ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಪುಟ್ಟಣ್ಣ ಕಣಗಾಲ್ ಅವರ ಜನುಮದಿನ

ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಆದ ಛಾಪು ಮೂಡಿಸಿದ ಮತ್ತು ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಚಿತ್ರ ಶಿಲ್ಪಿ ಎಂದೇ ಕರೆಯಲ್ಪಡುವ ಪುಟ್ಟಣ್ಣ ಕಣಗಾಲ್ ನಮ್ಮ ಪಿರಿಯಾಪಟ್ಟಣ ತಾಲ್ಲೂಕಿನ ಕಣಗಾಲು ಗ್ರಾಮದವರಾಗಿದ್ದಾರೆ. ಇವರು ಗ್ರಾಮೀಣ ಪ್ರದೇಶದಿಂದ ಅಂತಾರಾಷ್ಟ್ರೀಯ ಮಟ್ಟಕ್ಕೆ ಏರಿದ ಪ್ರತಿಭೆ ಎಸ್.ಪಿ ರಾಮಸ್ವಾಮಯ್ಯ ಹಾಗೂ ಸುಬ್ಬಮ್ಮ ಸುಪುತ್ರರಾಗಿ ಜನಿಸಿದ ಇವರು ಬಡ ಕುಟುಂಬದಲ್ಲಿಯೇ ಬೆಳೆದು ಬಂದವರು. ಹೆಚ್ಚು ವಿದ್ಯಾಭ್ಯಾಸ ಮಾಡದೆ ನಾಟಕ, ಸಿನಿಮಾ ಕ್ಷೇತ್ರಗಳಲ್ಲಿ ಆಸಕ್ತಿ ಹೊಂದಿದವರು ಜೀವನ ನಡೆಸಲು ಕಾರಿನ ಚಾಲಕರಾಗಿ ,ಸುಗಂಧ ವಸ್ತುಗಳ ಮಾರಾಟಗಾರರಾಗಿ, ಉಪನ್ಯಾಸಕರಾಗಿಯೂ ಅನೇಕ ವೃತ್ತಿಗಳಲ್ಲಿಯೂ ತೊಡಗಿಸಿಕೊಂಡಿದ್ದವರು. ಹೀಗಿದ್ದರೂ ರಂಗಭೂಮಿಯತ್ತ ಅಪಾರ ಒಲವು. ಚಿತ್ರಸಾಹಿತಿ ಸೋರಟ್ ಅಶ್ವತ್ಥ್ ಅವರ ಕಲಾ ಜ್ಯೋತಿ ನಾಟಕ ಸಂಸ್ಥೆಯಲ್ಲಿ ಕೆಲಸ ಸಹ ಮಾಡಿದ್ದರು.
 
ಆ ವೇಳೆ ಪುಟ್ಟಣ್ಣನವರ ಅಣ್ಣ ಹಾಗೂ ಸಾಹಿತಿಯಾದ ಕಣಗಾಲ್ ಪ್ರಭಾಕರ್ ಶಾಸ್ತ್ರಿ ಚಿತ್ರರಂಗ ಪ್ರವೇಶಿಸಿದರು.ಇದರಿಂದ ಪುಟ್ಟಣ್ಣನವರು ಚಿತ್ರರಂಗದಲ್ಲಿ ತಳವೂರಲು ವೇದಿಕೆಯಾಯಿತು. ಮದರಾಸಿಗೆ ತೆರಳಿ ಅಣ್ಣನ ಮೂಲಕ ಪದ್ಮಿನಿ ಪ್ರಿಕ್ಸ್ ಸಂಸ್ಥೆಗೆ ಸೇರಿ ಖ್ಯಾತ ನಿರ್ದೇಶಕ ಬಿ.ಆರ್ ಪಂತುಲು ಅವರ ಸಹಾಯಕ ನಿರ್ದೇಶಕರಾಗಿದ್ದರು. ಪುಟ್ಟಣ್ಣನವರು ಸಹಾಯಕ ನಿರ್ದೇಶಕರಾಗಿ ತಯಾರಿಸಿದ ಮೊದಲ ಸಿನಿಮಾ"ರತ್ನಗಿರಿ ರಹಸ್ಯ" ಒಂದೊಳ್ಳೆ ಹೆಸರು ತಂದುಕೊಟ್ಟಿತು. ನಂತರ ಸ್ಕೂಲ್ ಮಾಸ್ಟರ್ ,ಮಕ್ಕಳ ರಾಜ್ಯಂ, ಕಿತ್ತೂರು ಚೆನ್ನಮ್ಮಂ, ಸಾಕುಮಗಳು ಮೊದಲಾದ ಚಿತ್ರಗಳಿಗೆ ಸಹಾಯಕರಾಗಿ ಅಪಾರ ಅನುಭವ ಪಡೆದರು. ಇದಾದ ನಂತರ ಪ್ರಥಮ ಬಾರಿಗೆ ಬೆಳ್ಳಿಮೋಡ ನಿರ್ದೇಶಿಸಿ ಸ್ವತಂತ್ರ ನಿರ್ದೇಶಕರಾಗಿ ಬಡ್ತಿ ಪಡೆದರು.
 
