ಸಾಧನೆಯ ಹಾದಿಯಲ್ಲಿ...

ಸಾಧನೆಯ ಶಿಖರವೇರಲು ನಾವು ಮಾಡಬೇಕಾದ ಪ್ರಯತ್ನ.................

 

ಎತ್ತರದ ಬೆಟ್ಟದ ಮೇಲೆ ನಿಂತು ಕೆಳಗೆ  ನೋಡಿದಾಗ ಗಿಡ ಮರಗಳು ಮುಖ್ಯವಾಗಿ ಮನುಷ್ಯರು ಅತ್ಯಂತ ಚಿಕ್ಕದಾಗಿ ಕಾಣುತ್ತಾರೆ.........

 

ಇದನ್ನೇ ಒಂದು ಸಂಕೇತವಾಗಿ ಬಳಸಿಕೊಂಡು ನೋಡಿದಾಗ............

 

ನಾವು ಸಾಧನೆಯಲ್ಲಿ ಎತ್ತರೆತ್ತರಕ್ಕೆ ಏರಿದಾಗ ನಮ್ಮ ಸುತ್ತಮುತ್ತಲಿನ ಜನ ನಮಗಿಂತ ಕೆಳಗಿರುವಂತೆ ಭಾಸವಾಗುತ್ತದೆ.........

 

ನಮ್ಮನ್ನು ಪ್ರೀತಿಸುವ, ನಮ್ಮ ಯಶಸ್ಸಿಗೆ ಸಂತೋಷಿಸುವ, ನಮಗೆ ಮಾರ್ಗದರ್ಶನ ಮಾಡುವ ಜನರ ನಡುವೆ ನಾವು ಎಲ್ಲೇ ಇದ್ದರೂ ನೆಮ್ಮದಿಯಿಂದ ಇರುತ್ತೇವೆ..........

 

ಆದರೆ,

ನಾನಾ ಕಾರಣಗಳಿಂದ ನಮ್ಮನ್ನು ದ್ವೇಷಿಸುವ, ಅಸೂಯೆ ಪಡುವ, ನಮ್ಮ ಕಾಲೆಳೆಯುವ, ನಮಗೆ ತೊಂದರೆ ಕೊಡುವ ಜನರ ನಡುವೆ ನಾವು ವಾಸಿಸುವುದು ಕಷ್ಟವಾದಾಗ ನಾವು ಸಾಧನೆಯ ಬೆಟ್ಟವನ್ನು ‌ಏರಲು ಪ್ರಯತ್ನಿಸಬೇಕು...........

 

ಇಲ್ಲದಿದ್ದರೆ ಈ ಜನರ ನಡುವೆ ನಮ್ಮ ಬದುಕು ಅಸಹನೆಯಿಂದಲೇ ಮುಗಿದು ಹೋಗುತ್ತದೆ.......

 

ಹಾಗಾದರೆ ಸಾಧನೆ ಎಂದರೇನು ?

 

ನಮ್ಮ ‌ಸಾಮಾನ್ಯ ಜನರ ಭಾವನೆಯಲ್ಲಿ ಹೆಚ್ಚು ಹೆಚ್ಚು ಹಣ ಮಾಡುವುದು, ಉನ್ನತ ಅಧಿಕಾರಕ್ಕೆ ಏರುವುದು, ಅಪಾರ ‌ಆಸ್ತಿ ಮಾಡುವುದು, ಪ್ರಶಸ್ತಿಗಳನ್ನು ಪಡೆಯುವುದು, ಜನಪ್ರಿಯತೆ ಗಳಿಸುವುದು,

ಒಟ್ಟಿನಲ್ಲಿ ನಮ್ಮ ಸಮಕಾಲೀನ ಇತರರಿಗಿಂತ ನೋಡುಗರ ದೃಷ್ಟಿಯಲ್ಲಿ ಹೆಚ್ಚು ಹೆಸರು ಮಾಡುವುದು ಎಂದಾಗಿದೆ.‌......

 

ಈ ರೀತಿಯ ಸಾಧನೆ ಮಾಡುವ ಅವಕಾಶವಿದ್ದು ಒಂದು ವೇಳೆ ನಾವು ಅದರಲ್ಲಿ ಯಶಸ್ವಿಯಾದರೆ, ನಾವು ಯಾವುದೇ ಸ್ಥಳದಲ್ಲಿ ಇದ್ದರೂ ಗೌರವ ಘನತೆಗೇನು ಕುಂದು ಬರುವುದಿಲ್ಲ........

