ಸಂಕಲ್ಪಗಳೆಂಬ ಬದುಕಿನ ನಿಲ್ದಾಣಗಳು...

Stations of life as resolutions

Featured Image Source : Hinduism Weebly

ಸಂಕಲ್ಪಗಳ ಪುನರ್ ಅವಲೋಕನ...

 

2022 ರಲ್ಲಿ ಈಗಾಗಲೇ ‌5 ತಿಂಗಳು ಕಳೆದಿದೆ. ..........

 

ಹೊಸ ವರ್ಷದ ಪ್ರಾರಂಭದಲ್ಲಿ ನಾವುಗಳು ಅನೇಕ ರೀತಿಯ ಸಂಕಲ್ಪಗಳನ್ನು ಮಾಡಿಕೊಂಡಿರುತ್ತೇವೆ.

 

ಕೆಲವರು ಧೂಮಪಾನ ಮದ್ಯಪಾನ ಬಿಡುವುದು, 

ಕೆಲವರು ತಮ್ಮಲ್ಲಿರುವ ಕೋಪ ಕಡಿಮೆ ಮಾಡಿಕೊಳ್ಳುವುದು, 

ಮತ್ತೆ ಕೆಲವರು ಯೋಗ ಧ್ಯಾನ ವಾಕಿಂಗ್ ವ್ಯಾಯಾಮ ಮಾಡುವುದು, 

ಇನ್ನೂ ಕೆಲವರು ಬೇಗ ಮಲಗಿ ಬೇಗ ಏಳುವುದು, 

ಹಲವರು ಆಹಾರದಲ್ಲಿ ಡಯಟ್ ಪಾಲಿಸುವುದು, 

ಇನ್ನೊಂದಿಷ್ಟು ಜನ ತಮ್ಮ ಪೋಷಕರನ್ನು ತುಂಬಾ ಜವಾಬ್ದಾರಿಯಿಂದ ನೋಡಿಕೊಳ್ಳುವುದು,

 ಒಂದಷ್ಟು ಜನ ಓದುವುದು ಬರೆಯುವುದು, 

ಕೆಲವರು ಪ್ರವಾಸ ಹೋಗುವುದು.........

ಹೀಗೆ ಹಲವಾರು ವಿಭಿನ್ನ ವಿಶಿಷ್ಟ ಸಂಕಲ್ಪಗಳನ್ನು ಕೈಗೊಂಡಿರುತ್ತಾರೆ.

 

ಇದೀಗ ಅದರ ಪುನರ್ ಚಿಂತನೆ ಅಥವಾ ಮೌಲ್ಯಮಾಪನ ಅಥವಾ ಅದರ ಪ್ರಾಯೋಗಿಕ ಯಶಸ್ಸಿನ ಬಗ್ಗೆ ಆತ್ಮಾವಲೋಕನ ಮಾಡಿಕೊಳ್ಳುವ ಸಮಯ. ಸಂಕಲ್ಪಗಳನ್ನು ಯಶಸ್ವಿಯಾಗಿ ಅನುಸರಿಸುತ್ತಿದ್ದರೆ ತುಂಬಾ ಸಂತೋಷ. ಮುಂದುವರಿಸಿ.

 

ಆದರೆ, 

ಅದರಂತೆ ನಡೆದುಕೊಳ್ಳಲು ಆಗದಿದ್ದವರು ಮತ್ತೆ ಅದನ್ನು ಇಂದಿನಿಂದಲೇ ಪ್ರಾರಂಭಿಸಲು ಆರಂಭಿಸಿ.

ನಿಮ್ಮ ಮನಸ್ಸಿನ ಬ್ಯಾಟರಿಯನ್ನು ನೀವೇ ನಿಮ್ಮ ವಿಲ್ ಪವರ್ ಉಪಯೋಗಿಸಿ ಚಾರ್ಜ್ ಮಾಡಿಕೊಳ್ಳಿ. ಅದಕ್ಕಾಗಿ ಬೇರೆಯವರ ಸಹಾಯ ನಿರೀಕ್ಷಿಸಬೇಡಿ. ನೆಪಗಳನ್ನು ಹುಡುಕಬೇಡಿ. ವಿಧಿಯನ್ನು - ಪರಿಸ್ಥಿತಿಯನ್ನು ಶಪಿಸುತ್ತಾ ಕಾಲ ದೂಡಬೇಡಿ. 

