ರಷ್ಯಾ - ಉಕ್ರೇನ್ ಯುದ್ಧ....

ಮತ್ತೊಮ್ಮೆ ಭುಗಿಲೆದ್ದ ಶೀತಲ ಸಮರ....

 

ಕ್ರೇನ್ ವಿವಾದ ಮತ್ತೊಂದು ಯುದ್ದಕ್ಕೆ ಕಾರಣವಾಗಬಹುದೇ.....

 

ಯುದ್ಧ ಬೇಡ ಶಾಂತಿ ಬೇಕು ಅಭಿಯಾನ.......

 

ಜಾಗತಿಕವಾಗಿ ರಷ್ಯಾ ಮತ್ತು ಅಮೆರಿಕ ನೇತೃತ್ವದ ನ್ಯಾಟೋ ಪಡೆಗಳ ಚಟುವಟಿಕೆಗಳನ್ನು ಗಮನಿಸಿದರೆ ಯಾವುದೇ ಕ್ಷಣದಲ್ಲಿ ಆಕ್ರಮಣ - ಪ್ರತಿಯಾಕ್ರಮಣ ನಡೆಯುವ ಸಾಧ್ಯತೆ ಇದೆ ಎಂಬ ಅನುಮಾನ ಬಲವಾಗುತ್ತಿದೆ.....

 

ವ್ಯಕ್ತಿಗತವಾಗಿರಲಿ, ಕುಟುಂಬಗಳ ನಡುವೆ ಇರಲಿ, ಸಮುದಾಯಗಳ ನಡುವೆಯೇ ಆಗಿರಲಿ, ಧರ್ಮ ದೇಶಗಳ ನಡುವೆಯೇ ಆಗಿರಲಿ ಘರ್ಷಣೆಗೆ ಹಲವಾರು ಕಾರಣಗಳು ಇರುತ್ತವೆ. ಆದರೆ ಕಾರಣಗಳು ಮೀರಿ ಆಗಬೇಕಿರುವುದು ಶಾಂತಿ ಮಾತ್ರ......

 

USSR ಮಿಖೈಲ್ ಗೋರ್ಬಚೇವ್ ಸಮಯದಲ್ಲಿ ವಿವಿಧ ದೇಶಗಳಾಗಿ ವಿಭಜನೆ ಆದ ನಂತರ ರಷ್ಯಾ ಮತ್ತು ಉಕ್ರೇನ್ ಎರಡು ಬಲಿಷ್ಠ ಶಕ್ತಿಗಳಾಗಿ ಹೊರಹೊಮ್ಮಿದವು ಮತ್ತು ಶತ್ರುಗಳಾಗಿ ಮಾರ್ಪಟ್ಟವು. 

 

ಎರಡನೆಯ ಮಹಾಯುದ್ಧದ ನಂತರ ಅಮೆರಿಕ ಮತ್ತು ರಷ್ಯಾದ ಶೀತಲ ಸಮರದ ಮುಂದುವರಿದ ಭಾಗವಾಗಿ ಉಕ್ರೇನ್ ನ್ಯಾಟೋ ಪಡೆ ಸೇರಿತು.

 

ಇದೀಗ ಆ ಘರ್ಷಣೆ ಉತ್ತುಂಗ ಸ್ಥಿತಿ ತಲುಪಿ ಹೆಚ್ಚು ಕಡಿಮೆ ರಷ್ಯಾ ಉಕ್ರೇನ್ ಮೇಲೆ ಆಕ್ರಮಣ ಮಾಡುವ ಸಿದ್ದತೆಯಲ್ಲಿದ್ದರೆ ನ್ಯಾಟೋ ಪಡೆ ಅದನ್ನು ಎದುರಿಸಲು ಮತ್ತೊಂದು ಕಡೆ ಸಿದ್ದವಾಗಿದೆ. 

 

ಅಂತರಾಷ್ಟ್ರೀಯವಾಗಿ ವಿಶ್ವದ ಮೇಲೆ ಈ ಕ್ಷಣದಲ್ಲಿ ಯುದ್ಧದ ಕಾರ್ಮೋಡ ಕವಿದಿದೆ.....

 

ಎಂತಹ ದುರಂತ, ಎಂತಹ ಅಜ್ಞಾನ, ಎಂತಹ ಮೂರ್ಖತನ, ಎಂತಹ ಕ್ರೌರ್ಯ.... ಛೇ ಛೇ.....