 

ಅನೇಕ ಕಾರಣಗಳಿಗಾಗಿ ನಾವು ಈ ರೀತಿಯ ಸ್ಥಾನ ಮಾನ ಪಡೆಯಲು ಸಾಧ್ಯವಾಗದಿದ್ದಾಗ, ನಮ್ಮ ನಡುವಿನ ಇತರರು ಈ  ವ್ಯಾವಹಾರಿಕ ಜಗತ್ತಿನಲ್ಲಿ ನಮಗಿಂತ ಮುಂದೆ ಹೋಗಿ ನಮ್ಮನ್ನು ಕೀಳಾಗಿ ಕಂಡಾಗ ಅಥವಾ ನಮ್ಮ ಮನಸ್ಸು ಹಾಗೆ ಭಾವಿಸಿದಾಗ ನಾವು ಎತ್ತರದ ಪ್ರದೇಶಕ್ಕೆ ಹೋಗಲು ಪ್ರಯತ್ನಿಸಬೇಕು......

 

ಅದು ಹೇಗೆ ಸಾಧ್ಯ.?

ಈ ಯಾವುದೇ ಅನುಕೂಲಗಳು ನಮಗೆ ಇಲ್ಲದಿರುವಾಗ ಸಾಧನೆಯ ಮೆಟ್ಟಿಲು ಹತ್ತುವುದು ಹೇಗೆ ???????

 

ಖಂಡಿತ ‌ಸಾಧ್ಯವಿದೆ.....

 

ನಮ್ಮ ಇಡೀ ವ್ಯಕ್ತಿತ್ವವನ್ನು ಪುನರ್ ರೂಪಿಸಿಕೊಳ್ಳಬೇಕು ಮತ್ತು ಉನ್ನತೀಕರಿಸಿಕೊಳ್ಳಬೇಕು.

ಹೇಗೆಂದರೆ...........

 

ಹೆಚ್ಚು ನಿರೀಕ್ಷೆಗಳನ್ನೇ ಇಟ್ಟುಕೊಳ್ಳದೆ  ನಿರ್ಲಿಪ್ತತೆ ಅಥವಾ ಸ್ಥಿತ ಪ್ರಜ್ಞತೆಯನ್ನು ಬೆಳೆಸಿಕೊಳ್ಳಬೇಕು.......

 

ಯಾವುದೇ ‌ಸಂಧರ್ಭದಲ್ಲಿಯೂ ಯಾರ ಮೇಲೆಯೂ ಅವಲಂಬಿತವಾಗುವ ಅಥವಾ ಯಾವುದನ್ನಾದರೂ ಬೇಡುವ ಪರಿಸ್ಥಿತಿಯನ್ನು ತಿರಸ್ಕರಿಸಬೇಕು.

 

ಈ ಪರಿಸ್ಥಿತಿಯಲ್ಲಿಯೂ ಅನಿರೀಕ್ಷಿತವಾಗಿ ಕೆಲವು ಆಕರ್ಷಣೆಗಳು ಮತ್ತು ಅನುಕೂಲಕರ ಲಾಭಗಳು ನಮಗೆ ಒಲಿಯಬಹುದು. ಅವುಗಳನ್ನು ನಮ್ಮ ಘನತೆಗೆ ತಕ್ಕುದಾದ ಮತ್ತು ಭವಿಷ್ಯದ ನಮ್ಮ ಸ್ವಾಭಿಮಾನದ  ಬದುಕಿಗೆ ತೊಂದರೆಯಾಗದೆ ಇದ್ದರೆ ಮಾತ್ರ ಸ್ವೀಕರಿಸಬೇಕು. ಇಲ್ಲದಿದ್ದರೆ ‌ನಮ್ಮ ಮನೋಬಲ ಉಪಯೋಗಿಸಿ ತಿರಸ್ಕರಿಸಬೇಕು.

