ದಯವಿಟ್ಟು ಸ್ವಲ್ಪ ಯೋಚಿಸಿ....

Think

Featured Image Credits : Pixabay

ಎಚ್ಚರಿಕೆ, ಒಮ್ಮೆ ಯೋಚಿಸಿ ಮುಂದುವರಿಯಿರಿ.......

 

ಬದುಕಿನ ಪಯಣದಲ್ಲಿ ಇದೇ ಕೊನೆಯ ನಿಲ್ಣಾಣವಲ್ಲ ಅಥವಾ ಇದೇ ಅಂತಿಮ ಸತ್ಯವಲ್ಲ.......

 

ಯೂಟ್ಯೂಬ್ (YouTube ) ಮತ್ತು ಕೆಲವು ಸಾಮಾಜಿಕ ಜಾಲತಾಣಗಳು...........

 

ಮಾತು - ಅಭಿಪ್ರಾಯ - ಪ್ರಚೋದನೆ - ಪರಿಣಾಮ - ಸತ್ಯ - ವಾಸ್ತವ - ಭ್ರಮೆ - ಗೊಂದಲಗಳ ನಡುವೆ..........

 

ಸಮೂಹ ಸಂಪರ್ಕ ಮಾಧ್ಯಮಗಳ ಕ್ರಾಂತಿಯಿಂದ ಉಂಟಾಗುತ್ತಿರುವ ತಲ್ಲಣಗಳು ಒಂದೇ ಎರಡೇ....

 

ಅಬ್ಬಬ್ಬಾ ಎಷ್ಟೊಂದು ಜನರ ಎಂಥೆಂತ ಮಾತಿನ ತುಣುಕುಗಳು.....

 

ಊಟದಿಂದ ವೈರಸ್ ವರೆಗೆ.....

 

ಹಾಗಾದರೆ ಭಾಷಣ ಅಥವಾ ಮಾತುಗಳು ಎಂಬುದು ಕಲೆಯೋ ? ಕೊಲೆಯೋ ?

 

ಕೆಲವರಿಗೆ ಅದು ಕಲೆಯ ಬಲೆಯಾದರೆ ಮತ್ತೆ ಕೆಲವರಿಗೆ ಕೊಲೆಯ ಬಲೆಯಾಗಿರುವುದನ್ನು ಗಮನಿಸಬಹುದು.

 

ಕೇಳುಗರು, ನೋಡುಗರು, ಪ್ರೇಕ್ಷಕರು, ಶೋತೃಗಳು, ವೀಕ್ಷಕರು, ಆಲಿಸುವವರು ಹೀಗೆ ನಾನಾ ಹೆಸರುಗಳಿಂದ ಕರೆಯಲಾಗುವ ಜನರನ್ನು ತಮ್ಮ ಮಾತುಗಳ ಮುಖಾಂತರ ಅವರ ಮನಸ್ಸುಗಳನ್ನು ಪ್ರವೇಶಿಸಿ ಅದರ ಮೇಲೆ ನಿಯಂತ್ರಣ ಸಾಧಿಸಿ ಹೇಳಬೇಕಾದ ವಿಷಯವನ್ನು ಸ್ಪಷ್ಟವಾಗಿ ಮತ್ತು ನೇರವಾಗಿ ತಮ್ಮ ಕ್ರಿಯಾತ್ಮಕ ಚಿಂತನೆಯಿಂದ ಅವರಲ್ಲಿ ಅಚ್ಚು ಹೊತ್ತಿದಂತೆ ಮೂಡಿಸಿ ಅವರನ್ನೂ ಯೋಚಿಸುವಂತೆ ಪ್ರೇರೇಪಿಸಿ ಅವರಲ್ಲಿ ಜ್ಞಾನದ ಬೆಳಕನ್ನು ಚೆಲ್ಲಿ ಅರಿವಿನ ಆಳ ಹೆಚ್ಚಿಸಿ ವೈಯಕ್ತಿಕವಾಗಿ ಮತ್ತು ಸಾಮಾಜಿಕವಾಗಿ ಅವರಲ್ಲಿ ಸ್ಪೂರ್ತಿ ತುಂಬಿ ಬದಲಾವಣೆಗೆ ಅವರನ್ನು ಸಜ್ಜುಗೊಳಿಸುವಂತೆ ಮಾಡುವ ಪ್ರತಿಭಾವಂತ ಪ್ರಾಮಾಣಿಕ ಭಾಷಣಕಾರರನ್ನು ನೋಡಿದ್ದೇವೆ ಮತ್ತು ಕೇಳಿದ್ದೇವೆ‌. ಇದನ್ನೇ ಅದ್ಭುತ ಭಾಷಣ ಕಲೆ ಎನ್ನಬಹುದು.

