ವೇಶ್ಯಾವಾಟಿಕೆ.....

is prostitution legal

Feature Image Credits : ScienceNordic

ವೇಶ್ಯಾವಾಟಿಕೆ......

 

ಒಂದು ವೃತ್ತಿಯೇ,

ಜೀವನ ನಿರ್ವಹಣೆಯ ಒಂದು ಮಾರ್ಗವೇ,

ಒಂದು ಉದ್ಯೋಗವೇ,

ಸಹಜ ಪ್ರಾಕೃತಿಕ ವಿಧಾನವೇ,

ಹೆಣ್ಣಿನ ಶೋಷಣೆಯೇ, ದೌರ್ಜನ್ಯವೇ,

ಅಮಾನವೀಯವೇ,

ಗಂಡಿನ ಅಹಂಕಾರದ ತೆವಲೇ,

ಒಂದು ಹೀನ ಕೆಲಸವೇ,

ಅನೈತಿಕತೆಯೇ, ಅಪರಾಧವೇ,

ಸಮಾಜ ವಿರೋಧಿಯೇ, ಧರ್ಮ ವಿರೋಧಿಯೇ,

ವ್ಯಕ್ತಿಗತ ಸ್ವಾತಂತ್ರ್ಯವೇ,

ಪ್ರೋತ್ಸಾಹಿಸಬೇಕೆ, ನಿರ್ಲಕ್ಷಿಸಬೇಕೆ,

ಖಂಡಿಸಬೇಕೆ, ತಿರಸ್ಕರಿಸಬೇಕೆ,

ಶಿಕ್ಷಿಸಬೇಕೆ......

 

ಭಾರತದ ಸರ್ವೋಚ್ಚ ನ್ಯಾಯಾಲಯ ವೇಶ್ಯಾವಾಟಿಕೆ ಒಂದು ಅಪರಾಧವಲ್ಲ ಎಂಬ ಅರ್ಥದ ಸಾರಾಂಶವುಳ್ಳ ತೀರ್ಪು ನೀಡಿರುವ ಸಂದರ್ಭದಲ್ಲಿ ಇದರ ಬಗ್ಗೆ ಸ್ವಲ್ಪ ಚರ್ಚೆಗಳು ನಡೆಯುತ್ತಿವೆ.

 

ವೇಶ್ಯಾವಾಟಿಕೆ ಜಗತ್ತಿನ ಹಳೆಯದಾದ ಒಂದು ಕ್ರಿಯೆ. ಅದು ಎಲ್ಲಾ ಸಮಾಜಗಳಲ್ಲೂ, ಎಲ್ಲಾ ಕಾಲದಲ್ಲೂ ಅಂದಿನಿಂದ ಇಂದಿನವರೆಗೆ ಪ್ರತ್ಯಕ್ಷವಾಗಿ ಅಥವಾ ಪರೋಕ್ಷವಾಗಿ, ಅಧಿಕೃತವಾಗಿ ಅಥವಾ ಅನಧಿಕೃತವಾಗಿ ನಡೆಯುತ್ತಲೇ ಇದೆ. ಹಾಗೆಯೇ ಇದರ ಬಗ್ಗೆ ಮಡಿವಂತಿಕೆಯೂ ಮುಕ್ತತೆಯೂ ಏಕಕಾಲದಲ್ಲಿ ಚರ್ಚೆಗೆ ಗ್ರಾಸವಾಗಿದೆ.

