ಜನ ಪ್ರತಿನಿಧಿಗಳೆಂಬ....

Representatives of the people

Featured Image Source : Deccan Herald

ಜನ ಪ್ರತಿನಿಧಿಗಳೆಂಬ ಸಮಾಜ ಸೇವಕರು - ಸಂವಿಧಾನ ರಕ್ಷಕರು - ರೇಸು ಕುದುರೆಗಳು - ಗೋಮುಖ ವ್ಯಾಘ್ರಗಳು.....

 

ಒಂದು ರಾಜ್ಯ ಸಭಾ ಸ್ಥಾನಕ್ಕಾಗಿ ಕೆಲವು ದಿನಗಳಿಂದ 224 ಶಾಸಕರು ಮತ್ತು ಮೂರು ರಾಜಕೀಯ ಪಕ್ಷಗಳು ಮತ್ತು ನಮ್ಮ ಮಾಧ್ಯಮಗಳು ಮಾಡಿದ ಪ್ರಹಸನ ಅವರುಗಳ ಸೇವೆ ಯಾವ ರೀತಿಯದು ಎಂಬುದನ್ನು ಗುರುತಿಸಲು ಒಂದು ಮಾನದಂಡ ಎಂದು ಪರಿಗಣಿಸಬಹುದು.

 

ಮೇಲ್ನೋಟಕ್ಕೆ ಒಂದು ಅಂಕಿಸಂಖ್ಯೆಗಳ ಆಟ ಒಳಗಡೆ ತಂತ್ರ ಕುತಂತ್ರ ಕಚ್ಚಾಟ ದ್ವೇಷ ಅಸೂಯೆಗಳ ರಂಪಾಟ. ಇದಕ್ಕಾಗಿ ಇವರುಗಳು ವಹಿಸಿದ ಶ್ರಮ, ಮಾಡಿದ ಕೆಟ್ಟ ರಾಜಕೀಯ, ಆಡಿದ ಮಾತುಗಳು ಖಂಡಿತ ಅತ್ಯಂತ ಬೇಜವಾಬ್ದಾರಿ ಮತ್ತು ಸ್ವಾರ್ಥದ ಪರಮಾವಧಿ.

 

ಈ ಸಂದರ್ಭದಲ್ಲಿ ನಮಗೆ ನೆನಪಾಗಬೇಕಿರುವುದು......

 

ಮುಂಗಾರು ಮಳೆ ಆರಂಭವಾಗಿದೆ. ಉತ್ತಮ ಮಳೆಯ ನಿರೀಕ್ಷೆ ಹವಾಮಾನ ಇಲಾಖೆಗಳಿಂದ ತಿಳಿದುಬಂದಿದೆ. 

ಈ ಸಮಯದಲ್ಲಿ ಒಬ್ಬ ಸಾಮಾನ್ಯ ನಾಗರೀಕನಾಗಿ ನನ್ನ ಅನಿಸಿಕೆಗಳನ್ನು ನಿಮ್ಮ ಮುಂದಿಡುತ್ತಿದ್ದೇನೆ.

 

ನಾವೆಲ್ಲಾ ನಂಬಿಕೊಂಡಿರುವುದು, ನಾವೇ ನಮಗಾಗಿ ಚುನಾಯಿಸಿ ಕಳುಹಿಸಿದ ಈ ಸರ್ಕಾರಗಳನ್ನು. ಈ ಪರಿಸ್ಥಿತಿಯಲ್ಲಿ ಆಡಳಿತ ಯಂತ್ರ ಎಷ್ಟು ಜವಾಬ್ದಾರಿಯಿಂದ ಕೆಲಸ ಮಾಡಬೇಕು ಯೋಚಿಸಿ.

