ತೆರಿಗೆ ಆಕ್ರಮಣ....

Tax evasion

Featured Image Source: 5th voice 

ತೆರಿಗೆ ವಿಷಯದ ಬಗ್ಗೆ ಸಾಮಾನ್ಯರು ಸಹ ಪ್ರತಿಕ್ರಿಯಿಸುವ ಹಂತ ತಲುಪಿದಾಗ........

 

ಬಹುಶಃ ಕೇಂದ್ರ ಸರ್ಕಾರ ಯಾವುದೋ ಭಯದಿಂದ ಆತುರಕ್ಕೆ ಬಿದ್ದು ದುರಾಸೆಯಿಂದ ಸಿಕ್ಕ ಸಿಕ್ಕ ವಸ್ತುಗಳಿಗೆ ಜಿಎಸ್ಟಿ ವಿಧಿಸುತ್ತಿದೆ. ವಿಶ್ವದ ಆರ್ಥಿಕ ಕುಸಿತದ ಮುನ್ಸೂಚನೆ ದೊರೆತ ಕಾರಣದಿಂದಾಗಿ ಎಷ್ಟು ಸಾಧ್ಯವೋ ಅಷ್ಟು ವಿದೇಶಿ ವಿನಿಮಯ ಹಣ ಸಂಗ್ರಹ ಮಾಡುವ ಯೋಚನೆಯೂ ಇರಬೇಕು. 

 

ಆರ್ಥಿಕ ಒತ್ತಡ ಏನೇ ಇರಲಿ ತೀರಾ ಅತ್ಯವಶ್ಯಕ ವಸ್ತುಗಳಿಗೆ ತೆರಿಗೆ ವಿಧಿಸುವ ಕ್ರಮ ಖಂಡಿತ ಒಳ್ಳೆಯ ನಡೆಯಲ್ಲ. ಇದನ್ನು ಯಾವ ಕಾರಣಕ್ಕೂ ಸಮರ್ಥಿಸಬಾರದು.

 

ಈಗಲೂ ಕಾಲ ಮಿಂಚಿಲ್ಲ. ಕೇಂದ್ರ ಮತ್ತು ರಾಜ್ಯ ಸರ್ಕಾರಗಳು ಒಂದು ಸಣ್ಣ ಬದ್ದತೆ ತೋರಿದರೂ ಸಹ ಕನಿಷ್ಠ  ಶೇಕಡಾ 30% ದುಂದು ವೆಚ್ಚವನ್ನು ಸಹಜವಾಗಿಯೇ ನಿಲ್ಲಿಸಬಹುದು. ಎಷ್ಟೋ ವರದಿಗಳು ಸರ್ಕಾರ ಮಾಡುತ್ತಿರುವ ಅನವಶ್ಯಕ ಖರ್ಚುಗಳ ಬಗ್ಗೆ ಸಾಕಷ್ಟು ಅಧ್ಯಯನ ಮಾಡಿ ಉದಾಹರಣೆ ಸಹಿತ ಹೇಳಿವೆ. ಆದರೆ ಅದನ್ನು ಅನುಷ್ಠಾನಗೊಳಿಸಲು ಮಾತ್ರ ಯಾರಿಗೂ ಸಾಧ್ಯವಾಗುತ್ತಿಲ್ಲ.

 

ಸರ್ಕಾರ ಎಂಬುದು ಒಂದು ಮಧ್ಯವರ್ತಿ ಆಡಳಿತ ಸಂಸ್ಥೆ ಅಥವಾ ಬಾಡಿಗೆದಾರ ಇದ್ದಂತೆ. ಅದು ಯಾರಿಗೂ ತನ್ನ ಸ್ವಂತ ಮನೆ ಅನಿಸುವುದಿಲ್ಲ. ಇರುವವರಿಗೂ ಆದಷ್ಟು ಉಪಯೋಗಿಸಿಕೊಂಡು ಅದನ್ನು ಅನುಭವಿಸುವುದು. ನಂತರ ಬಂದವರು ಏನಾದರೂ ಮಾಡಿಕೊಳ್ಳಲಿ ಎಂಬ ಬೇಜವಾಬ್ದಾರಿ. ಆ ಕಾರಣದಿಂದಲೇ ಎಲ್ಲಾ ಸರ್ಕಾರಗಳು ಮಾಡುವ ಅನಿಯಂತ್ರಿತ ಸಾಲಗಳು.