 

ಒಂದು ವಿಶಾಲ ದೃಷ್ಟಿಕೋನದಿಂದ ಹೇಳುವುದಾದರೆ, ಹೆಣ್ಣಾಗಲಿ ಗಂಡಾಗಲಿ, ಲೈಂಗಿಕ ಅಲ್ಪಸಂಖ್ಯಾತರೇ ಆಗಲಿ ತಮ್ಮ ದೇಹ ಮತ್ತು ಮನಸ್ಸು ಅಥವಾ ಬುದ್ದಿಶಕ್ತಿಯನ್ನು ಹಣಕ್ಕಾಗಿಯೋ, ಆಸೆಗಾಗಿಯೋ, ಮತ್ಯಾವುದೋ ತನ್ನ ಲಾಭಕ್ಕಾಗಿ ಸಂಬಳ ದಕ್ಷಿಣೆ ಬಾಡಿಗೆ ಫೀಸ್ ಗೌರವಧನ ಎಂಬ ಯಾವುದೇ ರೂಪದ ಪ್ರತಿಫಲ ಪಡೆದರೆ ಅಥವಾ ಇನ್ನೊಂದು ರೂಪದಲ್ಲಿ  ಮಾರಿಕೊಂಡರೆ ಅದನ್ನು ಏನೆಂದು ಕರೆಯಲಾಗುತ್ತದೆಯೋ ಅದೇ ಅರ್ಥದಲ್ಲಿ ವೇಶ್ಯಾವಾಟಿಕೆಯನ್ನು ಒಂದು ವೃತ್ತಿ ಎಂದು ಕರೆಯಬಹುದಲ್ಲವೇ ?

 

ಡಾಕ್ಟರು, ಆಕ್ಟರು, ಮೇಷ್ಟ್ರರು, ಡ್ರೈವರು, ಆಫೀಸರು, ಕಂಟ್ರಾಕ್ಟರರು, ಆಡಿಟರು, ಮ್ಯಾನೇಜರು, ಓನರು ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಹಣಕ್ಕಾಗಿ ತಮ್ಮ ದೇಹ ಮತ್ತು ಬುದ್ಧಿಶಕ್ತಿಯನ್ನು ದುಡಿಸಿಕೊಂಡು ಮಾರಾಟ ಮಾಡುವವರೇ ಅಲ್ಲವೇ ?

 

ಸ್ವಲ್ಪ ಮಡಿವಂತಿಕೆ, ಸ್ವಲ್ಪ ಸಾಂಪ್ರದಾಯಿಕ ಮತ್ತು ಮಾನವೀಯತೆಯ‌ ದೃಷ್ಟಿಕೋನದಿಂದ ಯೋಚಿಸಿದರೆ ಒಂದು ಹೆಣ್ಣನ್ನು ಅದರ ಬದುಕಿನ ಅನಿವಾರ್ಯತೆಗಾಗಿ ಆಕೆಗೆ ಹಣ ಅಥವಾ ಇನ್ನಾವುದೋ ಆಸೆ ತೋರಿಸಿ‌ ಆಕೆಯ ಒಪ್ಪಿಗೆ ಇದ್ದರೂ ಸಹ ಪರೋಕ್ಷವಾಗಿ ನಮ್ಮ ಸುಖಕ್ಕಾಗಿ ಆಕೆಯ ದೇಹವನ್ನು ಉಪಯೋಗಿಸಿಕೊಳ್ಳುವುದು ಅಮಾನವೀಯ ಅಧರ್ಮ ಎನಿಸುತ್ತದೆಯಲ್ಲವೇ ? ಅದನ್ನು ಅಪರಾಧ ಎಂದು ಪರಿಗಣಿಸದಿದ್ದರೂ ಶೋಷಣೆಯ ವ್ಯಾಪ್ತಿಗೆ ಬರುವುದಿಲ್ಲವೇ ?