 

ಈ ಹಂತದಲ್ಲಿ ಸಾಂಪ್ರದಾಯಿಕ ಶೈಲಿಯ ಜನರ ನಡುವೆ ಇರುವುದಕ್ಕಿಂತ ಏಕಾಂತದ ವಾತಾವರಣದಲ್ಲಿ ನಮ್ಮ ಸಮಯ ಕಳೆಯುವಂತೆ ನಮ್ಮ ಮನಸ್ಸಿನ ಅರಮನೆಗೆ ನಾವೇ ರಾಜರಾಗಬೇಕು.....

 

ಸಮಾಜದ ಸುತ್ತ ನಾವು ಸುತ್ತುವುದಕ್ಕಿಂತ ನಮ್ಮ ಸುತ್ತ ಸಮಾಜ ಸುತ್ತುವ ಸ್ವಯಂ ಅಹಂ ರೂಪಿಸಿಕೊಳ್ಳಬೇಕು. ನಮಗೆ ಆಸಕ್ತಿದಾಯಕ ಕ್ಷೇತ್ರವನ್ನು ಆರಿಸಿಕೊಂಡು ಅದರಲ್ಲಿ ತಪಸ್ಸಿನಂತೆ ನಿರಂತರವಾಗಿ ತೊಡಗಿಸಿಕೊಳ್ಳಬೇಕು. ಅದರಲ್ಲಿ ಸಾಧನೆ ಮಾಡುವ ಯಾವ ಅವಕಾಶವನ್ನೂ ಕಳೆದುಕೊಳ್ಳಬಾರದು.

 

ಎಲ್ಲಕ್ಕಿಂತ ಮುಖ್ಯವಾಗಿ ಸಾವಿನ ಭಯವನ್ನು ಕಡಿಮೆ ಮಾಡಿಕೊಂಡು ಅದನ್ನು ಸ್ವೀಕರಿಸಲು ಮಾನಸಿಕವಾಗಿ ಸಿದ್ದರಾಗಬೇಕು. ಸಾವಿನ ನಂತರದ ಅಂಶಗಳ ಬಗ್ಗೆ ಯೋಚಿಸಲೇಬಾರದು.

 

ಇದು ಎಲ್ಲವನ್ನೂ ತ್ಯಜಿಸಿ ಸನ್ಯಾಸಿಯಾಗುವ ಸ್ಥಿತಿಯಲ್ಲ. ಸಾಧನೆಗಾಗಿ ರೂಪಿಸಿಕೊಳ್ಳುವ ಸರಳ ಮಾನಸಿಕ ಜೀವನಶೈಲಿ......

 

ಆಗ ನಮ್ಮನ್ನು ಹಿಡಿಯಲು ಅಥವಾ ನಿಯಂತ್ರಿಸಲು ಯಾರಿಗೂ ಸಾಧ್ಯವಾಗುವುದಿಲ್ಲ.

 

ಏನೂ ಇಲ್ಲದ ಸಂಧರ್ಭದಲ್ಲಿಯೂ ಇದನ್ನು ಕಟ್ಟುನಿಟ್ಟಾಗಿ ಪಾಲಿಸಿದರೆ ಕನಿಷ್ಠ ಮಟ್ಟದ ಸರಳ ಜೀವನಶೈಲಿ ನಮ್ಮದಾದರೆ ನಮ್ಮ ವ್ಯಕ್ತಿತ್ವ ತಾನೇತಾನಾಗಿ ಮೇಲಕ್ಕೇರುತ್ತದೆ. ನಮ್ಮ ಬಡತನದ, ಸೋಲಿನ, ಅಸಹಾಯಕತೆಯ ಜೀವನ ನೋಡಿ ಅಸೂಯೆ ಪಡುವ ವ್ಯಂಗ್ಯ ಮಾಡುವ ಜನ, ತಮ್ಮ ವ್ಯಾವಹಾರಿಕ ಮತ್ತು ಸಂಭಂದಗಳ ಏರಿಳಿತಗಳಿಂದ ಬಸವಳಿದಾಗ ನಮ್ಮ ನೆಮ್ಮದಿಯ ಜೀವನ ಅವರಿಗೆ  ಸೋಜಿಗದಂತೆ ಕಾಣುತ್ತದೆ. ಅವರುಗಳು ನಮ್ಮ ವ್ಯಕ್ತಿತ್ವದ ಮುಂದೆ ಸಣ್ಣವರಾಗಿ ಕಾಣುತ್ತಾರೆ. ಅದೇ ನಮ್ಮ ಬಹುದೊಡ್ಡ ಆತ್ಮವಿಶ್ವಾಸ.