 

ಮಳೆನೀರಿನ ಸಂಪೂರ್ಣ ಉಪಯೋಗ ಮಾಡಿಕೊಳ್ಳಲು ಸಮರೋಪಾದಿಯ ಯೋಜನೆಗಳು, ಕೃಷಿ ಚಟುವಟಿಕೆಗೆ ಅತ್ಯಂತ ವಾಸ್ತವಿಕ ಮತ್ತು ವೈಜ್ಞಾನಿಕ ಯೋಜನೆಗಳು, ಕೃಷಿ ಮತ್ತು ನೀರಾವರಿ ತಜ್ಞರು, ಅಧಿಕಾರಿಗಳ ಸಂಪೂರ್ಣ ಸದ್ಬಳಕೆ, ಗ್ರಾಮ ಮಟ್ಟದಿಂದ ನಗರದ ಗ್ರಾಹಕರವರೆಗೆ ಅತ್ಯಂತ ವ್ಯವಸ್ಥಿತ ಮತ್ತು ಸುಲಭ ಮಾರುಕಟ್ಟೆ, ಬೆಲೆ ನಿಗದಿ, ಮನುಷ್ಯನ ದಿನನಿತ್ಯದ ಅತ್ಯಂತ ಅವಶ್ಯಕವಾದ ಆಹಾರದ ಸದುಪಯೋಗ, ಅದರ ಗರಿಷ್ಠ ಲಾಭ ಬೆಳೆದವರಿಗೆ ಸಿಗುವಂತೆ ಮಾಡುವುದು ಆಡಳಿತದ ಬಹುದೊಡ್ಡ ಜವಾಬ್ದಾರಿ ಅಲ್ಲವೇ  ? 

 

ಅವಶ್ಯವಿರುವ ಕಡೆ ಹೊಸ ಕೆರೆ ಕಟ್ಟೆಗಳ ನಿರ್ಮಾಣ, ಮಳೆನೀರು ಸಂಗ್ರಹ, ಬಿತ್ತನೆ ಮತ್ತು ಅದರ ಬೆಳವಣಿಗೆ ಬಗ್ಗೆ ನಿರಂತರ ಮಾಹಿತಿ ಸಂಗ್ರಹ ಮತ್ತು ರಾಜ್ಯಾದ್ಯಂತ ಆ ಮಾಹಿತಿಯ ವಿನಿಮಯ, ಬೇಡಿಕೆ ಮತ್ತು ಪೂರೈಕೆಗಳ ನಡುವೆ ಸಮನ್ವಯತೆ ಸಾಧಿಸಿದರೆ ನಿಶ್ಚಯವಾಗಿ ರೈತರ ಜೀವನಮಟ್ಟ ಸುಧಾರಿಸುತ್ತದೆ ಮತ್ತು ಆ ಮುಖಾಂತರ ಪರೋಕ್ಷವಾಗಿ ರಾಜ್ಯ ಮತ್ತು ದೇಶ ಸಹಜವಾಗಿಯೇ ಇತರ ಕ್ಷೇತ್ರಗಳಲ್ಲಿಯೂ ಅಭಿವೃದ್ಧಿ ಹೊಂದುತ್ತದೆ. ಇದಕ್ಕೆ ಯಾವುದೇ ಮಾಟ ಮಂತ್ರ, ದೇಶಭಕ್ತಿ, ಹೋಮ, ಅತಿಮಾನುಷ ಶಕ್ತಿಯ ಅವಶ್ಯಕತೆ ಇಲ್ಲ.

           

