ಸಲ್ಮಾನ್ ರಶ್ದಿ ಮತ್ತು ಜವಹರಲಾಲ್ ನೆಹರು..

Salman Rushdie and Jawaharlal Nehru

Feature Image Source : Moneycontrol

ಸಲ್ಮಾನ್ ರಶ್ದಿ ಮೇಲಿನ ಹಲ್ಲೆ 

ಮತ್ತು 

ಜವಹರಲಾಲ್ ನೆಹರು ಅವರಿಗೆ ಮಾಡಿದ ಅವಮಾನ.....

 

ಎರಡೂ ಹಿಂಸಾ ರೂಪದ ವಿಕೃತಗಳು.......

 

" ದ ಸಟಾನಿಕ್ ವರ್ಸಸ್ " ಎಂಬ ಪುಸ್ತಕದ ಬರಹಗಾರ ಭಾರತೀಯ ಮೂಲದ ಸಲ್ಮಾನ್ ರಶ್ದಿ ಅವರ ಮೇಲಿನ ಫತ್ವಾ ಸುಮಾರು 40 ವರ್ಷಗಳ ನಂತರವೂ ತನ್ನ ಕೆಲಸ ಮಾಡಿದೆ. ಅವರ ಮೇಲೆ ನಡೆದ ಮಾರಣಾಂತಿಕ ಹಲ್ಲೆಯನ್ನು ವಿಶ್ವದ ಎಲ್ಲಾ ಶಾಂತಿ ಪ್ರಿಯ ಮನಸ್ಸುಗಳು ಒಕ್ಕೊರಲಿನಿಂದ ಬಹಿರಂಗವಾಗಿ ಖಂಡಿಸಬೇಕು ಮತ್ತು ಸಾಧ್ಯವಾದಷ್ಟು ತಮ್ಮ ಮಿತಿಯಲ್ಲಿ ಪ್ರತಿಭಟಿಸಬೇಕು. ಅದಕ್ಕೆ ಒಂದು ವಿರೋಧವನ್ನು ದಾಖಲಿಸಬೇಕು.....

 

ಒಬ್ಬ ವ್ಯಕ್ತಿಯ ಅಭಿಪ್ರಾಯಗಳು  ಒಂದು ಧರ್ಮದ ಬೇರುಗಳನ್ನೇ ಅಲುಗಾಡಿಸುತ್ತವೆ ಎಂಬುದನ್ನು ನಂಬಲು ಸಾಧ್ಯವಿಲ್ಲ. ಧರ್ಮದ ಬೇರುಗಳು ಗಟ್ಟಿಯಾಗಿದ್ದರೆ ಯಾರ ಯಾವ ಟೀಕೆಗಳಿಗು ಹೆದರಬೇಕಿಲ್ಲ. ಇದನ್ನು ಎಲ್ಲಾ ‌ಧರ್ಮದ ಅನುಯಾಯಿಗಳು ನೆನಪಿನಲ್ಲಿಟ್ಟುಕೊಳ್ಳಬೇಕು.

 

ಭಾರತದಲ್ಲಿ ಸಹ ಧಾರ್ಮಿಕ ಅಸತ್ಯಗಳನ್ನು ವಿಮರ್ಶಿಸಿದಾಗ ಈ‌ ರೀತಿಯ ಹತ್ಯೆಗಳು‌ ಅಥವಾ ಪ್ರಯತ್ನಗಳು ಎಲ್ಲಾ ಧರ್ಮದ ‌ಧಾರ್ಮಿಕ ಮೂಲಭೂತವಾದಿಗಳಿಂದ ನಡೆಯುತ್ತಿವೆ.