 

ಎರಡು ವರ್ಷಗಳಿಂದ ಕೋವಿಡ್ ಎಂಬ ವೈರಸ್  ಮಾಡುತ್ತಿರುವ ದಾಳಿ ಮನುಷ್ಯ ಜನಾಂಗವನ್ನೇ ಆತಂಕಕ್ಕೆ ದೂಡಿ ಜೀವನೋತ್ಸಾಹವನ್ನೇ ಕುಗ್ಗಿಸಿ ಬದುಕಿನ ನಶ್ವರತೆಯ ಬಗ್ಗೆ ಸಾಮಾನ್ಯ ಜನ ಮಾತನಾಡುತ್ತಿರುವಾಗ ಜನಜೀವನವನ್ನು ಮತ್ತೊಂದು ಹಂತಕ್ಕೆ ಮುನ್ನಡೆಸಲು ಬೇಕಾದ ಸಿದ್ದತೆ ಮಾಡಿಕೊಳ್ಳಬೇಕಾದ ಸನ್ನಿವೇಶದಲ್ಲಿ ಯುದ್ದದ ಕಾರ್ಮೋಡ ಸೃಷ್ಟಿ ಮಾಡುವುದು ದುರಹಂಕಾರದ ಪರಮಾವಧಿ.

 

ಇಲ್ಲಿ ಸರಿ ಯಾರದು ತಪ್ಪು ಯಾರದು ಎಂಬುದು ಪ್ರಶ್ನೆಯಲ್ಲ. ಮನು ಕುಲವನ್ನು ಮತ್ತಷ್ಟು ವಿನಾಶದ ಅಂಚಿಗೆ ತಳ್ಳುತ್ತಿರುವ ದುಷ್ಟ ಶಕ್ತಿಗಳ ಬಗ್ಗೆ ಸಾಮಾನ್ಯ ಜನ ಜಾಗೃತವಾಗುವ ಸಮಯ ಬಂದಿದೆ.

 

ಏಕೆಂದರೆ ಇದು ಆಧುನಿಕ ಕಾಲ. ಅಮೆರಿಕ ಮತ್ತು ರಷ್ಯಾದ ಬಳಿ ಇಡೀ ವಿಶ್ವವನ್ನೇ ನಾಶ ಮಾಡಬಹುದಾದಷ್ಟು ಅಣು ಬಾಂಬುಗಳಿವೆ. ಇದು ನಮಗೆ ಸಂಬಂಧಿಸಿದ ವಿಷಯವಲ್ಲ ಎಂದು ತಟಸ್ಥವಾಗಿರಲು ಸಾಧ್ಯವಿಲ್ಲ. ಚೀನಾದಲ್ಲಿ ಆರಂಭವಾದ ಒಂದು ಕೊರೋನಾ ವೈರಸ್ ಇಡೀ ಮನುಷ್ಯ ಜನಾಂಗವನ್ನೇ ಅಲುಗಾಡಿಸಿತು. ಹಾಗೆಯೇ ‌ಈ ಯುದ್ಧ ನಮ್ಮನ್ನೂ ಕಾಡದೆ ಇರದು.

 

ಜೊತೆಗೆ ಯುದ್ಧ ಎಲ್ಲೇ ಆಗಲಿ‌ ಅಸಂಖ್ಯಾತ ಸಾವು ನೋವುಗಳಿಗೆ ನಾವು ಸಾಕ್ಷಿಯಾಗಬೇಕಾಗುತ್ತದೆ. ಇಷ್ಟೊಂದು ತಿಳಿವಳಿಕೆಯ ನಾವು ಈ ಸಂಕಷ್ಟಗಳಿಗೆ ಪ್ರತಿಕ್ರಿಯೆ ನೀಡದಿದ್ದರೆ ನಮ್ಮ ಅರಿವು ವ್ಯರ್ಥ ಎಂದೇ ಅರ್ಥ.

 

ಒಂದು ವೇಳೆ ಯುದ್ಧ ನಡೆದದ್ದೇ ಆದರೆ ಜೀಸಸ್ ಪೈಗಂಬರ್ ರಾಮ ಹಾಗೆಯೇ ಹಿಂದೂ ಕ್ರಿಶ್ಚಿಯನ್ ಮುಸ್ಲಿಂ ಧರ್ಮಗಳಿಗೆ ಅದರ ಆರಾಧಕರಿಗೆ ಅರ್ಥವೇ ಇರುವುದಿಲ್ಲ. ಯುದ್ಧದ ಘನಘೋರ ಹಿಂಸೆ ತಡೆಯಲಾಗದ ದೇವರು ಥರ್ಮಗಳಿಂದ ಪ್ರಯೋಜನವೇನು..........