 

ಹಾಗೆಯೇ,

ತಮ್ಮ ಭಾಷಣಗಳಿಂದ ಜನರನ್ನು ಪ್ರಚೋದಿಸಿ, ಅವರುಗಳನ್ನು ಭಾವನಾತ್ಮಕವಾಗಿ ಉದ್ರೇಕಿಸಿ, ಪದಗಳು, ವಾಕ್ಯಗಳು, ಉದಾಹರಣೆಗಳು, ಸಂಕೇತಗಳು, ಅವಾಸ್ತವಿಕ ಅಂಶಗಳು, ಹೇಳುವ ಶೈಲಿಯ ಮುಖಾಂತರ ಅವರನ್ನು ವಂಚಿಸಿ, ಅವರಿಂದಲೇ ಸಮಾಜದಲ್ಲಿ ಅಶಾಂತಿ ಅಸಹನೆ ಸೃಷ್ಟಿಸಿ ದೊಂಬಿ ಗಲಭೆಗಳನ್ನು ಎಬ್ಬಿಸಿ ಜನರ ಮತ್ತು ಸಮಾಜದ ಸಾವು ನೋವುಗಳಿಗೆ ಕಾರಣವಾಗುವಂತ ಭಾಷಣಕಾರರನ್ನು ಸಹ ನಾವು ನೋಡುತ್ತಿದ್ದೇವೆ.

 

ಧಾರ್ಮಿಕ ಮತ್ತು ರಾಜಕೀಯ ನಾಯಕರುಗಳ ಜೊತೆಗೆ, ಕೆಲವು ನಕಲಿ ದೇಶ ಭಕ್ತರು ಮತ್ತು ನಕಲಿ ಬುದ್ದಿ ಜೀವಿಗಳು ಈ ರೀತಿಯ ಮಾತಿನ ಕಲೆಯನ್ನು ಕೊಲೆಯಾಗಿಸುವ ಸಾಮರ್ಥ್ಯ ಹೊಂದಿದ್ದಾರೆ.

 

ದೇವರ ಪ್ರತಿನಿಧಿಗಳಂತೆ, ಧರ್ಮಗಳ ವಕ್ತಾರರಂತೆ, ದೇಶದ ಉದ್ದಾರಕರಂತೆ, ಜನಗಳ ರಕ್ಷಕರಂತೆ,

ಮಾತಿನಲ್ಲಿಯೇ ಅರಮನೆ ಕಟ್ಟಿ, ಸುಳ್ಳುಗಳ ಬಣ್ಣ ಹೊಡೆದು, ವಂಚನೆಯ ದೀಪ ಹಚ್ಚಿ ಜನರನ್ನು ಎಲ್ಲಾ ಕಾಲಕ್ಕೂ ಶೋಷಿಸಿಕೊಂಡು ಬರುತ್ತಿದ್ದಾರೆ.

 

ಕೇವಲ ಭಾಷಣಗಳಿಂದಲೇ ಅಧಿಕಾರಕ್ಕೇರುವ, ಆಶ್ವಾಸನೆಗಳಿಂದಲೇ ಅದನ್ನು ಉಳಿಸಿಕೊಳ್ಳುವ, ಮಾತುಗಳಿಂದಲೇ ಜನರನ್ನು ಮರುಳು ಮಾಡುವ ಹೃದಯಹೀನ ನಾಯಕ ವರ್ಗ ಸೃಷ್ಟಿಯಾಗಿದೆ.

