ಪಂಥಗಳಾಚೆಯ ಬದುಕು.....

Sectarianism

Featured Image Source : Dreamstime.com

ಸೈದ್ಧಾಂತಿಕ ಗುಲಾಮಿತನದತ್ತ ಬಹುತೇಕ ಭಾರತೀಯ ವಿದ್ಯಾವಂತ ಜಾಗೃತ ಮನಸ್ಥಿತಿಯ ಜನಗಳು ಸಾಗುತ್ತಿದ್ದಾರೆ ಎಂಬುದಕ್ಕೆ ಸಾಕಷ್ಟು ಸಾಕ್ಷ್ಯಗಳು ದೊರಕುತ್ತಿವೆ......

 

ಸಾರ್ವಜನಿಕ ಜೀವನದ ಆಗುಹೋಗುಗಳ ಬಗ್ಗೆ ಆಸಕ್ತಿ ಇರುವ, ಪತ್ರಿಕೆ ಟಿವಿ ಓದುವ ಸಾಮಾಜಿಕ ಜಾಲತಾಣಗಳಲ್ಲಿ ಸಕ್ರೀಯವಾಗಿರುವ ಬಹಳಷ್ಟು ಜನರಿಗೆ ಸಮಕಾಲೀನ ವಿಷಯಗಳ ಬಗ್ಗೆ ಒಂದು ಅಭಿಪ್ರಾಯ ರೂಪಗೊಂಡಿರುತ್ತದೆ. ಅದನ್ನು ವ್ಯಕ್ತಪಡಿಸುವ ವೇದಿಕೆಗಳು ಸಹ ಸಾಕಷ್ಟು ಇದೆ. ಅದರ ಆಧಾರದ ಮೇಲೆ ಹೇಳುವುದಾದರೆ ಎರಡು ಅತಿರೇಕಗಳ ಬಲೆಯೊಳಗೆ ಚಿಂತನೆಗಳು ಬಂಧಿಯಾಗಿವೆ ಮತ್ತು ಸಮಗ್ರ ಚಿಂತನೆಗೆ ಬದಲಾಗಿ ಸಂಕುಚಿತ ಮನೋಭಾವ ಬೆಳೆಯುತ್ತಿದೆ.

 

ಎಡಪಂಥೀಯ ಮತ್ತು ಬಲಪಂಥೀಯ ಅತಿರೇಕಿಗಳು ಮಾನವೀಯ ಪಂಥವನ್ನು ಮರೆಯುತ್ತಿದ್ದಾರೆ ಮತ್ತು ಅದರಿಂದ ತಮ್ಮ ಅಸ್ತಿತ್ವಕ್ಕೆ ಧಕ್ಕೆ ಎಂದು ಭಾವಿಸಿ ಸಮಸ್ಯೆಗಳನ್ನೇ ತಮ್ಮ ಎಡ ಬಲದ ಗುರಾಣಿಗಳಾಗಿ ಮಾಡಿಕೊಂಡು ವ್ಯವಸ್ಥೆಯ ಸುಧಾರಣೆಗೆ ಅಡ್ಡಿಯಾಗುತ್ತಿದ್ದಾರೆ.......

 

ಭಾರತೀಯ ಸಮಾಜದಲ್ಲಿ ಈಗಾಗಲೇ ಸಾಕಷ್ಟು ನೀರು ಹರಿದಿದೆ. ಪ್ರಜಾಪ್ರಭುತ್ವ ತಂತ್ರಜ್ಞಾನ ಕಾರ್ಪೊರೇಟ್ ಸಂಸ್ಥೆಗಳು ಸೋಮಾರಿತನ ವೇಗ ಸ್ಪರ್ಧೆ ಎಲ್ಲವೂ ಬದುಕಿನೊಳಗೆ ಬಂದಾಗಿದೆ. ಈ ಬದಲಾವಣೆಗಳನ್ನು ಗಮನಿಸಿದೆ ಈಗಲೂ ಎಡಬಲಗಳ ಸೈದ್ಧಾಂತಿಕ ನಿಲುವುಗಳಲ್ಲಿ ಬಂಧಿಯಾಗಿರುವವರ ಬಗ್ಗೆ ಮರುಕ ಉಂಟಾಗುತ್ತಿದೆ. ಇವರುಗಳು ಕನಿಷ್ಠ ಒಂದು ಉತ್ತಮ ಚರ್ಚೆಗೂ‌ ಸಾಧ್ಯವಾಗದಷ್ಟು ದೂರ ಮತ್ತು ಮೌಡ್ಯಕ್ಕೆ ತುತ್ತಾಗಿದ್ದಾರೆ.