ಆದರೆ ಸರ್ಕಾರಗಳು ಮಾಡುತ್ತಿರುವುದೇನು? ಅಷ್ಟೇನೂ ಪ್ರಾಮುಖ್ಯವಲ್ಲದ, ಒಂದೇ ಬಾರಿ ಮಾಡಿ ಮುಗಿಸಬಹುದಾದ ಚುನಾವಣೆಗಳನ್ನು ಮತ್ತೆ ಮತ್ತೆ ನಿರಂತರವಾಗಿ ನಡೆಸುತ್ತಾ ಸಮಯ ವ್ಯರ್ಥಮಾಡುವುದು, ಸಂಪುಟ ಪುನರ್ರಚನೆಯ ಸರ್ಕಸ್, ಅಸಹ್ಯ ಜಾಹೀರಾತುಗಳ ಒಣ ಪ್ರದರ್ಶನ ಮತ್ತು ದುಂದು ವೆಚ್ಚ, ರಾಜ್ಯ ನಂಬರ್‌ ಒನ್, ರಾಷ್ಟ್ರ ವಿಶ್ವಗುರು ಎಂಬ ಭ್ರಮೆಗೆ ಜನರನ್ನು ತಳ್ಳುವುದು, ಅದನ್ನು ಮಾಧ್ಯಮಗಳು ವಿವೇಚನೆ, ನಾಚಿಕೆಯಿಲ್ಲದೆ ಪ್ರಸಾರ ಮಾಡುವುದು, ಮುಂದೆ ಯಾವಾಗಲೋ ಬರುವ ಚುನಾವಣೆಗಾಗಿ ಈಗಿನಿಂದಲೇ ಸಿದ್ಧತೆ.

         

ಛೆ, ರೈತರು ಆತ್ಮಹತ್ಯೆ ಮಾಡಿಕೊಂಡಾಗ, ಬರ ಬಂದಾಗ, ಪ್ರಾಕೃತಿಕ ವಿಕೋಪಗಳಾದಾಗ ಕೂಗುಮಾರಿಗಳಾಗುವ ಇವರು ಈಗ ಸಮೃಧ್ಧ ಮಳೆ ಬರುವಾಗ ಅದರ ಪ್ರಯೋಜನ ಪಡೆಯಲು ಮುಂದಾಗುತ್ತಿಲ್ಲ. ಹಾಗಾದರೆ ಇವರಿಗೆ ಬೇಕಾಗಿರುವುದು ನೆಮ್ಮದಿಯಲ್ಲ. ಬದಲಾಗಿ ಕಷ್ಟಗಳ, ದುರಂತಗಳ ವಿಜೃಂಭಣೆ, ಮಾತಿಗೊಮ್ಮೆ ಟೀಕೆ, ಕೆಲಸಕ್ಕೆ ಬಾರದ ವಿಷಯಗಳ ಚರ್ಚೆ ಅಷ್ಟೆ.

 

ಆ ಮುಖಾಂತರ ಇವರು ಲಾಭ ಮಾಡಿಕೊಳ್ಳುವುದು. ಸಮಸ್ಯೆಗಳೇ ಇವರ ಹೊಟ್ಟೆಪಾಡು. ಪರಿಹಾರಕ್ಕೆ ದಾರಿ ಇದ್ದಾಗ ನಿರ್ಲಕ್ಷಿಸುವುದು ಮತ್ತು ಕಣ್ಣುಮುಚ್ಚಿಕೊಳ್ಳುವುದು. ನಿಜಕ್ಕೂ ಇದೊಂದು ದುರಂತ.

                

ಸಮಸ್ಯೆ ಅರ್ಥಮಾಡಿಕೊಂಡು ಅದಕ್ಕೆ ಪರಿಹಾರ ಸಿಗುವ ಎಲ್ಲಾ ಸಾಧ್ಯತೆಗಳಿದ್ದರೂ ಮಾಡದೆ ಸತ್ತಾಗ ಅವರ ಮನೆಗೆ ಹೋಗಿ ಬಾಯಿಬಡಿದುಕೊಂಡರೆ ಜೀವ ವಾಪಸ್ಸು ಬರುತ್ತದೆಯೇ. ಯಾವ ರಾಜಕೀಯಕ್ಕೂ ಸೇರದ ಕೇವಲ ಜನರ ಹಿತಬಯಸುವ ಸಾಮಾನ್ಯರೆಲ್ಲರೂ ಈ ನಾಟಕಕ್ಕೆ ತೆರೆ ಎಳೆಯಬೇಕಿದೆ. ಇಲ್ಲದಿದ್ದರೆ ಭೀಕರ ದಿನಗಳು ಮುಂದಿವೆ.

ಬನ್ನಿ ಒಗ್ಗಟ್ಟಾಗೋಣ.

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author