 

ಮಾನಸಿಕವಾಗಿ ನಾವು ಏರುವ ಎತ್ತರಕ್ಕೆ ಯಾವುದೇ ಮಿತಿಯೂ ಇಲ್ಲ..........

********************************************

 

ನಿನ್ನೆ 9/3/2022 ಬುಧವಾರ " ಯುದ್ದ ನಿಲ್ಲಲಿ ಶಾಂತಿ ನೆಲೆಸಲಿ " ಎಂಬ ಉದ್ದೇಶದಿಂದ ಬೆಂಗಳೂರಿನ ಸ್ವಾತಂತ್ರ್ಯ ಉದ್ಯಾನವನದಲ್ಲಿ ಬೆಳಗ್ಗೆ 10 ಗಂಟೆಯಿಂದ ಸಂಜೆ 6 ಗಂಟೆಯವರೆಗೆ ನಡೆದ " ಉಪವಾಸ ಸತ್ಯಾಗ್ರಹ " ಭಾಗವಹಿಸಿದ ಎಲ್ಲರ ನಡುವೆ ನಡೆದ ಚಿಂತನ ಮಂಥನ ಮತ್ತು ಆತ್ಮವಲೋಕನ ಮಾಡಿಕೊಳ್ಳುವ ವೇದಿಕೆಯಾಯಿತು. ಅಲ್ಲಿ ನೇರವಾಗಿ ಭಾಗವಹಿಸಿದ್ದ ಮತ್ತು ಪರೋಕ್ಷವಾಗಿ ಅದಕ್ಕೆ ಬೆಂಬಲ ಸೂಚಿಸಿದ ಎಲ್ಲರಿಗೂ ತುಂಬು ಹೃದಯದಿಂದ ಧನ್ಯವಾದಗಳು. 

 

" ತಲೆಗಳ ಸಂಖ್ಯೆಗಿಂತ ತಲೆ ಇರುವವರ ಸಂಖ್ಯೆ ಮುಖ್ಯ " ಎಂಬ ಲೋಕೋಕ್ತಿಯಂತೆ ಹಿಂಸೆಯ ವಿರುದ್ದ ಪ್ರೀತಿಯ ಪ್ರಬುದ್ಧ ಮನಸ್ಸುಗಳು ಸೇರಿ ಒಂದು ಧ್ವನಿ ಮೊಳಗಿಸಿದ್ದು ತುಂಬಾ ಸಮಾಧಾನಕರ ವಿಷಯ. 

 

7 ಗಂಟೆಗಳ ಉಪವಾಸ ಒಂದು ದೊಡ್ಡ ವಿಷಯವಲ್ಲ. ಆದರೆ ಜೀವ ಸಂಕುಲದ ಉಳಿವಿಗಾಗಿ ವಿಶ್ವ ಮಾನವ ಪ್ರಜ್ಞೆಯಿಂದ ಒಂದು ಪ್ರತಿಕ್ರಿಯೆ ನೀಡುವುದು ನಮ್ಮೆಲ್ಲರ ಒಂದು ಕರ್ತವ್ಯ ಮತ್ತು ಜವಾಬ್ದಾರಿ.

 