 

ಪಂಥಗಳಾಚೆಯ ಜಗತ್ತನ್ನು ನೋಡದೆ ಸಂಕುಚಿತ ಮನೋಭಾವದಿಂದ ತಮಗೂ, ತಾವು ನಂಬಿದ ಸಾಮಾನ್ಯ ಜನರಿಗೂ ವಂಚಿಸುತ್ತಿರುವ ಎಡ ಬಲ ಪಂಥೀಯರು........

 

ಇದಕ್ಕೆ ಒಂದು ಉದಾಹರಣೆ ಹೀಗಿದೆ. ನೀವು ಒಂದು ದೊಡ್ಡ ಲಾರಿಯನ್ನು ಸುಲಭವಾಗಿ ಚಲಾಯಿಸುವುದು ಕಲಿತರೆ ನಂತರ ಬಸ್ಸು ಕಾರು ಟೆಂಪೋ ಟ್ರಾವೆಲರ್ ಮುಂತಾದ ವಾಹನಗಳನ್ನು ಚಲಾಯಿಸುವುದು ಕಷ್ಟವಾಗುವುದಿಲ್ಲ. ಕೇವಲ ಕಾರು ಚಲಾಯಿಸುವುದು ಮಾತ್ರ ಕಲಿತಿದ್ದರೆ ಇತರೆ ದೊಡ್ಡ ವಾಹನ ಓಡಿಸುವುದು ತುಂಬಾ ಕಷ್ಟ. ಹಾಗೆಯೇ ಮಾನವೀಯ ಮೌಲ್ಯಗಳೆಂಬ ಪ್ರೀತಿ ಕರುಣೆ ಸಹನೆ ಸಹಕಾರ ಕ್ಷಮಾಗುಣ ಮುಂತಾದ ಗುಣಗಳು ನಿಮ್ಮ ಅರಿವಿನಲ್ಲಿ ಅಡಕವಾಗಿದ್ದರೆ ನೀವು ನಾಗರಿಕ ಸಮಾಜದ ಒಳ್ಳೆಯ ಸದಸ್ಯರಾಗಬಹುದು. ಕೇವಲ ಎಡ ಅಥವಾ ಬಲಪಂಥದ ಪ್ರತಿಪಾದಕರಾಗಿದ್ದರೆ ಮಾನವೀಯ ಮೌಲ್ಯಗಳ ವಿರುದ್ಧ ಚಿಂತನೆಗಳಾದ ದ್ವೇಷ ಅಸೂಯೆ ಹಿಂಸೆ ಆಕ್ರಮಣವೇ ಮನಸ್ಸಿನಲ್ಲಿ ತುಂಬಿಕೊಂಡು ತಮ್ಮ ಪಂಥಗಳ ಶ್ರೇಷ್ಠತೆಯ ವ್ಯಸನಕ್ಕೆ ಬಿದ್ದು ಇನ್ನೊಂದನ್ನು ದ್ವೇಷಿಸುತ್ತಾ ಜೀವನದ ಅಪೂರ್ವ ಅನುಭವದಿಂದ ವಂಚಿತರಾಗಿ ಸಂಕುಚಿತ ಮನೋಭಾವದವರಾಗಿಯೇ ಉಳಿಯುತ್ತೀರಿ. ಎಡ ಬಲ ಪಂಥೀಯರ ಕ್ರೌರ್ಯ, ಹಿಂಸಾ  ಪ್ರವೃತ್ತಿ, ದ್ರೋಹ ಸ್ವತಃ ಅವರಿಗೂ ಅಪಾಯವಲ್ಲದೆ, ದೇಶ ಮತ್ತು ಮುಖ್ಯವಾಗಿ ಇಲ್ಲಿನ ಶೋಷಿತ ವರ್ಗಕ್ಕೆ ಇದು ಒಂದು ಶಾಪವಾಗಿದೆ. ಮಾನವೀಯ ಮೌಲ್ಯಗಳ ಅಗಾಧತೆಯ ಮುಂದೆ ಈ ಎಡ ಬಲ ಪಂಥಗಳು ಸಣ್ಣ ಚಿಂತನೆಗಳು ಮಾತ್ರ...

