ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ.

 

ಬಳ್ಳಾರಿಗೆ ಕೊಟ್ಟಷ್ಟೇ ಮಹತ್ವ ವಿಜಯನಗರ ಜಿಲ್ಲೆಗೂ ನೀಡಿ:ಸಚಿವೆ ಜೊಲ್ಲೆ.

ಹೊಸಪೇಟೆ(ವಿಜಯನಗರ ಜಿಲ್ಲೆ),:-ವಿವಿಧ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆಯಲ್ಲಿ ಅಧಿಕಾರಿಗಳಿಗೆ ಸೂಚನೆ. ವಿವಿಧ ಇಲಾಖೆಗಳ ಅಧಿಕಾರಿಗಳು ಬಳ್ಳಾರಿ ಜಿಲ್ಲೆಯ ಅಭಿವೃದ್ಧಿಗೆ ಕೊಟ್ಟಷ್ಟೇ ಮಹತ್ವವನ್ನು ನೂತನವಾಗಿ ಅಸ್ತಿತ್ವಕ್ಕೆ ಬಂದಿರುವ ವಿಜಯನಗರ ಜಿಲ್ಲೆಗೂ ನೀಡಬೇಕು. ಈ ಜಿಲ್ಲೆಗೆ ನಿಯೋಜನೆಗೊಂಡಿರುವ ಅಧಿಕಾರಿಗಳು ಕಡ್ಡಾಯವಾಗಿ ಜಿಲ್ಲೆಗೆ ಭೇಟಿ ನೀಡಿ ಸಾರ್ವಜನಿಕರ ಕೆಲಸ-ಕಾರ್ಯಗಳಿಗೆ ಸ್ಪಂದಿಸಬೇಕು. ಪ್ರೀತಿ-ವಿಶ್ವಾಸ ಮತ್ತು ಗೌರವಗಳಿಂದ ತಮ್ಮ ತಮ್ಮ ಜವಾಬ್ದಾರಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.ಒಂದು ವೇಳೆ ನಿರ್ಲಕ್ಷ್ಯ ವಹಿಸಿದ್ದಲ್ಲಿ ಕ್ರಮ ಜರುಗಿಸಬೇಕಾಗುತ್ತದೆ ಎಂದು ಮುಜರಾಯಿ,ಹಜ್ ಮತ್ತು ವಕ್ಫ್ ಹಾಗೂ ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾದ ಶಶಿಕಲಾ ಜೊಲ್ಲೆ ಅವರು ಸೂಚನೆ ನೀಡಿದರು.

ವಿಜಯನಗರ ಜಿಲ್ಲಾ ಉಸ್ತುವಾರಿ ಸಚಿವರಾಗಿ ಜವಾಬ್ದಾರಿ ವಹಿಸಿಕೊಂಡ ನಂತರ ಮೊದಲಬಾರಿಗೆ ನಗರದ ಜಿಲ್ಲಾಕ್ರೀಡಾಂಗಣದಲ್ಲಿರುವ ಒಳಾಂಗಣದ ಕ್ರೀಡಾಂಗಣದಲ್ಲಿ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಬುಧವಾರ ಇಲಾಖೆಗಳ ಪ್ರಗತಿ ಪರಿಶೀಲನಾ ಸಭೆ ನಡೆಸಿ ಅವರು ಮಾತನಾಡಿದರು.

ಮುಖ್ಯಮಂತ್ರಿಗಳು ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಬಹಳಷ್ಟು ಕನಸುಗಳನ್ನಿಟ್ಟುಕೊಂಡಿದ್ದಾರೆ;ಅವುಗಳನ್ನೆಲ್ಲಾ ನಾವೆಲ್ಲ ಈಡೇರಿಸಬೇಕಾಗಿದೆ. ಇದಕ್ಕಾಗಿ ಸಚಿವರು,ಶಾಸಕರು,ಸಂಸದರು ಹಾಗೂ ಜನಪ್ರತಿನಿಧಿಗಳನ್ನು ವಿಶ್ವಾಸಕ್ಕೆ ತೆಗೆದುಕೊಂಡು ಒಂದು ತಂಡವಾಗಿ ಜಿಲ್ಲೆಯನ್ನು ಅತ್ಯಂತ ವೇಗವಾಗಿ ಅಭಿವೃದ್ಧಿಪಡಿಸಬೇಕಿದ್ದು,ಇದರಲ್ಲಿ ಅಧಿಕಾರಿಗಳ ಪಾತ್ರ ಅಪಾರವಾಗಿದ್ದು,ಅದನ್ನು ಸಮರ್ಪಕವಾಗಿ ನಿರ್ವಹಿಸಬೇಕು ಮತ್ತು ನೂತನ ಐತಿಹಾಸಿಕ ಜಿಲ್ಲೆಗೆ ಸೇವೆ ಸಲ್ಲಿಸಲು ಸಿಕ್ಕಿರುವ ಸುದೈವಕವಾಶ ಎಂದು ಭಾವಿಸಿ ಕೆಲಸ ಮಾಡಿ ಎಂದು ಅವರು ಸಲಹೆ ನೀಡಿದರು.