 

ಸರ್ಕಾರವನ್ನು ನಿರ್ವಹಿಸಲು ಮಾಡುವ ವೆಚ್ಚವೇ ಅತ್ಯಂತ ಅನವಶ್ಯಕ ಖರ್ಚುಗಳ ಮೊದಲ ಮೂಲ. ಎಷ್ಟೋ ಅನವಶ್ಯಕ ಇಲಾಖೆಗಳು, ಎಷ್ಟೋ ಬೇಡದ ಅಧಿಕಾರಿ ಹುದ್ದೆಗಳು, ಎಷ್ಟೊಂದು ಸಭೆ ಸಮಾರಂಭಗಳು, ವರ್ಗಾವಣೆಗಳು, ಪ್ರವಾಸಗಳು, ವಸ್ತುಗಳ ಖರೀದಿ, ಅದರ ದುರುಪಯೋಗ ಹೀಗೆ ಬೃಹತ್ ಪಟ್ಟಿ ಮಾಡಬಹುದು. ಅದೇ ಒಂದು ಹಿಂಸೆ.

 

ಎರಡನೆಯದಾಗಿ, ಯಾವುದೇ ಯೋಜನೆಯ ಬಜೆಟ್ ತಯಾರಿಸುವಾಗ ಸಾಮಾನ್ಯ ಮಾರುಕಟ್ಟೆ ಬೆಲೆಗಿಂತ ಎರಡು ಮೂರು ಪಟ್ಟು ಹೆಚ್ಚು ಹಣವನ್ನು ನಿಗದಿಪಡಿಸಲಾಗುತ್ತದೆ. ಸರ್ಕಾರಿ ಯೋಜನೆಗಳೆಂದರೆ ಸಮೃದ್ಧ ಭ್ರಷ್ಟಾಚಾರ ಹಣದ ಹುಲ್ಲುಗಾವಲು ಎಂಬುದು ಬಹಿರಂಗ ಸತ್ಯ. ಜೊತೆಗೆ ಆ ಯೋಜನೆಗಳನ್ನು ನಿಧಾನ ಮಾಡಿ ಮರು ಪರಿಷ್ಕರಿಸಿ ಆ ಯೋಜನಾ ಗಾತ್ರವನ್ನೇ ದೊಡ್ಡದು ಮಾಡುತ್ತಾರೆ. ಉದಾಹರಣೆ ಎತ್ತಿನ ಹೊಳೆ ನೀರಾವರಿ ಯೋಜನೆಯ ಪ್ರಾರಂಭದ ಬಜೆಟ್ ಸುಮಾರು ‌9000 ಕೋಟಿ. ಈಗ‌ ಸುಮಾರು ‌27000 ಕೋಟಿ‌ ಆಗಿದೆ. ಆದರೂ ಇನ್ನೂ ಯೋಜನೆ ಮುಗಿದಿಲ್ಲ. ಇದು ಒಂದು ಉದಾಹರಣೆ ಮಾತ್ರ. ಈ ರೀತಿ ಇನ್ನೂ ಎಷ್ಟೋ.......

 

ಮೂಲೆಯಲ್ಲಿ ಬಿದ್ದಿರುವ ವಾಹನಗಳೆಷ್ಟೋ, ಯಂತ್ರಗಳೆಷ್ಟೋ, ಆಸ್ತಿಗಳೆಷ್ಟೋ, ಕಟ್ಟಡಗಳೆಷ್ಟೋ,

ಈ ಎಲ್ಲವನ್ನೂ ಸರಿಯಾಗಿ ನಿರ್ವಹಿಸದೆ ಕೊರೋನಾ ನಂತರದ ಸಾಮಾನ್ಯರ ಬದುಕು ಅತ್ಯಂತ ದುಸ್ಥಿತಿಯಲ್ಲಿ ಇರುವಾಗ ಹಾಲಿನ ಪಾಕೆಟ್ ಗೂ ಸೇರಿ ತೆರಿಗೆ ವಿಧಿಸುವುದು ಖಂಡಿತ ಅನ್ಯಾಯ.

 

ಇಷ್ಟೆಲ್ಲಾ ದೇಶದ ಅಭಿವೃದ್ಧಿಯ ಬಗ್ಗೆ ಮಾತನಾಡುವ ರಾಜಕೀಯ ಅಧಿಕಾರಸ್ತರು ತಮ್ಮ ಬುಡದಲ್ಲಿಯೇ ಸರ್ಕಾರದ ಅನವಶ್ಯಕ ಖರ್ಚುಗಳನ್ನು ತಡೆಯಲು ಸಮರೋಪಾದಿಯ ಕ್ರಮಗಳನ್ನು ಕೈಗೊಳ್ಳಬೇಕಾಗಿತ್ತು.

