್ಟಿನ್ನನ ನಿಲುವಾದರೆ ಧರ್ಮ, ಅರ್ಥ, ಕಾಮ ಮತ್ತು ಮೋಕ್ಷವೆಂಬ ಪುರುಷಾರ್ಥ ಸಾಧನೆಗೆ ಸಂಗೀತವೇ ಪ್ರಬಲ ಮಾಧ್ಯಮವೆಂಬುದು ಸಂತ ತ್ಯಾಗರಾಜರ ಸಂದೇಶವಾಗಿದೆ’ ಎಂದರು.

ವೇದಿಕೆಯಲ್ಲಿ ಸಮ್ಮೇಳನಾಧ್ಯಕ್ಷರಾದ ಡಾ. ಸೂರ್ಯಪ್ರಸಾದ್, ಕರ್ನಾಟಕ ರಾಜ್ಯ ಸಂಸ್ಕಾರಭಾರತಿ ಸಂಸ್ಥೆಯ ಸಹಸಂಘಟನಾ ಕಾರ್ಯದರ್ಶಿ ಪ.ರಾ. ಕೃಷ್ಣಮೂರ್ತಿ, ಗಾಯನ ಸಮಾಜದ ಅಧ್ಯಕ್ಷ ಡಾ. ಎಂ. ಆರ್. ವಿ. ಪ್ರಸಾದ್, ಉಪಾಧ್ಯಕ್ಷ ಅಚ್ಯುತರಾವ್ ಪಡಕಿ ಮತ್ತು ಕಾರ್ಯದರ್ಶಿ ನಾಗರಾಜ್ ಉಪಸ್ಥಿತರಿದ್ದರು. ವಿದುಷಿ ನೀಲಾ ರಾಮಚಂದ್ರ, ವಿದುಷಿ ಸುಕನ್ಯಾ ಪ್ರಭಾಕರ್, ವಿದುಷಿ ಡಾನಾಗಮಣಿ ಶ್ರೀನಾಥ್, ಪದ್ಮಶ್ರೀ ಪುರಸ್ಕೃತರಾದ ರುದ್ರಪಟ್ಟಣಂ ಸಹೋದರರು, ಸಂಗೀತ ನಿರ್ದೇಶಕ ಪ್ರವೀಣ್ ಡಿ. ರಾವ್ ಮತ್ತು ನ್ಯಾಕ್ ಸಂಸ್ಥೆಯ ನಿರ್ದೇಶಕರಾದ ಡಾ. ಎಸ್.ಸಿ. ಶರ್ಮ ಮೊದಲಾದವರು ಸಭೆಯಲ್ಲಿ ವಿಶೇಷ ಆಹ್ವಾನಿತರಾಗಿದ್ದರು.

Enjoyed this article? Stay informed by joining our newsletter!

Comments

You must be logged in to post a comment.

Related Articles
About Author