ಅವರ ಮೊದಲ ಚಿತ್ರ ಬೆಳ್ಳಿಮೋಡ ಯಶಸ್ಸಿನ ಹಿನ್ನೆಲೆಯಲ್ಲಿ ಗೆಜ್ಜೆಪೂಜೆ, ಸಾಕ್ಷಾತ್ಕಾರ, ಶರಪಂಜರ, ಧರ್ಮಸೆರೆ, ಪಡುವಾರಳ್ಳಿ ಪಾಂಡವರು, ರಂಗನಾಯಕಿ, ನಾಗರಹಾವು ಮೊದಲಾದವುಗಳು ಚಿತ್ರ ನಿರ್ದೇಶನ ಮಾಡಿ ಮೇಲುಗೈ ಸಾಧಿಸಿದರು .ಗೆಜ್ಜೆಪೂಜೆ, ಬೆಳ್ಳಿಮೋಡ ಶರಪಂಜರ, ರಂಗನಾಯಕಿ ಚಿತ್ರಗಳು ರಾಜ್ಯ ಪ್ರಶಸ್ತಿ ಪಡೆದುಕೊಂಡರೆ ಇಂದಿರಾ ಅವರ ಕಾದಂಬರಿ ಆಧಾರಿತ ಚಿತ್ರ ಗೆಜ್ಜೆಪೂಜೆ ಹಾಗೂ ತ್ರಿವೇಣಿ ಅವರ ಕಾದಂಬರಿ ಆಧರಿತ ಬೆಳ್ಳಿಮೋಡ ರಾಷ್ಟ್ರ ಪ್ರಶಸ್ತಿಗೆ ಆಯ್ಕೆಯಾಗಿತ್ತು. ಅಂಬರೀಷ್, ವಿಷ್ಣುವರ್ಧನ್, ಆರತಿ ,ಸುಂದರಕೃಷ್ಣ ಅರಸ್ ,ವಜ್ರಮುನಿ, ರಜನಿಕಾಂತ್, ಜೈಜಗದೀಶ್, ರಾಮಕೃಷ್ಣ, ಶ್ರೀಧರ್ ಮತ್ತಿತರ ಕಲಾವಿದರನ್ನು ಚಿತ್ರರಂಗಕ್ಕೆ ಪರಿಚಯಿಸಿದ ಶ್ರೇಷ್ಠ ನಟರಾಗಲು ಕಾರಣರಾದವರು ಪುಟ್ಟಣ್ಣ ಕಣಗಾಲ್ ಎಂಬುದರಲ್ಲಿ ಎರಡು ಮಾತಿಲ್ಲಾ, ಒಟ್ಟಿನಲ್ಲಿ ಹೇಳುವುದಾದರೆ ಕನ್ನಡ ಚಿತ್ರರಂಗಕ್ಕೆ ಹೊಸ ಆಯಾಮ ನೀಡಿದ ಚಿತ್ರ ಬ್ರಹ್ಮ ಎಂದೇ ಕರೆಯಲ್ಪಟ್ಟಿದ್ದಾರೆ.
 