ಸರಕಾರದ ಯೋಜನೆಗಳ ಯಶಸ್ವಿಗೆ ಹಾಗೂ ಜನಪ್ರತಿನಿಧಿಗಳ ಅಭಿವೃದ್ಧಿ ಅಪೇಕ್ಷಗಳನ್ನು ಈಡೇರಿಸುವಲ್ಲಿ ಅಧಿಕಾರಿಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ;ಒಂದು ತಂಡವಾಗಿ ಮಾಡಿದಾಗ ಮಾತ್ರ ಯೋಜನೆಗಳು ಕೆಳಹಂತದವರೆಗೆ ತಲುಪಲು ಸಾಧ್ಯ ಎಂದರು.

ಅಧಿಕಾರಿಗಳು ತಮ್ಮ ಇಲಾಖೆಯ ಅಗತ್ಯ ದಾಖಲೆಗಳ ವರ್ಗಾವಣೆ ಹಾಗೂ ಇನ್ನೀತರ ವಿಜಯನಗರಕ್ಕೆ ಸಂಬಂಧಿಸಿದ ಕೆಲಸಗಳನ್ನು ಕ್ಷೀಪ್ರಗತಿಯಲ್ಲಿ ನಿರ್ವಹಿಸುವಂತೆ ಸೂಚನೆ ನೀಡಿದ ಜಿಲ್ಲಾ ಉಸ್ತುವಾರಿ ಸಚಿವೆ ಜೊಲ್ಲೆ ಅವರು ತಮ್ಮ ತಮ್ಮ ಇಲಾಖೆಗಳಲ್ಲಿ ವಿಶಿಷ್ಟವಾಗಿ ಮತ್ತು ಹೊಸತನದಿಂದ ಕೂಡಿದ ಕೆಲಸಗಳು ಏನು ಮಾಡಲು ಸಾಧ್ಯವಿದೆಯೋ ಅವುಗಳನ್ನು ಮಾಡಿ;ಅದಕ್ಕೆ ನಮ್ಮ ಬೆಂಬಲವಿದೆ ಎಂದರು.

ಮುಂದಿನ ದಿನಗಳಲ್ಲಿ ಕೆಡಿಪಿ ಸಭೆ ಮಾಡುವುದರ ಜತೆಗೆ ಇಲಾಖಾವಾರು ಪ್ರಗತಿ ಪರಿಶೀಲನೆ ಮಾಡುವುದಾಗಿ ಅವರು ತಿಳಿಸಿದರು.

*ಮುಖ್ಯಮಂತ್ರಿಗಳೊಂದಿಗೆ ವಿಜಯನಗರ ಜಿಲ್ಲೆ ಅಭಿವೃದ್ಧಿಗೆ ಸಂಬಂಧಿಸಿದ ಸಭೆ:*

ಇದೇ ಫೆ.04ರಂದು ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅವರ ಅಧ್ಯಕ್ಷತೆಯಲ್ಲಿ ವಿಜಯನಗರ ಜಿಲ್ಲೆಯ ಅಭಿವೃದ್ಧಿಗೆ ಸಂಬಂಧಿಸಿದಂತೆ ಸಭೆ ಆಯೋಜಿಸಲಾಗಿದೆ ಎಂದು ಜಿಲ್ಲಾ ಉಸ್ತುವಾರಿ ಸಚಿವೆ ಶಶಿಕಲಾ ಜೊಲ್ಲೆ ಅವರು ತಿಳಿಸಿದರು.