 

ಇವರಿಬ್ಬರ ದ್ವೇಷ ಅಸೂಯೆಗಳು ಯಾವ ಮಟ್ಟ ಮುಟ್ಟಿದೆ ಎಂದರೆ ಅವರು ಅಧಿಕಾರಕ್ಕೆ ಬಂದರೆ ಆಡಳಿತ ವ್ಯವಸ್ಥೆಯಷ್ಟೇ ಅಲ್ಲ ಇತಿಹಾಸವನ್ನೇ ಬದಲಾಯಿಸುತ್ತಾರೆ, ಇವರು ಅಧಿಕಾರಕ್ಕೆ ಬಂದರೆ ಅವರ ಎಲ್ಲಾ ಯೋಜನೆಗಳಿಗೆ ವಿರುದ್ಧ ಯೋಜನೆ ರೂಪಿಸುತ್ತಾರೆ. ಎರಡೂ ಕಡೆಯ ಬಲಾಢ್ಯರು ಹೇಗೋ ಉಳಿಯುತ್ತಾರೆ. ನಿಜವಾದ ಹೊಡೆತ ಬೀಳುವುದು ಎರಡೂ ಸಂದರ್ಭದಲ್ಲಿ ದುರ್ಬಲರಿಗೆ ಮತ್ತು ಸಾಮಾನ್ಯರಿಗೆ...

 

ಈ ಕ್ಷಣದಲ್ಲಿ ಭಾರತೀಯ ಸಮಾಜ ಎರಡು ಧ್ರುವಗಳಾಗಿ ಒಡೆದು ಹೋಗಿದೆ...........

 

ಒಂದು ಆರೆಸ್ಸೆಸ್ ಮತ್ತು ಅದರ ಸಿದ್ದಾಂತ ಪ್ರೇರಿತ ಕಟ್ಟಾ ಹಿಂದೂ ಸಂಘಟನೆಗಳು ಮತ್ತು ಬಿಜೆಪಿ ಎಂಬ ರಾಜಕೀಯ ಪಕ್ಷ ಹಾಗೂ ಹಿಂದೂ ಧರ್ಮದ ಪುನರುತ್ಥಾನದ ಮನಸ್ಸುಗಳ ಕೂಟದ ಬಲಪಂಥೀಯ ಮನುವಾದಿಗಳು.

 

ಇನ್ನೊಂದು ಇದಕ್ಕೆ ತದ್ವಿರುದ್ಧವಾದ ನಿಲುವಿನ ಬುದ್ದ ಬಸವ ಅಂಬೇಡ್ಕರ್ ವಾದಿಗಳು, ಮಾರ್ಕ್ಸ್ ಮತ್ತು ಮಾವೋ ವಾದದ ಕಮ್ಯುನಿಸ್ಟರು, ಗಾಂಧಿವಾದದ ಕಾಂಗ್ರೇಸಿಗರು ಮತ್ತು ಭಿನ್ನ ಧರ್ಮದ ಮುಸ್ಲೀಮರು ಹಾಗೂ ಸಮಾನತೆಯ ಕನಸು ಕಾಣುವ  ಮತ್ತು ಬುದ್ದಿ ಜೀವಿಗಳೆಂಬ ಪ್ರಗತಿಪರ ಮನಸ್ಸುಗಳ ಎಡಪಂಥೀಯ ಕೂಟ.

 

ಇಬ್ಬರಲ್ಲೂ ಆಳವಾದ ಸೈದ್ದಾಂತಿಕ ಮತ್ತು ವೈಯಕ್ತಿಕ ದ್ವೇಷ ತುಂಬಿ ತುಳುಕುತ್ತಿದ್ದು ಒಬ್ಬರನ್ನೊಬ್ಬರು ದೇಶದ್ರೋಹಿಗಳು ಮಾನವ ದ್ವೇಷಿಗಳು ಎಂದು ಟೀಕಿಸುತ್ತಾ ವಿರೋಧಿಗಳ ನಾಶವನ್ನು ಬಯಸುತ್ತಿದ್ದಾರೆ.

 

ಈ ಗೊಂದಲದಲ್ಲಿ ಭಾರತ - ಭಾರತೀಯತೆ ಮಾಯವಾಗಿದೆ. ನಿಜವಾದ ರಾಷ್ಟ್ರೀಯತೆ ಇಲ್ಲವಾಗಿದೆ. ಜನರ ಜೀವನಮಟ್ಟ ಕುಸಿಯುತ್ತಿದೆ. ಆರೋಗ್ಯ ಹಾಳಾಗುತ್ತಿದೆ. ಮೌಲ್ಯಗಳು ಮರೆಯಾಗುತ್ತಿವೆ.