 

ಈ ರೀತಿಯ ‌ಹಿಂಸೆಗಳು‌ ಆಯಾ ಧರ್ಮದಲ್ಲಿ ‌ಕಪ್ಪು ಚುಕ್ಕೆಗಳಾಗಿ ಉಳಿಯುತ್ತದೆ. ಇದು ಎಲ್ಲಾ ‌ಧರ್ಮಗಳಿಗು‌ ಸಮನಾಗಿ ಅನ್ವಯ. ಮಾನವ ಧರ್ಮದಲ್ಲಿ ಹಿಂಸೆಗೆ ಎಲ್ಲಿಯೂ ಅವಕಾಶ ಇರಬಾರದು. ಅಭಿವ್ಯಕ್ತಿ ಸ್ವಾತಂತ್ರ್ಯಕ್ಕೆ ಎಂದಿಗೂ ಯಾರಿಂದಲೂ ಧಕ್ಕೆ ಬರಬಾರದು. 

 

ಒಬ್ಬ ವ್ಯಕ್ತಿ ತನ್ನ ‌ಅಭಿಪ್ರಾಯ ಹೇಳಿಕೊಳ್ಳಲಿ ಬಿಡಿ. ಇಷ್ಟವಾದರೆ ಒಪ್ಪಿ, ಇಲ್ಲ ನಿರ್ಲಕ್ಷಿಸಿ ಅಥವಾ ತಿರಸ್ಕರಿಸಿ. ಆದರೆ ಆ ವ್ಯಕ್ತಿಯನ್ನು ಕೊಲ್ಲುವುದು ಯಾವುದೇ ‌ಧರ್ಮಕ್ಕೆ ಮಾಡುವ‌ ಅತಿದೊಡ್ಡ ಅಪಚಾರ......

 

ಹಾಗೆಯೇ ಕರ್ನಾಟಕ ಸರ್ಕಾರ ಸ್ವಾತಂತ್ರ್ಯದ ಅಮೃತ ಮಹೋತ್ಸವದ ಅಂಗವಾಗಿ ನೀಡಿದ ಸ್ವಾತಂತ್ರ್ಯ ಹೋರಾಟಗಾರರ ಪಟ್ಟಿಯಲ್ಲಿ ಆಧುನಿಕ ಭಾರತದ ಮೊದಲ ಪ್ರಧಾನಿಯಾಗಿ ಅದರ ಅಭಿವೃದ್ಧಿಗೆ ಅಡಿಪಾಯ ಹಾಕಿದ ಜವಹರಲಾಲ್ ನೆಹರು ಅವರನ್ನು ‌ಬಹಿರಂಗವಾಗಿ ತಿರಸ್ಕರಿಸಿ ಅವರ ಛಾಯಾಚಿತ್ರ ಜಾಹೀರಾತಿನಲ್ಲಿ ಪ್ರಕಟಿಸದಿರುವುದು ಸಹ ಅಸಹಿಷ್ಣುತೆಯ ಪರಮಾವಧಿ ಮತ್ತು ವಿಭಜಕ ಮನೋಭಾವದ ಪ್ರತಿಬಿಂಬ.

 

ರಾಜಕೀಯ ಮತ್ತು ಸೈದ್ಧಾಂತಿಕ ಭಿನ್ನಾಭಿಪ್ರಾಯ ಏನೇ ಇರಲಿ ದೇಶದ ಒಟ್ಟು ಹಿತಾಸಕ್ತಿಯ ದೃಷ್ಟಿಯಿಂದ ಕೆಲವು ಮಾನದಂಡಗಳನ್ನು ಅನುಸರಿಸಲೇಬೇಕು. ಇಲ್ಲದಿದ್ದರೆ ‌ಅದರಿಂದಾಗಿ ಗಂಭೀರವಾದ ದುಷ್ಪರಿಣಾಮ ಬೀರುತ್ತದೆ. ಅದರ ಅರಿವು‌ ಆಡಳಿತದ ಮುಖ್ಯಸ್ಥರಿಗೆ ಇರಬೇಕು. ದೇಶ ಅಥವಾ ರಾಜ್ಯ ಯಾವುದೇ ವ್ಯಕ್ತಿಯ ಅಥವಾ ಪಕ್ಷದ ಅಥವಾ ಧರ್ಮದ ಅಥವಾ ಸಂಪೂರ್ಣ ಸಿದ್ದಾಂತದ ಖಾಸಗಿ ಆಸ್ತಿಯಲ್ಲ. ಅವರವರ ಅನುಕೂಲಕ್ಕೆ ತಕ್ಕಂತೆ ಆಡಳಿತ ನಡೆಸಲು. 