ಇದು ಪ್ರಾರಂಭ ಮಾತ್ರ. ಈಗಿನ ಯುದ್ದ ನಿಲ್ಲುವವರೆಗೂ ಮತ್ತು ಮುಂದೆ ಯುದ್ದಗಳು ಸಂಭವಿಸದಂತೆ ಮತ್ತು ಸಂಭವಿಸಿದರು ಅದನ್ನು ತಡೆಯಲು  ಯುದ್ದದ ರೀತಿ ನೀತಿಗಳನ್ನು ನಿಯಂತ್ರಿಸಲು ನಮ್ಮ ಕೈಯಲ್ಲಾಗುವ ಎಲ್ಲಾ ಪ್ರಯತ್ನ ಮಾಡಲಾಗುವುದು. ವಿಶ್ವಸಂಸ್ಥೆಯನ್ನು ಪುನರ್ ರೂಪಿಸಿ ಮತ್ತಷ್ಟು ಬಲಶಾಲಿಯಾಗಿ ಮಾಡಿ ದೇಶಗಳ ಭದ್ರತೆಯ ವಿಷಯದಲ್ಲಿ ಅದು ವಿಶ್ವ ಸರ್ಕಾರವಾಗಿ ಕಾರ್ಯ ನಿರ್ವಹಿಸುವಂತೆ ಮಾಡಲು ವಿಶ್ವದ ಎಲ್ಲಾ ‌ಶಾಂತಿ ಪ್ರಿಯ ಜನರು ಧ್ವನಿ ಎತ್ತಲು ಸಾಮಾಜಿಕ ಮಾಧ್ಯಮಗಳ ಮೂಲಕ ಪ್ರೇರೇಪಿಸುವ ಕೆಲಸ ಮಾಡಲಾಗುತ್ತದೆ. ಮುಖ್ಯವಾಗಿ ಭಾರತ ಮತ್ತು ಯುದ್ದದಿಂದ ಸಾಕಷ್ಟು ತೊಂದರೆ ಅನುಭವಿಸಿದ ದೇಶಗಳ ಜನರು ಯುದ್ದವನ್ನು ‌ಪ್ರಾರಂಭದ ಹಂತದಲ್ಲೇ ತಡೆಯಲು ಪ್ರಯತ್ನಿಸಬೇಕು. 

 

ಯುದ್ದದ ಸಮಯದಲ್ಲಿ ವಲಸೆ ಹೋಗಿ ಸಾಕಷ್ಟು ಸಾವು ನೋವು ಹಿಂಸೆ ಅನುಭವಿಸುವುದಕ್ಕಿಂತ ಯುದ್ದ ದಾಹಿ ದೇಶದ ವಿರುದ್ದ ಅದೇ ದೇಶದ ಜನ ಧ್ವನಿ ಎತ್ತುವಂತೆ ಮಾಡಿದರೆ ಅಲ್ಲಿನ ಸರ್ಕಾರಗಳು ಯುದ್ದ ಮಾಡಲು ಹೆದರಬಹುದು. ಆ ರೀತಿಯಲ್ಲಿ ಜನರ ಮನಸ್ಥಿತಿ ಬೆಳೆಸಬೇಕಾಗಿದೆ. ಆ ನಿಟ್ಟಿನಲ್ಲಿ ಒಂದು ಅಳಿಲು ಪ್ರಯತ್ನ ನಿರಂತರವಾಗಿ......

 

ಹಾಗೆಯೇ ಮಾನವೀಯ ಮೌಲ್ಯಗಳ ಉಳಿವಿಗಾಗಿ ಸಹ ನಮ್ಮ ನಡುವಿನ ಯುದ್ಧ ನಿರಂತರವಾಗಿ ನಡೆಯುತ್ತಲೇ ಇರುತ್ತದೆ........

 

ಭಾಗವಹಿಸಿದ ಮತ್ತು ಕಾರ್ಯಕ್ರಮಕ್ಕಾಗಿ ಶ್ರಮಿಸಿದ ಎಲ್ಲಾ ಮಾನವೀಯ ಮನಸ್ಸುಗಳಿಗೆ ತುಂಬು ಹೃದಯದಿಂದ ಧನ್ಯವಾದಗಳು....

 

ನೆನಪಿರಲಿ.......‌

 

ಪ್ರತಿಫಲಾಪೇಕ್ಷೆ ಇಲ್ಲದ ಸಾರ್ವಜನಿಕ ಕೆಲಸಗಳು ನಿವೃತ್ತಿ ಬದುಕಿನ ನೆನಪಿನ ಬುತ್ತಿಗಳು. ಅವು ನಮ್ಮ ಹಿರಿತನದ ಗುಣಮಟ್ಟವನ್ನು ಹೆಚ್ಚಿಸುತ್ತವೆ. ದೈಹಿಕ ನೋವನ್ನು ಮರೆಸುವ ಮಾನಸಿಕ ನೆಮ್ಮದಿ ನೀಡಬಲ್ಲವು ಎಂಬ ನಂಬಿಕೆಯಿದೆ.......

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ,

9844013068.......

Enjoyed this article? Stay informed by joining our newsletter!

Comments

You must be logged in to post a comment.

About Author