ಹಲವು ನಟನಟಿಯರನ್ನು ಬಿಟ್ಟರೆ ಅದೆಷ್ಟೋ ಮಂದಿ ಪುಟ್ಟಣ್ಣ ಅವರನ್ನು ಮರೆತೇ ಬಿಟ್ಟಿದ್ದಾರೆ ಪುಟ್ಟಣ್ಣ ಹುಟ್ಟಿದ ಊರು ಅವರು ನೆಲೆಸಿದ ಮನೆ ಇನ್ನೂ ಹಾಗೇ ಉಳಿದುಕೊಂಡಿದೆ. ಹಳೆಯ ಮನೆಯ ಆಗಿರುವುದರಿಂದ ಕುಸಿಯುವ ಹಂತ ತಲುಪಿದೆ. ಇದರ ಸಂರಕ್ಷಣೆಗಾಗಿಯೇ ‘ಪುಟ್ಟಣ್ಣ ಪ್ರತಿಷ್ಠಾನ‘ ಎಂಬ ಟ್ರಸ್ಟ್ ಸಹ ಆರಂಭವಾಗಿದೆ ಪುಟ್ಟಣ್ಣ ಅವರ ಬಗ್ಗೆ ಇಂದಿನ ಯುವ ಪೀಳಿಗೆಗೆ ತಿಳಿಸುವ ಕಾಯಕವೇ ಟ್ರಸ್ಟ್ ನ ಮೂಲ ಉದ್ದೇಶವಾಗಿದೆ. ಕುಸಿದು ಬೀಳುವ ಹಂತದಲ್ಲಿರುವ ಮನೆಯನ್ನು ಸಂರಕ್ಷಣೆಗಾಗಿಯೇ ಶತಾಯಗತಾಯ ಪ್ರಯತ್ನಿಸುತ್ತಿದ್ದ ಪ್ರತಿಷ್ಠಾಪನಾ ಟ್ರಸ್ಟ್ ನ ಅಧ್ಯಕ್ಷ ಜಯಣ್ಣ ದುರದೃಷ್ಟವಶಾತ್ ಅವರು ಸಹ ಕೋವಿಡ್ ನಿಂದ ಕಳೆದ ಒಂದು ವರ್ಷದ ಹಿಂದೆ ನಿಧನರಾಗಿದ್ದಾರೆ. ಅವರ ಯೋಜನೆಗಳು ಇನ್ನೂ ಕನಸಾಗಿಯೇ ಉಳಿದುಕೊಂಡಿದೆ.
 
ಪುಟ್ಟಣ್ಣ ಅವರ ಹುಟ್ಟೂರು ಕಣಗಾಲ್ ಆದರೂ ಅವರ ಮನೆ ಬಿಟ್ಟು ಅವರ ಗುರುತಿಗೆ ನೆನೆಪಿಗೆ ಯಾವುದೇ ಕುರುಹುಗಳಿಲ್ಲ ಇದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿತ್ತು. ಇದನ್ನು ಮನಗಂಡ ಗ್ರಾಮಪಂಚಾಯಿತಿ ಪುಟ್ಟಣ್ಣ ಅವರ ಪ್ರತಿಮೆಯನ್ನು ನಿರ್ಮಾಣ ಮಾಡುವಲ್ಲಿ ಯಶಸ್ವಿಯಾಗಿದೆ ಪಂಚಾಯಿತಿಯ ಮುಂಭಾಗ ಪುಟ್ಟಣ್ಣ ಅವರ ಪುತ್ಥಳಿಗಳನ್ನು ಕಂಗೊಳಿಸುತ್ತಿದೆ . ಪುಟ್ಟಣ್ಣ ಕಣಗಾಲ್ ಅವರ ನೆನಪಿಗಾಗಿ ಸ್ಮಾರಕವನ್ನು ಅವರ ಹುಟ್ಟೂರಿನಲ್ಲಿಯೇ ನಿರ್ಮಿಸುವಂತೆ ಪ್ರತಿಷ್ಠಾಪನಾ ಟ್ರಸ್ಟ್ ನ ಪ್ರಮುಖರು ಒತ್ತಾಯಿಸಿದ್ದಾರೆ, ಅಲ್ಲಿ ಅವರು ನಡೆದು ಬಂದ ಹಾದಿಯ ಬಗ್ಗೆ ಬೆಳಕನ್ನು ಚೆಲ್ಲುವ ನಿಟ್ಟಿನಲ್ಲಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲು ಟ್ರಸ್ಟ್ ನ ಮುಖಂಡರು ನಿರ್ಧರಿಸಿದ್ದಾರೆ. ಅಲ್ಲದೆ ಕಣಗಾಲ್ ಗ್ರಾಮದಲ್ಲಿ ಚಿತ್ರಮಂದಿರವನ್ನು ಸ್ಥಾಪಿಸಬೇಕು ಅಲ್ಲಿ ಪುಟ್ಟಣ್ಣ ಅವರ ನಿರ್ದೇಶಿಸಿದ ಚಿತ್ರವನ್ನು ಮಾತ್ರ ಪ್ರದರ್ಶಿಸಲು ಅವಕಾಶ ನೀಡಬೇಕೆಂಬ ಬೇಡಿಕೆಯೂ ಇದೆ.ಅಲ್ಲದೆ ಸುಸಜ್ಜಿತ ಉದ್ಯಾನ ವನವನ್ನು ನಿರ್ಮಿಸಬೇಕು ಆ ಮೂಲಕ ಪ್ರವಾಸೋದ್ಯಮಕ್ಕೂ ಒತ್ತು ಕೊಡಬೇಕೆಂಬ ಆಶಯವು ಗ್ರಾಮದ ಜನರಲ್ಲಿದೆ.


Enjoyed this article? Stay informed by joining our newsletter!

Comments

You must be logged in to post a comment.

Related Articles
About Author