ಸಭೆಯಲ್ಲಿ ಸಚಿವರಾದ ಆನಂದಸಿಂಗ್, ಜಿಲ್ಲೆಯ ಜಿಲ್ಲಾಧಿಕಾರಿಗಳು ಸೇರಿದಂತೆ ಪ್ರಮುಖರು ಪಾಲ್ಗೊಳ್ಳಲಿದ್ದಾರೆ.

ಸಭೆಯಲ್ಲಿ ಜಿಲ್ಲೆಯ ಆಡಳಿತ ಯಂತ್ರ ಚುರುಕಾಗಲು ಅಗತ್ಯವಿರುವ ಅಂಶಗಳನ್ನು ಪ್ರಸ್ತಾಪಿಸಲಾಗುವುದು ಎಂದರು.

ಜಿಲ್ಲೆಯ ಸಮಗ್ರ ಅಭಿವೃದ್ಧಿಗೆ ಸಂಬಂಧಿಸಿದಂತೆ ಅಗತ್ಯವಿರುವ ಸಲಹೆ-ಸೂಚನೆಗಳನ್ನು ಸಾರ್ವಜನಿಕರು ನೀಡುವಂತೆ ಮನವಿ ಮಾಡಿರುವ ಸಚಿವೆ ಜೊಲ್ಲೆ ಅವರು ಸಲಹೆ-ಸೂಚನೆಗಳನ್ನು ತಮಗೆ ಕಳುಹಿಸುವಂತೆ ಕೋರಿಕೊಂಡರು.

*ತುರ್ತಾಗಿ ಆಗಬೇಕಾಗಿರುವ ಕಾರ್ಯಗಳ ಪಟ್ಟಿ ಸಲ್ಲಿಸಿ*: 

ಜಿಲ್ಲಾಮಟ್ಟದ ಅಧಿಕಾರಿಗಳು ತಮ್ಮ ತಮ್ಮ ಇಲಾಖೆಯಲ್ಲಿ ತುರ್ತಾಗಿ ಆಗಬೇಕಾಗಿರುವ ಪ್ರಮುಖವಾದ 05 ಕಾರ್ಯಗಳ ಪಟ್ಟಿಯನ್ನು ಇನ್ನೊಂದು ವಾರದೊಳಗೆ ಜಿಲ್ಲಾಧಿಕಾರಿಗಳಿಗೆ ಸಲ್ಲಿಸಬೇಕು.ಜಿಲ್ಲಾಧಿಕಾರಿಗಳು ಅವುಗಳನ್ನು ಕ್ರೋಢೀಕರಿಸಿ ನನಗೆ ನೀಡುವಂತೆ ಸೂಚನೆ ನೀಡಿದ್ದೇನೆ ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು.

ಇನ್ಮುಂದೆ ಜಿಲ್ಲೆಗೆ ನಾನು ನಿಯಮಿತವಾಗಿ ಭೇಟಿ ನೀಡಲಿದ್ದೇನೆ. ಪ್ರತಿ ಸಭೆಯಲ್ಲಿಯೂ ಈ ಹಿಂದಿನ ಸಭೆಯಲ್ಲಿ ನೀಡಿದ್ದ ಸೂಚನೆಗಳಿಗೆ ಕೈಗೊಂಡಿರುವ ಕ್ರಮಗಳ ಬಗ್ಗೆ ಪರಿಶೀಲನೆ ನಡೆಸುವುದಾಗಿ ತಿಳಿಸಿದ ಅವರು ಮುಖ್ಯಮಂತ್ರಿಗಳು ಇತ್ತೀಚೆಗೆ ತಾನೇ "ಗ್ರಾಮ ಒನ್" ಎಂಬ ಮಹತ್ವಾಕಾಂಕ್ಷಿ ಯೋಜನೆಯನ್ನು ಪ್ರಾರಂಭಿಸಿದ್ದಾರೆ. ಅದರ ಸಮರ್ಪಕ ಅನು  ಹೆಚ್ಚಿನ ಗಮನ ನೀಡುವಂತೆ ಸೂಚನೆ ನೀಡಿದ್ದೇನೆ.ಜಿಲ್ಲೆಯ ದೇವಸ್ಥಾನಗಳ ಸಮಗ್ರ ಅಭಿವೃದ್ಧಿ ಬಗ್ಗೆ ಒಂದು ಸಮಗ್ರ ವರದಿ ಸಲ್ಲಿಸುವಂತೆ ಜಿಲ್ಲಾಧಿಕಾರಿಗಳಿಗೆ ಸೂಚನೆ ನೀಡಿದ್ದೇನೆ ಎಂದರು.