 

ಇದರಲ್ಲಿ ಯಾರು ಸರಿ ಯಾರು ತಪ್ಪು ಎಂದು ಮಾಧ್ಯಮಗಳಲ್ಲಿ ಸೋಷಿಯಲ್‌ ಮೀಡಿಯಾಗಳಲ್ಲಿ ಬಹುತೇಕ ಮೊಬೈಲ್ ಹೊಂದಿರುವ ಜನ ದಿನನಿತ್ಯದ ಘಟನೆಗಳನ್ನು ಆಧರಿಸಿ ಬಿಸಿಬಿಸಿ ಚರ್ಚೆ ಮಾಡುತ್ತಿದ್ದಾರೆ. ದ್ವೇಷದ ದಳ್ಳುರಿ ಹೆಚ್ಚಾಗುತ್ತಿದೆ. ತಾವೇ ಮಾನವ ಪ್ರೇಮಿಗಳು ದೇಶಪ್ರೇಮಿಗಳು ಎಂದು ಕಿರುಚಾಡುತ್ತಿದ್ದಾರೆ. ದೇಶಕ್ಕಿಂತ ತಮ್ಮ ಸಿದ್ದಾಂತಗಳೇ ಮುಖ್ಯವಾಗಿವೆ.

 

ಪಾಪ ಅವರಿಗೆ ತಿಳಿದಿಲ್ಲ. ಮರದ ಕೊಂಬೆಯ ಮೇಲೆ ಕುಳಿತು ಬುಡ ಕಡಿಯುತ್ತಿದ್ದಾರೆ. ಮರ ಬಿದ್ದಾಗ ಪಶ್ಚಾತ್ತಾಪ ಪಡಲೂ ಸಾಧ್ಯವಿಲ್ಲದೆ ಘಾಸಿಗೊಳ್ಳುತ್ತಾರೆ ಅಥವಾ ಸಾಯುತ್ತಾರೆ. ಅದರೊಂದಿಗೆ ಏನೂ ಅರಿಯದ ಮರವನ್ನೇ ಆಶ್ರಯಿಸಿದ ಅನೇಕ ಪ್ರಾಣಿ ಪಕ್ಷಿಗಳೂ ನೆಲೆ ಕಳೆದುಕೊಳ್ಳುತ್ತವೆ. 

ಎರಡೂ ಸಿದ್ದಾಂತಗಳಲ್ಲಿ ಒಂದನ್ನು ಸಂಪೂರ್ಣ ಜಾರಿಗೆ ತರುವ ಸಾಧ್ಯತೆ ಇಲ್ಲವೇ ಇಲ್ಲ. ಆದರೆ ಕೆಲವರು ಆ ಭ್ರಮೆಗೆ ಒಳಗಾಗಿದ್ದಾರೆ.

 

ಇದಕ್ಕೆ ಪರಿಹಾರ ಸಾಧ್ಯವಿಲ್ಲವೇ ?

 

ಏಕಿಲ್ಲ, ಮಂಗಳನಲ್ಲಿಗೆ ತಲುಪಿ ಸಂಶೋಧನೆ ಮಾಡುತ್ತಿಲ್ಲವೇ ? ಕಣ್ಣು ಕಿಡ್ನಿ ಹೃದಯ ಮುಂತಾದ ಅಂಗಗಳ ಕಸಿ ಮಾಡುತ್ತಿಲ್ಲವೇ ?

ವಿಶ್ವದ ಯಾವ ಭಾಗವನ್ನು ಬೇಕಾದರೂ ೨೪ ಗಂಟೆಗಳ ಒಳಗೆ ತಲುಪುತ್ತಿಲ್ಲವೇ ? ಒಂದೇ ಒಂದು ಅಣು ಬಾಂಬಿನಿಂದ ಒಂದು ಕೋಟಿ ಜನರನ್ನು ಏಕ ಕಾಲದಲ್ಲಿ ಹತ್ಯೆ ಮಾಡಬಹುದಲ್ಲವೇ ?

 

ಅದಕ್ಕಿಂತ ಮುಖ್ಯವಾಗಿ ಏನಾದರೂ ಮಾಡಿ ಹಿಂದೂ ಧರ್ಮದ ಜಾತಿ ವ್ಯವಸ್ಥೆ ನಾಶ ಪಡಿಸಿದರೆ ನಮ್ಮ ಅರ್ಧದಷ್ಟು ಸಾಮಾಜಿಕ ವ್ಯವಸ್ಥೆಯ ದ್ವೇಷಮಯ ವಾತಾವರಣ ತಿಳಿಯಾಗುತ್ತದೆ. ನಂತರ ಸಹಜವಾಗಿಯೇ ಅಭಿವೃದ್ಧಿ ಸಾಧ್ಯವಾಗುತ್ತದೆ.