 

ನಾವುಗಳು ಎಚ್ಚೆತ್ತುಕೊಳ್ಳದಿದ್ದರೆ, ಮಾತುಗಳೇ ಕಲೆಗೆ ಬದಲಾಗಿ ಕೊಲೆಗೆ ದಾರಿಯಾಗಿ ಮುಂದೆ ಹೃದಯದ ಭಾಷೆಯೇ ನಿರ್ನಾಮವಾಗಿ ಬುದ್ದಿಯ ಭಾಷೆ ತನ್ನ ನಿಯಂತ್ರಣ ಸಾಧಿಸಿ ನಮ್ಮನ್ನು ವಿನಾಶದ ಅಂಚಿಗೆ ತಳ್ಳುತ್ತದೆ.

 

ಗೆಳೆಯರೆ, ದಯವಿಟ್ಟು ಮಾತಿನ ಮೋಡಿಗಾರರ ಸೆಳೆತಕ್ಕೆ ಒಳಗಾಗದೆ, ನಿಜವಾದ ಕೆಲಸಗಾರರನ್ನು ಎಲ್ಲಾ ಕ್ಷೇತ್ರಗಳಲ್ಲೂ ಪ್ರೋತ್ಸಾಹಿಸೋಣ. 

 

ಯೂಟ್ಯೂಬ್ ಗಳಲ್ಲಿ ಅಥವಾ ಬೇರೆ ಯಾವುದೇ ಮಾಧ್ಯಮಗಳಲ್ಲಿ ಕಾಣಸಿಗುವ ಮಾತಿನ ಮೋಡಿಯ ತುಣುಕುಗಳನ್ನು ನೋಡಿ ಕ್ಷಣಿಕ ಭಾವಕತೆಗೆ ಒಳಗಾಗಿ ಯಾವುದೇ ತೀರ್ಮಾನ ಕೈಗೊಳ್ಳಬೇಡಿ.

ವಿವೇಚನೆ ಮತ್ತು ಸ್ವತಂತ್ರ ತೀರ್ಮಾನ ನಿಮ್ಮದಾಗಿರಲಿ.

 

ಏಕೆಂದರೆ ಮಾತಿನ ಮೋಡಿಯಲ್ಲಿ ಸತ್ಯ ಸಮಾಧಿಯಾಗಿ ಸುಳ್ಳು ವಿಜೃಂಭಿಸಲು ಬಿಡಬಾರದು. ಮುಂದಿನ ಪೀಳಿಗೆಯ ಮಕ್ಕಳಿಗೆ ಮಾತು ಮತ್ತು ಕೃತಿಗಳ ನಡುವಿನ ಅಂತರದ ಮಹತ್ವವನ್ನು ತಿಳಿ ಹೇಳುವ ಜವಾಬ್ದಾರಿ ನಮ್ಮದು. ಇಲ್ಲದಿದ್ದರೆ ಮಾತುಗಳೇ ಮಕ್ಕಳ ಭವಿಷ್ಯಕ್ಕೆ ಮುಳ್ಳಾಗುವ ಸಾಧ್ಯತೆ ಇದೆ......

 

ಒಳ್ಳೆಯದು - ಕೆಟ್ಟದ್ದು - ವಿಕೃತಗಳ ನಡುವಿನ ವ್ಯತ್ಯಾಸ ಗುರುತಿಸುವ ಸೂಕ್ಷ್ಮತೆ ನಮ್ಮದಾಗಲಿ. 

 

ಇದನ್ನು ನಿಯಂತ್ರಿಸಲು - ನಿಗ್ರಹಿಸಲು ಸಾಧ್ಯವಿಲ್ಲ. ಆದರೆ ನಾವು ವಿವೇಚನೆ ಬೆಳೆಸಿಕೊಳ್ಳಲು ಸಾಧ್ಯವಿದೆ.

ಎಚ್ಚರವಿರಲಿ..........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author