 

ಅಕ್ಕ ತಂಗಿ ‌ಅಮ್ಮ ಹೆಂಡತಿ ಸೊಸೆ ಪ್ರೇಯಸಿ ಮದುವೆ ವಿಚ್ಚೇದನ ಲೀವಿಂಗ್ ರಿಲೇಶನ್ಷಿಪ್ ಸ್ವ ಇಚ್ಛೆಯಿಂದ ಬೆಳೆಸಬಹುದಾದ ಸಂಬಂಧ ಹೀಗೆ ಅನೇಕ ಅಧೀಕೃತ ಮತ್ತು ಮುಕ್ತ ‌ಸಂಬಂಧಗಳು ಮತ್ತು ವೇದಿಕೆಗಳು ಕಾನೂನಿನ ವ್ಯಾಪ್ತಿಯಲ್ಲಿಯೇ ಇರುವಾಗ ಮತ್ತೆ ಮನಸ್ಸಿಗೆ ಖೇದ ಉಂಟುಮಾಡುವ ‌ವೇಶ್ಯಾವಾಟಿಕೆ ಎಂಬ ವರ್ಗ ಬೇಕೆ ಎಂಬ ಪ್ರಶ್ನೆ ಎಲ್ಲೋ ಆತ್ಮದ ಮೂಲೆಯಲ್ಲಿ ಕೇಳಿ ಬರುತ್ತದೆ...

 

ಹಾಗೆಯೇ ವೇಶ್ಯಾವಾಟಿಕೆಗೆ ಕಡಿವಾಣ ಹಾಕಿದರೆ ಅತ್ಯಾಚಾರ ಮತ್ತು ಅದರಿಂದಾಗಿ ಕೊಲೆಗಳು ಹೆಚ್ಚಾಗುವ ಸಂಭವವಿದೆ ಎಂದೂ ವಾದ ಮಂಡಿಸಲಾಗುತ್ತದೆ. 

 

ಇದನ್ನು ಹೀಗೂ ಅರ್ಥೈಸಬಹುದು. ವೇಶ್ಯಾವಾಟಿಕೆ ಪುರುಷರಿಗೆ ವರ ಮಹಿಳೆಯರಿಗೆ ಶಾಪ. ಇದನ್ನು ಗಮನಿಸಿದಾಗ ವೇಶ್ಯಾವಾಟಿಕೆ ಎಷ್ಟು ಸಾಧ್ಯವೋ ಅಷ್ಟು ಕಡಿಮೆಯಾದರೆ ಒಳ್ಳೆಯದು. ಒಂದು ನಾಗರಿಕ ಸಮಾಜದಲ್ಲಿ ಅದು ಇಲ್ಲದಿದ್ದರೆ ಇನ್ನೂ ಉತ್ತಮ. 

 

ಅಲ್ಲದೇ ವೇಶ್ಯಾವಾಟಿಕೆ ಬಗ್ಗೆ ತಲೆ ತಗ್ಗಿಸಬೇಕಾಗಿರುವುದು, ನಾಚಿಕೆ ಪಡಬೇಕಾಗಿರುವುದು ಗಂಡು ಸಮುದಾಯವೇ ಹೊರತು ಹೆಣ್ಣಲ್ಲ ಎಂದು ಪ್ರಜ್ಞಾಪೂರ್ವಕವಾಗಿ ಹೇಳುತ್ತಾ....

 

ಇದು ಒಂದು ಸಾಮಾಜಿಕ ಸಂಬಂಧಗಳ ಸಂಕೀರ್ಣ ವಿಷಯ. ಇದಕ್ಕೆ ಹಲವಾರು ಮುಖಗಳಿರುತ್ತವೆ. ಇದನ್ನು ವಿಮರ್ಶೆಗೆ ಒಳಪಡಿಸುವುದು ಸಹ ಅಷ್ಟೇ ಸಂಕೀರ್ಣ. ವೇಶ್ಯಾವಾಟಿಕೆ ಅಪರಾಧವಲ್ಲ ಎಂಬ ತೀರ್ಪು ಸ್ವಾಗತಾರ್ಹ. ಆದರೆ ನಮ್ಮೆಲ್ಲರ ಜವಾಬ್ದಾರಿ ಮತ್ತು ನೈತಿಕ ಪ್ರಜ್ಞೆ ಸದಾ ಜಾಗೃತವಾಗಿರಲಿ ಎಂದು ಮನವಿ ಮಾಡಿಕೊಳ್ಳುತ್ತಾ......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author