ನಗರೋತ್ಥಾನ ಯೋಜನೆಯ ಮೂರನೇ ಹಂತದಲ್ಲಿ ಕೈಗೆತ್ತಿಕೊಳ್ಳಲಾದ ಕಾಮಗಾರಿಗಳನ್ನು ಶೀಘ್ರ ಪೂರ್ಣಗೊಳಿಸಲು ಅವರು ಸೂಚನೆ ನೀಡಿದರು.

ಆರ್‍ಟಿಪಿಸಿಆರ್ ಲ್ಯಾಬೋರೇಟರಿ ಸ್ಥಾಪನೆಗೆ ಅಗತ್ಯ ಕ್ರಮ:

ವಿಜಯನಗರ ಜಿಲ್ಲೆಯಲ್ಲಿ ಆರ್‍ಟಿಪಿಸಿಆರ್ ಲ್ಯಾಬೋರೇಟರಿ ಇಲ್ಲದಿರುವುದು ಗಮನಕ್ಕೆ ಬಂದಿದ್ದು, ಸ್ಥಾಪಿಸಲು ಅಗತ್ಯ ಕ್ರಮವಹಿಸಲಾಗುವುದು. ಈ ಕುರಿತು ಮುಖ್ಯಮಂತ್ರಿಗಳೊಂದಿಗೆ ಚರ್ಚಿಸಲಾಗುವುದು ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು.

ಡಿಎಚ್‍ಒ ಡಾ.ಜನಾರ್ಧನ್ ಅವರು ಇಲ್ಲಿ ಲ್ಯಾಬ್ ಇಲ್ಲದೇ ಇರುವುದರಿಂದ ಈ ಜಿಲ್ಲೆಯಲ್ಲಿ ಸಂಗ್ರಹವಾಗುವ ಸ್ವ್ಯಾಬ್‍ಗಳನ್ನು ಪ್ರತಿ ತಾಲೂಕುಗಳಲ್ಲಿ ಸಿದ್ದಪಡಿಸಲಾದ ವಾಹನಗಳ ಮುಖಾಂತರ ಬಳ್ಳಾರಿ ವಿಮ್ಸ್ ಲ್ಯಾಬ್‍ಗೆ ಕಳುಹಿಸಲಾಗುತ್ತಿದೆ ಎಂದು ವಿವರಿಸಿದಕ್ಕೆ ಅವರು ಉತ್ತರಿಸಿದರು.

ಕೋವಿಡ್ ಮೊದಲ ಮತ್ತು ಎರಡನೇ ಅಲೆಯ ಸಂದರ್ಭದಲ್ಲಿ ವಿಜಯನಗರ ಜಿಲ್ಲೆಯಲ್ಲಿ 1336 ಜನರು ಕೋವಿಡ್‍ನಿಂದ ಸಾವಿಗಿಡಾಗಿದ್ದು,ಅದರಲ್ಲಿ 496 ಜನರಿಗೆ ಪರಿಹಾರ ಒದಗಿಸಲಾಗಿದ್ದು;ಉಳಿದವರಿಗೂ ಸರಕಾರದ ನಿಯಮಾನುಸಾರ ಒದಗಿಸಲಾಗುತ್ತದೆ ಎಂದು ಡಿಎಚ್‍ಒ ಅವರು ವಿವರಿಸಿದರು.

ಜಿಲ್ಲೆಯಲ್ಲಿ 2366 ಸಕ್ರಿಯ ಪ್ರಕರಣಗಳಿದ್ದು,2086 ಜನರು ಹೋಂಐಸೋಲೇಶನ್‍ನಲ್ಲಿದ್ದಾರೆ.2ನೇ ಅಲೆಯಂತೆ ಈ ಸಂದರ್ಭದಲ್ಲಿ ಐಸಿಯೂ,ಆಕ್ಸಿಜನ್,ಬೇಡ್ ಕೊರತೆ ಕಂಡುಬಂದಿರುವುದಿಲ್ಲ ಎಂದು ವಿವರಿಸಿದ ಅವರು ಕಳೆದ ಜನೆವರಿ ತಿಂಗಳೊಂದರಲ್ಲಿಯೇ ಈ ಜಿಲ್ಲೆಯಲ್ಲಿ 2400 ಮಕ್ಕಳಿಗೆ ಕೋವಿಡ್ ಪ್ರಕರಣಗಳು ದೃಡಪಟ್ಟಿದ್ದವು;ಎಲ್ಲರೂ ಚೇತರಿಸಿಕೊಂಡಿದ್ದಾರೆ. ಬೆಡ್‍ಗಳ ಸಾಮಥ್ರ್ಯ,ಆಕ್ಸಿಜನ್ ಕೊರತೆ ಕಂಡುಬಂದಿರುವುದಿಲ್ಲ ಎಂದು ತಿಳಿಸಿದ ಡಿಎಚ್‍ಒ ಜನಾರ್ಧನ್ ಅವರು ಜಿಲ್ಲೆಯಲ್ಲಿ ಕೋವಿಡ್ ಪಾಸಿಟಿವಿಟಿ ರೇಟ್ ಶೇ.10.28 ಇದೆ ಎಂದರು.