ಅದಕ್ಕಾಗಿಯೇ ಒಂದು ತಜ್ಞರ ತಂಡ ಮಾಡಿ ಖರ್ಚು ವೆಚ್ಚಗಳನ್ನು ನಿಯಂತ್ರಣ ಮಾಡಬೇಕಾಗಿತ್ತು. ಆ ಕೆಲಸ ಮಾಡುವುದು ಬಿಟ್ಟು ಅತ್ಯಂತ ಸುಲಭದ ಮತ್ತು ಬೇಜವಾಬ್ದಾರಿಯ ತೆರಿಗೆ ಹೆಚ್ಚಳ ಅಮಾನವೀಯ ಕ್ರಮ ಎಂದೇ ಪರಿಗಣಿಸಬೇಕು.

 

ನಿಜಕ್ಕೂ ಸಾಮಾನ್ಯ ಜನ ತುಂಬಾ ಕಷ್ಟ ಪಡುತ್ತಿದ್ದಾರೆ. ತಮ್ಮ ಇಡೀ ಬದುಕನ್ನು ಶಿಕ್ಷಣ ಆರೋಗ್ಯ ಸಾರಿಗೆ ಊಟ ಬಟ್ಟೆ ವಸತಿ ಇವುಗಳ ಪೂರೈಕೆಗಾಗಿಯೇ ಹೋರಾಟ ಮಾಡುತ್ತಾ ತಮ್ಮ ಅತ್ಯಮೂಲ್ಯ ಜೀವನ ಸಂಘರ್ಷದಲ್ಲಿಯೇ ಮುಗಿಸುತ್ತಿದ್ದಾರೆ. ದಯವಿಟ್ಟು ಈ ಬಗ್ಗೆ ಗಮನಹರಿಸಿ.

 

ಬಹುಶಃ ಈ ತೆರಿಗೆ ಆಕ್ರಮಣ‌ ಸಾರ್ವಜನಿಕರಲ್ಲಿ ಮತ್ತಷ್ಟು ಅಸಹನೆ ಮೂಡಿಸುವುದು ನಿಶ್ಚಿತ. ಜೊತೆಗೆ ದಿನನಿತ್ಯದ ಜೀವನವನ್ನು ಕಾಡುವುದು ಅಷ್ಟೇ ಖಚಿತ. ಇದರ ವಿರುದ್ಧ ಸಾಮಾನ್ಯ ಜನ ಮಾತನಾಡತೊಡಗಿದರೆ, ಮಾಧ್ಯಮಗಳು ಹೆಚ್ಚು ಜವಾಬ್ದಾರಿಯಿಂದ ವರ್ತಿಸಿದರೆ ಈ ಒತ್ತಡ ಸರ್ಕಾರಕ್ಕೆ ತಲುಪಿ ತೆರಿಗೆ ಆಕ್ರಮಣ ನಿಲ್ಲಬಹುದು. ಆ ನಿಟ್ಟಿನಲ್ಲಿ ಎಲ್ಲರೂ ಪ್ರಯತ್ನಿಸೋಣ......

 

ಇರುವುದೊಂದೇ ಬದುಕು‌ ಅದನ್ನು ತೀರಾ ಅಸಹನೀಯ ಮಾಡಿಕೊಳ್ಳದೆ ಇರುವುದರಲ್ಲಿ ಉತ್ತಮವಾಗಿ ನೆಮ್ಮದಿಯಿಂದ ಜೀವಿಸಲು ಮತ್ತು ನಮ್ಮ ಮಕ್ಕಳು ಉತ್ತಮ ಭವಿಷ್ಯ ಕಟ್ಟಿಕೊಳ್ಳಲು ಶ್ರಮಿಸೋಣ....

 

ಪ್ರಬುದ್ಧ ಮನಸ್ಸು ಪ್ರಬುದ್ಧ ಸಮಾಜ,

ಜನರ ಜೀವನಮಟ್ಟ ಸುಧಾರಣೆಯ ಗುರಿಯೊಂದಿಗೆ,

ಮನಗಳಲ್ಲಿ - ಮನೆಗಳಲ್ಲಿ - ಮತಗಳಲ್ಲಿ - ಪರಿವರ್ತನೆಗಾಗಿ,

ಮನಸ್ಸುಗಳ ಅಂತರಂಗದ ಚಳವಳಿ,

ವಿವೇಕಾನಂದ ಹೆಚ್.ಕೆ.

9844013068......

Enjoyed this article? Stay informed by joining our newsletter!

Comments

You must be logged in to post a comment.

About Author