 

ಯೋಚಿಸುತ್ತಾ ಹೋದಷ್ಟು ಇದು ಹುಚ್ಚನೊಬ್ಬನ ಕನಸಿನ ಬಡಬಡಿಕೆಯೋ ಅಥವಾ ಮುಂದೊಂದು ದಿನ ನನಸಾಗಬಹುದಾದ ವಾಸ್ತವ ಕನಸೋ ಅರ್ಥವಾಗುತ್ತಿಲ್ಲ.

 

ಆದರೆ,

ಕನಿಷ್ಠ ನಾವುಗಳು ಈ ಎಡಪಂಥ ಬಲಪಂಥಗಳ ಅರ್ಥರಹಿತ ವಿನಾಶಕಾರಿ ಚರ್ಚೆಗಳಿಗಿಂತ, ದ್ವೇಷಮಯ ಮಾತುಗಳಿಗಿಂತ , ಸರಿ ತಪ್ಪುಗಳನ್ನು ಪಕ್ಕಕ್ಕೆ ಸರಿಸಿ ಪ್ರೀತಿ ವಿಶ್ವಾಸದ ವಾಸ್ತವ ಚಿಂತನೆಗಳಲ್ಲಿ ತೊಡಗಿಸಿಕೊಳ್ಳೋಣ. 

 

ಸಿದ್ದಾಂತಕ್ಕಾಗಿ ಬದುಕದೆ ಬದುಕಿಗಾಗಿ ಸಿದ್ದಾಂತ ರೂಪಿಸಿಕೊಳ್ಳೋಣ.

 

ಈ ಕ್ಷಣ ನೀವು ಈ ದೇಶವನ್ನು ಪ್ರೀತಿಸುವವರಾದರೆ ಸಮನ್ವಯವಲ್ಲದೆ ಬೇರೆ ಯಾವ ಸಿದ್ದಾಂತದ ಪ್ರತಿಪಾದಕರಾದರೂ ನಿಮ್ಮಿಂದ ದೇಶಕ್ಕೆ ಖಂಡಿತ ಅಪಾಯ. 

 

ಯುವಕರೇ ಈ ದೇಶ ನರೇಂದ್ರ ಮೋದಿಯದೋ, ರಾಹುಲ್ ಗಾಂಧಿಯದೋ, ಸಿತಾರಾಂ ಯಚೂರಿಯದೋ, ಮಮತಾ ಬ್ಯಾನರ್ಜಿಯದೋ ಅಲ್ಲ. ಅದು ನಮ್ಮ ನಿಮ್ಮೆಲ್ಲರದು. ಸಿದ್ದಾಂತ ಮೀರಿದ , ವ್ಯಕ್ತಿ ಪ್ರತಿಷ್ಠೆ ಮೀರಿದ ಮಾನವ ಪ್ರೀತಿಯ ಪ್ರಕೃತಿ ಪ್ರೇಮಿಯ ನಾಗರಿಕ ಸಮಾಜ ನಿರ್ಮಿಸೋಣ. ದ್ವೇಷ ತುಂಬಿದ ಅಸಹನೆಯ ಸಮಾಜಕ್ಕೆ ಕೊನೆ ಹಾಡೋಣ.

 

ಜನಸಾಮಾನ್ಯರೆ, ದಯವಿಟ್ಟು ಈ ದ್ವೇಷ ಅಸೂಯೆಗಳ ಗೋಡೆ ಒಡೆದು ಮಾನವೀಯ ಮೌಲ್ಯಗಳ ಪುನರುಜ್ಜೀವನ ಮಾಡೋಣ. ಸಮಸ್ಯೆಗಳನ್ನು ಜೀವಂತವಾಗಿ ಇಡುವುದಕ್ಕಿಂತ ಯಾವುದೋ ಒಂದು ಹಂತದಲ್ಲಿ ಅದನ್ನು ಸೌಹಾರ್ದಯುತವಾಗಿ ಪರಿಹರಿಸಲು ಪ್ರಯತ್ನಿಸೋಣ. ಬದುಕೇನು ಶಾಶ್ವತವಲ್ಲ.

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author