ರಾಗಿ ಖರೀದಿ ಕೇಂದ್ರ ಆರಂಭ;ಸಚಿವರೊಂದಿಗೆ ಚರ್ಚಿಸಿ ಕ್ರಮ:

ಜಿಲ್ಲೆಯಲ್ಲಿ ರಾಗಿ ಖರೀದಿ ಕೇಂದ್ರಗಳು ಆರಂಭಿಸುವಂತೆ ರೈತರು ಕೂಗು ಕೇಳಿಬರುತ್ತಿದ್ದು, ಈ ಕುರಿತು ಸಚಿವರೊಂದಿಗೆ ಚರ್ಚಿಸಿ ಕೇಂದ್ರಗಳನ್ನು ಆರಂಭಿಸಲು ಕ್ರಮವಹಿಸಲಾಗುವುದು ಎಂದು ಸಚಿವೆ ಜೊಲ್ಲೆ ಅವರು ತಿಳಿಸಿದರು.

ಬೆಳೆಹಾನಿ ಸಮೀಕ್ಷೆ ಸಂದರ್ಭದಲ್ಲಿ ರೈತರು ಯಾವುದೇ ದೂರುಗಳಿದ್ದಲ್ಲಿ ಸ್ಪಂದಿಸಿ ಮತ್ತು ಅವುಗಳು ಬರದಂತೆ ನೋಡಿಕೊಳ್ಳಿ ಎಂದು ಸಚಿವೆ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು.

ಜಿಲ್ಲೆಯಲ್ಲಿ 2646 ಅನರ್ಹ ಪಡಿತರ ಚೀಟಿಗಳನ್ನು ರದ್ದುಪಡಿಸಲಾಗಿದ್ದು,ನಿಯಮಾನುಸಾರ 15.90ಲಕ್ಷ ರೂ.ಗಳ ದಂಡವನ್ನು ಅವರಿಂದ ಸಂಗ್ರಹಿಸಲಾಗಿದೆ ಎಂದು ಆಹಾರ ಇಲಾಖೆಯ ಜಂಟಿ ನಿರ್ದೇಶಕ ಶ್ರೀಧರ್ ಅವರು ತಿಳಿಸಿದರು.

2144 ಹೆಕ್ಟೇರ್ ತೋಟಗಾರಿಕೆ ಬೆಳೆ ಹಾನಿಯಾಗಿದ್ದು, 2.90 ಕೋಟಿ ರೂ.ಗಳ ಪರಿಹಾರ ಒದಗಿಸಲಾಗಿದೆ ಎಂದು ತೋಟಗಾರಿಕೆ ಉಪನಿರ್ದೇಶಕ ಶರಣಪ್ಪ ಭೋಗಿ ಅವರು ತಿಳಿಸಿದರು.

07 ಸಾವಿರ ಮಕ್ಕಳು ಸರಕಾರಿ ಶಾಲೆಗೆ ದಾಖಲು:

ನಮ್ಮ ಜಿಲ್ಲೆಯಲ್ಲಿ ಪ್ರತಿ ವರ್ಷ 4ರಿಂದ 5 ಸಾವಿರ ಮಕ್ಕಳು ಸರಕಾರಿ ಶಾಲೆಗೆ ಸೇರ್ಪಡೆಯಾಗುತ್ತಿದ್ದಾರೆ; ಪ್ರತಿ ವರ್ಷ ಸರಕಾರಿ ಶಾಲೆಗೆ ಸೇರ್ಪಡೆಯಾಗುವ ಮಕ್ಕಳ ಸಂಖ್ಯೆ ಜಾಸ್ತಿ ಆಗುತ್ತಲೇ ಹೊಗುತ್ತಿರುವುದು ವಿಶೇಷ. ಈ ವರ್ಷ 07 ಸಾವಿರ ಮಕ್ಕಳು ಸರಕಾರಿ ಶಾಲೆಗಳಿಗೆ ಸೇರ್ಪಡೆಯಾಗಿದ್ದಾರೆ ಎಂದು ಸಭೆಗೆ ವಿವರಿಸಿದ ಡಿಡಿಪಿಐ ರಾಮಪ್ಪ ಅವರು ಇಡೀ ರಾಜ್ಯದಲ್ಲಿಯೇ ನಮ್ಮ ಜಿಲ್ಲೆಯ ಪ್ರಥಮ ಎಂದರು.

ಎಸ್ಸೆಸ್ಸೆಲ್ಸಿ ಪರೀಕ್ಷೆ ಸಿದ್ಧತೆಗೆ ಎಲ್ಲ ರೀತಿಯ ಸಿದ್ಧತೆಗಳನ್ನ ಮಾಡಿಕೊಳ್ಳಲಾಗಿದೆ ಎಂದು ವಿವರಿಸಿದ ಡಿಡಿಪಿಐ ರಾಮಪ್ಪ ಅವರು ಕೆಲದಿನಗಳ ಹಿಂದಷ್ಟೇ ಅಧಿಸೂಚನೆ ಹೊರಡಿಸಲಾಗಿರುವ ಶಿಕ್ಷಕರ ನೇಮಕಾತಿಯಲ್ಲಿ ಅವಿಭಜಿತ ಬಳ್ಳಾರಿ ಜಿಲ್ಲೆಗೆ 1035 ಹುದ್ದೆಗಳನ್ನು ನೀಡಲಾಗಿದೆ. ಪ್ರಾಥಮಿಕ ಶಾಲೆಗೆ 923 ಅತಿಥಿ ಶಿಕ್ಷಕರು, 795 ಪ್ರೌಢಶಾಲಾ ಅತಿಥಿ ಶಿಕ್ಷಕರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದರು.

ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್‍ರಾಜ್, ಕೃಷಿ,ಧಾರ್ಮಿಕ ಇಲಾಖೆ,ನಗರಾಭಿವೃದ್ಧಿ, ಸಮಾಜಕಲ್ಯಾಣ ಇಲಾಖೆ ಸೇರಿದಂತೆ ವಿವಿಧ ಇಲಾಖೆಗಳ ಪ್ರಗತಿಯನ್ನು ಇದೇ ಸಂದರ್ಭದಲ್ಲಿ ನಡೆಸಿದ ಸಚಿವೆ ಜೊಲ್ಲೆ ಅವರು ಈ ಸಂದರ್ಭದಲ್ಲಿ ಅಗತ್ಯ ಸಲಹೆ-ಸೂಚನೆಗಳನ್ನ ನೀಡಿದರು.

ಈ ಸಂದರ್ಭದಲ್ಲಿ ನರೇಗಾ ದಿವಸ್ ಆಚರಣೆ ಅಂಗವಾಗಿ ಹೊರತರಲಾದ ನರೇಗಾ,ಜಲಜೀವ ಮಿಶನ್ ಕ್ಯಾಲೇಂಡರ್‍ಗಳು ಹಾಗೂ ಡೈರಿಗಳನ್ನು ಸಚಿವರು ಬಿಡುಗಡೆ ಮಾಡಿದರು.

ಈ ಸಂದರ್ಭದಲ್ಲಿ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್, ಜಿಪಂ ಸಿಇಒ ಭೋಯರ್ ಹರ್ಷಲ್ ನಾರಾಯಣ, ಎಸ್ಪಿ ಡಾ.ಅರುಣ, ಅಪರ ಜಿಲ್ಲಾಧಿಕಾರಿ ಮಹೇಶಬಾಬು ಸೇರಿದಂತೆ ವಿವಿಧ ಇಲಾಖೆಗಳ ಜಿಲ್ಲಾಮಟ್ಟದ ಅಧಿಕಾರಿಗಳು ಇದ್ದರು.

DONTV 

Enjoyed this article? Stay informed by joining our newsletter!

Comments

You must be logged in to post a comment.

About Author

ನ್ಯೂಸ್