 

ನಮ್ಮ ಸಂಕಲ್ಪಗಳು ಮತ್ತೆ ಮತ್ತೆ ವಿಫಲವಾಗುವುದನ್ನು ಬದುಕಿನ ಪಾಠಶಾಲೆಯ ಅನುಭವಗಳು ಎಂದೇ ಪರಿಗಣಿಸಿ. ಅದನ್ನು ನೆನೆದು ಒಮ್ಮೆ ನಿಮ್ಮೊಳಗೆ ನಕ್ಕು ಬಿಡಿ. ಮರು ಕ್ಷಣವೇ ಸವಾಲಾಗಿ ಸ್ವೀಕರಿಸಿ ಪುನಃ ಮೊದಲಿನಿಂದ ಪ್ರಾರಂಭಿಸಿ. ಎಷ್ಟೇ ಬಾರಿ ವಿಫಲವಾದರೂ ಮತ್ತೆ ಮತ್ತೆ ಪ್ರಯತ್ನಿಸಿ.

 

ಸೋಲೆಂಬುದು ಒಂದು ಪರಿಣಾಮ ಅಷ್ಟೆ. ಅದೇ ಅಂತಿಮವಲ್ಲ. ಆದರೆ ಪ್ರಯತ್ನ ನಿಲ್ಲಿಸಿದರೆ ಅದು ಸೋಲಲ್ಲ ಸಾವು.

 

ಆಧುನಿಕ ಕಾಲದಲ್ಲಿ ಬದುಕು ವೇಗವಾಗಿ - ಸ್ಪರ್ಧಾತ್ಮಕವಾಗಿ - ತಾಂತ್ರಿಕವಾಗಿ - ಸಂಕೀರ್ಣವಾಗಿ ಸಾಗುತ್ತಿರುತ್ತದೆ. ಅದರಿಂದಾಗಿ ನಮಗೆ ಅಲ್ಲಲ್ಲಿ ನಿಲ್ದಾಣಗಳ ಅವಶ್ಯಕತೆ ಇರುತ್ತದೆ. ಅದನ್ನು ಸಂಕಲ್ಪಗಳೆಂಬ ಸ್ವಂತ ನಿಲ್ದಾಣಗಳನ್ನು ನಾವೇ ಸೃಷ್ಟಿಸಿಕೊಂಡು ಒಂದಷ್ಟು ವಿಶ್ರಾಂತಿ ಪಡೆದು ಹೊಸ ಉತ್ಸಾಹದಿಂದ ಬದುಕಿನ ಪ್ರಯಾಣ ಮುಂದುವರಿಸಬೇಕು.

 

ನಡೆ ಮುಂದೆ ನಡೆ ಮುಂದೆ ನುಗ್ಗಿ ನಡೆ ಮುಂದೆ,

ಜಗ್ಗದೆ ಕುಗ್ಗದೆ ಹಿಗ್ಗಿ ನಡೆ ಮುಂದೆ ಎಂಬ ಕವಿವಾಣಿಯಂತೆ ನಾವು ಈ ವರ್ಷದ ಆರು ತಿಂಗಳ ನಂತರ ನಮ್ಮನ್ನು ಮತ್ತೆ ಬಡಿದೆಬ್ಬಿಸಿಕೊಂಡು ಸಾಧನೆಯ ಹಾದಿಯಲ್ಲಿ ಮುನ್ನಡೆಯೋಣ...

 

ಆದ್ದರಿಂದ ಸಂಕಲ್ಪಗಳು ಸದಾ ಜಾರಿಯಲ್ಲಿರುವಂತೆ ಬದುಕಿನ ದಾರಿಯಲ್ಲಿ ನಮಗೆ ನಾವೇ ಮಾರ್ಗದರ್ಶಕರಾಗಿ ಸಾಗೋಣ ಎಂದು ‌ಆಶಿಸುತ್ತಾ..........

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ.

ವಿವೇಕಾನಂದ. ಹೆಚ್.ಕೆ.

9844013068.......

Enjoyed this article? Stay informed by joining our newsletter!

Comments

You must be logged in to post a comment.

About Author