 

ಇದೀಗ ಭಾರತ ಸೇರಿ ಅಲಿಪ್ತ ರಾಷ್ಟ್ರಗಳ ಜವಾಬ್ದಾರಿ ಮತ್ತೊಮ್ಮೆ ಮುನ್ನಲೆಗೆ ಬಂದಿದೆ. ಏಕೆಂದರೆ ಜಾಗತೀಕರಣದ ನಂತರ ಅನೇಕ ದೇಶಗಳು ಸ್ವಾರ್ಥದ ಪರಿಧಿಯೊಳಗೆ ಸೇರಿ ಯಾವುದೇ ಯುದ್ಧ ಗಲಭೆ ಅಥವಾ ಭಯೋತ್ಪಾದನೆ ನಡೆದಾಗ ಅದನ್ನು ‌ತಡೆಯಲು ಪ್ರಯತ್ನಿಸುವುದು ಬಿಟ್ಟು ಅದರಿಂದ ತನಗೆ ಎಷ್ಟು ಲಾಭ ಎಂದು ಯೋಚಿಸುವುದೇ ಹೆಚ್ಚಾಗಿದೆ. ತನ್ನ ವ್ಯಾಪಾರ ಹೇಗೆ ವಿಸ್ತರಿಸುವುದು, ತನ್ನ ಶಸ್ತ್ರಾಸ್ತ್ರಗಳನ್ನು ಹೇಗೆ ಮಾರಾಟ ಮಾಡುವುದು ಎಂಬುದೇ ಅವುಗಳ ಆದ್ಯತೆಯಾಗಿದೆ. ಇದು ತನ್ನನ್ನೇ ಸುಡುತ್ತದೆ ಎಂಬುದನ್ನು ಮರೆಯಲಾಗುತ್ತಿದೆ.

 

ಕೆಲವು ಶ್ರೀಮಂತ ರಾಷ್ಟ್ರಗಳ ತೆವಲಿಗೆ ಲಕ್ಷಾಂತರ ಜನರ ಮಾರಣಹೋಮ ಅಕ್ಷಮ್ಯ ಅಪರಾಧವಾಗುತ್ತದೆ. ಅಲ್ಲದೆ ಮತ್ತೊಮ್ಮೆ ವಿಮಾನ ಯಾನ ಸೇರಿ ದೀರ್ಘಕಾಲದ ಲಾಕ್  ಡೌನ್ ಗೆ ನಾವೆಲ್ಲರೂ ಸಿದ್ದರಾಗಬೇಕಾಗುತ್ತದೆ. ಅದನ್ನು ತಪ್ಪಿಸಲು ಇರುವ ಬಹುಮುಖ್ಯ ಮಾರ್ಗ ಎಂದರೆ ವಿಶ್ವದಾದ್ಯಂತ ಸಾಮಾನ್ಯ ಜನ ಸಮೂಹ ಸಾಮಾಜಿಕ ಜಾಲತಾಣಗಳ ಮೂಲಕ ಶಾಂತಿಯ ಪರವಾಗಿ ಬಹುದೊಡ್ಡ ಧ್ವನಿ ಎತ್ತಬೇಕಿದೆ. 

 

ನಮ್ಮ ಜೀವ ಮತ್ತು ಜೀವನದ ಉಳಿವಿಗಾಗಿ ಮಾನವ ಜನಾಂಗದ ಅಸ್ತಿತ್ವವದ ಉಳಿವಿಗಾಗಿ ನಾವೆಲ್ಲರೂ ಈ ಆಧುನಿಕ ತಂತ್ರಜ್ಞಾನವನ್ನು ಅತ್ಯಂತ ಒಳ್ಳೆಯ ಮತ್ತು ಪರಿಣಾಮಕಾರಿ ಉದ್ದೇಶಕ್ಕಾಗಿ ಒಕ್ಕೊರಲಿನಿಂದ ದ್ವನಿ ಮೊಳಗಿಸಬೇಕಿದೆ.

 

ದಯವಿಟ್ಟು ಎಲ್ಲಾ ಒತ್ತಡಗಳ ನಡುವೆ ಯುದ್ಧ ಬೇಡ ಶಾಂತಿ ಬೇಕು ಎಂಬ ಅಭಿಯಾನ ಅಂತರಾಷ್ಟ್ರೀಯ ಮಟ್ಟದಲ್ಲಿ ಜಾಗೃತ ಮೂಡುವ ಪ್ರಯತ್ನ ಭಾರತದಿಂದಲೇ ಆರಂಭವಾಗಲಿ ಎಂದು ಆಶಿಸುತ್ತಾ........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ ಹೆಚ್.ಕೆ.

9844013068....

Enjoyed this article? Stay informed by joining our newsletter!

Comments

You must be logged in to post a comment.

Related Articles
About Author