 

ಇತಿಹಾಸ ನಿಮಗೆ ಇಷ್ಟವಾಗದೆ ಇರಬಹುದು ಅಥವಾ ನೆಹರು ಅವರ ಆಡಳಿತ ಶೈಲಿಯ ಬಗ್ಗೆ ನಿಮಗೆ ವಿರೋಧ ಇರಬಹುದು. ಆ ಸ್ವಾತಂತ್ರ್ಯ ನಿಮಗಿದೆ. ಆದರೆ ಇತಿಹಾಸವನ್ನು ತಿರುಚಬಾರದು ಅಥವಾ ಅಳಿಸಬಾರದು. 

 

ಸ್ವಾತಂತ್ರ್ಯ ನಂತರ ಸುಮಾರು 16 ವರ್ಷಗಳಿಗೂ ಹೆಚ್ಚು ಈ ದೇಶವನ್ನು ಮುನ್ನಡೆಸಿದ ಮತ್ತು ಅದಕ್ಕೂ ಮೊದಲು ಸ್ವಾತಂತ್ರ್ಯ ಹೋರಾಟದಲ್ಲಿ ಅತ್ಯಂತ ಪ್ರಮುಖ ಪಾತ್ರ ವಹಿಸಿದ ವ್ಯಕ್ತಿಯನ್ನು ರಾಜಕೀಯ ಕಾರಣಗಳಿಗಾಗಿ ಅಮೃತ ಮಹೋತ್ಸವದ ಪ್ರಚಾರದಲ್ಲಿ ಕೈಬಿಡುವ ದ್ವೇಷ ಮತ್ತು ಅಸೂಯೆಯ ಮನಸ್ಥಿತಿ ಒಳ್ಳೆಯದಲ್ಲ.

 

ರಶ್ದಿ ಮೇಲಿನ ನೇರವಾದ ಹಲ್ಲೆ ಮತ್ತು ನೆಹರು ಮೇಲಿನ ಪರೋಕ್ಷ ಹಲ್ಲೆ ಎಲ್ಲವೂ ಮೂಲಭೂತವಾದಿತನದ ಅಸಹ್ಯಕರ ಪ್ರದರ್ಶನ. ಹೆದರಿಕೆಯ ಹೇಡಿತನದ ಕೃತ್ಯ.

 

ದಯವಿಟ್ಟು ಮುಂದಿನ ದಿನಗಳಲ್ಲಿ ನಾವೆಲ್ಲರೂ ಹೆಚ್ಚು ವಿವೇಚನೆಯಿಂದ ವರ್ತಿಸೋಣ.....

******************************************

 

ನಿನ್ನೆ 15/8/2022 ಸೋಮವಾರ ಸ್ವಾತಂತ್ರ್ಯ ಅಮೃತ ಮಹೋತ್ಸವದ ಅಂಗವಾಗಿ ಬೆಂಗಳೂರಿನ ಪ್ರಥಮ ಅಂತರಾಷ್ಟ್ರೀಯ ಶಾಲೆಯ ಧ್ವಜಾರೋಹಣ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ‌ ಅಲ್ಲಿನ ಮಕ್ಕಳ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ವೀಕ್ಷಿಸಿ ಅವರೊಂದಿಗೆ ಒಂದು ಆತ್ಮೀಯ ಸಂವಾದ ಮಾಡಿ ಭವಿಷ್ಯದ ಕನಸುಗಳ ಬೀಜವನ್ನು ಅವರಲ್ಲಿ ನೆಡುವ ಪ್ರಯತ್ನ ಮಾಡಲಾಯಿತು.......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author